ಹಿಜಾಬ್ ವಿವಾದ ಹುಟ್ಟಿದ್ದು ಎಲ್ಲಿ, ಬೆಳೆಸಿದ್ದು ಯಾರು, ಲಾಭನಷ್ಟ ಯಾರಿಗೆ?
ಉಡುಪಿಯ ಕಾಪು ತಾಲೂಕಿನ ಕೂಸು ಹಿಜಾಬ್ ವಿವಾದ, ನಂತರ ಜಿಲ್ಲೆಯ ಇತರ ಭಾಗಗಳಿಗೂ ವ್ಯಾಪಿಸಿ ಅಲ್ಲಿಂದ ರಾಜ್ಯದೆಲ್ಲಡೆ ಹರಿದಾಡಿ, ದೇಶದಲ್ಲಿ ಟ್ರೆಂಡಿಂಗ್ ನಲ್ಲಿ ಸುದ್ದಿಮಾಡಿ ಇಂದು ರಾಜ್ಯದ ಸರಕಾರದ ಮಾನಮರ್ಯಾದೆಯನ್ನು ಅಡಕತ್ತರಿಯಲ್ಲಿ ನಿಲ್ಲಿಸಿದೆ.
ಶಿಕ್ಷಣ ಕೇಂದ್ರಗಳಲ್ಲಿ ಧರ್ಮ, ರಾಜಕೀಯಕ್ಕೆ ಏನು ಕೆಲಸ ಎನ್ನುವ ನಿಯಮಗಳನ್ನು ಮೀರಿ ಹಿಜಾಬ್-ಕೇಸರಿ ವಿವಾದ ಇಂದು ರಾಜಕೀಯ ನಾಯಕರು/ಧಾರ್ಮಿಕ ಮುಖಂಡರುಗಳಿಗೆ ಆರೋಪ/ಪ್ರತ್ಯಾರೋಪದ ಸರಕಾಗಿರುವುದು ದುರಂತದ ಮುನ್ನಡಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
Recommended Video
ಹಿಜಾಬ್-ಕೇಸರಿ ವಿವಾದ ಒಂದು ಯೋಜನಾಬದ್ದ ವಿದ್ಯಮಾನವೇ ಎನ್ನುವ ಸಂಶಯ ಎದುರಾಗಲು ಹಲವಾರು ಕಾರಣಗಳಿವೆ. ಸರಕಾರ, ಹಿಜಾಬ್ -ಕೇಸರಿ ವಿವಾದವನ್ನು ಅರಿಯಲು ವಿಫಲವಾಯಿತೇ? ಮುಖ್ಯಮಂತ್ರಿಗಳ ಸುಪರ್ದಿಯಲ್ಲೇ ಇರುವ ಗುಪ್ತಚರ ಇಲಾಖೆ ಪರಿಸ್ಥಿಯ ಗಂಭೀರತೆಯನ್ನು ವರದಿ ಮಾಡಲು ಎಡವಿತೇ ಎನ್ನುವ ಹಲವಾರು ಪ್ರಶ್ನೆಗಳಿಗೆ ಸಾರ್ವಜನಿಕರಿಗೆ ಉತ್ತರ ಸಿಗುವ ಸಾಧ್ಯತೆ ಕಮ್ಮಿ.
ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮಂಗಳವಾರ (ಫೆ 8) ಸುಮಾರು ಐದು ತಾಸುಗಳ ಮ್ಯಾರಥಾನ್ ವಿಚಾರಣೆ ನಡೆದಿದ್ದು, ಅದು ಬುಧವಾರಕ್ಕೂ ಮುಂದೂಡಲ್ಪಟ್ಟಿದೆ. ರಾಜ್ಯದ ಶಾಲಾ ಕಾಲೇಜುಗಳಿಗೆ ಮೂರು ದಿನ ರಜೆಯನ್ನು ಘೋಷಿಸಲಾಗಿದೆ. ಕೋರ್ಟಿನ ಏಕಸದಸ್ಯ ಪೀಠವೂ ಹೇಳುವಂತೆ, ಇದರ ಹಿಂದೆ ಯಾರದ್ದೋ ಷಡ್ಯಂತ್ರವಿದೆ ಎಂದು. ಹಾಗಾದರೆ, ಆ ದುಷ್ಕರ್ಮಿಗಳು ಯಾರು ಎಂದಾಗ ಹಲವು ಸಂಘಟನೆಗಳ ಮತ್ತು ಕೃಪಾಪೋಷಿತ ಪಕ್ಷಗಳ ಹೆಸರು ಕಣ್ಣೆದರು ಬರುತ್ತದೆ.

ಇತ್ತೀಚೆಗೆ ನಡೆದ ಉಡುಪಿ ಜಿಲ್ಲೆ ಕಾಪು ಅಸೆಂಬ್ಲಿ ವ್ಯಾಪ್ತಿಯ ಪುರಸಭಾ ಚುನಾವ
ಇತ್ತೀಚೆಗೆ ನಡೆದ ಉಡುಪಿ ಜಿಲ್ಲೆ ಕಾಪು ಅಸೆಂಬ್ಲಿ ವ್ಯಾಪ್ತಿಯ ಪುರಸಭಾ ಚುನಾವಣೆಯಲ್ಲಿ ಒಂದು ಸಮುದಾಯದ ಸಂಘಟನೆಯ ನಾಲ್ಕೈದು ಜನ ಆರಿಸಿ ಬಂದಿದ್ದರು. ಈ ಸಂಘಟನೆಯ ನಾಯಕರ ಕುಮ್ಮುಕ್ಕೇ ಹಿಜಾಬ್-ಕೇಸರಿ ವಿವಾದ ರಾಜ್ಯದಲ್ಲಿ ಇಂದು ಈ ಮಟ್ಟಕ್ಕೆ ಆವರಿಸಲು ಕಾರಣ ಎನ್ನುವುದು ಇನ್ನೊಂದು ಸಮುದಾಯದ ಮುಖಂಡರ ವಾದ. ಯಾರ ಬೆಂಬಲವೂ ಇಲ್ಲದೇ ಮುಗ್ದ ಮನಸ್ಸಿನ ವಿದ್ಯಾರ್ಥಿಗಳು ಇಂದು, ಶಿಕ್ಷಣ ಕಲಿಸುವ ಗುರುಗಳ ಮೇಲೇಯೇ ಕಲ್ಲು ತೂರಾಟ ಮಾಡುತ್ತಿದ್ದಾರೆ ಎಂದರೆ, ಇದರ ಹಿಂದೆ ಸಂಘಟನೆ/ರಾಜಕೀಯ ಪಕ್ಷಗಳ ದುರ್ಲಾಭದ ವಾಸನೆಯ ಬಡಿಯದೇ ಇರದು.

ಹಿಜಾಬ್ ವಿವಾದಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್ಸಿನವರು ಬಿಜೆಪಿಯವರ ಮೇಲೆ ಗೂಬೆ
ಇಡೀ ಹಿಜಾಬ್ ವಿವಾದಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್ಸಿನವರು ಬಿಜೆಪಿಯವರ ಮೇಲೆ ಗೂಬೆ ಕೂರಿಸಿದ್ದಾರೆ. ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹನ್ನೆರಡು ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಹೊರತು ಪಡಿಸಿ, ಬಿಜೆಪಿ ಇಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಅಂತಹ ಪೂರಕ ಪರಿಸ್ಥಿತಿ ಸದ್ಯದ ಮಟ್ಟಿಗೆ ಬಿಜೆಪಿಗೆ ಇಲ್ಲ ಎನ್ನುವುದನ್ನು ಅರಿತು ಧರ್ಮ ರಾಜಕಾರಣಕ್ಕೆ ಬಿಜೆಪಿ ಇಳಿದಿದೆ ಎನ್ನುವ ಮಾತು ಪ್ರಗತಿಪರರು ಮತ್ತು ಕಾಂಗ್ರೆಸ್ ಮುಖಂಡರಿಂದ ಕೇಳಿ ಬರುತ್ತಿದೆ.

ಹಿಜಾಬ್-ಕೇಸರಿ ವಿವಾದ ತಾರಕಕ್ಕೇರಿಕೆ
ಹಿಜಾಬ್-ಕೇಸರಿ ವಿವಾದಕ್ಕೆ ಎರಡೂ ಧರ್ಮಗಳ ಮುಖಂಡರುಗಳು ಮತ್ತು ರಾಜಕೀಯ ನಾಯಕರುಗಳು ಮೂಗು ತೂರಿಸುತ್ತಿರುವುದರಿಂದ ವಿವಾದ ಇಂದು ಲೋಕಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಸ್ಪಷ್ಟನೆಯನ್ನು ನೀಡಬೇಕು ಎನ್ನುವ ಹಂತಕ್ಕೆ ಬಂದು ನಿಂತಿದೆ. ರಾಜ್ಯದ ಇತರ ಕಡೆ ಈ ವಿವಾದ ಭುಗಿಲೆದ್ದಿರುವುದು ಅಲ್ಲಲ್ಲಿ ರಾಷ್ಟ್ರಧ್ವಜವನ್ನು ಇಳಿಸಿ, ಕೇಸರಿ ಧ್ವಜವನ್ನು ಹಾರಿಸಿರುವುದು, ಪಾಕಿಸ್ತಾನ ಜಿಂದಾಬಾದ್ ಮೊಳಗು ಕೇಳಿ ಬಂದಿರುವುದು, ಹೋರಾಟದ ದಿಕ್ಕು ಬೇರೆಯೇ ಇದೆ ಎಂದು ಸಾರುವಂತಿದೆ.

ಉಡುಪಿ ಶಾಸಕರು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ
ಕೆಲವೊಂದು ಕಡೆ ಧಾರ್ಮಿಕ ಸಾಮರಸ್ಯವನ್ನು ಮೆರೆದು ಹಿಜಾಬ್, ಕೇಸರಿ ಶಲ್ಯವನ್ನು ಇಳಿಸಿ ವಿದ್ಯಾರ್ಥಿಗಳು ಶಾಲಾ,ಕಾಲೇಜುಗಳಿಗೆ ಹಾಜರಾದ ವಿದ್ಯಮಾನವೂ ನಡೆದಿದೆ. ಹಿಜಾಬ್ ಧರಿಸದಿದ್ದರೆ ಪೋಷಕರು ಶಾಲೆಗ ಕಳುಹಿಸುವುದಿಲ್ಲ ಎನ್ನುವ ಕೂಗೂ ವಿದ್ಯಾರ್ಥಿನಿಗಳಿಂದ ಬರುತ್ತಿದೆ. ಸದ್ಯ ವಿವಾದ ಸೃಷ್ಠಿಸಿರುವ ಆರು ಮಂದಿ ವಿದ್ಯಾರ್ಥಿನಿಯರು ಹಿಂದೆ ಹಿಜಾಬ್ ಧರಿಸಲು ಅವಕಾಶ ನೀಡಿದ್ದರು ಎಂದು ನೀಡಿದ್ದ ಹೇಳಿಕೆ ಸುಳ್ಳು ಎನ್ನುವುದನ್ನು ಉಡುಪಿ ಶಾಸಕರು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ.

ಸಮಾನ ವಸ್ತ್ರಸಂಹಿತೆಯನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿತ್ತು
ಸಮಾನ ವಸ್ತ್ರಸಂಹಿತೆಯನ್ನು ಹಲವು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಶಿಕ್ಷಣ ಕೇಂದ್ರಗಳಲ್ಲಿ ಈಗ ಹಿಜಾಬ್-ಕೇಸರಿ ಶಲ್ಯ ಸದ್ದನ್ನು ಮಾಡುತ್ತಿದೆ. ಈ ನಡುವೆ, ಹೈಕೋರ್ಟಿನ ತೀರ್ಪಿನ ಕಾತರದಲ್ಲಿ ಎಲ್ಲರೂ ಇದ್ದಾರೆ. ಶಿಕ್ಷಣದ ವಿಚಾರದಲ್ಲಿ ಧರ್ಮ, ರಾಜಕೀಯ ಬೆರೆತರೆ ಏನಾಗುತ್ತದೆ ಎನ್ನುವುದಕ್ಕೆ ಹಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಇಲ್ಲಿ ಎಚ್ಚೆತ್ತು ಕೊಳ್ಳಬೇಕಾದವರು ವಿದ್ಯಾರ್ಥಿಗಳು/ಪೋಷಕರು/ಶಿಕ್ಷಣ ಸಂಸ್ಥೆಗಳು, ಇಲ್ಲದಿದ್ದರೆ ಇದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಿನ ಚುನಾವಣೆಯವರೆಗೂ ಇದನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ ಎನ್ನುವುದು ನಿರ್ವಿವಾದ.












Click it and Unblock the Notifications