ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೈಸೂರು ಸಜ್ಜು

ನಾಳೆಯ ವಿಶ್ವವಿಖ್ಯಾತ ಜಂಬೂಸವಾರಿ ವೀಕ್ಷಣೆಗೆ ಕರ್ನಾಟಕ ಮತ್ತು ವಿಶ್ವದ ಎಲ್ಲೆಡೆಯಿಂದ ರಾಜ್ಯದ ಸಾಂಸ್ಕೃತಿಕ ರಾಜಧಾನಿಗೆ ಆಗಮಿಸಿರುವ ಜನತೆ ಕಾತರದಿಂದ ಕಾಯುತ್ತಿದ್ದಾರೆ. ಈ ದಸರಾದ ವಿಶೇಷತೆಯೇನೆಂದರೆ, ಇದು 400ನೇ ಮೈಸೂರು ದಸರಾ. ಒಟ್ಟು 12 ಅಲಂಕೃತ ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿದ್ದು 4900 ಕಿ.ಗ್ರಾಂ. ತೂಕದ ಬಲರಾಮ ಚಾಮುಂಡೇಶ್ವರಿ ದೇವಿ ಕುಳಿತಿರುವ 750 ಕಿ.ಗ್ರಾಂ. ತೂಕದ ಬಂಗಾರದ ಅಂಬಾರಿಯನ್ನು ಹೊರಲಿದ್ದಾನೆ. (ಚಿತ್ರಪಟ ನೋಡಿರಿ)
ಮಧ್ಯಾಹ್ನ 1.45ಕ್ಕೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 32 ಸ್ತಬ್ದ ಚಿತ್ರಗಳು ಮುಂದೆ ಸಾಗಿದ ನಂತರ ಅರಮನೆಯ ಒಳಭಾಗದಲ್ಲಿ ಬಲರಾಮನ ಮೇಲಿನ ಅಂಬಾರಿಯಲ್ಲಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಾಗುವುದು. ಬಳಿಕ ಜಂಬೂಸವಾರಿ ಸಯ್ಯಾಜಿರಾವ್ ರಸ್ತೆಯ ಮೂಲಕ ಬನ್ನಿಮಂಟಪ ತಲುಪಲಿದೆ. ಅಲ್ಲಿ ಬನ್ನಿ ಕಡಿಯುವದರೊಂದಿಗೆ ದಸರಾಕ್ಕೆ ತೆರೆ ಬೀಳಲಿದೆ.
ಜಂಬೂಸವಾರಿಯಲ್ಲಿ ಕ್ರಿ.ಶ. 345ರಿಂದ 1900ರವರೆಗಿನ ವಿವಿಧ ಹಂತಗಳ ಇತಿಹಾಸ ಸಾರುವ ಸ್ತಬ್ದ ಚಿತ್ರಗಳು ಅಲ್ಲದೆ, ವಿವಿಧ ಜಿಲ್ಲೆಗಳಿಂದ ಸ್ತಬ್ದ ಚಿತ್ರಗಳು, 72 ಕಲಾತಂಡಗಳು, 5 ರಾಜ್ಯಗಳ 7 ಕಲಾತಂಡಗಳು ಪಾಲ್ಗೊಳ್ಳಲಿವೆ. ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ಪ್ರದರ್ಶನ, ಮೋಟಾರ್ ಸೈಕಲ್ ರೇಸ್, ಲೇಸರ್ ಶೋ ನಡೆಯಲಿದೆ. ಪಂಜಿನ ಕವಾಯತನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ. ಆಕರ್ಷಣೆಯ ಕೇಂದ್ರವಾಗಿರುವ ಮೈಸೂರು ಅರಮನೆ ಸಂಜೆ ವೇಳೆ 1 ಲಕ್ಷ ದೀಪಗಳಿಂದ ಝಗಮಗಿಸಲಿದೆ.
ಬಿಗಿಭದ್ರತೆ : ಜಂಬೂ ಸವಾರಿ ಯಾವುದೇ ಅಡ್ಡಿ ಆತಂಕಗಳಿಲ್ಲದೆ, ಸುಸೂತ್ರವಾಗಿ ನಡೆಯಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ದಸರಾ ಹಿನ್ನೆಲೆಯಲ್ಲಿ ಅರಮನೆ ನಗರಿಯಾದ್ಯಂತ ಬಿಗಿಭದ್ರತೆ ಕೈಗೊಳ್ಳಲಾಗಿದ್ದು, ಭದ್ರತೆಗೆ 4000 ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಹೆಚ್ಚುವರಿಯಾಗಿ 600ಕ್ಕೂ ಹೆಚ್ಚು ಪೊಲೀಸರು, 25 ಕೆಎಸ್‌ಆರ್‌ಪಿ ತುಕಡಿಗಳು, 3 ಡಿಸಿಪಿಗಳು, 12 ಎಸ್‌ಪಿ ಕೇಡರ್ ಅಧಿಕಾರಿಗಳು ಭದ್ರತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದ ಜನತೆ ಮತ್ತು ಕನ್ನಡ ಬಾಂಧವರಿಗೆಲ್ಲ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.












Click it and Unblock the Notifications