Year Ender 2024: ಈ ವರ್ಷ ಭಾರತದಲ್ಲಿ ಡಿವೋರ್ಸ್ ಕೇಸ್ ಹೆಚ್ಚಲು ಕಾರಣವೇನು?
ಭಾರತದಂತಹ ದೇಶದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಇಲ್ಲಿ ಮದುವೆ ಎಂದರೆ ಪವಿತ್ರವಾದ ಬಾಂಧವ್ಯ, ಎಂದೂ ಬಿಡಿಸಲಾಗದ ನಂಟು ಎಂದೆಲ್ಲಾ ನಂಬಲಾಗುತ್ತದೆ. ಆದರೆ ಬದಲಾದ ವಿದ್ಯಮಾನಗಳಿಂದ ಭಾರತದಲ್ಲಿಯೂ ಮದುವೆಯು ತನ್ನ ಘನತೆ, ಗಟ್ಟಿತನವನ್ನು ಕಳೆದುಕೊಳ್ಳುತ್ತಿದ್ದು, ವಿಚ್ಛೇದನ ಎನ್ನುವುದು ಸಂಬಂಧಗಳನ್ನು ಮುರಿಯುವ ಸುಲಭವಾದ ಸಾಧನವಾಗುತ್ತಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಭಾರತದಲ್ಲಿ 2024ರಲ್ಲಿ ವಿಚ್ಛೇದನ ದರವು ಗಮನಾರ್ಹವಾಗಿ ಹೆಚ್ಚಳವಾಗಿದೆ.
ಚಿತ್ರರಂಗದ ನಟ-ನಟಿಯರು ಸೇರಿದಂತೆ ಜನಸಾಮಾನ್ಯರು ಕೂಡ ಚಿಕ್ಕ ಚಿಕ್ಕ ವಿಚಾರಗಳಿಗೆ ವಿಚ್ಛೇದನ ಪಡೆದು ಮದುವೆ ಎನ್ನುವ ಬಾಂಧವ್ಯದಿಂದ ಹೊರಬರುತ್ತಿದ್ದಾರೆ. ನನ್ನ ಗಂಡ ಅತಿಯಾಗಿ ಗೊರಕೆ ಹೊಡೆಯುತ್ತಾನೆ, ನನ್ನ ಪತ್ನಿ ಹೆಚ್ಚು ಮೊಬೈಲ್ ಬಳಸುತ್ತಾಳೆ, ಪ್ರತಿ ನಿತ್ಯ ಸ್ನಾನ ಮಾಡಲ್ಲ, ಒದ್ದೆ ಬಟ್ಟೆಯನ್ನು ಬೆಡ್ ಮೇಲೆ ಹಾಕುತ್ತಾನೆ.

ಅತಿಯಾಗಿ ತಿನ್ನುತ್ತಾನೆ, ಮನೆಯಲ್ಲಿ ಅಡುಗೆ ಮಾಡಲ್ಲ, ಹೀಗೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೋರಿ ದಂಪತಿ ಕೋರ್ಟ್ ಮೆಟ್ಟಿಲೇರುವುದು ಹೆಚ್ಚಾಗುತ್ತಿದೆ. ಇನ್ನೂ ಕೆಲವರು ಬಲವಾದ ಕಾರಣಗಳಿದ್ದು ಕೋರ್ಟ್ ಮೇಟ್ಟಿಲೇರುತ್ತಿದ್ದಾರೆ. ಹಾಗಾದರೆ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಪ್ರಕರಣ ಹೆಚ್ಚಲು ಕಾರಣವೇನು? ಎನ್ನುವುದರ ವಿಶ್ಲೇಷಣೆ ಇಲ್ಲಿದೆ.
ಪಾಶ್ಚಾತ್ಯ ಪ್ರಭಾವ
ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ನೇರವಾಗಿ ಭಾರತ ಜನ ಮೇಲೆ ಬೀರುತ್ತಿದೆ. ಸಾಮಾಜಿಕ ಜಾಲತಾಣ, ಪ್ರವಾಸ ಹಾಗೂ ಕೆಲವು ಶಿಕ್ಷಣ ಪದ್ಧತಿಯಿಂದ ಇಲ್ಲಿನ ಜನರು ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಅನುಸರಿಸಲು ಆರಂಭಿಸಿದ್ದಾರೆ. ಇದರಲ್ಲಿ ಮದುವೆ ಮತ್ತು ವಿಚ್ಛೇದನವನ್ನು ಕೂಡ ಸೇರಿದ್ದು, ಜನ ನಮ್ಮ ದೇಶದ ಸಂಸ್ಕೃತಿಗಿಂತ ವಿದೇಶಿ ಜೀವನ ಶೈಲಿಯಿಂದ ಪ್ರಭಾವ ಹೊಂದುತ್ತಿದ್ದಾರೆ.

ಆರ್ಥಿಕ ಸ್ವಾತಂತ್ಯ
ಮಹಿಳೆಯರು ಆರ್ಥಿಕವಾಗಿ ಸ್ವಾತಂತ್ರ್ಯ ಹೊಂದುತ್ತಿರುವ ಕಾರಣ ವಿಚ್ಛೇದನ ದರಗಳು ಏರಿಕೆಯಾಗುತ್ತಿದೆ ಎನ್ನುವ ಅಂಶ ಹೊರಬಿದ್ದಿದೆ. ಈಗ ಹೆಚ್ಚಿನ ಮಹಿಳೆಯರು ಉದ್ಯೋಗಿಗಳಾಗಿದ್ದು, ತಮ್ಮ ಜೀವನವನ್ನು ನಡೆಸಲು ಅವರು ಸಮರ್ಥರಾಗಿರುತ್ತಾರೆ. ಹೀಗಾಗಿ ತಮಗೆ ಇಷ್ಟ ಇರದ ಅಥವಾ ಸಹಿಸಿಕೊಂಡು ಹೋಗಬೇಕು ಎನ್ನುವ ಸಂಬಂಧಗಳಿಂದ ಹೊರಬರಲು ಅವರು ಇಷ್ಟಪಡುತ್ತಾರೆ.
ಮೊದಲೆಲ್ಲಾ ಮಹಿಯರು ಆರ್ಥಿಕವಾಗಿ ಪುರುಷರಿಗೆ ಅವಲಂಬಿತಾದ ಕಾರಣ, ತಮ್ಮ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿ, ಏನೇ ಇದ್ದರೂ ಸಹಿಸಿಕೊಳ್ಳುತ್ತಿದ್ದರು. ಆದರೆ ಈಗ ಆರ್ಥಿಕವಾಗಿ ಮಹಿಳೆಯರು ಸಬಲರಾಗಿದ್ದು, ತಮಗೆ ಕಷ್ಟವೆನಿಸುವ ಸಂಬಂಧದಲ್ಲಿ ಸಹಿಸಿಕೊಂಡು ಜೀವನ ನಡೆಸಬೇಕಾದ ಅನಿವಾರ್ಯತೆಗಳು ಕಡಿಮೆಯಾಗಿದೆ. ಇನ್ನು ಈಗ ಮಹಿಳೆಯರು ಕೂಡ ಪುರುಷರಂತೆ ಸಮಾನವಾಗಿ ಜವಾಬ್ದಾರಿ ಹೊಂದಿರುತ್ತಾರೆ.

ಕಾನೂನು
ಹೆಚ್ಚುತ್ತಿರುವ ವಿಚ್ಛೇದನ ದರಗಳಲ್ಲಿ ಕಾನೂನು ಸುಧಾರಣೆಗಳು ಪ್ರಮುಖ ಪಾತ್ರವನ್ನು ವಹಿಸಿದೆ. ಭಾರತೀಯ ಕಾನೂನು ವ್ಯವಸ್ಥೆಯು ದಂಪತಿಗಳಿಗೆ ವಿಚ್ಛೇದನವನ್ನು ಪಡೆಯುವುದನ್ನು ಸುಲಭಗೊಳಿಸಿದೆ. ಇಬ್ಬರು ಪರಸ್ಪರ ಒಪ್ಪಿಗೆ ಇರುವ ಜೋಡಿಗಳಿಗಂತೂ ಕಾನೂನು ಬಹಳ ಸುಲಭವಾಗಿ ವಿಚ್ಛೇದನ ನೀಡುತ್ತದೆ. ಇನ್ನು ಕಾನೂನು ಹಕ್ಕುಗಳ ಬಗ್ಗೆ ಅರಿವು ಹೆಚ್ಚಾಗುತ್ತಿದ್ದು ಇದರಿಂದ ವಿಚ್ಛೇದನಕ್ಕೆ ಮೊರೆ ಹೋಗುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಾನೂನು ಸಾಕ್ಷರತಾ ಅಭಿಯಾನಗಳು ಮತ್ತು ಎನ್‌ಜಿಒಗಳು ಜನರಿಗೆ ಕಾನೂನು ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ. ಇದರಿಂದ ದಾಂಪತ್ಯ ಜೀವನದಲ್ಲಿ ನೋವು ಕಂಡವರಿಗೆ ಉಪಯೋಗವಾಗಿದೆ.
ಹೊಂದಾಣಿಕೆ ಸಮಸ್ಯೆಗಳು
ಬದಲಾಗುತ್ತಿರುವ ಸಾಮಾಜಿಕ ಜೀವನಶೈಲಿಯಲ್ಲಿ ಹೊಂದಾಣಿಕೆ ಎನ್ನುವುದು ತೀರಾ ಕಷ್ಟವಾಗುತ್ತಿದೆ. ಇದು ವಿಚ್ಛೇದನಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇಷ್ಟವಿಲ್ಲದ, ಹೊಂದಾಣಿಕೆಯಿಲ್ಲದ ದಾಂಪತ್ಯವನ್ನು ಸಹಿಸುವುದಕ್ಕಿಂತ ವಿಚ್ಛೇದನವೇ ಸೂಕ್ತ ಎಂದು ಜೋಡಿಗಳು ಭಾವಿಸುತ್ತಿದ್ದಾರೆ. ನಗರಗಳಂತಹ ಒತ್ತಡದ ಜೀವನ ಶೈಲಿಯಲ್ಲಿ ಒಬ್ಬರಿಗೊಬ್ಬರು ಸಮಯಕೊಡಲಾಗದೇ ಶುರುವಾಗುವ ಈ ಪ್ರಕ್ರಿಯೆ ಬರಬರುತ್ತಾ ತೀರಾ ಹೊಂದಾಣಿಕೆ ಕಳೆದುಕೊಳ್ಳುತ್ತದೆ. ಇದರಿಂದ ಮನಸ್ಥಾಪಗಳು ಶುರುವಾಗುತ್ತದೆ. ಕೊನೆಯಲ್ಲಿ ಅರ್ಥವೇ ಮಾಡಿಕೊಳ್ಳದ ವ್ಯಕ್ತಿಯ ಜೊತೆ ಜೀವನ ನಡೆಸುವುದಕ್ಕಿಂತ ಒಂಟಿಯಾಗಿರುವುದು ಲೇಸು ಎಂದು ವಿಚ್ಛೇಧನದ ಮೊರೆ ಹೋಗುತ್ತಾರೆ.
ನೈಜ ಮತ್ತು ನಿರೀಕ್ಷೆ
ಜೀವನದಲ್ಲಿ ನಿರೀಕ್ಷೆಗೂ ಹಾಗೂ ನೈಜತೆಗೂ ಬಹಳ ವ್ಯತ್ಯಾಸವಿದೆ. ಇದು ದಾಂಪತ್ಯದಲ್ಲಿ ಅತೀ ಮುಖ್ಯವಾದ ವಿಚಾರವಾಗಿದೆ. ಮದುವೆಗೂ ಮುನ್ನ ಪುರುಷರಾಗಲೀ, ಮಹಿಳೆಯರಾಗಲೀ ದಾಂಪತ್ಯ ಜೀವನದ ಬಗ್ಗೆ ಅತಿಯಾದ ನಿರೀಕ್ಷೆ ಹೊಂದಿರುತ್ತಾರೆ. ನನ್ನ ಸಂಗಾತಿ ಹೀಗೆ ಇರಬೇಕು ಎಂದು ತಮ್ಮ ಕಲ್ಪನೆಯಲ್ಲೇ ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಆದರೆ ನಿಜ ಜೀವನವೇ ಬೇರೆ. ಎಲ್ಲಾ ನಿರೀಕ್ಷೆಗಳನ್ನು ಪೂರ್ಣಗೊಳಿಸಲು ಯಾವ ಸಂಗಾತಿಯಿಂಧಲೂ ಸಾಧ್ಯವಿಲ್ಲ. ಹೀಗಾಗಿ ಈ ನಿರೀಕ್ಷೆಯೇ ನಿರಾಸೆಯಾಗಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುವ ನಿರ್ಧಾರವನ್ನು ಜೋಡಿಗಳು ಮಾಡುತ್ತಿದ್ದಾರೆ.
ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವ
ಇತ್ತೀಚಿಗೆ ವಿಚ್ಛೇದನ ಪ್ರಕರಣ ಹೆಚ್ಚಲು ಪ್ರಮುಖ ಕಾರಣ ಸಾಮಾಜಿಕ ಜಾಲತಾಣಗಳವೇ ಎಂದು ಹೇಳಬಹುದು. ಈಗ ಬಹುತೇಕರು ಸಾಮಾಜಿಕ ಜಾಲತಾಣ ಬಳಸುತ್ತಿದ್ದು, ದಿನ ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುತ್ತಾರೆ. ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾರೆ, ಹೊಸ ಹೊಸ ಜನರ ಜೊತೆ ಸಂಪರ್ಕ ಬೆಳೆಸಿಕೊಳ್ಳುತ್ತಾರೆ. ಇದರಿಂದ ತಮ್ಮ ಜೊತೆಗೆ ಇರುವವರನ್ನು ಮರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೇ ಬ್ಯೂಸಿಯಾಗುವ ಮೂಲಕ ತಮ್ಮ ಜೊತೆಗಿದ್ದವರ ಮೌಲ್ಯಗಳನ್ನು ಅರಿತುಕೊಳ್ಳದೇ, ಬಳಿಕ ಮೂವ್ ಆನ್ ಆಗುತ್ತಾರೆ. ಅತಿಯಾದ ಸಾಮಾಜಿಕ ಜಾಲತಾಣದ ಬಳಕೆ ದಾಂಪತ್ಯ ಜೀವನದ ನೆಮ್ಮದಿಯನ್ನು ಕೆಡಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದರಿಂದ ವಿಚ್ಛೇದನ ಕೂಡ ಹೆಚ್ಚಾಗುತ್ತಿದೆ.












Click it and Unblock the Notifications