
ಏಕರೀತಿಯ ಯುಎಸ್‌ಬಿ ಅಳವಡಿಕೆ; ಐಫೋನ್ ಕಥೆ?
ನವದೆಹಲಿ, ಅ. 10: ಬಹುಶಃ ಈಗ ಪ್ರತಿಯೊಂದು ಮನೆಯಲ್ಲೂ ಐದಕ್ಕೂ ಹೆಚ್ಚು ಭಿನ್ನ ಭಿನ್ನ ಚಾರ್ಜರ್‌ಗಳು ಇರುವುದನ್ನು ಕಾಣಬಹುದು. ಬೇರೆ ಬೇರೆ ಮೊಬೈಲ್ ಖರೀದಿಸಿದಾಗೆಲ್ಲಾ ಪ್ರತ್ಯೇಕ ಚಾರ್ಜರ್ ಕೂಡ ಕೊಳ್ಳಬೇಕು. ಇದನ್ನು ತಪ್ಪಿಸಲು ಯೂರೋಪ್‌ನಲ್ಲಿ ಸುಧಾರಣಾ ಕ್ರಮ ಜಾರಿಗೊಳಿಸಲಾಗುತ್ತಿದೆ. ಯುಎಸ್‌ಬಿ ಟೈಪ್-ಸಿ ಅನ್ನೇ ಎಲ್ಲಾ ಮೊಬೈಲ್ ತಯಾರಕರು ಅಳವಡಿಸಬೇಕು ಎಂದು ಐರೋಪ್ಯ ಒಕ್ಕೂಟ ಮಾಡಿದ ಪ್ರಸ್ತಾವಕ್ಕೆ ಇತ್ತೀಚೆಗಷ್ಟೇ ಅಲ್ಲಿನ ಸಂಸತ್ತು ಅನುಮೋದನೆ ಕೊಟ್ಟಿತ್ತು.
ಆದರೆ, ಆ್ಯಪಲ್ ಕಂಪನಿಯದ್ದು ಮಾತ್ರ ಮೊದಲಿಂದಲೂ ಭಿನ್ನ ಹಾದಿ. ಆಂಡ್ರಾಯ್ಡ್ ಮೊಬೈಲ್ ಮತ್ತು ಐಫೋನ್ ಮೊಬೈಲ್‌ನ ಯಾವ ಪರಿಕರಗಳು ಪರಸ್ಪರ ಆಗಿಬರೋದಿಲ್ಲ. ಎರಡೂ ವಿಭಿನ್ನ ಪ್ರಪಂಚವೇ. ಈಗ ಏಕರೀತಿಯ ಯುಎಸ್‌ಬಿ ಪೋರ್ಟ್ ಅನ್ನು ಅಳವಡಿಸಿಕೊಳ್ಳಬೇಕೆಂಬ ಕಾನೂನನ್ನು ಆ್ಯಪಲ್ ಕಂಪನಿ ಒಪ್ಪುತ್ತದಾ ಎಂಬುದು ಎಲ್ಲರ ಕುತೂಹಲ.
ಚೀನಾಕ್ಕೆ ಭಾರೀ ಹೊಡೆತ!: ಭಾರತದಲ್ಲಿ ಐಫೋನ್ ಉತ್ಪಾದನೆ ಆರಂಭ?
ಆದರೆ, ಆಡಳಿತ ವ್ಯವಸ್ಥೆ ರೂಪಿಸಿರುವ ಕಾನೂನಿಗೆ ಯಾರಾದರೂ ಸರಿ ಬೆಲೆ ಕೊಡಲೇಬೇಕು. ಈ ಬಗ್ಗೆ ಆ್ಯಪಲ್ ಕಂಪನಿ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಆ್ಯಪಲ್ ಉತ್ಪನ್ನವಾದ ಐಪಾಡ್‌ನ ತಯಾರಕ ಟೋನಿ ಫಾಡೆಲ್ ಅವರು ಪ್ರತಿಕ್ರಿಯಿಸಿದ್ದು, ಆ್ಯಪಲ್ ಬದಲಾಗುವುದು ಅನಿವಾರ್ಯ ಎಂದಿದ್ದಾರೆ.
ಯೂರೋಪಿಯನ್ ಯೂನಿಯನ್ ರೂಪಿಸಿರುವ ಕಾನೂನು ಈಗ ಐಪಾಡ್ ಮುಂದಿನ ಉತ್ಪನ್ನಕ್ಕೆ ಹಿನ್ನಡೆ ತರುತ್ತದಾ ಎಂದು ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರು ಪ್ರಶ್ನೆ ಹಾಕಿದ್ದಕ್ಕೆ ಪ್ರತಿಕ್ರಿಯಿಸಿದ ಟೋನಿ ಫಾಡೆಲ್, ಇದರಲ್ಲೇನು ಸಮಸ್ಯೆ ಕಾಣುತ್ತಿಲ್ಲ. ಯುಎಸ್‌ಬಿ-ಸಿ ಅನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ಆ್ಯಪಲ್ ಸರಿಪಡಿಸಿಕೊಳ್ಳುವುದು ಅನಿವಾರ್ಯ. ಇದು ಬಹಳ ಹಿಂದೆಯೇ ಆಗಬೇಕಿತ್ತು ಎಂದು ಹೇಳಿದ್ದಾರೆ.
ಮುಂದಿನದ್ದು ವಯರ್‌ಲೆಸ್?
ಯುಎಸ್‌ಬಿ-ಸಿ ಬಂದ ಬಳಿಕ ಯುಎಸ್‌ಬಿ ಕನೆಕ್ಷನ್ ಬಹಳ ಸರಳವಾಗಿದೆ. ಈಗ ಆ್ಯಪಲ್ ಕೂಡ ಇದೇ ಹಾದಿಗೆ ಬರುತ್ತಿರುವುದರಿಂದ ಯುಎಸ್‌ಬಿ-ಸಿ ವ್ಯವಸ್ಥೆಯೇ ಮುಂದಿನ ಹಲವು ವರ್ಷ ಮುಂದುವರಿಯುತ್ತದೆಯಾ ಎಂಬುದು ಕೆಲವರ ಸಂದೇಹ. ಈ ಬಗ್ಗೆಯೂ ಐಫೋನ್ ಕ್ರಿಯೇಟರ್ ಟೋನಿ ಫಾಡೆಲ್ ಟ್ವಿಟ್ಟರ್‌ನಲ್ಲಿ ಸ್ಪಂದಿಸಿದ್ದು, ಮುಂಬರುವ ದಿನಗಳಲ್ಲಿ ವೈರ್ ಕನೆಕ್ಷನ್‌ನ ಅಗತ್ಯವೇ ಬೀಳದಂತೆ ವೈರ್‌ಲೆಸ್ ಕನೆಕ್ಷನ್ ವ್ಯವಸ್ಥೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈಗ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಆ್ಯಪಲ್ ಕಂಪನಿ ಅಳವಡಿಸಿಕೊಂ ಬಳಿಕ ನಿಯಮಾವಳಿಯನ್ನು ತೆರವುಗೊಳಿಸಬಹುದು. ಅಲ್ಲಿಂದ ಹೊಸ ರೀತಿಯ ವ್ಯವಸ್ಥೆಯ ಶೋಧನೆಗೆ ಸ್ವಾತಂತ್ರ್ಯ ಸಿಗುತ್ತದೆ. ವಯರ್‌ಲೆಸ್ ತಂತ್ರಜ್ಞಾನ ಆವಿಷ್ಕಾರವಾಗಬಹುದು ಎಂಬುದು ಟೋನಿ ಪಾಡೆಲ್ ಅಭಿಪ್ರಾಯ.

ಏನಿದು ಯುಎಸ್‌ಬಿ?
ಯೂನಿವರ್ಸಲ್ ಸೀರಿಯಲ್ ಬಸ್. ಇದು ಡಿಜಿಟಲ್ ಸಂವಹನದ ಭೌತಿಕ ವಾಹಕ ಮತ್ತು ಪ್ರೋಟೋಕಾಲ್. ಕಂಪ್ಯೂಟರು, ಲ್ಯಾಪ್‌ಟಾಪ್, ಮೊಬೈಲ್ ಇತ್ಯಾದಿ ಉಪಕರಣಗಳಲ್ಲಿ ಇದನ್ನು ಬಳಸಲಾಗುತ್ತದೆ. ಚಾರ್ಜಿಂಗ್ ಮಾಡಲು, ಡಾಟಾ ರವಾನಿಸಲು ಇದು ಅಗತ್ಯ.
ಮೊದಲಿಗೆ ಬಂದಿದ್ದು ಯುಎಸ್‌ಬಿ-ಎ, ನಂತರ ಬಿ ಮತ್ತು ಈಗ ಯುಎಸ್‌ಬಿ ಸಿ ಬಂದಿದೆ. ಯುಎಸ್‌ಬಿ ಸಿ ನಲ್ಲಿ ಇರುವ ಡೇಟಾ ವಯರಿನ ಎರಡೂ ತುದಿ ಏಕರೀತಿಯಲ್ಲಿರುತ್ತದೆ. ಡಾಟಾ ರವಾನೆಯ ವೇಗ ಬಹಳ ಹೆಚ್ಚು. ಅಂದರೆ ಬಹಳ ವೇಗವಾಗಿ ಡಾಟಾ ಟ್ರಾನ್ಸ್‌ಫರ್ ಮಾಡಬಲ್ಲುದು.
ಯುಎಸ್‌ಬಿ 1ನಲ್ಲಿ ಒಂದು ಸೆಕೆಂಡ್‌ಗೆ 1.5 ಮೆಗಾಬಿಟ್ಸ್ ಡಾಟಾ ಸಾಗುತ್ತದೆ. ಈಗ ಯುಎಸ್‌ಬಿ 4.0 ನಲ್ಲಿ 40 ಗೀಗಾಬಿಟ್ಸ್ ಡಾಟಾ ರವಾನೆಯಾಗುತ್ತದೆ. ಯುಎಸ್‌ಬಿ 4.0 ಪೂರ್ಣವಾಗಿ ಕೆಲಸ ಮಾಡಲು ಯುಎಸ್‌ಬಿ ಟೈಪ್ ಸಿ ಕೇಬಲ್ ಅಗತ್ಯ. ಹೀಗಾಗಿ, ಯುಎಸ್‌ಬಿ ಸಿ ಜಾಗತಿಕ ಡಿಜಿಟಲ್ ವಹಿವಾಟಿನಲ್ಲಿ ಗಮನಾರ್ಹ ಬದಲಾವಣೆ ಮಾಡುವ ಶಕ್ತಿ ಹೊಂದಿದೆ.
ಇನ್ನು, ಯುಎಸ್‌ಬಿ ಎ ಕೇಬಲ್‌ಗಳಿಗೆ 5 ವೋಲ್ಟ್‌ವರೆಗಿನ ಕರೆಂಟ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಈಗ ಯುಎಸ್‌ಬಿ-ಸಿ 20 ವೋಲ್ಟ್ ಮತ್ತು 100 ವ್ಯಾಟ್ ಕರೆಂಟ್ ಹರಿವಿಗೆ ಹೊಂದಿಕೊಳ್ಳುತ್ತದೆ. ಅಂದರೆ, ಸಣ್ಣದರಿಂದ ದೊಡ್ಡದವರೆಗೂ ವಿವಿಧ ರೀತಿಯ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಯುಎಸ್‌ಬಿ ಸಿ ಹೊಂದಿಕೊಳ್ಳಬಲ್ಲುದು.
(ಒನ್ಇಂಡಿಯಾ ಸುದ್ದಿ)