ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ ಹೇಗೆ?

By ವಿಷ್ಣುದಾಸ ನಾಗೇಂದ್ರಾಚಾರ್ಯ
|
Google Oneindia Kannada News

ಆಶ್ವೀನ ಶುಕ್ಲಪ್ರತಿಪದೆಯಿಂದ ಆರಂಭಿಸಿ ಮಹಾನವಮಿಯ ವರೆಗಿನ ಒಂಭತ್ತು ದಿವಸಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮಾಡುವ ದುರ್ಗಾದೇವಿಯ ಪೂಜೆಗೆ ನವರಾತ್ರೋತ್ಸವ ಎಂದು ಹೆಸರು.

ಸಮಗ್ರ ಪ್ರಕೃತಿಯಲ್ಲಿ ಭಗವಂತ ವ್ಯಾಪಿಸಿ ನಿಂತಿದ್ದಾನೆ ಎಂದು ಸಾರುವ ಧರ್ಮ ನಮ್ಮದು. ಹೀಗಾಗಿ ವಿಶ್ವದಲ್ಲೆಡೆ ವ್ಯಾಪಿಸಿರುವ ಪ್ರಕೃತಿ-ಪುರುಷರನ್ನು ಅರ್ಥಾತ್ ಲಕ್ಷ್ಮೀನಾರಾಯಣರನ್ನು ಪೂಜಿಸುವ ಹಬ್ಬ ಈ ನವರಾತ್ರೋತ್ಸವ.[ಮತ್ತೆ ಬಂದಿದೆ ಮೈಸೂರು ದಸರಾ, ಹೋಗೋಣ ಬರ್ತಿರಾ?]

How we will do the Dasara worship in home

ಅಂಕುರ ಪೂಜೆ ಮಾಡುವುದು ಹೇಗೆ?

ಗೌರಿಯ ಸಂದರ್ಭದಲ್ಲಿ ನಾಟಿಯಾಗಿರುತ್ತದೆ. ಈಗ ಎಲ್ಲೆಡೆ ಪೈರುಗಳು ಹಸಿರುಹಸಿರಾಗಿ ಕಂಗೊಳಿಸುತ್ತಿರುತ್ತವೆ. (ಇಷ್ಟು ದಿವಸ ಹೀಗೆ ಇರಬಹುದು ಎಂಬ ಕಲ್ಪನೆಯಿತ್ತು. ಆದರೆ, ಹಳ್ಳಿಯಲ್ಲಿಯೇ ವಾಸವಾಗಿರುವ ನಾನು ಇದನ್ನು ಪ್ರತೀವರ್ಷ ಕಣ್ಣಾರೆ ಕಾಣುತ್ತಿದ್ದೇನೆ. ನಮ್ಮ ತಲಕಾಡಿನಿಂದ ಯಾವುದೇ ಕಡೆಗೆ ಹೋದರೂ ರಸ್ತೆಯ ಅಕ್ಕಪಕ್ಕ ಕಣ್ಣು ಕಾಣುವವರೆಗೆ ಭೂಮಿ ಹರಿದ್ವರ್ಣವಾಗಿ ಕಂಗೊಳಿಸುತ್ತಿರುತ್ತದೆ. ಅದನ್ನು ನಿಂತು ನೋಡುವದೇ ಕಣ್ಣಿಗೊಂದು ಹಬ್ಬ)

ಇಡಿಯ ಹೊಲದಲ್ಲಿ ನಿಂತಿರುವ ಪ್ರತಿಯೊಂದು ಸಸಿಯೂ ನಮಗೆ ಅನ್ನ ನೀಡುವ ಬದುಕು ನೀಡುವ ತಾಯಿಯದೇ ಒಂದೊಂದು ರೂಪ. ಆದರೆ ಪ್ರತಿಯೊಂದು ಸಸಿಯನ್ನೂ ಪೂಜಿಸಲು ಸಾಧ್ಯವಿಲ್ಲ. ಆದ್ದರಿಂದ ಮನೆಯಲ್ಲಿಯೇ ಒಂದು ಮಡಿಕೆಯನ್ನಿಟ್ಟು ಅದರಲ್ಲಿ ಮಣ್ಣು ತುಂಬಿ ಭತ್ತವನ್ನು ಹಾಕಿ ನೀರೆರೆದರೆ ಮನೆಯಲ್ಲಿಯೇ ಮೊಳಕೆಯೊಡೆಯುತ್ತದೆ. ಇಡಿಯ ವಿಶ್ವಕ್ಕೆ ಅನ್ನ ನೀಡುವ ಜಗನ್ಮಾತೆಯನ್ನು ಮಡಿಕೆಯಲ್ಲಿ ಅವಾಹಿಸಿ ಪೂಜಿಸಿದರೆ ಸಮಗ್ರ ಜಗತ್ತಿನ ಎಲ್ಲ ಸಸಿಗಳನ್ನೂ ಪೂಜಿಸಿ ಗೌರವ ಸಲ್ಲಿಸಿದಂತಾಗುತ್ತದೆ ಎಂದು ನಮ್ಮ ಪ್ರಾಚೀನರು ನವರಾತ್ರಿಯಲ್ಲಿ ಅಂಕುರಪೂಜೆಯನ್ನು ಮಾಡುವ ಪದ್ಧತಿಯನ್ನು ಹಾಕಿಕೊಟ್ಟಿದ್ದಾರೆ.

ಅಂಕುರ ಪೂಜೆ ತಯಾರಿ ಹೇಗೆ?

ಈ ಒಂಭತ್ತು ದಿವಸಗಳಲ್ಲಿ ಅರಿಶಿನ ಕುಂಕುಮ ಸುಣ್ಣಗಳಿಂದ ಅಲಂಕೃತವಾದ ಒಂದು ಮಣ್ಣಿನ ಗಡಿಗೆಯನ್ನಾಗಲೀ ಅಥವಾ ಬೆಳ್ಳಿ, ಕಂಚು, ಹಿತ್ತಾಳೆಯ ಅಗಲವಾದ ಪಾತ್ರೆಯನ್ನಾಗಲೀ ಸ್ಥಾಪನೆ ಮಾಡಿ ಅದರಲ್ಲಿ ಮಣ್ಣು ತುಂಬಿ ಭತ್ತದ ಕಾಳಿನಿಂದ ಮೊಳಕೆಯೊಡೆಯುವಂತೆ ಮಾಡಬೇಕು. ಅಂಕುರ ಎಂದರೆ ಮೊಳಕೆ. ಅದು ಮೂಡಲಿಕ್ಕಾಗಿ ಇಡುವ ಪಾತ್ರೆ ಘಟ. ಅದನ್ನು ಒಂದೆಡೆ ನಿಶ್ಚಲವಾಗಿ ಸ್ಥಾಪಿಸುವದೇ ಘಟಸ್ಥಾಪನೆ. ಇದರಲ್ಲಿ ಮೂಡುವ ಅಂಕುರವನ್ನು ಪೂಜಿಸುತ್ತೇವೆಯಾದ್ದರಿಂದ ಇದನ್ನು ಅಂಕುರಘಟ ಎನ್ನುತ್ತಾರೆ.

ಪ್ರತಿಪದೆಯ ದಿವಸ ಬೆಳಿಗ್ಗೆ ಮನೆಯವರೆಲ್ಲ ಎದ್ದು ಅಭ್ಯಂಗವನ್ನು ಮಾಡಬೇಕು. ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಬೇಕು. ಮನೆಯ ಮುಂದೆ ರಂಗವಲ್ಲಿಗಳನ್ನು ಹಾಕಿ ಅಲಂಕರಿಸಬೇಕು.

ಮಾರನೆಯ ದಿವಸ ಹಬ್ಬ ಎಂದರೆ ಹಿಂದಿನ ದಿವಸ ರಂಗವಲ್ಲೀ ತೋರಣಗಳಿಂದ ಅಲಂಕರಿಸುವದು ಪದ್ಧತಿ. ಬೇರೆಯ ಹಬ್ಬಗಳಲ್ಲಿ ಹೀಗೆ ಮಾಡಬಹುದಾದರೂ ನವರಾತ್ರಿಯಲ್ಲಿ ಇವನ್ನು ಹಿಂದಿನ ದಿವಸ ಅಂದರೆ ಅಮಾವಾಸ್ಯೆಯ ಸಂಜೆ ಮಾಡಕೂಡದು. ಪ್ರತಿಪದೆ ಅಮಾವಾಸ್ಯೆಯಿಂದ ವಿದ್ಧವಾಗಿದ್ದರೂ ಮಾಡಕೂಡದು, ಮಾಡಿದಲ್ಲಿ ದೇಶದಲ್ಲಿ ದುರ್ಭಿಕ್ಷ ಮತ್ತು ಮನೆಯಲ್ಲಿ ದಾರಿದ್ರ್ಯ ತಾಂಡವವಾಡುತ್ತದೆ ಎಂದು ಮಾರ್ಕಂಡೇಯಪುರಾಣ ತಿಳಿಸುತ್ತದೆ -

"ಪೂರ್ವವಿದ್ಧಾ ತು ಯಾ ಶುಕ್ಲಾ ಭವೇತ್ ಪ್ರತಿಪದಾಶ್ವಿನೀ I
ನವರಾತ್ರವ್ರತಂ ತಸ್ಯಾಂ ನ ಕಾರ್ಯಂ ಶುಭಮಿಚ್ಛತಾ I
ದೇಶಭಂಗೋ ಭವೇತ್ ತತ್ರ ದುರ್ಭಿಕ್ಷಂ ಚೋಪಜಾಯತೇ" ಎಂದು.

ಹೀಗಾಗಿ ಪ್ರತಿಪದೆಯ ದಿವಸ ಬೆಳಿಗ್ಗೆಯೇ ಈ ಅಲಂಕಾರಗಳನ್ನು ಮಾಡತಕ್ಕದ್ದು. ಆ ನಂತರ ದೇವರ ಮನೆಯಲ್ಲಿ ಘಟಸ್ಥಾಪನೆ ಮಾಡುವ ಸ್ಥಳವನ್ನು ಗೋಮಯದಿಂದ ಸಾರಿಸಿ ರಂಗವಲ್ಲಿಯನ್ನು ಹಾಕಬೇಕು. ಪ್ರತಿಪದೆಯಂದು ಅಭ್ಯಂಗ ಸ್ನಾನ ಮಾಡಿ ದೇವರ ಪೂಜೆಯನ್ನು ಮುಗಿಸಿದ ನಂತರ ಗಂಡ ಹೆಂಡತಿಯರಿಬ್ಬರೂ ದೇವರ ಮುಂದೆ ಕುಳಿತು ಆಚಮನ ಪ್ರಾಣಾಯಮ, ದೇಶ ಕಾಲಗಳನ್ನು ಸಂಕೀರ್ತಿಸಿ ಹೀಗೆ ಸಂಕಲ್ಪ ಮಾಡಬೇಕು -

ಅಸ್ಮದ್ಗುರ್ವಂತರ್ಗತ
ಪರಮಗುರ್ವಂತರ್ಗತ
ಶ್ರೀ ಭಾರತೀರಮಣಮುಖ್ಯಪ್ರಾಣಾಂತರ್ಗತ
ಶ್ರೀ ವಿಷ್ಣುಪ್ರೇರಣಯಾ ಶ್ರೀ ವಿಷ್ಣುಪ್ರೀತ್ಯರ್ಥಂ
ಅಸ್ಮತ್ಕುಲಕದೇವತಾ - ನಿಮ್ಮನಿಮ್ಮ ಕುಲದೇವರ ಹೆಸರನ್ನು ಉಚ್ಚರಿಸಿ - ಪ್ರೀತ್ಯರ್ಥಂ
ವಿಷ್ಣುಭಕ್ತಿ-ತತ್ವಜ್ಞಾನ-ವೈರಾಗ್ಯಾದಿ ಮಹಾಸದ್ಗುಣಾಭಿವೃದ್ಧ್ಯರ್ಥಂ
ದೀರ್ಘಾಯುಷ್ಯ-ಕ್ಷ್ತೇತ್ರ- ಧನ-ಪಶು-ಪುತ್ರಾದ್ಯಭಿವೃದ್ಧ್ಯರ್ಥಂ
ದಾರಿದ್ರ್ಯಪರಿಹಾರಾರ್ಥಂ ಶತ್ರುವಿಜಯಾರ್ಥಂ

ಸಮಸ್ತಲೋಕಸ್ಯ ವಿಶೇಷತಃ ಕೃಷಿಕಾನಾಂ ಹಿತಾರ್ಥಂ

(ಇಡಿಯ ಜಗತ್ತಿನ ಒಳಿತಾಗಾಗಿ, ವಿಶೇಷವಾಗಿ ಎಲ್ಲ ಕೃಷಿಕರ ಸುಖಕ್ಕಾಗಿ)

ಆಶ್ವಿನೇ ಮಾಸಿ ಪ್ರತಿಪದಾಮಾರಭ್ಯ ನವಮೀ ಪರ್ಯಂತಂ
ಅಖಂಡದೀಪ-ಕುಮಾರೀಪೂಜನ-ಗ್ರಂಥಪಾರಾಯಣಾದಿಸಹಿತಂ
ನವರಾತ್ರೋತ್ಸವಮಹಮಾಚರಿಷ್ಯೇ

ಎಂದು ಸಂಕಲ್ಪ ಮಾಡಿ, ನಿರ್ವಿಘ್ನವಾಗಿ ನಡೆಯಲಿ ಎನ್ನುವದಕ್ಕಾಗಿ ಗಣಪತಿಯ ಪೂಜೆಯನ್ನು ಮಾಡಬೇಕು. ಆ ನಂತರ ಲಕ್ಷ್ಮೀದೇವಿಯ ಸ್ತೋತ್ರಗಳನ್ನು ಹೇಳುತ್ತ ಗೋಮಯದಿಂದ ಶುದ್ಧವಾದ ರಂಗವಲ್ಲಿಯಿಂದ ಶೋಭಿತವಾದ ಸ್ಥಳದ ಮೇಲೆ ಘಟವನ್ನು ಸ್ಥಾಪಿಸಬೇಕು.[ಮೈಸೂರು ದಸರಾ ಉದ್ಘಾಟಿಸುವ ರೈತ ಪುಟ್ಟಯ್ಯ ಪರಿಚಯ]

ಆದರೆ ಅಲ್ಲಿ ಶುದ್ದವಾದ ಮಣ್ಣನ್ನು ತುಂಬಿ, ಸ್ವಲ್ಪ ನೀರನ್ನು ಹಾಕಿ ಅದರಲ್ಲಿ ಸ್ವಲ್ಪ ಭತ್ತದ ಕಾಳುಗಳನ್ನು ಹಾಕಬೇಕು. (ನಿಮ್ಮ ಮನೆಯ ಸಂಪ್ರದಾಯದಂತೆ ಬೇರೆ ಧಾನ್ಯಗಳನ್ನೂ ಹಾಕಬಹುದು. ಅಕ್ಕಿ ಪ್ರಮುಖ ಆಹಾರವಾದ ಕಾರಣ ಅದು ಅತ್ಯಂತ ಶ್ರೇಷ್ಠ) ಆ ನಂತರ ಆ ಪಾತ್ರೆಯಲ್ಲಿ ನಂದಯಶೋದೆಯರ ಮಗಳಾದ ದುರ್ಗಾದೇವಿಯನ್ನು ಆವಾಹಿಸಿ, ನಂತರ ಲಕ್ಷ್ಮೀನಾರಾಯಣರ ರೂಪಗಳನ್ನು ಆ ಆವಾಹಿಸಿ, ಆ ಪಾತ್ರೆಗೆ ಅರಿಶಿನ ಕುಂಕುಮಗಳಿಂದ ಪೂಜೆಯನ್ನು ಮಾಡಬೇಕು. ಹಾಗೆಯೇ ಆ ಪಾತ್ರೆಯನ್ನು ಅರಿಶಿನ ಕುಂಕುಮಗಳನ್ನು ಹಚ್ಚಿದ ದಾರದಿಂದ ಸುತ್ತಿ ಕಟ್ಟಬೇಕು. (ಸೂತ್ರವೇಷ್ಟನವನ್ನು ಮೊದಲಿಗೇ ಮಾಡಿಕೊಂಡಿದ್ದರೆ ಉತ್ತಮ ಪಕ್ಷ)

How we will do the Dasara worship in home

ಕುಲದೇವತೆ ಪ್ರತಿಮೆ ಇರಲಿ :

ಈ ಅಂಕುರಘಟದ ಜೊತೆಯಲ್ಲಿಯೇ ಪಕ್ಕದಲ್ಲಿ ನಿಮ್ಮನಿಮ್ಮ ಕುಲದೇವತೆಯ ಪ್ರತಿಮೆಯನ್ನು ಸ್ಥಾಪಿಸಬೇಕು. ಪ್ರತಿಮೆ ಇಲ್ಲದ ಪಕ್ಷದಲ್ಲಿ ಒಂದು ಸಣ್ಣ ಕಳಸದಲ್ಲಿ ಅರಿಶಿನದ ಕೊಂಬನ್ನಿಟ್ಟು ಅದರಲ್ಲಿ ಕುಲದೇವತೆಯನ್ನು ಆವಾಹಿಸಿ ಪೂಜಿಸಬೇಕು. ಕೆಲವರ ಮನೆಯಲ್ಲಿ ಮೊಳೆಕೆಯೊಡೆಯುವ ಕಳಸದ ಮಧ್ಯದಲ್ಲಿಯೇ ಕುಲದೇವರನ್ನೂ ಇಟ್ಟು ಪೂಜಿಸುತ್ತಾರೆ. ಆಗ ಅಂಕುರದ ಘಟ ಸ್ವಲ್ಪ ದೊಡ್ಡದಿದ್ದರೆ ಒಳ್ಳೆಯದು. ಕಾರಣ, ಇಡಿಯ ಘಟದ ಮೇಲೆ ಪ್ರತಿಮೆಯನ್ನೋ ಅಥವಾ ಮತ್ತೊಂದು ಕಳಸವನ್ನೋ ಇಟ್ಟರೆ ಮೊಳಕೆಯೊಡೆಯಲು ಅವಕಾಶವಿರುವದಿಲ್ಲ. ಸುತ್ತಲೂ ಮೊಳಕೆ ಮೂಡಿ ಮಧ್ಯದಲ್ಲಿ ಕುಲದೇವತೆಯ ಪ್ರತಿಮೆ ಅಥವಾ ಕಲಶವಿರುವದಾದರೆ ಸೊಗಸು.

ಬಳಿಕ ಎರಡು ಎಣ್ಣೆ ದೀಪಗಳನ್ನು ಅಂಕುರಘಟದ ಎರಡೂ ಬದಿಯಲ್ಲಿಟ್ಟು ಮನೆಯ ಎಲ್ಲರಿಗೂ ಜ್ಞಾನಾಭಿವೃದ್ಧಿಯಾಗಲಿ, ನಮ್ಮ ಮನೆಯಲ್ಲಿ ಮಕ್ಕಳ ನಗು ಯಾವಾಗಲೂ ಕೇಳಿಸುತ್ತರಿಲಿ ಎಂದು ಪ್ರಾರ್ಥಿಸಿಕೊಂಡು ಅಖಂಡ ದೀಪಗಳನ್ನು ಬೆಳಗಿಸಬೇಕು. ಈ ದೀಪಗಳು ಒಂಭತ್ತೂ ದಿವಸಗಳು ಶಾಂತವಾಗದಂತೆ ನೋಡಿಕೊಳ್ಳಬೇಕು.

ದೀಪದ ಬತ್ತಿಯನ್ನು ಬದಲಾಯಿಸಬೇಕಾದರೆ ಆ ದೀಪಗಳಿಂದ ಪ್ರತ್ಯೇಕ ಎರಡು ದೀಪಗಳನ್ನು ಹಚ್ಚಿ ಅಖಂಡದೀಪಗಳನ್ನು ಮತ್ತೆ ಸಿದ್ಧಪಡಿಸಿ ಅದೇ ಜ್ವಾಲೆಯಿಂದ ಮತ್ತೆ ದೀಪವನ್ನು ಹಚ್ಚಬೇಕು. ಅಥವಾ ದೀಪದಲ್ಲಿ ಮೂರ್ನಾಲ್ಕು ಕಡೆ ದೀಪ ಹಚ್ಚುವ ಸೌಲಭ್ಯವಿದ್ದರೆ ಅದೇ ದೀಪದಲ್ಲಿ ಮತ್ತೊಂದೆಡೆ ಬತ್ತಿಯಿಟ್ಟು ಜ್ಯೋತಿ ಬೆಳಗಿಸಿ ಹಳೆಯದನ್ನು ತೆಗೆಯಬೇಕು. (ಕೆಲವರ ಮನೆಯಲ್ಲಿ ಒಂದೇ ನಂದಾದೀಪವನ್ನಿಡುವ ಪದ್ಧತಿಯೂ ಇದೆ. ಜೋಡಿ ದೀಪಗಳನ್ನಿಡುವದು ಉತ್ತಮಪಕ್ಷ. ಒಂದೇ ದೀಪವನ್ನಿಟ್ಟರೂ ಅಡ್ಡಿಯಿಲ್ಲ)

ಆ ನಂತರ ಅಂಕುರದ ಘಟದಲ್ಲಿನ ದೇವತೆಗಳಿಗೆ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಬೇಕು. ದೇವರ ಪೂಜೆಯಲ್ಲಿ ನೈವೇದ್ಯವಾಗಿರುತ್ತದೆ. ಆದರೆ ಇಲ್ಲಿ ಮತ್ತೊಮ್ಮೆ ಪ್ರತ್ಯೇಕವಾಗಿ ನೈವೇದ್ಯವನ್ನು ಸಮರ್ಪಿಸಬೇಕು. ದೇವರ ಪೂಜೆಯಲ್ಲಿ ನೈವೇದ್ಯ ಮಾಡದ ಭಕ್ಷ್ಯಗಳನ್ನು ಇಲ್ಲಿ ನೈವೇದ್ಯ ಮಾಡಬೇಕು. ಇಲ್ಲಿಯೂ ತಾರತಮ್ಯವನ್ನು ಬಿಡುವಂತಿಲ್ಲ. ನಿಮ್ಮ ಮನೆಯ ದೇವರು ಶ್ರೀನಿವಾಸನಾಗಿದ್ದರೆ, ಶ್ರೀನಿವಾಸನಿಗೆ ಅರ್ಪಿಸಿ ಅಂಕುರಘಟದಲ್ಲಿನ ಶ್ರೀಭೂದುರ್ಗೆಯರಿಗೆ ಆ ನಂತರ ಉಳಿದ ದೇವತೆಗಳಿಗೆ ಸಮರ್ಪಿಸಬೇಕು. ರುದ್ರದೇವರು ಕುಲದೇವರಾಗಿದ್ದರೆ, ದೇವರಿಗೆ, ಶ್ರೀಭೂದುರ್ಗೆಯರಿಗೆ, ಭಾರತೀಶನಿಗೆ ಸಮರ್ಪಿಸಿ ರುದ್ರದೇವರಿಗೆ ಸಮರ್ಪಿಸಬೇಕು.[ರಾಜ ಗಾಂಭೀರ್ಯದ ದಸರಾ ಗಜಪಡೆ ಎಲ್ಲಿಂದ ಬಂದದ್ದು?]

How we will do the Dasara worship in home

ಆ ನಂತರ ವೈಭವದಿಂದ ಮಂಗಳಾರತಿಗಳನ್ನು ಮಾಡಿ, ಭಕ್ತಿಯಿಂದ ಗಂಡಹೆಂಡತಿಯರಿಬ್ಬರೂ ಕೂಡಿ ನಮಸ್ಕಾರಗಳನ್ನು ಸಮರ್ಪಿಸಬೇಕು. ಹೀಗೆ ಷೋಡಶೋಪಚಾರ ಪೂಜೆ ಮುಗಿದ ಬಳಿಕ ಆ ಅಂಕುರಾರ್ಪಣದ ಘಟದ ಮುಂದೆ ಕುಳಿತು ವ್ಯಾಸಪೀಠದಲ್ಲಿ ವೇದ-ಮಹಾಭಾರತ-ಭಾಗವತ-ಪುರಾಣ-ರಾಮಾಯಣ-ಗೀತಾ ಮುಂತಾದ ಯಾವುದಾದರೂ ಒಂದು ಗ್ರಂಥವನ್ನಿಟ್ಟು ಪಾರಾಯಣ ಆರಂಭಿಸಬೇಕು. ಈ ಪಾರಾಯಣ ಮಾಡುವಾಗ ಪುಸ್ತಕವನ್ನು ಸರ್ವಥಾ ಕೈಯಲ್ಲಿ ಹಿಡಿಯಬಾರದು ಮತ್ತು ನೆಲದ ಮೇಲೂ ಇಡಬಾರದು. ಪುಸ್ತಕದ ಆಸನ - ವ್ಯಾಸಪೀಠ - ದಲ್ಲಿಯೇ ಗ್ರಂಥವನ್ನಿಟ್ಟು ಪಠಣ ಮಾಡಬೇಕು.

ಆಧಾರೇ ಸ್ಥಾಪಯಿತ್ವಾ ತು ಪುಸ್ತಕಂ ಪ್ರಜಪೇತ್ ಸುಧೀಃ I
ಹಸ್ತಸಂಸ್ಥಾಪನಾದೇವ ಯಸ್ಮಾದ್ ವೈ ವಿಫಲಂ ಭವೇತ್ II

ಗ್ರಂಥಗಳ ಪಾರಾಯಣ ಮಾಡುವುದು ಹೇಗೆ?

ವೇದಗಳ ಪಾರಾಯಣ ಮಾಡುವದಾದರೆ ಋಷಿ ಛಂದಸ್ಸು ದೇವತೆಗಳನ್ನು ಸ್ಮರಿಸಿಯೇ ಪಠಿಸಬೇಕು. ಮಹಾಭಾರತ ರಾಮಾಯಣಗಳನ್ನು ಪಠಿಸಬೇಕಾದರೆ ಗ್ರಂಥಕರ್ತೃ, ಗ್ರಂಥಪ್ರತಿಪಾದ್ಯರು ಮತ್ತು ಗುರುಗಳನ್ನು ಸ್ಮರಿಸಿಯೇ ಪಠಿಸಬೇಕು. ಆಯಾಯ ದಿವಸದ ಪಾರಾಯಣವನ್ನು ಅಧ್ಯಾಯದ ಅಥವಾ ಘಟ್ಟದ ಪರಿಸಮಾಪ್ತಿಯಲ್ಲಿಯೇ ಮುಗಿಸಬೇಕು. ಅಧ್ಯಾಯದ ಮಧ್ಯದಲ್ಲಿ ನಿಲ್ಲಿಸಬಾರದು. ಹೀಗೆ ಗ್ರಂಥಪಾರಾಯಣವನ್ನು ಮುಗಿಸಿ ದೇವರ ಹಾಡುಗಳನ್ನು ಹೇಳಿ ಮತ್ತೆ ನಮಸ್ಕಾರಗಳನ್ನು ಸಮರ್ಪಿಸಬೇಕು.

ಸ್ವಯಂ ಗ್ರಂಥದ ಪಾರಾಯಣವನ್ನು ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಗ್ರಂಥದ ಅರ್ಥವನ್ನು ಬಲ್ಲ ಜ್ಞಾನಿಗಳು ಮನೆಗೆ ಬಂದು ಪಾರಾಯಣ ಮಾಡುವಂತೆ ಪ್ರಾರ್ಥಿಸಬೇಕು. ( ಈ ಗ್ರಂಥಗಳ ಪಾರಾಯಣ ಒಂಭತ್ತೂ ದಿವಸಗಳೂ - ಸರಸ್ವತೀಪೂಜೆಯ ನಂತರವೂ ಮಹಾನವಮಿಯವರೆಗೆ - ನಡೆಯಬೇಕು. ಸರಸ್ವತೀ ಆವಾಹನೆಯ ನಂತರ ಅಧ್ಯಯನ ನಿಷಿದ್ದ. ಆದರೆ ಪಾರಾಯಣ ನಿಷಿದ್ಧವಲ್ಲ.)

ನವರಾತ್ರಿಯಲ್ಲಿ ರಾಮಾಯಣದ ಪಾರಾಯಣ ಅತ್ಯಂತಶ್ರೇಷ್ಠ. ಅದಕ್ಕಿಂತ ಭಾರತಪಾರಾಯಣ, ಅದಕ್ಕಿಂತ ಶ್ರೇಷ್ಠವಾದದ್ದು ಗೀತಾಪಾರಾಯಣ. ಹಾಗೆಯೇ ದುರ್ಗಾದೇವಿಯ ಸ್ತೋತ್ರಗಳನ್ನೂ ವಿಶೇಷವಾಗಿ ಪ್ರತೀನಿತ್ಯವೂ ಪಠಿಸಬೇಕು.[ಮೈಸೂರು ದಸರಾ ಆನೆಗಳಿಗೆ 35 ಲಕ್ಷದ ವಿಮೆ]

ಕುಮಾರೀಪೂಜನ ಎಂದರೇನು?

ಜಗದೊಡತಿಯಾದ ದುರ್ಗಾದೇವಿಯನ್ನು ಕಲಶದಲ್ಲಿ ಪೂಜಿಸಿಯಾಯಿತು. ಗ್ರಂಥಗಳಿಂದ ಆರಾಧಿಸಿಯಾಯಿತು. ಈಗ ಚಲಪ್ರತಿಮೆಯಲ್ಲಿ ಪೂಜೆ. ಎರಡುವರ್ಷದಿಂದ ಹತ್ತುವರ್ಷಗಳೊಳಗಿನ (ಇನ್ನೂ ಮೈ ನೆರೆಯದ) ಹೆಣ್ಣುಮಕ್ಕಳನ್ನು ಮನೆಗೆ ಆದರಿದಿಂದ ಕರೆಯಿಸಿ ಅವರಿಗೆ ಅಲಂಕಾರದ ವಸ್ತುಗಳನ್ನು ದಾನ ಮಾಡಿ, ವಸ್ತ್ರಗಳನ್ನು ದಾನ ಮಾಡಿ, ಪುಸ್ತಕಗಳನ್ನು ದಾನ ಮಾಡಿ ಅವರಿಗಿಷ್ಟವಾದ ಅಡಿಗೆಯ ಪದಾರ್ಥಗಳನ್ನು ಮಾಡಿಸಿ ಪ್ರೀತಿಯಿಂದ ಬಡಿಸಬೇಕು.

ಈ ಕುಮಾರೀಪೂಜೆ ಮಹಾಫಲದಾಯಕವಾದ ಪೂಜೆ. ಪ್ರತೀದಿನ ಒಬ್ಬರನ್ನಾಗಲೀ, ಅಥವಾ ಒಂಭತ್ತು ಹೆಣ್ಣುಮಕ್ಕಳನ್ನಾಗಲೀ, ಅಥವಾ ಇವತ್ತು ಒಬ್ಬರು, ನಾಳೆ ಇಬ್ಬರು, ನಾಡಿದ್ದು ಮೂವರು, ಹೀಗೆ ಕ್ರಮೇಣ ಸಂಖ್ಯೆಯನ್ನು ಹೆಚ್ಚಿಸುತ್ತ, ದೇವರು ನಮಗೆ ಶಕ್ತೀ ನೀಡಿದಷ್ಟರಲ್ಲಿ ಅವರೊಳಗೆ ತಾಯಿ ದುರ್ಗೆಯನ್ನು ಚಿಂತಿಸಿ ಪೂಜಿಸಬೇಕು. (ಇದರ ವಿವರಗಳನ್ನು ವಿಶ್ವನಂದಿನಿಯ ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ)

ಹೀಗೆ ಬೆಳಗಿನ ಹೊತ್ತು ಪೂಜೆಯನ್ನು ಸಲ್ಲಿಸಿ ಸಾಯಂಕಾಲದ ಹೊತ್ತು ಮತ್ತೆ ಹೊಸ ಅಡುಗೆಯನ್ನು ಮಾಡಿ, ಪೂಜೆಯನ್ನು ಸಲ್ಲಿಸಿ, ವಿಶೇಷವಾಗಿ ಪಾರಾಯಣಗಳನ್ನು ಮಾಡಿ ದುರ್ಗಾದೇವಿಯ ಆರಾಧನೆಯನ್ನು ಮಾಡಬೇಕು.

ನಮ್ಮೆಲ್ಲ ಕಷ್ಟಗಳನ್ನು ನೀಗುವ ಸಾಮರ್ಥ್ಯವಿರುವದಕ್ಕಾಗಿಯೇ ಆ ಮಹಾತಾಯಿಗೆ ದುರ್ಗಾ ಎಂಬ ಹೆಸರು. ಭೂಮಿಯೆಲ್ಲಡೆ ಹಸಿರುಪೈರುಗಳ ಮುಖಾಂತರ ಕಂಗೊಳಿಸುತ್ತಿರುವ ಆ ಜಗನ್ಮಾತೆಯನ್ನು ಮನೆಯಲ್ಲಿ ನಮ್ಮನಮ್ಮ ಯೋಗ್ಯತೆಗೆ ಅನುಸಾರವಾಗಿ ಪೂಜಿಸುವದೇ ನವರಾತ್ರಿಯ ಪೂಜೆ.

ಸಮಸ್ತ ಗುರುಗಳು, ದೇವತೆಗಳು, ಪಾರ್ವತೀಪತಿ ರುದ್ರದೇವರು, ಭಾರತೀಪತಿ ಮುಖ್ಯಪ್ರಾಣದೇವರು, ದುರ್ಗಾದೇವಿ, ಆ ಲಕ್ಷ್ಮೀಪತಿಯಾದ ನಾರಾಯಣ ಎಲ್ಲರೂ ನಮ್ಮ ಮೇಲೆ ಅನುಗ್ರಹವನ್ನು ಮಾಡಲಿ. ನಮಗಿಂತ ಹೆಚ್ಚಾಗಿ, ನಮಗೆ ಧಾನ್ಯವನ್ನು ಬೆಳೆದು ನೀಡುವ ರೈತರ ಕುಟುಂಬಗಳ ಮೇಲೆ ಅನುಗ್ರಹವನ್ನು ಮಾಡಲಿ. ನಮ್ಮ ಸಮಾಜದಲ್ಲಿ ಸುಖಸಮೃದ್ಧಿಗಳು ನೆಲೆಯಾಗಲಿ ಎಂದು ಎಲ್ಲರೂ ಕೂಡಿ ಈ ನವರಾತ್ರಿಯ ಸಂದರ್ಭದಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ.

ವಿಶ್ವನಂದಿನಿಯೆಂಬ ಜ್ಞಾನಧೇನುವಿನ ಮೇಲೆ ಅಕ್ಕರೆ ಪ್ರೀತಿಯನ್ನು ಸುರಿಸಿ ಪೋಷಿಸಿತ್ತುರವ, ಅದು ನೀಡುತ್ತಿರುವ ಜ್ಞಾನಾಮೃತವನ್ನು ಆಸ್ವಾದಿಸುತ್ತಿರುವ ಎಲ್ಲ ಸಜ್ಜನರಿಗೂ ನವರಾತ್ರಿಯ ಶುಭಾಶಯಗಳು.

English summary
This article will explain about, how we will do the Dasara worship in home.Dasara festival started on Monday October 13th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X