Akshaya Tritiya 2025: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಶುಭ ಸಮಯ
ಭಾರತದ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಶುಭ ಹಬ್ಬಗಳಲ್ಲಿ ಅಕ್ಷಯ ತೃತೀಯ ಒಂದು. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಈ ಹಬ್ಬ ಬರಲಿದ್ದು ಈ ವರ್ಷ ಬುಧವಾರ ಏಪ್ರಿಲ್ 30ರಂದು ಆಚರಿಸಲಾಗುತ್ತದೆ. ಅಕ್ಷಯ ಪದದ ಅರ್ಥ "ಶಾಶ್ವತ" ಅಥವಾ "ಎಂದಿಗೂ ಕಡಿಮೆಯಾಗದ", ತೃತೀಯ ಅಂದರೆ "ಮೂರನೇ" ದಿನವನ್ನು ಸೂಚಿಸುತ್ತದೆ. ಹೆಸರಿಗೆ ತಕ್ಕಂತೆ ಈ ದಿನದಂದು ಮಾಡುವ ಯಾವುದೇ ಒಳ್ಳೆಯ ಕಾರ್ಯ, ಹೂಡಿಕೆ ಅಥವಾ ಆರಂಭವು ಶಾಶ್ವತ ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆ ಇದೆ.
ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡುವುದು ತುಂಬಾ ಶುಭ. ಇದು ಸಂಪತ್ತು ಮತ್ತು ಭದ್ರತೆಯ ಸಂಕೇತವಾಗಿದೆ. ಈ ದಿನದಂದು ಜನ ದುಬಾರಿ ವಸ್ತುಗಳ ಖರೀದಿಗಳನ್ನು ಮಾಡಲು ಅಥವಾ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸೂಕ್ತ ದಿನವೆಂದು ಪರಿಗಣಿಸುತ್ತಾರೆ. ಹಾಗಾದರೆ ಏಪ್ರಿಲ್ 30ರಂದು ಚಿನ್ನ ಖರೀದಿಸಲು ಶುಭ ಸಮಯ ಯಾವುದು ಎಂದು ಈಗ ತಿಳಿಯೋಣ.

ಅಕ್ಷಯ ತೃತೀಯ 2025: ದಿನಾಂಕ ಮತ್ತು ಸಮಯ
- ತೃತೀಯಾ ತಿಥಿ ಪ್ರಾರಂಭ- ಏಪ್ರಿಲ್ 29, 2025 - ಮಧ್ಯಾಹ್ನ 05.31
- ತೃತೀಯಾ ತಿಥಿ ಕೊನೆಗೊಳ್ಳುವುದು- ಏಪ್ರಿಲ್ 30, 2025 - ಮಧ್ಯಾಹ್ನ 02.12
- ಅಕ್ಷಯ ತೃತೀಯ ಪೂಜಾ ಮುಹೂರ್ತ - ಏಪ್ರಿಲ್ 30, 2025 - ಬೆಳಿಗ್ಗೆ 05.40 ರಿಂದ ಮಧ್ಯಾಹ್ನ 12.18 ರವರೆಗೆ ಇರುತ್ತದೆ.
- ಚಿನ್ನ ಖರೀದಿಸಲು ಶುಭ ಸಮಯ ಏಪ್ರಿಲ್ 29 ರಂದು ಸಂಜೆ 5:31 ರಿಂದ ಏಪ್ರಿಲ್ 30 ರಂದು ಬೆಳಿಗ್ಗೆ 6:11 ರವರೆಗೆ
- ಏಪ್ರಿಲ್ 30 ರಂದು ಚಿನ್ನ ಖರೀದಿಸಲು ಶುಭ ಸಮಯ - ಬೆಳಿಗ್ಗೆ 6:11 ರಿಂದ ಮಧ್ಯಾಹ್ನ 2:12 ರವರೆಗೆ
ಅಕ್ಷಯ ತೃತೀಯದಂದು ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಈ ವಸ್ತುಗಳನ್ನು ಖರೀದಿಸಿ
*ಬೆಳ್ಳಿ
*ಮಣ್ಣಿನ ಮಡಕೆ
*ಬಾರ್ಲಿ
*ವಾಹನ

ಅಕ್ಷಯ ತೃತೀಯ ಮಹತ್ವ
ಸಾಮಾನ್ಯ ನಂಬಿಕೆಯ ಪ್ರಕಾರ ಈ ದಿನದಂದು ಚಿನ್ನ ಮತ್ತು ಆಸ್ತಿಗಳನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಸಮೃದ್ಧಿ ಮತ್ತು ಸಂಪತ್ತು ಹೆಚ್ಚಾಗಲಿದೆ. ಪುರಾಣಗಳ ಪ್ರಕಾರ ಅಕ್ಷಯ ತೃತೀಯದಂದು ಹಲವಾರು ಘಟನೆಗಳು ನಡೆದವು, ಹೀಗಾಗಿ ಇದನ್ನು ಶುಭ ದಿನವೆಂದು ನಂಬಲಾಗಿದೆ.
ಒಂದು ದಂತಕಥೆಯ ಪ್ರಕಾರ ಅಕ್ಷಯ ತೃತೀಯದಂದು ನಾಲ್ಕು ಯುಗಗಳಲ್ಲಿ ಎರಡನೆಯದಾದ ತ್ರೇತಾಯುಗ ಪ್ರಾರಂಭವಾಯಿತು. ವಿಷ್ಣುವಿನ ಆರನೇ ಅವತಾರವಾದ ಪರಶುರಾಮ ಜನಿಸಿದನು. ಅಲ್ಲದೆ ಮಹಾಭಾರತದ ಕರ್ತೃ ಮಹರ್ಷಿ ವೇದ ವ್ಯಾಸರು ಈ ದಿನದಂದು ಗಣೇಶನಿಗೆ ಮಹಾಕಾವ್ಯವನ್ನು ಹೇಳಲು ಪ್ರಾರಂಭಿಸಿದರು ಎನ್ನಲಾಗುತ್ತದೆ. ಅಲ್ಲದೆ ಈ ಸಂದರ್ಭದಲ್ಲಿಯೇ ಶ್ರೀಕೃಷ್ಣನು ತನ್ನ ಬಾಲ್ಯದ ಗೆಳೆಯ ಸುದಾಮನನ್ನು ಭೇಟಿಯಾದನು. ಇನ್ನೊಂದು ಕತೆಯ ಪ್ರಕಾರ ಗಂಗಾ ನದಿಯು ಅಕ್ಷಯ ತೃತೀಯದಂದು ಸ್ವರ್ಗದಿಂದ ಭೂಮಿಗೆ ಇಳಿಯಿತು ಎನ್ನಲಾಗುತ್ತದೆ.
ಅಕ್ಷಯ ತೃತೀಯದಂದು ಚಿನ್ನವನ್ನು ಏಕೆ ಖರೀದಿಸಲಾಗುತ್ತದೆ?
ಈ ದಿನ ಹಲವಾರು ಪೌರಾಣಿಕ ಮತ್ತು ಧಾರ್ಮಿಕ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ. ಅವುಗಳಲ್ಲಿ ಒಂದು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದು. ಈ ದಿನ ಜನರು ಚಿನ್ನದ ನಾಣ್ಯಗಳು, ಆಭರಣಗಳನ್ನು ಖರೀದಿಸುತ್ತಾರೆ. ಯಾಕೆಂದರೆ ಚಿನ್ನ ಕೇವಲ ಲೋಹವಲ್ಲ. ಇದು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಸಮೃದ್ಧಿಯನ್ನು ಆಹ್ವಾನಿಸುತ್ತದೆ. ಅಲ್ಲದೆ ಜೀವನದಲ್ಲಿ ಸಂಪತ್ತು ನಿರಂತರ ಆಗಮನವಾಗಲಿದೆ.
ಅಕ್ಷಯ ತೃತೀಯವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿರುವುದರಿಂದ ಈ ದಿನದಂದು ಮಾಡುವ ಯಾವುದೇ ಹೂಡಿಕೆಯು ಉತ್ತಮ ಫಲ ನೀಡುತ್ತದೆ. ಅಲ್ಲದೆ ಚಿನ್ನವನ್ನು ಖರೀದಿಸಲು ಸೂಕ್ತ ಸಮಯವಾಗಿದೆ ಎಂದು ನಂಬಲಾಗಿದೆ. ಜೊತೆಗೆ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವ ಸಂಪ್ರದಾಯ ತಲತಲಾಂತರದಿಂದ ಬಂದಿದೆ. ಇದು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ.












Click it and Unblock the Notifications