Get Updates
Get notified of breaking news, exclusive insights, and must-see stories!

ಕಲಿಕೆಯಲ್ಲೂ 'ವಾತ್ಸಲ್ಯ' ಅರಸುವ ಶಿವಮೊಗ್ಗದ ಶೈಲಾ ಹುಂಚದಕಟ್ಟೆ

Recommended Video

      ಈ ವಾರದ ಮಹಿಳಾ ಸಾಧಕಿ : ಶಿವಮೊಗ್ಗದಿಂದ ಶೈಲಾ ಹುಂಚದಕಟ್ಟೆ | Oneindia Kannada

      ಶಿವಮೊಗ್ಗದಿಂದ ಸುಮಾರು 18 ಕಿ.ಮೀ. ದೂರದ ಅಯನೂರಿನ ಒಳಹೊಕ್ಕರೆ ಹೊಸೂರು ಎಂಬ ಊರು ಸಿಕ್ಕುತ್ತದೆ. ಆ ವಿಶಾಲ ಹಸಿರು ಪರಿಸರದ ನಡುವಲ್ಲಿ ತಲೆಯೆತ್ತಿ ನಿಂತ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸಿ ಎಂಬ ಶಾಲೆಗೆ ದಾರಿಹೋಕರನ್ನೆಲ್ಲ ಒಮ್ಮೆ ತಲೆಯೆತ್ತಿ ನೋಡುವಂತೆ ಮಾಡುವ ಆಯಸ್ಕಾಂತದ ಸೆಳೆತವಿದೆ.

      2014 ರಲ್ಲಿ 26 ಮಕ್ಕಳೊಂದಿಗೆ ಪುಟ್ಟ ಪ್ರಮಾಣದಲ್ಲಿ ಆರಂಭವಾದ 'ವಾತ್ಸಲ್ಯ' ದಲ್ಲಿ ಈಗ ಮುನ್ನೂರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ತನ್ನ ವಿಭಿನ್ನ ಕಲಿಕಾ ಶೈಲಿ ಮತ್ತು ಮಹೋನ್ನತ ಉದ್ದೇಶಗಳಿಂದಾಗಿ ಸೆಳೆಯುವ ಈ ಅನನ್ಯ ಶಾಲೆಯ ಹಿಂದೆ ಮಹಿಳೆಯೊಬ್ಬರ ನಿರಂತರ ಶ್ರಮವಿದೆ.

      ಮೂಲತಃ ದಕ್ಷಿಣ ಕನ್ನಡದವರಾದ ಶೈಲಾ ಹುಂಚದಕಟ್ಟೆ ಅವರು ಮತ್ತು ಪತಿ ಕೃಷ್ಣಮೂರ್ತಿ ಅವರ ಕನಸಿನ ಫಲವೇ ಈ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸಿ. ಪ್ರಸ್ತುತ ಎಲ್ ಕೆಜಿ ಯಿಂದ 8 ನೇ ತರಗತಿಯವರೆಗಿನ ಒಟ್ಟು 300 ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಸ್ಟೇಟ್ ಸಿಲೆಬಸ್ ಪಠ್ಯವೇ ಆಗಿದ್ದರೂ ವಿದ್ಯಾರ್ಥಿಗಳಿಗೆ ಇಲ್ಲಿ ಪಠ್ಯದ ಹೊರತಾಗಿ ಬದುಕಿಗೆ ಬೇಕಾದ ಮೌಲ್ಯಗಳನ್ನು ಕಲಿಸುವ ಯತ್ನ ನಡೆಯುತ್ತಿದೆ. ಶಾಲೆ ಎಂಬುದು ವಿದ್ಯಾರ್ಥಿಗಳಿಗೆ ಕಿರಿಕಿರಿ ಮೂಡಿಸದೆ ಮನಸ್ಸಿನಲ್ಲಿ ಸಂಭ್ರಮ ಮೂಡಿಸುವಂಥ ಪರಿಸರವನ್ನು ಸೃಷ್ಟಿಸುವುದು ವಾತ್ಸಲ್ಯದ ಆದ್ಯ ಉದ್ದೇಶ.

      ಪತಿಯ ಅಕಾಲಿಕ ಮರಣದ ನಂತರ, ಅವರ ನೆನಪಿಗಾಗಿ, ಅವರನ್ನು ಶಾಲೆಯ ಮೂಲಕ ಜೀವಂತವಾಗಿರಿಸುವ ಯತ್ನವಾಗಿ ಹುಟ್ಟಿದ ವಾತ್ಸಲ್ಯ ಶಾಲೆಯ ಕುರಿತು, ಶಾಲೆಯ ನಿರ್ಮಾಣದ ಹಂತದಲ್ಲಿ ತಾವು ಎದುರಿಸಿದ ಸವಾಲುಗಳ ಕುರಿತು ಶೈಲಾ ಹುಂಚದಕಟ್ಟೆ ಅವರು ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನ ಇಲ್ಲಿದೆ. ಅವರು ನಮ್ಮ ಈ ವಾರದ ಮಹಿಳಾ ಸಾಧಕಿ.

      ಕನಸಿಗೆ ಬಡತನವಿರಲಿಲ್ಲ!

      ಕನಸಿಗೆ ಬಡತನವಿರಲಿಲ್ಲ!

      "ಚಿಕ್ಕ ವಯಸ್ಸಿನಿಂದಲೂ ನಾನು ದೊಡ್ಡ ದೊಡ್ಡ ಕನಸುಗಳನ್ನೇ ಕಾಣುತ್ತ ಬದುಕಿದವಳು. ಅಪ್ಪನ ಆಸೆ, ಹಾರೈಕೆಯ ನೆರಳು ಸದಾ ನನ್ನ ಮೇಲಿತ್ತು. ಅವರು ಹಾಕಿಕೊಟ್ಟ ಗೆರೆಯಲ್ಲೇ ನಾನು ಬದುಕಿದೆ. ಮನೆಯಲ್ಲಿ ಬಡತನ. ಆದರೆ ಕನಸಿಗೇನೂ ಬಡತನವಿರಲಿಲ್ಲ. ನಾನು ಹತ್ತನೇ ತರಗತಿಯಲ್ಲಿದ್ದಾಗಲೇ ತಂದೆಯವರ ಅಕಾಲಿಕ ಮರಣ ಮನಸ್ಸನ್ನು ತುಂಬಾ ಘಾಸಿಗೊಳಿಸಿತ್ತು. ಮುಂದೆ ಓದುವುದಕ್ಕೆ ಆರ್ಥಿಕ ಅನುಕೂಲವಿರಲಿಲ್ಲವಾದ್ದರಿಂದ ಒಂದು ವರ್ಷ ಮನೆಯಲ್ಲಿಯೇ ಉಳಿಯಬೇಕಾಯ್ತು. ಆ ಸಮಯದಲ್ಲಿ ತಂದೆಯವರ ಅಗಲಿಕೆಯ ನೋವನ್ನು ಮರೆಯುವುದಕ್ಕಾಗಿ ಒಂದು ಮಹಿಳಾ ಸಂಘವನ್ನು ಹುಟ್ಟುಹಾಕಿದೆ. ನನಗಾಗ ಹದಿನೈದು ವರ್ಷ! ನಮ್ಮೂರಿನಲ್ಲಿ ಆ ಸಮಯದಲ್ಲಿ ಮಹಿಳೆಯರೆಲ್ಲ ಮನೆಯಿಂದ ಹೊರಗೇ ಬರುತ್ತಿರಲಿಲ್ಲ. ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಕ್ಕಾಗಿ ಸಂಘ ನಿರ್ಮಿಸಿದರೂ ನಾನು ಚಿಕ್ಕವಳಾಗಿದ್ದರಿಂದ ಆ ಸಂಘಕ್ಕೆ ಬೇರೆಯವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಅದರಿಂದ ದೂರವೇ ಉಳಿದೆ. ಆ ಸಂಘದ ಮೂಲಕ ಹಲವು ಮಹಿಳೆಯರು ಸ್ವಾವಲಂಬಿಯಾಗುವ ದಾರಿ ಕಂಡುಕೊಂಡರು"

      ಜಾತಿಯ ಹಂಗನ್ನು ಮೀರಿ...

      ಜಾತಿಯ ಹಂಗನ್ನು ಮೀರಿ...

      "ಮನೆಯಲ್ಲಿ ಬಾಸಿಂಗ ತಯಾರಿಸುತ್ತಿದ್ದೆವು. ಅಪ್ಪ ತೀರಿಹೋದ ನಂತರ ಬಾಸಿಂಗ ತಯಾರಿಕೆಯ ಮೂಲಕವೇ ಹಣ ಹೊಂದಿಸಿಕೊಂದು ಮುಂದೆ ಓದಿದೆ. ಟಿಸಿಎಚ್ ಮಾಡಿಕೊಂಡೆ. ನಮ್ಮೂರಿನಲ್ಲೇ ಕೆಲಸವೂ ಸಿಕ್ಕಿತು. ಕೆಲಸಕ್ಕೆ ಸೇರಿಕೊಂಡ ನಾಲ್ಕೈದು ವರ್ಷದಲ್ಲಿ ಮದುವೆಯಾದೆ. ಕೊಂಕಣಿಯವಳಾದ ನಾನು, ಒಕ್ಕಲಿಗರಾದ ಕೆ.ವಿ.ಕೃಷ್ಣಮೂರ್ತಿಯವರನ್ನು ಮದುವೆಯಾಗುವುದು ನಮ್ಮ ಕುಟುಂಬದ ಹಲವರಿಗೆ ಇಷ್ಟವಿರಲಿಲ್ಲ. ಆದರೆ ನಮಗಿಬ್ಬರಿಗೂ ಜಾತಿಯ ಹಂಗನ್ನು ಮೀರುವ ತುಡಿತವಿತ್ತು. ನಮ್ಮ ಹಠವೇ ಗೆದ್ದಿತ್ತು. ಮದುವೆಯಾದೆವು. ಎರಡು ವರ್ಷದ ನಂತರ ಮಗಳು ಹುಟ್ಟುತ್ತಿದ್ದಂತೆಯೇ ಕುಟುಂಬಸ್ಥರ ಕೋಪವೂ ತಣ್ಣಗಾಯ್ತು. ನಮ್ಮನ್ನು ಅವರೂ ಒಪ್ಪಿಕೊಂಡರು."

      ಶಾಲೆ ನಿರ್ಮಾಣದ ಕನಸು

      ಶಾಲೆ ನಿರ್ಮಾಣದ ಕನಸು

      "ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಒಂದು ರೀತಿಯಲ್ಲಿ ಕಟ್ಟಿಹಾಕಿದಂತನ್ನಿಸುತ್ತಿತ್ತು. ಶಾಲೆಗಳಲ್ಲಿ ಕೊಟ್ಟ ಕೊನೆಯ ಮಗುವಿನ ಕಡೆಗೆ ಶಿಕ್ಷಕರ ದೃಷ್ಟಿ ನೆಟ್ಟಿರಬೇಕು. ಅವರ ಆದ್ಯತೆ ಆ ಮಗುವೇ ಆಗಿರಬೇಕು. ಆದರೆ ಇಂದು ಹಾಗಾಗುತ್ತಿಲ್ಲ. ಬುದ್ಧಿವಂತ ಮಕ್ಕಳ ಕಡೆಗಷ್ಟೇ ಶಿಕ್ಷಕರು ಗಮನ ಹರಿಸುತ್ತಾರೆ. ಬುದ್ಧಿವಂತರು ಮತ್ತಷ್ಟು ಬುದ್ಧಿವಂತರಾಗುತ್ತಾರೆ, ಕಲಿಕೆಯಲ್ಲಿ ಹಿಂದಿರುವ ಮಕ್ಕಳು ಮತ್ತಷ್ಟು ಹಿಂದಕ್ಕೇ ಹೋಗುತ್ತಾರೆ. ಆದರೆ ಮತ್ತೊಂದು ಶಾಲೆಯಲ್ಲಿ ಕೆಲವ ಶಿಕ್ಷಕಿಯಾಗಿ ಕೆಲಸ ಮಾಡಿದರೆ ಯಾವ ಬದಲಾವಣೆಯನ್ನೂ ತರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ನಾವೇ ಒಂದು ಶಾಲೆ ನಿರ್ಮಿಸಬೇಕು ಎಂಬ ತುಡಿತ ಪತಿ ಮತ್ತು ನನ್ನಲ್ಲಿ ಶುರುವಾಯ್ತು. ಆ ತುಡಿತವನ್ನು ಮನದಲ್ಲಿಟ್ಟುಕೊಂಡೇ ಅಯನೂರಿನ ಹೊಸೂರು ಬಳಿ 11 ಎಕರೆ ಜಾಗ ಖರೀದಿಸಿಟ್ಟುಕೊಂಡೆವು."

      ಬರಸಿಡಿಲಂತೆ ಎರಗಿದ ಆಘಾತ!

      ಬರಸಿಡಿಲಂತೆ ಎರಗಿದ ಆಘಾತ!

      "ಪತಿ ಹಲವು ಬಾರಿ ಹೇಳುತ್ತಿದ್ದರು, ನೀನು ಕೆಲಸ ಬಿಟ್ಟುಬಿಡು. ನಮ್ಮದೇ ಶಾಲೆ ಮಾಡೋಣ ಅಂತ. ಆದರೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ನನಗಾಗ ಒಳ್ಳೆಯ ಸಂಬಳವಿತ್ತು. ಮುಂದೆ ನಾವು ನಿರ್ಮಿಸುವ ಶಾಲೆಗೇ ಇದರಿಂದ ಸಹಾಯವಾಗುತ್ತದೆಂದು ನಾನು ತಕ್ಷಣ ಕೆಲಸಬಿಡುವುದಕ್ಕೆ ಹೋಗಲಿಲ್ಲ. ಪತಿ ನಾಲ್ಕಾರು ವ್ಯವಹಾರಗಳಲ್ಲಿ ನಿರತರಾಗಿದ್ದರಿಂದ ಅವರಿಗೂ ಬಿಡುವು ಸಿಕ್ಕುತ್ತಿರಲಿಲ್ಲ. ಈ ನಡುವೆ ಅಯನೂರಿನ ಸುತ್ತ ಮುತ್ತ ಇರುವ ಅನಕ್ಷರಸ್ಥ, ಬಡ ಜನರಿಗೆ ಸಹಾಯವಾಗಲೆಂದು ಪತಿ ಸಹಕಾರಿ ಸೊಸೈಟಿಯೊಂದನ್ನು ನಿರ್ಮಿಸಿದ್ದರು. ಅದಕ್ಕೆ 400 ಕ್ಕೂ ಹೆಚ್ಚು ಶೇರ್ ಹೋಲ್ಡರ್ ಗಳಿದ್ದವು. ಬದುಕು ಸುಸೂತ್ರವಾಗಿ ನಡೆಯುತ್ತಿದೆ ಎನ್ನುವಾಗ ಆಘಾತವೊದು ಬರಸಿಡಿಲಿನಂತೇ ಎರಗಿತ್ತು!"

      ಪಾಪಪ್ರಜ್ಞೆಯ ಫಲವಾಗಿ ನಿರ್ಮಾಣವಾಯ್ತು ಶಾಲೆ!

      ಪಾಪಪ್ರಜ್ಞೆಯ ಫಲವಾಗಿ ನಿರ್ಮಾಣವಾಯ್ತು ಶಾಲೆ!

      "ನನ್ನ ಪಾಲಿಗೆ ಪತಿ, ಗುರು, ಮಾರ್ಗದರ್ಶಿ, ಫಿಲಾಸಾಫರ್, ಸ್ನೇಹಿತ, ದೇವರು... ಎಲ್ಲವೂ ಆಗಿದ್ದ ಕೃಷ್ಣಮೂರ್ತಿಯವರು ಅಕಾಲಿಕ ಮರಣಕ್ಕೆ ತುತ್ತಾದರು. ಅದು ಬದುಕಿನಲ್ಲಿ ಎಂದೂ ಮಾಸದ ಗಾಯವಾಗಿ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಒಂದೆಡೆ ಪಾಪಪ್ರಜ್ಞೆ. ಕೆಲಸ ಬಿಡು, ನಾವೇ ಶಾಲೆ ಮಾಡೋಣ ಎಂದು ಅದೆಷ್ಟು ಬಾರಿ ಪತಿ ಹೇಳಿದ್ದರೋ. ನಾನು ಅವರ ಮಾತನ್ನು ಕೇಳಲಿಲ್ಲ ಎಂಬ ಪಾಪಪ್ರಜ್ಞೆಯಲ್ಲಿ ಹೆಚ್ಚು ದಿನ ಬದುಕುವುದು ಕಷ್ಟವೆನ್ನಿಸಿತ್ತು. ಖಿನ್ನತೆ ವ್ಯಾಪಿಸುವ ಮೊದಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿ ಸ್ವಯಂ ನಿವೃತ್ತಿ ಪಡೆದು, ಪತಿ ತೀರಿಹೋದ ಒಂದು ವರ್ಷದೊಳಗೆ ಶಾಲೆ ನಿರ್ಮಿಸಿದೆ. ಈ ಹಂತದಲ್ಲಿ ನನ್ನ ಮೂವರು ಮಕ್ಕಳು ಹಾಗೂ ಊರವರು, ಬಂಧು, ಬಾಂಧವರು, ಸ್ನೇಹಿತರು ಎಲ್ಲರ ಪ್ರೋತ್ಸಾಹ ದೊರಕಿದ್ದನ್ನು ನಾನೆಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ."

      ಕಲಿಕೆ ಒಯತ್ತಡವಾಗಬಾರದು

      ಕಲಿಕೆ ಒಯತ್ತಡವಾಗಬಾರದು

      "ನಮ್ಮದು ಅನ್ ಏಡೆಡ್ ಶಾಲೆಯಾಗಿರುವುದರಿಂದ ಇಲ್ಲಿ ಸರ್ಕಾರ ತಲೆಹಾಕುವುದಿಲ್ಲ. ಯಾವ ಒತ್ತಡವಿಲ್ಲದೆ ಮಕ್ಕಳು ಸಂಭ್ರಮದಿಂದ ಓದಬಹುದು, ತಮ್ಮ ಕ್ರಿಯಾಶೀಲತೆಯನ್ನು ವ್ಯಕ್ತಪಡಿಸಬಹುದು. ನಮ್ಮ ಶಾಲೆಯಲ್ಲಿ ಈಗ 14 ಶಿಕ್ಷಕರು ಸೇರಿದಂತೆ ಒಟ್ಟು 30 ಸಿಬ್ಬಂದಿಗಳಿದ್ದಾರೆ. ತೀರಾ ಕಡಿಮೆ ಶುಲ್ಕವನ್ನು ಮಕ್ಕಳಿಂದ ಪಡೆಯುತ್ತೇವೆ. ಏಕೆಂದರೆ ನಮಗೆ ಗೊತ್ತು ಈ ಭಾಗದಲ್ಲಿರುವವರೆಲ್ಲ ರೈತರು, ಅವರಿಗೆ ಅವರ ಬದುಕೇ ಕಷ್ಟ ಅಂತ. ಮಕ್ಕಳಿಗೆ ಸಾವಯವ ತರಕಾರಿಗಳಿಂದ ತಯಾರಿಸಿದ ಬಿಸಿ ಊಟವನ್ನೂ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತೇವೆ. ನಮ್ಮ ಶಾಲೆಯಲ್ಲಿ 9-10 ನೇ ತರಗತಿಯನ್ನೂ ಆರಂಭಿಸಬೇಕು ಎಂಬುದು ಸದ್ಯಕ್ಕೆ ನಮಗಿರುವ ಗುರಿ"

      ಮಹಿಳಾ ಸಬಲೀಕರಣದ ಹೆಜ್ಜೆ

      ಮಹಿಳಾ ಸಬಲೀಕರಣದ ಹೆಜ್ಜೆ

      "ಪತಿ ಆರಂಭಿಸಿದ ಸೊಸೈಟಿ ಇಂದಿಗೂ ಚೆನ್ನಾಗಿ ನಡೆಯುತ್ತಿದೆ. ಹಾಗೆಯೇ ಇಲ್ಲಿನ ಮಹಿಳೆಯರಿಗೆ ಸಹಾಯಕವಾಗಲಿ ಎಂದು ಲೇಡೀಸ್ ಸೊಸೈಟಿಯೊಂದನ್ನು ಇತ್ತೀಚೆಗೆ ಆರಂಬಿಸಿದ್ದೇವೆ. ಒಡವೆ, ವಸ್ತ್ರ ಕೊಳ್ಳುವುದಕ್ಕಾಗಿ ಸಾಲಮಾಡುವುದನ್ನು ಬಿಟ್ಟು ಮಹಿಳೆಯರು ತಾವು ಸ್ವಾವಲಂಬಿಗಳಾಗಲಿ, ಸಬಲರಾಗಲು ಅಗತ್ಯವಾಗುವಂತೆ ಆರ್ಥಿಕ ನೆರವು ನೀಡುವ ಕೆಲಸವನ್ನು ಈ ಸೊಸೈಟಿ ಮಾಡುತ್ತಿದೆ. ಹೊಲೆಗೆ ಯಂತ್ರ ಖರೀದಿ, ಹಬ್ಬಳ-ಸಂಡಿಗೆ ಮಾಡುವವರಿಗೆ ಪ್ರೋತ್ಸಾಹ, ಕೃಷಿ ಸಂಬಂಧಿ ಕೆಲಸಗಳಿಗೂ ಬೆಂಬಲ ನೀಡಲಾಗುತ್ತಿದೆ. ಊರಿನಲ್ಲಿರುವ ಕೃಷಿಕರನ್ನು ಕರೆಸಿ ಆಗಾಗ ಶಾಲೆಯಲ್ಲಿ ಕಾರ್ಯಾಗಾರಗಳನ್ನೂ ನಿರ್ಮಿಸಿ, ರೈತರಿಗೆ ಅಗತ್ಯ ಮಾಹಿತಿ, ತರಬೇತಿ ನೀಡುವ ಕೆಲಸವನ್ನೂ ಮಾಡುತ್ತಿದ್ದೇವೆ. ಜೊತೆಗೆ ಶಾಲೆಯಲ್ಲಿ ಓದುವ ಹೆಣ್ಣು ಮಕ್ಕಳ ತಾಯಂದಿರನ್ನು ಕರೆಸಿ ಹೆಣ್ಣು ಮಕ್ಕಳಿಗೆ ಅಗತ್ಯವಿರುವ ಲೈಂಗಿಕ ವಿಷಯಗಳ ಕುರಿತು ಜ್ಞಾನ ಮೂಡಿಸುವ ಕೆಲಸವೂ ಆಗಾಗ ನಡೆಯುತ್ತದೆ"

      ಪ್ರವಾಹದ ವಿರುದ್ಧ ಈಜೋಣ...

      ಪ್ರವಾಹದ ವಿರುದ್ಧ ಈಜೋಣ...

      "ಮಹಿಳೆಯರು ಯಾವುದೇ ಕೆಲಸಕ್ಕೆ ಕೈಹಾಕಿದರೂ ವಿಘ್ನಗಳು ಜಾಸ್ತಿ ಎಂಬ ಭಾವನೆ ನನ್ನನ್ನೆಂದಿಗೂ ಕಾಡಿಲ್ಲ. ಯಾಕೆಂದರೆ ನನಗೆ ಮೊದಲಿನಿಂದಲೂ ಕುಟುಂಬಸ್ಥರ, ಸಮಾಜದ, ಸಂಬಂಧಿಗಳ ಬೆಂಬಲ ಸಾಕಷ್ಟು ಸಿಕ್ಕಿದೆ. ಆಗಿ ಹೋಗಿದ್ದರ ಬಗ್ಗೆ ಯೋಚಿಸಿ ಫಲವಿಲ್ಲ. ನಾವೇನು ಮಾಡಬೇಕು ಎಂಬುದನ್ನು ನಾವು ನಿರ್ಧರಿಸಬೇಕು. ಪ್ರವಾಹದ ಜೊತೆಯಲ್ಲಿ ಹೋಗುವುದು ಒಂದು ನಮೂನೆ. ಆದರೆ ಅದರ ವಿರುದ್ಧ ಹೋರಾಡುವ ಮನಸ್ಥಿತಿ, ಮನೋಬಲ ಬೆಳೆದರೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯ."

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+