ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡ ಮಕ್ಕಳಿಗಾಗಿ ಒಂದು ಬೊಂಬೆ ದಾನ ಮಾಡಿ

By Staff
|
Google Oneindia Kannada News

Doll festival by Radio Mirchi, donate toys
ಬೆಂಗಳೂರು, ಸೆ. 18 : ಮೈಸೂರು ದಸರಾ ಹಬ್ಬಕ್ಕೆ ಇನ್ನೊಂದು ಹೆಸರು ಬೊಂಬೆ ಹಬ್ಬ. ರಾಜ, ರಾಣಿ, ಮಂತ್ರಿ, ಸೈನಿಕ ಮತ್ತಿತರ ಪ್ರಜಾ ಬಂಧುಗಳನ್ನು ಪ್ರತಿನಿಧಿಸುವ ಬೊಂಬೆ ಪ್ರತಿಬಿಂಬ ಉತ್ಸವಕ್ಕೆ ಸಖತ್ ಹಾಟ್ ಮಗ, ರೇಡಿಯೋ ಮಿರ್ಚಿ ಸ್ವಾಗತ. ಅಲಂಕೃತ ಬೊಂಬೆಗಳನ್ನು ಸಾಲುಸಾಲಾಗಿ ಕುಳ್ಳಿರಿಸಿ ಪ್ರದರ್ಶನ ಮಾಡುವುದು ಪರಂಪಾರಗತ ಹತ್ತು ದಿವಸಗಳ ದಸರಾ ವಿಶೇಷ. ಪಾಡ್ಯದಿಂದ ದಶಮಿಯವರೆಗೆ ಕರ್ನಾಟಕದ ಮನೆಮನೆಗಳಲ್ಲಿ ಬೊಂಬೆ ಸಂಭ್ರಮ ಕಂಡುಬಂದರೆ, ದಸರಾ ನಿಮಿತ್ತ ಕಣ್ಮನ ಸೂರೆಗೊಳ್ಳುವ ಅಲಂಕಾರದಿಂದ ಕಂಗೊಳಿಸುವ ಮೈಸೂರು ನಗರವೇ ಒಂದು ಬೊಂಬೆ! ಇಂಥ ಹಬ್ಬವನ್ನು ಬಡವರ ಮಕ್ಕಳ ಪ್ರಯೋಜನಕ್ಕಾಗಿ ಆಚರಿಸುವ ವಿನೂತನ ಹಬ್ಬವನ್ನು ಎಫ್ ಎಂ ಚಾನಲ್ ಹಮ್ಮಿಕೊಂಡಿದೆ.

ಅನಾಥ ಮಕ್ಕಳಿಗೆ, ಬಡವರ ಮಗುವಿಗೆ, ಜಾರಿಬಿದ್ದು ಚರಂಡಿಯಲ್ಲಿ ಕೊಚ್ಚಿಹೋಗುವ ದುರ್ದೈವಿ ಮಗುವಿಗೆ ಈ ಮೇಲೆ ವರ್ಣಿಸಿದ ಪದಗಳು ಅರ್ಥವಾಗುವುದಿಲ್ಲ. ಅದೇನಿದ್ದರೂ ಬರೆಯುವ ನಮಗೆ, ಓದುವ ನಿಮಗೆ ಮಾತ್ರ. ಬಡವರ ಕೂಸು ಕಿಡ್ಸ್ ಕೆಂಪಿಗೆ, ಬ್ಲೂಮಿಂಗ್ ಟನ್ ಮಾಲಿಗೆ ಹೋಗುವುದಿಲ್ಲ. ಚಿಪ್ಪಿನ ಚೂರು, ಮರಳು ರಾಶಿಯಲ್ಲಿ ಆಡುವ ಮಕ್ಕಳಿಗೆ ಬಾರ್ಬಿ ಇರಲಿ, ಒಂದು ಪ್ಲಾಸ್ಟಿಕ್ ಗಿಲಕಿ ಕೂಡ ಇಲ್ಲಿ ದಕ್ಕುವುದಿಲ್ಲ. ಎಳೆಯ ಕಣ್ಣುಗಳು, ಮುಗ್ಧ ಮನಸ್ಸುಗಳು ಬಣ್ಣದೊಂದಿಗೆ, ವಿವಿಧ ಆಕೃತಿಯ ಆಟಿಕೆಗಳೊಂದಿಗೆ ಆಡುವ ಸಂತಸವನ್ನು ಪಡೆದಿಲ್ಲ.

ಅಂಥ ಮಕ್ಕಳಿಗೆ ಒಂದು ಆಟಿಕೆ ಕೊಡುವ ಮನಸ್ಸು ನಿಮ್ಮದಾಗಲಿ. ಮನೆಯ ಯಾವುದೋ ಒಂದು ಮೂಲೆಯಲ್ಲಿ ಅಳುತ್ತ ಬಿದ್ದಿರುವ ಒಂದು ಬೊಂಬೆ ಬಡ ಕೂಲಿ ಕಾರ್ಮಿಕನ ಮನೆಯ ಮಗುವಿನ ಕೈಯಲ್ಲಿ ಆಡುತ್ತ ನಗಲಿ. ಸೋ, ರೇಡಿಯೋ ಮಿರ್ಚಿ ಹಮ್ಮಿಕೊಂಡಿರುವ ಬೊಂಬೆ ಬೆಟ್ಟ ಕಟ್ಟಿ ಕಾರ್ಯಕ್ರಮಕ್ಕೆ ನಿಮಗೆ ಮತ್ತೊಮ್ಮೆ ಸ್ವಾಗತ. ಎಫ್ ಎಂ ರೇಡಿಯೋ ಹಮ್ಮಿಕೊಂಡಿರುವ ಈ ಯೋಜನೆಯ ಪ್ರಕಾರ ಬೆಂಗಳೂರಿನ ನಾಗರಿಕರು ತಮ್ಮದೊಂದು ಬೊಂಬೆ ಅಥವಾ ಆಟದ ಸಾಮಾನನ್ನು ತಂದು ಗರುಡಾ ಮಾಲ್ ನಲ್ಲಿ ಇಟ್ಟಿರುವ ಬೊಂಬೆ ತೊಟ್ಟಿಗೆ ಹಾಕಬೇಕು. ಪ್ರಜೆಗಳು ದಾನಮಾಡಿದ ಇಂಥ ಬೊಂಬೆಗಳ ಅಭೂತಪೂರ್ವ ಪ್ರದರ್ಶನವನ್ನು ಸಾರ್ವಜನಿಕರಿಗೆ ತೆರೆದಿಡಲಾಗುವುದು. ಬೊಂಬೆ ಯಜ್ಞಕ್ಕೆಂದೇ 30 ಅಡಿ ಉದ್ದಳತೆಯ ಶೆಲ್ಫ್ ನಿರ್ಮಿಸಲಾಗಿದ್ದು ನಿಮ್ಮ ಬೊಂಬೆಗೆ ಅಲ್ಲಿ ಜಾಗ ಸಿಗುವುದು.

ಆನಂತರ, ಈ ಎಲ್ಲ ಬೊಂಬೆಗಳನ್ನು ಬೆಂಗಳೂರಿನ ನಾನಾ ಭಾಗಗಳಲ್ಲಿರುವ ನಿರ್ಭಾಗ್ಯ ಮಕ್ಕಳಿಗೆ ಹಂಚಲಾಗುತ್ತದೆ. ನಾಳೆ, ಸೆಪ್ಟೆಂಬರ್ 19ರ ಶನಿವಾರ ರೆಡಿಯೋ ಮಿರ್ಚಿಯ ಬೊಂಬೆ ಯಜ್ಞವನ್ನು ಸುಧಾ ಮೂರ್ತಿ ಉದ್ಘಾಟಿಸುತ್ತಿದ್ದಾರೆ. ಸ್ಥಳ, ಬೆಂಗಳೂರಿನ ಗರುಡಾ ಮಾಲ್ ಬೆಳಗ್ಗೆ 11 ಗಂಟೆ. ಹೆಚ್ಚಿನ ವಿವವರಗಳಿಗೆ ಆಸಕ್ತಿ ಇರುವವರು ಧಿವಿಜಯ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ ಸಂಖ್ಯೆ 99453 89476.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X