Janata Jaladhare : ಜನತಾ ಜಲಧಾರೆ ಜೆಡಿಎಸ್‌ಗೆ ವರದಾನವಾಗಲಿದೆಯಾ?
ಮೈಸೂರು, ಏಪ್ರಿಲ್ 12: ರಾಜ್ಯಕ್ಕೊಂದು ಬಲಿಷ್ಠವಾದ ಪ್ರಾದೇಶಿಕ ಪಕ್ಷ ಅವಶ್ಯಕತೆ ಇದೆ ಎಂಬ ಮಾತುಗಳು ಮುನ್ನಲೆಗೆ ಬರುತ್ತಿರುವುದರಿಂದ ಎಚ್.ಡಿ. ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷ ಸಂಘಟನೆಗೆ ಸನ್ನದ್ಧಗೊಂಡಿದ್ದಾರೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂದು ಹಠತೊಟ್ಟಿರುವ ಅವರು, ಇದೀಗ ಮತದಾರರ ಸೆಳೆಯಲು ಹಲವು ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.
ಸದ್ಯ ಪಕ್ಷ ಸಂಘಟನೆಯ ಕಾರ್ಯತಂತ್ರದ ಒಂದು ಭಾಗವಾಗಿರುವ ಜೆಡಿಎಸ್‍ನ ಜನತಾ ಜಲಧಾರೆ ಕಾರ್ಯಕ್ರಮ ಹೈಕಮಾಂಡ್ ಹಿಡಿತದಲ್ಲಿರುವ ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಿರುವುದಂತು ನಿಜ.

ಅಧಿಕಾರ ಹಿಡಿಯಲು ದಳಪತಿಗಳ ತಂತ್ರ
ನಮ್ಮ ರಾಜ್ಯದ ಸುತ್ತಲಿನ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹೀಗೆ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳೇ ಪಾರುಪತ್ಯ ವಹಿಸಿವೆ. ಕರ್ನಾಟಕವೊಂದೇ ರಾಷ್ಟ್ರೀಯ ಪಕ್ಷಗಳ ಹಿಡಿತದಲ್ಲಿದ್ದು, ಇಲ್ಲಿನ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ದ್ವಂದ್ವ ನಿಲುವಿನಿಂದಾಗಿ ಮತ್ತು ಅವಕಾಶವಾದಿ ರಾಜಕಾರಣದ ಆರೋಪದಿಂದಾಗಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುವಂತಾಗಿದೆ.
ಇದೀಗ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ದಳಪತಿಗಳು ಮುಂದಾಗಿದ್ದಾರೆ. ನೀರಾವರಿಗೆ ಆದ್ಯತೆ ನೀಡುವ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಪಕ್ಷದ ಸಂಘಟನೆಯೊಂದಿಗೆ ರೈತರನ್ನು ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ.

ತಂತ್ರ ರೂಪಿಸಲು ಇದು ಸಕಾಲ
ವಿಧಾನಸಭಾ ಚುನಾವಣೆಗೆ ವರ್ಷವಷ್ಟೆ ಬಾಕಿಯಿದೆ. ಹೀಗಿರುವಾಗ ರಾಜಕೀಯ ಪಕ್ಷಗಳಿಗೆ ಚುನಾವಣೆಗೆ ಬೇಕಾದ ತಂತ್ರ ರೂಪಿಸಲು ಇದು ಸಕಾಲವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಿಂತ ವಿಭಿನ್ನವಾದ ಕಾರ್ಯಕ್ರಮ ರೂಪಿಸಿರುವ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ಪಕ್ಷವನ್ನು ಸಂಘಟಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಮೇಲ್ನೋಟಕ್ಕೆ ಇದೊಂದು ಯಾವುದೋ ಸಂಘ- ಸಂಸ್ಥೆ ನಡೆಸುವ ಕಾರ್ಯಕ್ರಮದಂತೆ ಕಾಣುತ್ತಿದೆ. ಈ ಕಾರ್ಯಕ್ರಮ ಹೇಗಿರಲಿದೆ ಎಂದರೆ, 15 ಜನತಾ ಜಲಧಾರೆ ಗಂಗಾ ರಥ(ವಾಹನ)ಗಳನ್ನು ನಿರ್ಮಿಸಲಾಗಿದ್ದು, ಈ ರಥಗಳು ರಾಜ್ಯದ 31 ಜಿಲ್ಲೆಯ 180 ತಾಲೂಕುಗಳಲ್ಲಿ ಸಂಚಾರ ಮಾಡುವುದರೊಂದಿಗೆ 94 ಸ್ಥಳಗಳಲ್ಲಿ ಇರುವ ಪ್ರಮುಖ ನದಿ ಹಾಗೂ ಉಪ ನದಿಗಳಲ್ಲಿ ನೀರು ಸಂಗ್ರಹ ಮಾಡಲಿವೆ. ಆ ನಂತರ ಮೇ 8 ರೊಳಗೆ ಎಲ್ಲ ರಥಗಳು ಬೆಂಗಳೂರಿಗೆ ವಾಪಸ್ಸಾಗಿ ಪಕ್ಷದ ಕೇಂದ್ರ ಕಚೇರಿ ಬಳಿ ಸ್ಥಾಪನೆ ಮಾಡಲಾಗಿರುವ ಬೃಹತ್ ಕಳಸಕ್ಕೆ ನೀರನ್ನು ಸುರಿಯಲಿದೆ. ಹೀಗೆ ಸಂಗ್ರಹಿಸಲಾದ ಜಲಕ್ಕೆ ಚುನಾವಣೆವರೆಗೂ ಪೂಜೆ ಸಲ್ಲಿಸಲಾಗುತ್ತದೆ.

ನಾಯಕರು ಪಕ್ಷಕ್ಕೆ ಮರಳುವ ವಿಶ್ವಾಸ
ಇದೆಲ್ಲವನ್ನು ನೋಡಿದ ಮೇಲೆ ಈ ಕಾರ್ಯಕ್ರಮದಿಂದ ಪಕ್ಷ ಸಂಘಟನೆ ಹೇಗೆ ಸಾಧ್ಯ ಎಂಬ ಪ್ರಶ್ನೆಯೂ ಮೂಡಬಹುದು. ಮೇಲ್ನೋಟಕ್ಕೆ ನೀರಾವರಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಚುರ ಪಡಿಸಿ, ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಜೆಡಿಎಸ್ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ರೈತರನ್ನು ಪಕ್ಷದತ್ತ ಸೆಳೆಯುವುದು ಜನತಾ ಜಲಧಾರೆ ಕಾರ್ಯಕ್ರಮದ ಉದ್ದೇಶವಾಗಿದೆ.
ಈಗಾಗಲೇ ಜೆಡಿಎಸ್‌ನಿಂದ ಹಲವು ನಾಯಕರು ಹೊರ ಹೋಗಿದ್ದಾರೆ. ಮೇಲ್ನೋಟಕ್ಕೆ ಪ್ರಭಾವಿ ನಾಯಕರು ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬಹಳಷ್ಟು ಜಿಲ್ಲೆಗಳಲ್ಲಿ ಪಕ್ಷದ ಅಸ್ತಿತ್ವವೇ ಇಲ್ಲ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಯಾಗಿಲ್ಲ. ಹಳೇ ಮೈಸೂರು ಭಾಗದಲ್ಲಿ ಈ ಹಿಂದೆ ಪಕ್ಷದ ಪ್ರಭಾವ ಇತ್ತಾದರೂ ಈಗ ಮಂಕಾಗಿದೆ. ಮುಂದಿನ ಚುನಾವಣೆ ವೇಳೆಗೆ ಅಳಿದುಳಿದ ನಾಯಕರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಗಾಳ ಹಾಕಿದರೂ ಅಚ್ಚರಿಯಿಲ್ಲ.

ಅಲ್ಪಸಂಖ್ಯಾತ ನಾಯಕರ ಓಲೈಕೆಗೆ ಸಿದ್ಧತೆ
ಪಕ್ಷದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ದೇವೇಗೌಡರೇ ಮುನ್ನಲೆಯಲ್ಲಿದ್ದು, ಅವರನ್ನು ಹೊರತುಪಡಿಸಿ ಪಕ್ಷ ಸಂಘಟನೆಯ ಚತುರತೆ ಹೊಂದಿರುವ ನಾಯಕರು ಕಾಣಿಸುತ್ತಿಲ್ಲ. ಇದೀಗ ಅಲ್ಪಸಂಖ್ಯಾತರ ನಾಯಕ ಸಿ.ಎಂ. ಇಬ್ರಾಹಿಂ ಸೇರಿದಂತೆ ಒಂದಷ್ಟು ಮುಸ್ಲಿಂ ನಾಯಕರು ಪಕ್ಷಕ್ಕೆ ಬಂದಿದ್ದು, ಆ ಮೂಲಕ ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಕುಮಾರಸ್ವಾಮಿ ತಂತ್ರ ರೂಪಿಸಿದ್ದಾರೆ.
ಎಚ್.ಡಿ. ಕುಮಾರಸ್ವಾಮಿ ಹೊರತುಪಡಿಸಿದರೆ ಉಳಿದ ಯಾರು ಕೂಡ ತಮ್ಮ ಕ್ಷೇತ್ರ ಬಿಟ್ಟು ಹೊರ ಬಂದು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿಲ್ಲ. ಸಹೋದರ ಎಚ್.ಡಿ. ರೇವಣ್ಣ ಅವರು ಹಾಸನಕ್ಕೆ ಸೀಮಿತರಾದಂತೆ ಕಾಣುತ್ತಿದೆ. ಅವರು ಹಾಸನದಿಂದ ಹೊರ ಬಂದು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಕಡಿಮೆಯೇ.

ಯಾವ ರೀತಿಯಲ್ಲಿ ಬೆಂಬಲ ಸಿಗಬಹುದು?
ಎಲ್ಲೆಲ್ಲಿ ಜೆಡಿಎಸ್ ಪ್ರಬಲವಾಗಿದೆಯೋ ಅಲ್ಲೆಲ್ಲ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾಬಲ್ಯ ಸಾಧಿಸಲು ತಂತ್ರ ರೂಪಿಸುತ್ತಿದೆ. ಹೀಗಿರುವಾಗ ಎಲ್ಲವನ್ನು ನಿಭಾಯಿಸಿ ಪಕ್ಷ ಸಂಘಟನೆಗೆ ಮುಂದಾಗಿರುವ ಎಚ್.ಡಿ. ಕುಮಾರಸ್ವಾಮಿ ಜನತಾ ಜಲಧಾರೆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಜನ ಯಾವ ರೀತಿಯಲ್ಲಿ ಬೆಂಬಲ ಸೂಚಿಸುತ್ತಾರೆ ಎಂಬುದರ ಮೇಲೆ ಮುಂದಿನ ಅವರ ನಡೆ ಇರಲಿದೆ.
ಇದೆಲ್ಲದರ ನಡುವೆ ಮುಂದಿನ ವಿಧಾನಸಭಾ ಚುನಾವಣಾ ವೇಳೆಗೆ ಈಗಾಗಲೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದ ಪಕ್ಷವನ್ನು ತೊರೆದವರು ಅದನ್ನು ಸರಿಪಡಿಸಿಕೊಂಡು ಮರಳಿ ಪಕ್ಷಕ್ಕೆ ಬರಬಹುದು. ಇನ್ನು ಕೆಲವೆಡೆ ಪಕ್ಷ ತೊರೆದ ನಾಯಕರಿಗೆ ಪರ್ಯಾಯ ನಾಯಕರನ್ನು ಕಾರ್ಯಕರ್ತರು ಸೃಷ್ಟಿ ಮಾಡಬಹುದು ಎಂಬ ವಿಶ್ವಾಸ ಎಚ್.ಡಿ. ಕುಮಾರಸ್ವಾಮಿಯಲ್ಲಿದೆ.
ಅದು ಏನೇ ಇರಲಿ. ಇದೀಗ ಆರಂಭಗೊಂಡ ಜನತಾ ಜಲಧಾರೆ ಯಾವ ರೀತಿಯಲ್ಲಿ ಪಕ್ಷಕ್ಕೆ ಒಳಿತು ಮಾಡುತ್ತದೆ ಎನ್ನುವುದರ ಮೇಲೆ ಮುಂದಿನ ಕಾರ್ಯತಂತ್ರ ನಡೆಯಲಿದೆ. ಹಾಗಾಗಿ ಕಾದು ನೋಡುವುದು ಅನಿವಾರ್ಯವಾಗಿದೆ.











Click it and Unblock the Notifications