ಕೊರೊನಾ ಅಲ್ಲ: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಯ ಹುಟ್ಟಿಸಿದ ಝಿಕಾ ವೈರಸ್!
ನವದೆಹಲಿ, ಜುಲೈ 11: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಝಿಕಾ ವೈರಸ್ ಭೀತಿ ಶುರುವಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿರುವ ಝಿಕಾ ವೈರಸ್ ತಮಿಳುನಾಡು ಹಾಗೂ ಕರ್ನಾಟಕಕ್ಕೆ ಹರಡುವ ಅಪಾಯ ಹೆಚ್ಚಾಗಿದೆ.
ಕೊವಿಡ್-19 ಲಸಿಕೆಯಿಂದ ನಿರಾಳರಾಗುತ್ತಿರುವ ಜನರ ಎದೆಯಲ್ಲಿ ಝಿಕಾ ವೈರಸ್ ನಡುಕ ಹುಟ್ಟಿಸುತ್ತಿದೆ. ಕೇರಳ-ಕರ್ನಾಟಕ ಗಡಿಯಲ್ಲಿ ತಪಾಸಣೆಗೆ ಕ್ರಮ ತೆಗೆದುಕೊಂಡಿರುವ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕೂಡ ಕೇರಳದಿಂದ ಆಗಮಿಸುವ ಪ್ರಮಾಣಿಕರ ಮೇಲೆ ಒಂದು ಕಣ್ಣಿಟ್ಟಿದೆ.
ಕೇರಳ ಮತ್ತು ತಮಿಳುನಾಡು ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪ್ರಯಾಣಿಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಲಯರ್ ಮತ್ತು ಮೀನಾಕ್ಷಿಪುರಂ ಚೆಕ್ ಪೋಸ್ಟ್ ಸೇರಿದಂತೆ ಗಡಿಭಾಗದ 14 ಕಡೆಗಳಲ್ಲಿ ತಪಾಸಣೆ ಕೇಂದ್ರವನ್ನು ಆರಂಭಿಸಲಾಗಿದೆ. ಝಿಕಾ ವೈರಸ್ ಎಂದರೇನು. ಝೀಕಾ ವೈರಸ್ ಹರಡುವುದು ಹೇಗೆ, ಝಿಕಾ ವೈರಸ್ ಲಕ್ಷಣಗಳೇನು? ನಿಯಂತ್ರಣ ಕ್ರಮಗಳು ಹಾಗೂ ಝಿಕಾ ವೈರಸ್ ಕುರಿತು ಇತ್ತೀಚಿನ ಪ್ರಮುಖ ಬೆಳವಣಿಗೆಗಳನ್ನು ಮುಂದೆ ಓದಿ.

ಝಿಕಾ ವೈರಸ್ ಎಂದರೇನು, ರೋಗ ಹರಡುವುದು ಹೇಗೆ?
ಡೆಂಘೀ ಹಾಗೂ ಚಿಕುನ್ ಗುನ್ಯಾ ರೋಗದ ರೀತಿಯಲ್ಲೇ ಝಿಕಾ ವೈರಸ್ ಕೂಡಾ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಏಡೆಸ್ ಜೆನಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಸೋಂಕು ಹರಡುತ್ತದೆ ಎಂದು ತಿಳಿದು ಬಂದಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಈ ಏಡೆಸ್ ಜೆನಸ್ ಎಂಬ ಸೊಳ್ಳೆಗಳು ಹೆಚ್ಚು ಕ್ರೀಯಾಶೀಲವಾಗಿರುತ್ತವೆ. ಈ ಸೊಳ್ಳೆ ಕಚ್ಚುವುದರಿಂದ ಮನುಷ್ಯರಿಗೆ ಝಿಕಾ ವೈರಸ್ ಸೋಂಕು ತಗುಲುತ್ತದೆ ಎಂದು ತಿಳಿದು ಬಂದಿದೆ.

ಝಿಕಾ ವೈರಸ್ ರೋಗದ ಲಕ್ಷಣಗಳು ಏನೇನು?
ಕೊರೊನಾವೈರಸ್ ರೀತಿಯಲ್ಲಿ ಝಿಕಾ ವೈರಸ್ ಜೀವ ತೆಗೆಯುವಷ್ಟು ಅಪಾಯಕಾರಿ ವೈರಸ್ ಅಲ್ಲ ಎಂದು ಹೇಳಲಾಗುತ್ತಿದೆ. ಎರಡರಿಂದ ಏಳು ದಿನಗಳವರೆಗೆ ಈ ರೋಗಕ್ಕೆ ಸಂಬಂಧಿಸಿದ ಹಲವು ಲಕ್ಷಣಗಳು ಗೋಚರಿಸುತ್ತವೆ. ಈ ಸೋಂಕಿನಿಂದ ಸಾವು ಸಂಭವಿಸುವ ಅಪಾಯ ಕಡಿಮೆಯಾಗಿರುತ್ತದೆ. ಹಾಗಿದ್ದಲ್ಲಿ ಝಿಕಾ ವೈರಸ್ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ.
* ಜಾಂಡಿಸ್ ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುವುದು
* ಕಣ್ಣು ಕೆಂಪಗಾಗುವುದು,
* ಜ್ವರ,
* ಗಂಟು ನೋವು,
* ಕೀಲು ಮತ್ತು ಸ್ನಾಯು ನೋವು
* ತಲೆನೋವು,
* ಕೆಂಪು ಕಲೆ ಕಾಣಿಸಿಕೊಳ್ಳುವುದು

ಝಿಕಾ ವೈರಸ್ ಬಗೆಗಿನ ಇತ್ತೀಚಿನ ಬೆಳವಣಿಗೆಗಳು
* ಕಳೆದ ಮೂರು ದಿನಗಳ ಹಿಂದೆ ಝಿಕಾ ವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾಯಿತು. ಗುರುವಾರದ ವೇಳೆಗೆ 14 ಝಿಕಾ ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಶನಿವಾರ ಮತ್ತೊಂದು ಪ್ರಕರಣ ವರದಿಯಾಯಿತು. ಈ ಎಲ್ಲಾ ಪ್ರಕರಣಗಳು ಕೇರಳದ ತಿರುವನಂತಪುರಂಗೆ ಸೇರಿದ್ದಾಗಿವೆ.
* ಝಿಕಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಕೇರಳಕ್ಕೆ ತಜ್ಞರ ತಂಡವನ್ನು ಕಳುಹಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಪ್ರಕಾರ, ಕೇರಳಕ್ಕೆ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ವೈದ್ಯರು ಸೇರಿದಂತೆ ಆರು ಮಂದಿ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿ ಕೊಡಲಾಗಿದೆ.
* ಝಿಕಾ ವೈರಸ್ ಸೋಂಕಿನ ಹರಡುವಿಕೆ ನಿಯಂತ್ರಣ ಮತ್ತು ನಿರ್ವಹಣೆಗೆ ಕೇರಳ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಜೊತೆಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ವೀಣಾ ಜಾರ್ಜ್ ಹೇಳಿದ್ದಾರೆ.
* ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
* ಡೆಂಘೀ, ಚಿಕುನ್ ಗುನ್ಯಾ ಮತ್ತು ಝಿಕಾ ವೈರಸ್ ಹರಡುವಿಕೆಗೆ ಕಾರಣವಾಗಿರುವ ಏಡೆಸ್ ಜೆನೆಸ್ ಸೊಳ್ಳೆಯು ಈಜಿಪ್ಟ್ ಪ್ರಬೇಧವಾಗಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಬೇಧದ ಸೊಳ್ಳೆ ಹೆಚ್ಚಾಗಿ ಕಂಡು ಬರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ.
* ನಗರ ಪ್ರದೇಶಗಳಲ್ಲೂ ಕೂಡ ಹಗಲು-ರಾತ್ರಿ ಎನ್ನದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
* ಕರ್ನಾಟಕವನ್ನು ಪ್ರವೇಶಿಸುತ್ತಿರುವ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಮಾಡಿ, ರೋಗದ ಲಕ್ಷಣಗಳು ಕಂಡು ಬರುವವರ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿ ರಾಷ್ಟ್ರೀಯ ಸೂಕ್ಷ್ಮಾಣು ರೋಗ ಪರಿಶೀಲನೆ ಕೇಂದ್ರಕ್ಕೆ ಕಳುಹಿಸಿ ಕೊಡಲಾಗುತ್ತಿದೆ.

ಝಿಕಾ ವೈರಸ್ ಸೋಂಕಿತರಲ್ಲಿ ಸಾವಿನ ಭೀತಿ ಕಡಿಮೆ?
ಕೇರಳದಲ್ಲಿ ಅತಿಯಾಗಿ ಹರಡುತ್ತಿರುವ ಝಿಕಾ ವೈರಸ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀರಾ ವಿರಳವಾಗಿರುತ್ತದೆ. ಝಿಕಾ ವೈರಸ್ ಸೋಂಕಿನ ಲಕ್ಷಣಗಳು ಗೋಚರಿಸಿದ ಐವರಲ್ಲಿ ಒಬ್ಬರು ಮಾತ್ರ ಸಾವಿನ ಅಪಾಯವನ್ನು ಎದುರಿಸುತ್ತಾರೆ ಎಂದು ಹೇಳಲಾಗುತ್ತದೆ. 1947ರಲ್ಲಿ ಮೊದಲ ಬಾರಿಗೆ ಉಗಾಂಡಾದ ಕೋತಿಗಳಲ್ಲಿ ಈ ಝಿಕಾ ವೈರಸ್ ಕಾಣಿಸಿಕೊಂಡಿತ್ತು. 1954ರಲ್ಲಿ ಮೊದಲ ಬಾರಿಗೆ ನೈಜೀರಿಯಾದಲ್ಲಿ ಮನುಷ್ಯನಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.












Click it and Unblock the Notifications