Bheemana Amavasya 2023: ಭೀಮನ ಅಮವಾಸ್ಯೆ ದಿನಾಂಕ, ಮಹತ್ವ, ಪೌರಾಣಿಕ ಕಥೆ, ಪೂಜಾ ವಿಧಾನ ತಿಳಿಯಿರಿ
ಹಿಂದೂಗಳಿಗೆ ಪ್ರಮುಖವಾದ ದಿನ ಭೀಮನ ಅಮವಾಸ್ಯೆ. ಈ ದಿನ ಮಹಿಳೆಯರು ವಿಶೇಷ ಪೂಜೆಯನ್ನು ಮಾಡುತ್ತಾರೆ. ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಈ ದಿನ ವಿಶೇಷ ಪೂಜೆ ಕೈಗೊಳ್ಳುತ್ತಾರೆ. ಜೊತೆಗೆ ಇದು ಪಿತೃತರ್ಪಣಕ್ಕೂ ಶ್ರೇಷ್ಠವಾದ ದಿನವಾಗಿದೆ.
ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಸತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಭೀಮನ ಅಮವಾಸ್ಯೆಯನ್ನು ಕರೆಯುವುದುಂಟು. ಮೊದಲೇ ಹೇಳಿದಂತೆ ಅವಿವಾಹಿತ ಹೆಣ್ಣು ಮಕ್ಕಳು, ವಿವಾಹಿತ ನವ ವಧು ಇದನ್ನು ಆಚರಿಸಬಹುದು.

ಒಮ್ಮೆ ವ್ರತ ಕೈಗೊಂಡರೆ ಐದು, ಒಂಭತ್ತು ಅಥವಾ ಹದಿನಾರು ವರ್ಷ ಸಂಪೂರ್ಣಗೊಳಿಸಿ ಉದ್ಯಾಪನೆ ಮಾಡಿ ಎಲ್ಲರಿಗೂ ಸಿಹಿಯೂಟ ಹಾಕಿಸಬೇಕು ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಆಷಾಢದಲ್ಲಿ ಗಂಡನ ಸಂಗ ತೊರೆದು ತವರಿನ ಗೂಡು ಸೇರಿಕೊಂಡ ಹೆಂಗಳೆಯರು ಗಂಡನ ಪಾದಕ್ಕೆರಗಿ ಮತ್ತೆ ಜೀವನದ ಬಂಡಿ ಹೂಡುವುದು ವಾಡಿಕೆ.
ಭೀಮನ ಅಮವಾಸ್ಯೆ ದಿನಾಂಕ, ಸಮಯ
ಈ ವರ್ಷ ಆಷಾಢ ಅಮವಾಸ್ಯೆ ತಿಥಿ ಪ್ರಾರಂಭ: ಜುಲೈ 17 ಬೆಳಿಗ್ಗೆ 9:11ಕ್ಕೆ
ಆಷಾಢ ಅಮವಾಸ್ಯೆ ತಿಥಿ ಮುಕ್ತಾಯ: ಜುಲೈ 18 ಬೆಳಿಗ್ಗೆ 10:06ಕ್ಕೆ
ಭೀಮನ ಅಮವಾಸ್ಯೆಯ ಪೌರಾಣಿಕ ಕಥೆ
ಪುರಾಣದಲ್ಲಿ ಭೀಮನ ಅಮವಾಸ್ಯೆ ಬಗ್ಗೆ ಹೇಳಲಾಗಿದೆ. ಅದರಲ್ಲಿ ಬಡ ಬ್ರಾಹ್ಮಣ ಹೆಣ್ಣು ಮಗಳು ಸತ್ತ ರಾಜಕುಮಾರನನ್ನು ಮದುವೆಯಾಗಿ ಬದುಕಿಸಿಕೊಂಡ ಕತೆ ಇದಾಗಿದೆ. ಒಂದು ದಂಪತಿಗೆ ಮಗಳಿದ್ದಳು. ಆ ದಂಪತಿ ಒಂದು ದಿನ ಕಾಶಿಯಾತ್ರೆ ಹೋಗಲು ಬಯಸುತ್ತಾರೆ. ಆದರೆ ಅವರು ತಮ್ಮ ಮಗಳನ್ನು ಕರೆದುಕೊಂಡು ಹೋಗಲು ಇಚ್ಚಿಸುವುದಿಲ್ಲ. ಬದಲಿಗೆ ಆಕೆಯನ್ನು ಸಹೋದರ ಬಳಿ ಬಿಟ್ಟು ಹೋಗುತ್ತಾರೆ. ಆದರೆ ಆಕೆಯ ಸಹೋದರ ದುರಾಸೆ ಇರುವ ವ್ಯಕ್ತಿ ಆಗಿರುತ್ತಾನೆ.
ಈ ಸಂದರ್ಭದಲ್ಲಿ ಆ ಊರಿನ ರಾಜಕುಮಾರ ಸುತ್ತು ಹೋಗುತ್ತಾನೆ. ಆದರೆ ಸಾಯುವ ಮುನ್ನ ಆತ ಮದುವೆಯಾಗುವ ಕನಸು ಕಂಡಿದ್ದನು. ರಾಜಕುಮಾರನ ಆಸೆಯನ್ನು ಈಡೇರಿಸಲು ಆತನ ತಂದೆ ಹೆಣ್ಣನ್ನು ಹುಡುಕುತ್ತಾನೆ. ಆದರೆ ಸತ್ತ ರಾಜಕುಮಾರನನ್ನ್ನು ಮದುವೆಯಾಗಲು ಯಾರೂ ಕೂಡ ಮುಂದೆ ಬರುವುದಿಲ್ಲ. ಆಗ ಯುವತಿಯ ಸಹೋದರ ಹಣದ ಆಸೆಗೆ ಸತ್ತ ರಾಜಕುಮಾರನೊಂದಿಗೆ ಮದುವೆ ಮಾಡಿಸುತ್ತಾನೆ.
ಈ ವೇಳೆ ರಾಜಕುಮಾರನ ಶವದ ಮುಮದೆ ಅಳುತ್ತಾ, ತನ್ನ ತಂದೆ ತಾಯಿ ಮಾಡುತ್ತಿದ್ದ ಭೀಮನ ಅಮವಾಸ್ಯೆ ವ್ರತವನ್ನು ಆಚರಿಸುತ್ತಾಳೆ. ಆಗ ಶಿವ ಪಾರ್ವತಿ ಆಕೆಯ ಪೂಜೆಗೆ ಮೆಚ್ಚಿ ಯಾವ ವರ ಬೇಕೆಂದು ಕೇಳುತ್ತಾರೆ. ಈ ವೇಳೆ ತನ್ನ ಗಂಡನನ್ನು ಉಳಿಸಿಕೊಟ್ಟು ತನ್ನ ಮುತ್ತೈದೆ ಭಾಗ್ಯ ಕಾಪಾಡುವಂತೆ ಕೇಳಿಕೊಳ್ಳುತ್ತಾಳೆ. ದೇವರು ಆಕೆಯ ಬೇಡಿಕೆಗೆ ಆಶೀರ್ವಧಿಸುತ್ತಾರೆ. ಆಗ ರಾಜಕುಮಾರನಿಗೆ ಜೀವ ಬರುತ್ತದೆ. ಅವಳು ರಾಜನೊಂದಿಗೆ ಸುಖಮಯ ಜೀವನ ನಡೆಸುತ್ತಾಳೆ.
ಪಾರ್ವತಿ ಸಮೃದ್ಧಿ, ಸಂತಾನ, ಪತಿವ್ರತೆ, ಶಕ್ತಿಯ ಸಂಕೇತ. ಹೀಗಾಗಿ ಈ ದಿನದಂದು ಹೆಂಗಳೆಯರು ವ್ರತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ. ಅದೇ ರೀತಿ ವಿವಾಹಿತ ಹೆಂಗಸರು ಗಂಡನಿಗೆ ದೀರ್ಘಾಯುಷ, ಯಶಸ್ಸು ಹಾಗೂ ಸಂತೋಷವನ್ನು ಬಯಸಿ ಪೂಜೆ ಸಲ್ಲಿಸುತ್ತಾರೆ.
ಪೂಜಾ ಸಾಮಾಗ್ರಿಗಳು:
ಮಣೆ / ಮಂಟಪ, ಭೀಮೇಶ್ವರ ದೇವರ ಪಟ
* ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ
* ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು
* ಅರಿಶಿನ, ಕುಂಕುಮ, ಮಂತ್ರಾಕ್ಷತೆ
* ಶ್ರೀಗಂಧ, ಊದಿನ ಕಡ್ಡಿ
* ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ
* ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ
* ನೈವೇದ್ಯ - ಪಾಯಸ, ಹಣ್ಣು..ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ
* ಆರತಿ ತಟ್ಟೆ, ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ.
ಭೀಮನ ಅಮವಾಸ್ಯೆ ಪೂಜೆ ಮಾಡುವ ವಿಧಾನ
* ಗೃಹಿಣಿಯರು ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳಬೇಕು.
* ರಾಹುಕಾಲ ಹೊರತುಪಡಿಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮುಹೂರ್ತದಲ್ಲಿ ವ್ರತ ಕೈಗೊಳ್ಳಬಹುದು.
* ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಎರಡು ದೀಪದ ಕಂಭ ನೆಟ್ಟು, ದೀಪದ ಎಣ್ಣೆ ಹಾಕಿ ಹಚ್ಚಬೇಕು.
* ಈ ದೀಪಸ್ತಂಭದಲ್ಲಿ ಶಿವ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಸಲ್ಲಿಸುತ್ತಾರೆ.
* ಪೂಜಾ ಸಾಮಗ್ರಿಗಳ ಜತೆಗೆ 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಿ ಆ ಬಳಿಕ ಕೈಗೆ ಕಟ್ಟಿಕೊಳ್ಳಬೇಕು.
* ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೇಶ್ವರನ ಪೂಜೆ ಮಾಡುತ್ತಾರೆ.
* ನೈವೇದ್ಯಕ್ಕೆ 9 ಕರಿಗಡುಬು ಅರ್ಪಿಸಲಾಗುತ್ತದೆ. ಆ ಬಳಿಕ ಗಂಡನ ಪಾದಪೂಜೆಯನ್ನು ನೆರವೇರಿಸಬೇಕು.












Click it and Unblock the Notifications