ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಟಾಂಗಾ... ಉರುಳದ ಬದುಕಿನ ಬಂಡಿ...

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Mysore Dasara 2010 Tanga story
ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರಾದ ನಿಮಗೆ ನಗರದಲ್ಲಿ ಸಂಚರಿಸುವಾಗ ಇಲ್ಲಿನ ರಸ್ತೆಗಳಲ್ಲಿ ವಾಹನಗಳ ನಡುವೆ ಟಕ..ಟಕ.. ಸದ್ದು ಮಾಡುತ್ತಾ ಸಾಗುವ ಟಾಂಗಾ ಗಾಡಿಗಳನ್ನು ನೋಡಿದಾಗ ನಿಮಗೆ ಅಚ್ಚರಿ ಹಾಗೂ ಈ ಟಾಂಗಾ ಗಾಡಿಯಲ್ಲಿ ಕುಳಿತು ನಗರಕ್ಕೊಂದು ಸುತ್ತು ಹೊಡೆಯುವ ಬಯಕೆಯೂ ಮೂಡಬಹುದಲ್ಲವೆ?. ಅಂತಹ ಬಯಕೆ ನಿಮ್ಮಲ್ಲಿ ಗರಿಗೆದರಿದರೆ ತಡಮಾಡದೆ ಟಾಂಗಾ ಸವಾರಿಗೆ ಮುಂದಾಗಿ.... ಏಕೆ ಗೊತ್ತಾ? ನಿಮ್ಮಂತಹ ಪ್ರವಾಸಿಗರು ನೀಡುವ ಕಾಸಿನಿಂದಲೇ ಈ ಟಾಂಗಾ ಗಾಡಿಗಳ ಅಸ್ತಿತ್ವ ನಿಂತಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಕಟು ಸತ್ಯ.

ಹಾಗೆನೋಡಿದರೆ ಒಂದು ಕಾಲದಲ್ಲಿ ಮೈಸೂರು ನಗರದ ಸಂಚಾರಿ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದ ಟಾಂಗಾ ಗಾಡಿಗಳು ದೂರದಿಂದ ಬರುವ ಪ್ರವಾಸಿಗರನ್ನು ಹೊತ್ತು ನಗರ ಮಾತ್ರವಲ್ಲದೆ, ದೂರದ ಊರುಗಳಿಗೂ ಸಾಗುತ್ತಿದ್ದವು. ವಾಹನ ಸೌಲಭ್ಯವಿಲ್ಲದ ಆ ದಿನಗಳಲ್ಲಿ ಟಾಂಗಾ ಗಾಡಿಯೇ ಪ್ರಯಾಣಿಕರನ್ನು ಹೊತ್ತೊಯ್ಯುವ ಪ್ರಮುಖ ಸಾಧನವಾಗಿತ್ತಲ್ಲದೆ, ಮೈಸೂರು ಎಂದಾಕ್ಷಣ ಟಕ..ಟಕ.. ಸದ್ದು ಮಾಡುತ್ತಾ ಓಡುವ ಟಾಂಗಾ ಗಾಡಿಗಳ ಚಿತ್ರಣ ನಮ್ಮ ಕಣ್ಮಂದೆ ಹಾದು ಹೋಗುತ್ತಿತ್ತು.

ಈಗ ನೋಡಿ ಕಾಲ ಬದಲಾಗಿದೆ. ಆಧುನಿಕತೆಯ ಅಬ್ಬರ, ದಿನದಿಂದ ದಿನಕ್ಕೆ ವಿಜ್ಞಾನದಲ್ಲಾಗುತ್ತಿರುವ ಆವಿಷ್ಕಾರಗಳಿಂದಾಗಿ ವಿವಿಧ ವಾಹನ ತಯಾರಿಕಾ ಕಂಪನಿಗಳು ಹೊಸ ನಮೂನೆಯ ವಾಹನಗಳನ್ನು ತಯಾರಿಸುತ್ತಿದ್ದು, ವಾಹನದ ಮೇಲಿನ ವ್ಯಾಮೋಹ ಜನರಲ್ಲಿ ಹೆಚ್ಚಿದ ಪರಿಣಾಮ ಪ್ರತಿದಿನವೂ ಹೊಸ ಬಗೆಯ ವಾಹನಗಳು ರಸ್ತೆಗಿಳಿಯುತ್ತಿವೆ.

ಹೀಗಾಗಿ ವಾಹನ ಬಿಟ್ಟು ಟಾಂಗಾ ಗಾಡಿಯಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ದೂರದಿಂದ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಸ್ವಂತ ವಾಹನಗಳಲ್ಲಿಯೇ ಬರುತ್ತಾರೆ. ಹೀಗಾಗಿ ಟಾಂಗಾ ಗಾಡಿಗಳಲ್ಲಿ ತೆರಳುವವರ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಾಗಿ ಟಾಂಗಾ ಗಾಡಿಗಳನ್ನು ನಂಬಿ ಬದುಕುತ್ತಿರುವ ಟಾಂಗಾವಾಲಾಗಳ ಬದುಕು ತೂಗು ಉಯ್ಯಾಲೆಯಲ್ಲಿದೆ.

ಟಾಂಗಾ ಸುದೀರ್ಘ ಇತಿಹಾಸ:ಮೈಸೂರಿನ ಟಾಂಗಾ ಗಾಡಿಗಳ ಕುರಿತು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ನಮಗೆ ಒಂದಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿಯೇ ಜನರು ಸಾಗುತ್ತಿದ್ದರಾದರೂ ಟಾಂಗಾ ಗಾಡಿಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897ಎಂದು ಹೇಳಲಾಗಿದೆ.

ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ ಬಾಡಿಗೆ ನೀಡಿ ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು.

ಆಗ ಮೈಸೂರು ನಗರದಲ್ಲಿ ಸುಮಾರು ಆರುನೂರಕ್ಕೂ ಹೆಚ್ಚಿನ ಟಾಂಗಾಗಾಡಿಗಳು ಓಡಾಡುತ್ತಿದ್ದವಲ್ಲದೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು. ಮುಂಬಯಿಯ ವಿಕ್ಟೋರಿಯ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಈ ಟಾಂಗಾ ಗಾಡಿಗಳಲ್ಲಿ ದೀಪದ ವ್ಯವಸ್ಥೆಯೂ ಇತ್ತು ಎನ್ನಲಾಗಿದೆ.

ದಸರಾದಲ್ಲಿ ರಾಜ ಪೋಷಾಕು ಮೆರವಣಿಗೆ: ದಸರಾ ಸಂದರ್ಭದಲ್ಲಿ ಟಾಂಗಾಗಾಡಿಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತಲ್ಲದೆ, ದಸರಾ ಮೆರವಣಿಗೆಯಲ್ಲಿಯೂ ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಆದರೆ ಆಧುನಿಕ ವಾಹನಗಳ ಭರಾಟೆ ಟಾಂಗಾ ಗಾಡಿಗಳ ವೈಭವಯುತ ಓಡಾಟಕ್ಕೆ ಅಡ್ಡಗಾಲಾಯಿತು.

ದಸರಾ ಮುಗಿದರೆ ಮತ್ತೆ ಟಾಂಗಾವಾಲಗಳದ್ದು ಅದೇ ಬವಣೆಯ ಬದುಕು
ದಿನಕಳೆಯುತ್ತಿದ್ದಂತೆಯೇ ಮೈಸೂರು ನಗರ ತನ್ನ ವ್ಯಾಪ್ತಿಗೆ ಮೀರಿ ಬೆಳೆಯ ತೊಡಗಿದ್ದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯತೊಡಗಿದವು. ಪರಿಣಾಮ ಎಲ್ಲರೂ ವಾಹನಗಳಲ್ಲಿಯೇ ಓಡಾಡತೊಡಗಿದರು. ಹೀಗಾಗಿ ಟಾಂಗಾಗಾಡಿಗಳಲ್ಲಿ ತೆರಳುವವರ ಸಂಖ್ಯೆಯೂ ಗಣನೀಯವಾಗಿ ಇಳಿಯತೊಡಗಿತು.

ಬೆಳಿಗ್ಗೆಯಿಂದ ಸಂಜೆ ತನಕ ಕಾದರೂ ಯಾರೊಬ್ಬ ಪ್ರಯಾಣಿಕನೂ ಬಾರದೆ ಬರಿಗೈಯಲ್ಲಿ ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗತೊಡಗಿತು. ಇಂತಹ ಪರಿಸ್ಥಿತಿಯಲ್ಲಿ ಟಾಂಗಾ ಗಾಡಿ ಓಡಿಸಿ ಬದುಕಿನ ಬಂಡಿ ಉರುಳಿಸುವುದು ಅಸಾಧ್ಯ ಎಂದರಿತ ಕೆಲವರು ಆಟೋ ಸೇರಿದಂತೆ ಇತರ ವಾಹನಗಳಲ್ಲಿ ಚಾಲಕರಾದರೆ, ಮತ್ತೆ ಕೆಲವರು ಜೀವನೋಪಾಯಕ್ಕಾಗಿ ಪರ್ಯಾಯ ಉದ್ಯೋಗ ಕಂಡುಕೊಂಡರು.

ಇದರಿಂದಾಗಿ ನಗರದಲ್ಲಿ ಟಾಂಗಾ ಗಾಡಿಗಳ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿತು. ಆಗ ಆರುನೂರಕ್ಕೂ ಹೆಚ್ಚು ಇದ್ದ ಗಾಡಿಗಳು ಈಗ ನೂರಕ್ಕಿಂತ ಕಡಿಮೆಯಿದೆ. ಇರುವ ಗಾಡಿಗಳಿಗೆ ಪ್ರವಾಸಿಗರ ಕೊರತೆಯಿದೆ. ಹಗಲು ರಾತ್ರಿ ದುಡಿದರೂ ಎರಡಂಕಿಯ ಸಂಪಾದನೆಯಾಗಲ್ಲ. ಇದರಲ್ಲಿ ಕುದುರೆಗೆ ಹಸಿ ಹುಲ್ಲು, ಹುರುಳಿ, ಬೂಸ ಹೀಗೆ ಐವತ್ತರಿಂದ ನೂರು ರೂಪಾಯಿ ಖರ್ಚಾಗುತ್ತದೆ. ಇನ್ನು ಏನು ಉಳಿಯುತ್ತದೆ? ಇನ್ನು ನಮ್ಮ ಜೀವನ ಹೇಗೆ? ಎಂಬ ಪ್ರಶ್ನೆಯನ್ನು ಕಳೆದ ಇಪ್ಪತೈದು ವರ್ಷಕ್ಕೂ ಹೆಚ್ಚು ಕಾಲದಿಂದ ಟಾಂಗಾ ಗಾಡಿ ಓಡಿಸಿಕೊಂಡು ಜೀವನ ನಿರ್ವಹಿಸುತ್ತಿರುವ ಟಾಂಗಾವಾಲರೊಬ್ಬರು ನಮ್ಮ ಮುಂದಿಡುತ್ತಾರೆ.

ಇದು ಅವರೊಬ್ಬರದ್ದೇ ಅಲ್ಲ. ಎಲ್ಲಾ ಟಾಂಗಾವಾಲಗಳದ್ದೂ ಅದೇ ಕಥೆ, ವ್ಯಥೆ. ಪ್ರತಿಯೊಬ್ಬರ ಬಾಯಿಂದಲೂ ನೋವಿನ ನುಡಿಗಳೇ ಕೇಳಿ ಬರುತ್ತವೆ. ಕೆಲವರು ತಾತ ಮುತ್ತಾತ ಕಾಲದಿಂದಲೂ ಟಾಂಗಾ ಓಡಿಸಿಯೇ ಬದುಕು ಸಾಗಿಸಿಕೊಂಡು ಬಂದಿದ್ದಾರೆ. ಹಾಗಾಗಿ ಇದನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಹೊಂದಿಕೊಳ್ಳುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಆ ದಿನಗಳನ್ನು ನೆನಪಿಸಿಕೊಳ್ಳುವ ಹಿರಿಯರೊಬ್ಬರು ಅಂದು ಎಲ್ಲೆಡೆ ಹೋಗಲು ನಮ್ಮ ಟಾಂಗಾ ಗಾಡಿಗಳೇ ಬೇಕಾಗುತ್ತಿತ್ತು.

ಹೀಗಾಗಿ ಜನರೇ ಗಾಡಿಗಳನ್ನು ಹುಡುಕಿಕೊಂಡು ನಮ್ಮ ಮನೆ ಬಾಗಿಲಿಗೆ ಬರತ್ತಿದ್ದರು. ಈಗ ನೋಡಿ ಎಲ್ಲಾ ಬದಲಾಗಿದೆ ನಾವೇ ಗೋಗರೆದು ಕರೆದರೂ ಯಾರು ಬರುತ್ತಿಲ್ಲ ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಳ್ಳುತ್ತಾರೆ. ಟಾಂಗಾ ಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಿಲ್ಲ. ಅರಮನೆಯ ಆಂಜನೇಯ ದೇವಾಲಯದ ಬಳಿ, ಅಗ್ರಹಾರ ಹೀಗೆ ನಿಗದಿತ ಸ್ಥಳಗಳನ್ನು ಹೊರತುಪಡಿಸಿದರೆ, ಪ್ರವಾಸಿ ತಾಣಗಳ ಎದುರು ನಿಲ್ಲಿಸಲು ಅವಕಾಶವಿಲ್ಲ.

ಪ್ರವಾಸಿ ತಾಣಗಳ ಮುಂದೆ ನಿಲ್ಲಿಸಲು ಅವಕಾಶ ನೀಡಿದರೆ ಪ್ರವಾಸಿಗರು ಆಕರ್ಷಿತರಾಗಿ ತಮ್ಮತ್ತ ಬರುತ್ತಾರೆ ಇದರಿಂದ ನಮಗೆ ಅಷ್ಟೋ, ಇಷ್ಟೋ ಹೆಚ್ಚಿನ ಸಂಪಾದನೆಯಾಗಬಹುದು ಎಂಬ ಅಭಿಪ್ರಾಯವನ್ನು ಟಾಂಗಾವಾಲಗಳು ನಮ್ಮ ಮುಂದಿಡುತ್ತಾರೆ. ಈಗ ಕುದುರೆಯ ಬೆಲೆ ಹೆಚ್ಚಾಗಿರುವುದರಿಂದ ಕುದುರೆಯನ್ನು ಖರೀದಿಸುವುದು ಕಷ್ಟವಾಗುತ್ತಿದೆ.

ಹೊಸ ಗಾಡಿ ಕೊಳ್ಳಬೇಕೆಂದರೆ ಸುಮಾರು ಇಪ್ಪತೈದು ಸಾವಿರಕ್ಕೂ ಹೆಚ್ಚು ಬಂಡವಾಳ ಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ಅಷ್ಟೊಂದು ಹಣ ನೀಡಿ ಖರೀದಿಸಿ ಅದರಿಂದ ಸಂಪಾದನೆ ಮಾಡುವುದು ಸಾಧ್ಯವಾಗದ ಕೆಲಸ ಹಾಗಾಗಿ ಹೊಸ ಗಾಡಿ ಖರೀದಿಸದೆ ಹಳೆಯ ಗಾಡಿಗಳನ್ನೇ ದುರಸ್ತಿ ಮಾಡಿ ಓಡಿಸುವಂತಾಗಿದೆ ಎಂಬ ಅಸಹಾಯಕತೆಯನ್ನು ಅವರು ತೋಡಿಕೊಳ್ಳುತ್ತಾರೆ.

ವರ್ಷದ ಇತರೆ ದಿನಗಳಲ್ಲಿ ನೆನಪಾಗದ ಟಾಂಗಾವಾಲಾಗಳು ದಸರಾ ಬರುತ್ತಿದ್ದಂತೆ ನೆನಪಾಗುತ್ತಾರೆ ಅವರಿಗೆ ಸರ್ಕಾರದ ಕಡೆಯಿಂದ ಭರವಸೆಗಳು ಕೂಡ ದೊರೆಯುತ್ತವೆ. ದಸರಾ ಸಂದರ್ಭ ತಮ್ಮದೇ ಆದ ಪೋಷಾಕು ಧರಿಸಿ ಟಾಂಗಾ ಗಾಡಿ ಮುಂದೆ ನಿಲ್ಲುವ ಟಾಂಗಾವಾಲಗಳನ್ನು ನೋಡಿದಾಗ ಅವರ ಬದುಕಿನ ಹಿಂದಿನ ಕರಾಳತೆ ನಮಗೆ ಗೋಚರಿಸುವುದಿಲ್ಲ.

ಏಕೆಂದರೆ ದಸರಾ ಸಂದರ್ಭ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿರುವುದರಿಂದ ಪ್ರವಾಸಿಗರನ್ನು ತಮ್ಮ ಗಾಡಿಯಲ್ಲಿ ಕುಳ್ಳಿರಿಸಿ ಅಲಂಕೃತ ಅರಮನೆಗೊಂದು ಸುತ್ತು ಹೊಡೆಸಿದರೆ ಒಂದಷ್ಟು ಕಾಸು ಸಿಗುತ್ತದೆ. ಆ ದಿನಗಳಲ್ಲಿ ಇನ್ನ ರೋ, ಮುನ್ನೂರೋ, ಸಂಪಾದನೆಯಾಗುತ್ತದೆ. ದಸರಾ ಕಳೆಯುತ್ತಿದ್ದಂತೆಯೇ ಮತ್ತೆ ಅದೇ ಬವಣೆಯ ಬದುಕು ಮುಂದುವರೆಯುತ್ತದೆ....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X