Year End 2024: ಕರ್ನಾಟಕದ ರಾಜಕೀಯ ಚಿತ್ರಣ ಬದಲಿಸಿದ ಲೋಕಸಭೆ ಚುನಾವಣೆ
2024ನೇ ವರ್ಷ ಅಂತ್ಯಗೊಳ್ಳುತ್ತಾ ಬಂದಿದ್ದು, 2025 ಸ್ವಾಗತಿಸಲು ಜನರು ತಯಾರಿ ನಡೆಸುತ್ತಿದ್ದಾರೆ. ಈ ವರ್ಷ ಹಲವಾರು ಬೆಳವಣಿಗೆ ನಡೆದಿದ್ದು, ಪ್ರಮುಖವಾಗಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆದು ನರೇಂದ್ರ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆ ಕರ್ನಾಟಕದಲ್ಲಿಯೂ ಕುತೂಹಲಕ್ಕೆ ಕಾರಣವಾಗಿತ್ತು. ರಾಜ್ಯದ 28 ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸೀಟು? ಎಂಬ ಲೆಕ್ಕಾಚಾರ ಹುಟ್ಟು ಹಾಕಿತ್ತು. ಈ ಚುನಾವಣೆ ರಾಜ್ಯ ರಾಜಕೀಯದ ಚಿತ್ರಣವನ್ನೇ ಬದಲಿಸಿದೆ.
2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಬಿಜೆಪಿ 135 ಸೀಟು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯಿತು. ಬಿಜೆಪಿ 66, ಜೆಡಿಎಸ್ 19 ಸೀಟುಗಳನ್ನು ಪಡೆದವು. ಆದರೆ ಲೋಕಸಭೆ ಚುನಾವಣೆ 2024ರ ವೇಳೆಗೆ ಬಿಜೆಪಿ-ಜೆಡಿಎಸ್ ಒಂದಾದವು. 2023ರ ಸೆಪ್ಟೆಂಬರ್‌ನಲ್ಲಿ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದರು.

2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಜೆಡಿಎಸ್-ಬಿಜೆಪಿ ಒಂದಾದವು. 28 ಕ್ಷೇತ್ರಗಳಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಬಿಜೆಪಿ-ಜೆಡಿಎಸ್ ಚುನಾವಣೆ ಎದುರಿಸಿದವು. ಬಿಜೆಪಿ ಜೆಡಿಎಸ್ ಪಕ್ಷಕ್ಕೆ ಮಂಡ್ಯ, ಹಾಸನ, ಕೋಲಾರವನ್ನು ಬಿಟ್ಟುಕೊಟ್ಟಿತು. ಉಳಿದ 25 ಸೀಟುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದರು. ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದವು.
ಎರಡು ಸ್ಥಾನವನ್ನು ಗೆದ್ದ ಜೆಡಿಎಸ್: 2024ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೋಲಾರ (ಮಲ್ಲೇಶ್ ಬಾಬು), ಮಂಡ್ಯ (ಎಚ್. ಡಿ. ಕುಮಾರಸ್ವಾಮಿ) ಸೀಟುಗಳನ್ನು ಗೆದ್ದಿತು. ಆದರೆ ತನ್ನ ಭದ್ರಕೋಟೆ ಹಾಸನದಲ್ಲಿ ಜೆಡಿಎಸ್ ಸೋಲು ಕಂಡಿತು. ಮತದಾನಕ್ಕೆ 48 ಗಂಟೆಗಳ ಮೊದಲು ಬಿಡುಗಡೆಯಾದ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಪಕ್ಷಕ್ಕೆ ಭಾರೀ ಹೊಡೆತ, ಮುಜುಗರ ತಂದಿತು. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ 42,649 ಮತಗಳ ಅಂತರದಲ್ಲಿ ಪ್ರಜ್ವಲ್ ರೇವಣ್ಣ ಸೋಲಿಸಿದರು. ಚುನಾವಣಾ ಫಲಿತಾಂಶ ಪ್ರಕಟವಾಗುವಾಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದರು.
ಬಿಜೆಪಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತು. 2019ರ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಜೆಡಿಎಸ್‌ಗೆ ಸೀಟು ನೀಡಿತು. ಜೆಡಿಎಸ್‌ನಿಂದ ಅಭ್ಯರ್ಥಿ ಯಾರು? ಎಂಬ ಚರ್ಚೆ ಭಾರೀ ಕಾವು ಪಡೆಯಿತು. ಅಂತಿಮವಾಗಿ ಚನ್ನಪಟ್ಟಣದ ಶಾಸಕ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಿಂದ ಅಭ್ಯರ್ಥಿಯಾದರು. 2,84,620 ಮತಗಳ ಅಂತರದಿಂದ ಕಾಂಗ್ರೆಸ್‌ನ ಸ್ಟಾರ್ ಚಂದ್ರು ಸೋಲಿಸಿದರು. ನರೇಂದ್ರ ಮೋದಿ 3.0 ಸಂಪುಟದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರಾದರು.
ಲೆಕ್ಕಾಚಾರ ಬದಲಿಸಿದ ಬಿಜೆಪಿ: ಬಿಜೆಪಿ 2019ರ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿಯ ಚುನಾವಣೆಯ ಸಮಯದಲ್ಲಿ ರಾಜ್ಯದ ವಿರೋಧ ಪಕ್ಷವಾಗಿದ್ದರೂ ಪಕ್ಷ 17 ಸೀಟುಗಳಲ್ಲಿ ಗೆದ್ದಿತು. ಜೆಡಿಎಸ್‌ನ ಮೈತ್ರಿಯ 2 ಸೀಟು ಸೇರಿ 19 ಸೀಟುಗಳಲ್ಲಿ ಗೆದ್ದಂತೆ ಆಯಿತು. ಇದು ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಯಿತು. ವಿಧಾನಸಭೆ ಚುನಾವಣೆ, ಲೋಕಸಭೆ ಚುನಾವಣೆಯ ಚಿತ್ರಣವೇ ಬೇರೆ ಎಂದು ಸಾಬೀತು ಮಾಡಿತು.
ಅಚ್ಚರಿ ಎಂದರೆ ಬಿಜೆಪಿ ಚುನಾವಣೆ ಸಮಯದಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿತು. ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ನೀಡಿತು, ಚುನಾವಣೆಯಲ್ಲಿ ಅವರು 1,39,262 ಮತಗಳನ್ನು ಪಡೆದು ಜಯಗಳಿಸಿದರು.
ಮತ್ತೊಂದು ಅಚ್ಚರಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಅಳಿಯ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಸುರೇಶ್ ಎದುರಾಳಿಯಾಗಿ ಕಣಕ್ಕಿಳಿಸಿತು. ಚುನಾವಣೆಯಲ್ಲಿ 2,69,647 ಮತಗಳ ಅಂತರದಲ್ಲಿ ಗೆದ್ದ ಸಿ. ಎನ್. ಮಂಜುನಾಥ್ ಡಿ. ಕೆ. ಶಿವಕುಮಾರ್‌ಗೆ ಮುಖಭಂಗ ಉಂಟು ಮಾಡಿದರು.
ಉಳಿದಂತೆ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿದ್ದರೂ ಸಹ ಹಾವೇರಿ-ಗದಗ ಕ್ಷೇತ್ರದಲ್ಲಿ ಕಣಕ್ಕಿಳಿಸಿತು, ಚುನಾವಣೆಯಲ್ಲಿ ಅವರು ಗೆಲುವು ಕಂಡರು. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ), ವಿಶ್ವೇಶ್ವರ ಹೆಗಡೆ ಕಾಗೇರಿ (ಉತ್ತರ ಕನ್ನಡ), ಗೋವಿಂದ ಕಾರಜೋಳ (ಚಿತ್ರದುರ್ಗ)ದಲ್ಲಿ ಟಿಕೆಟ್ ನೀಡಿತು, ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದುಕೊಂಡಿತು.
ಹಾಲಿ ಸಂಸದರಾಗಿದ್ದರೂ ನಳಿನ್ ಕುಮಾರ್ ಕಟೀಲ್, ಅನಂತ ಕುಮಾರ ಹೆಗಡೆ, ಪ್ರತಾಪ್ ಸಿಂಹ, ಸುಮಲತಾ, ಡಿ. ವಿ. ಸದಾನಂದ ಗೌಡ ಚುನಾವಣೆ ಟಿಕೆಟ್ ಪಡೆಯಲು ವಿಫಲರಾದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಭಾರೀ ವಿರೋಧ ಎದುರಿಸುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರದಲ್ಲಿ ಟಿಕೆಟ್ ಪಡೆದರು, ಚುನಾವಣೆಯನ್ನು ಗೆದ್ದರು. ಉಡುಪಿ-ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಣಕ್ಕಿಳಿಸಲಾಯಿತು, ಅವರು ಚುನಾವಣೆ ಗೆದ್ದರು.
ಕಾಂಗ್ರೆಸ್‌ಗೆ ಹಿನ್ನಡೆ: 2023ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಉತ್ಸಾಹದಲ್ಲಿದ್ದ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ 20+ ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ ಚುನಾವಣಾ ಫಲಿತಾಂಶ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿತು. ಎರಡಂಕಿ ಸೀಟುಗಳನ್ನು ಗೆಲ್ಲಲು ರಾಜ್ಯದ ಆಡಳಿತ ಪಕ್ಷ ವಿಫಲವಾಯಿತು. ಆದರೆ 2019ರ ಚುನಾವಣೆಯಲ್ಲಿ ಕೇವಲ 1 ಸೀಟು ಗೆದ್ದಿದ್ದ ಪಕ್ಷ ಈ ಬಾರಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿತು ಎಂಬುದೇ ಸಮಾಧಾನದ ಸಂಗತಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಚಿವರು ಎಷ್ಟು ಪ್ರಯತ್ನ ನಡೆಸಿದರು ಪಕ್ಷ 10 ಸೀಟು ಗೆಲ್ಲಲು ವಿಫಲವಾಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಪುತ್ರ, ಮಧು ಬಂಗಾರಪ್ಪ ಸಹೋದರಿ ಶಿವಮೊಗ್ಗದಲ್ಲಿ, ಈಶ್ವರ ಖಂಡ್ರೆ ಪುತ್ರ ಬೀದರ್‌ನಲ್ಲಿ, ಸತೀಶ್ ಜಾರಕಿಹೊಳಿ ಪುತ್ರಿ ಬೆಳಗಾವಿಯಲ್ಲಿ, ಎಸ್. ಎಸ್. ಮಲ್ಲಿಕಾರ್ಜುನ ಪತ್ನಿ ದಾವಣಗೆರೆಯಲ್ಲಿ, ಚಾಮರಾಜನಗರದಲ್ಲಿ ಸಚಿವ ಹೆಚ್. ಸಿ. ಮಹದೇವಪ್ಪ ಪುತ್ರ, ಬೆಂಗಳೂರು ದಕ್ಷಿಣದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಕಣಕ್ಕಿಳಿದರು.
ಚಾಮರಾಜನಗರದಲ್ಲಿ ಸುನೀಲ್ ಬೋಸ್, ಬೆಳಗಾವಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ, ಬೀದರ್‌ನಲ್ಲಿ ಸಾಗರ್ ಖಂಡ್ರೆ, ದಾವಣಗೆರೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸಿ ಪಕ್ಷ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡರು. ಆದರೆ ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣದಲ್ಲಿ, ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಸೋಲು ಕಂಡರು.
ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಸೋತರು. ಚುನಾವಣೆಯಲ್ಲಿ 8,09,355 ಮತಗಳನ್ನು ಪಡೆದ ಅವರು ಬಿಜೆಪಿ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ವಿರುದ್ಧ 2,69,647 ಮತಗಳ ಅಂತರದಲ್ಲಿ ಸೋಲು ಕಂಡರು. ಈ ಸೋಲು ಇಂದಿಗೂ ಸಹ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಕಾಡುತ್ತಿದೆ. ಬಳ್ಳಾರಿಯಲ್ಲಿ ಸಂಡೂರು ಕ್ಷೇತ್ರದ ಶಾಸಕ ಇ. ತುಕಾರಾಂ ಕಣಕ್ಕಿಳಿದು, ಕ್ಷೇತ್ರವನ್ನು ಕಾಂಗ್ರೆಸ್‌ಗೆ ಗೆದ್ದುಕೊಟ್ಟರು.
ಲೋಕಸಭೆ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಇನ್ನಷ್ಟು ಒಗ್ಗಟ್ಟಾಗಿವೆ. ಒಟ್ಟಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ನಡೆಸುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಎಚ್. ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ರಾಜೀನಾಮೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತೆರವಾದ ಸ್ಥಾನಕ್ಕೆ ಉಪ ಚುನಾವಣೆಯೂ ನಡೆದು ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.












Click it and Unblock the Notifications