Year End Special 2024: ಈ ವರ್ಷ ಹಲವು ಏಳು, ಬೀಳು ಕಂಡ ಕರ್ನಾಟಕ ಜೆಡಿಎಸ್

ಪಂಚರತ್ನ ರಥಯಾತ್ರೆ ಮೂಲಕ ಕರ್ನಾಟಕದ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ಜನರ ಮುಂದೆ ಹೋಗಿತ್ತು. ಆದರೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿಲ್ಲ. 19 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆದರೆ 2023ರ ಅಂತ್ಯದ ವೇಳೆಗೆ ಅಚ್ಚರಿ ಎಂಬಂತೆ ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿತು. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ರಚನೆಗೊಂಡಿತು. 2024 ಪಕ್ಷದ ಪಾಲಿಗೆ ಉತ್ತಮವಾಗಿರಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು.

ಆದರೆ 2024ರಲ್ಲಿ ಜೆಡಿಎಸ್ ಪಕ್ಷ ಹಲವು ಏಳು-ಬೀಳುಗಳನ್ನು ಕಂಡಿತು. ಲೋಕಸಭೆ ಚುನಾವಣೆಯಲ್ಲಿ ಪಕ್ಷವು 2 ಸೀಟುಗಳಲ್ಲಿ ಜಯಗಳಿಸಿತು. ಮಂಡ್ಯದಿಂದ ಸಂಸದರಾಗಿ ಆಯ್ಕೆಯಾದ ಎಚ್. ಡಿ. ಕುಮಾರಸ್ವಾಮಿ ರಾಷ್ಟ್ರ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಅವರು ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವರಾದರು.

Year Ender 2024 Rise And Fall Of The Karnataka JDS

ಜೆಡಿಎಸ್ ಪಕ್ಷದ ಏಳು-ಬೀಳು: 2024ರ ಆರಂಭದಲ್ಲಿಯೇ ಬಿಜೆಪಿ ಜೊತೆ ಸೀಟು ಹಂಚಿಕೆ ಮಾತುಕತೆಯನ್ನು ಜೆಡಿಎಸ್ ಪಕ್ಷ ಆರಂಭಿಸಿತ್ತು. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮತದಾನ ನಡೆದಿದ್ದು ಮೇ ತಿಂಗಳಿನಲ್ಲಿ. ಆದರೆ ಮತದಾನಕ್ಕೆ ಕೆಲವೇ ದಿನಗಳ ಮೊದಲು ಪಕ್ಷಕ್ಕೆ ಮೊದಲ ಅಘಾತ ಬಂದಿತು. ಹಾಸನ ಕ್ಷೇತ್ರದ ಸಂಸದರಾಗಿದ್ದ ಪಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾದ ವಿಡಿಯೋಗಳು ಹರಿದಾಡಲು ಆರಂಭಿಸಿತು. ಮತದಾನಕ್ಕೆ ಕೆಲವೇ ದಿನ ಇರುವಾಗ ಹೊರ ಬಂದ ವಿಡಿಯೋ ರಾಜಕೀಯ ಪ್ರೇರಿತ ಎಂದು ಬಿಂಬಿಸಲಾಯಿತು. ಆದರೆ ಬಳಿಕ ಈ ಪ್ರಕರಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಲೋಕಸಭೆ ಚುನಾವಣೆ ಮತದಾನ ಮಾಡಿದ ಬಳಿಕ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾದರು. ಇತ್ತ ಸರ್ಕಾರ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಕುರಿತು ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿತು. ಪ್ರಜ್ವಲ್ ರೇವಣ್ಣ ವಿಡಿಯೋದಲ್ಲಿದ್ದಾರೆ ಎಂದು ಆರೋಪಿಸಲಾದ ಸಂತ್ರಸ್ತ ಮಹಿಳೆಯನ್ನು ಅಪಹರಣ ಮಾಡಲಾಗಿದೆ ಎಂದು ಮೈಸೂರಿನ‌ ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯ ಪುತ್ರ ದೂರು ದಾಖಲಿಸಿದರು. ಎಫ್‌ಐಆರ್‌ನಲ್ಲಿ ಪ್ರಜ್ವಲ್ ರೇವಣ್ಣ, ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಹಲವರ ಹೆಸರು ಸೇರಿಸಲಾಯಿತು.

ಈ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಹೊಳೆನರಸೀಪುರದ ಶಾಸಕ, ಮಾಜಿ ಸಚಿವ ಎಚ್. ಡಿ. ರೇವಣ್ಣರನ್ನು ಎಸ್‌ಐಟಿ ಬಂಧಿಸಿತು. ಅವರನ್ನು ಕೋರ್ಟ್‌ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ಪ್ರಕರಣ ಪಕ್ಷಕ್ಕೆ ಭಾರೀ ಮುಜುಗರ ಉಂಟು ಮಾಡಿತು. ಬಳಿಕ ಜಾಮೀನು ಪಡೆದು ಎಚ್. ಡಿ. ರೇವಣ್ಣ ಬಿಡುಗಡೆಯಾದರು. ಇನ್ನೂ ಸಹ ಈ ಪ್ರಕರಣದ ತನಿಖೆ ನಡೆಯುತ್ತಿದೆ.

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣ ದಾಖಲಾದರೂ ಪ್ರಜ್ವಲ್ ರೇವಣ್ಣ ವಿದೇಶದಿಂದ ಮರಳಲಿಲ್ಲ. ಲೋಕಸಭೆ ಚುನಾವಣೆ ಮತ ಎಣಿಕೆಗೆ 4 ದಿನ ಇರುವಾಗ ವಿದೇಶದಿಂದ ಹಾಸನದ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದರು. ಮೇ 30ರಂದು ಅವರನ್ನು ಎಸ್‌ಐಟಿ ಅಧಿಕಾರಿಗಳು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಇಂದಿಗೂ ಸಹ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದು, ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್‌ ಸಹ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಜೂನ್‌ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಯಿತು. ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ 6,72,988 ಮತಗಳನ್ನು ಪಡೆದು 42,649 ಮತಗಳ ಅಂತರದಲ್ಲಿ ಪ್ರಜ್ವಲ್ ರೇವಣ್ಣ ಸೋಲಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಚುನಾವಣೆಯಲ್ಲಿ 630339 ಮತಗಳನ್ನು ಪಡೆದು ಸೋಲು ಕಂಡರು. ಜೆಡಿಎಸ್‌ನ ಭದ್ರಕೋಟೆ ಹಾಸನ ಕಾಂಗ್ರೆಸ್‌ ವಶವಾಯಿತು.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರಗಳನ್ನು ಬಿಜೆಪಿ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಮಂಡ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ, ಕೋಲಾರದಲ್ಲಿ ಮಲ್ಲೇಶ್‌ ಬಾಬು ಗೆಲುವು ಸಾಧಿಸುವ ಮೂಲಕ ಪಕ್ಷಕ್ಕೆ ಬಲ ತುಂಬಿದರು. ಎಚ್. ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರು ಸಹ ಆದರು.

2024ರ ಜುಲೈನಲ್ಲಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್‌ ಸದಸ್ಯ, ಎಚ್. ಡಿ. ರೇವಣ್ಣ ಮತ್ತೊಬ್ಬ ಪುತ್ರ ಸೂರಜ್ ರೇವಣ್ಣ ಬಂಧಿಸಲಾಯಿತು. ಕೋರ್ಟ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ರೇವಣ್ಣ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ಒಂದೇ ಜೈಲು ಸೇರಿದರು. ಇದು ಪಕ್ಷಕ್ಕೆ, ಎಚ್. ಡಿ. ರೇವಣ್ಣ ಕುಟುಂಬಕ್ಕೆ ಮುಜುಗರ ಉಂಟು ಮಾಡಿತು. ಸದ್ಯ ಜಾಮೀನು ಪಡೆದು ಸೂರಜ್ ರೇವಣ್ಣ ಜೈಲಿನಿಂದ ಹೊರ ಬಂದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲು: 2024ರ ಅಂತ್ಯದಲ್ಲಿ ಚನ್ನಪಟ್ಟಣ ಉಪ ಚುನಾವಣೆ ನಡೆಯಿತು. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋತರು. ಈ ಮೂಲಕ ಜೆಡಿಎಸ್ ಪಕ್ಷ ರಾಮನಗರದಲ್ಲಿ 2023ರ ಚುನಾವಣೆಯಲ್ಲಿ ಗೆದ್ದ ಒಂದು ಸೀಟನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ಜಿಲ್ಲೆ ಜೆಡಿಎಸ್ ಮುಕ್ತವಾಯಿತು.

ಮಂಡ್ಯದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಚನ್ನಪಟ್ಟಣದ ಶಾಸಕ ಎಚ್. ಡಿ. ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನವೆಂಬರ್‌ನಲ್ಲಿ ಉಪ ಚುನಾವಣೆ ನಡೆಯಿತು. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದರು.

ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಿ. ಪಿ. ಯೋಗೇಶ್ವರ ವಿರುದ್ಧ 25,413 ಮತಗಳ ಅಂತರದಿಂದ ಸೋಲು ಕಂಡರು. 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ 2024ರಲ್ಲಿ ಉಪ ಚುನಾವಣೆ ಸೋಲುವ ಮೂಲಕ 3ನೇ ಸೋಲು ಕಂಡರು.

ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯರ ಬಲ 18. ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟಗಳನ್ನು ನಡೆಸುತ್ತಿದೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರು ಹಾಲಿ ರಾಜ್ಯಸಭಾ ಸದಸ್ಯರು. ಇಳಿ ವಯಸ್ಸಿನಲ್ಲಿಯೂ ತಪ್ಪದೇ ಕಲಾಪಕ್ಕೆ ಹಾಜರಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+