ಒಳರೋಗಿಗಳು ಆಸ್ಪತ್ರೆಯಲ್ಲಿನ ಆಹಾರವನ್ನೇ ಏಕೆ ಸೇವಿಸಬೇಕು? ಇದಕ್ಕೆ ಕಾರಣವೇನು?
ಆರೋಗ್ಯ ತಪ್ಪಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಮನೆಯಿಂದ ಆಹಾರ ತಯಾರಿಸಿಕೊಂಡು ಹೋಗುವುದೆಷ್ಟು ಸರಿ? ಇದು ಒಳ್ಳೆಯದಾ? ಹಾಗೆಯೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳು ಅಲ್ಲಿ ನೀಡುವ ಆಹಾರ ಬಿಟ್ಟು ಹೊರಗಿನಿಂದ ತರುವ ಆಹಾರವನ್ನು ಸೇವಿಸುವುದೆಷ್ಟು ಸರಿ? ಹೀಗೆ ಕೆಲವೊಂದು ಪ್ರಶ್ನೆಗಳು ಕಾಡುತ್ತವೆ. ಜತೆಗೆ ರೋಗಿಗಳು ಕೂಡ ಆಸ್ಪತ್ರೆಯಲ್ಲಿ ನೀಡಲಾಗುವ ಆಹಾರದ ಬಗ್ಗೆ ಮೂಗು ಮುರಿಯುತ್ತಾರೆ. ಅಯ್ಯೋ ಬಾಯಿಗೆ ಸೇರಲ್ಲ, ಗಂಟಲಲ್ಲಿ ಇಳಿಯಲ್ಲ ಎಂಬಿತ್ಯಾದಿ ಮಾತುಗಳನ್ನಾಡುತ್ತಾರೆ. ಇದು ಸರಿಯಲ್ಲ ಎನ್ನುತ್ತಾರೆ ತಜ್ಞರು.
ಬಹಳಷ್ಟು ರೋಗಿಗಳು ಆಸ್ಪತ್ರೆಯಲ್ಲಿ ನೀಡುವ ಆಹಾರ ನಾಲಿಗೆಗೆ ರುಚಿಸಲ್ಲ ಎಂಬ ಕಾರಣಕ್ಕೆ ಆಹಾರವನ್ನು ಸೇವಿಸದೆ ಹೊರಗಿನಿಂದ ತಂದು ಸೇವಿಸುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಗಳು ಈ ರೀತಿಯಾಗಿ ಮಾಡುವುದು ಒಳ್ಳೆಯದಲ್ಲ. ಕೇವಲ ನಾಲಿಗೆ ರುಚಿಗಾಗಿ ಸೇವಿಸುವ ಆಹಾರಗಳು ಆರೋಗ್ಯದ ದೃಷ್ಠಿಯಿಂದ ಮಾರಕವಾಗಿರುವುದರಿಂದ ರುಚಿಯಾಗಿದೆ ಎಂಬ ಒಂದೇ ಕಾರಣಕ್ಕೆ ಹೊರಗಿನ ಆಹಾರ ಸೇವಿಸುವುದು ತಪ್ಪಾಗುತ್ತದೆ.

ಇಷ್ಟಕ್ಕೂ ನಾವು ಆಸ್ಪತ್ರೆಯಲ್ಲಿದ್ದಾಗ ಆಸ್ಪತ್ರೆ ವತಿಯಿಂದ ನೀಡುವ ಆಹಾರವನ್ನೇ ಏಕೆ ಸೇವಿಸಬೇಕು ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರವೂ ಇಲ್ಲದಿಲ್ಲ. ಜತೆಗೆ ರೋಗಿ ಯಾವ ಕಾಯಿಲೆಯಿಂದ ಬಳಲುತ್ತಿದ್ದಾನೆ? ಆತನಿಗೆ ಯಾವ ರೀತಿಯ ಆಹಾರ ನೀಡಬೇಕು? ಅದು ಯಾವ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ? ಹೀಗೆ ಎಲ್ಲವನ್ನು ಅರಿತು ಆಹಾರನ್ನು ತಯಾರಿಸಿರುತ್ತಾರೆ. ಹೀಗಾಗಿ ಅಂತಹ ಆಹಾರಗಳನ್ನು ಸೇವಿಸುವುದು ರೋಗಿಗಳ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
ಆರೋಗ್ಯದ ಭಾಗವೇ ಆಹಾರ
ಆಸ್ಪತ್ರೆಯಲ್ಲಿ ನೀಡಲಾಗುವ ಆಹಾರವನ್ನು ಏಕೆ ಸೇವಿಸಬೇಕು ಎಂಬುದಕ್ಕೂ ಕಾರಣಗಳನ್ನು ವೈದ್ಯರು ನೀಡುತ್ತಾರೆ. ಅದು ಏನೆಂದರೆ? ಆಸ್ಪತ್ರೆಗಳನ್ನು ತಯಾರು ಮಾಡುವ ಆಹಾರ ಶುದ್ಧ ಮತ್ತು ಶುಚಿಯಾಗಿರುತ್ತದೆ. ಗುಣಮಟ್ಟವೂ ಉತ್ತಮವಾಗಿರುತ್ತದೆ. ಜತೆಗೆ ಪೋಷಕಾಂಶವೂ ಅಧಿಕವಾಗಿರುತ್ತದೆ. ಒಂದು ವೇಳೆ ಹೊರಗಿನಿಂದ ತಂದಿದ್ದೇ ಆದರೆ ಅದು ರುಚಿಯಾಗಿದ್ದರೂ ಶುದ್ಧವಾಗಿದೆ ಎಂಬುದರ ಖಾತ್ರಿಯಿರುವುದಿಲ್ಲ. ಜತೆಗೆ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

ಇನ್ನು ಔಷಧ ಚಿಕಿತ್ಸೆಯಾಗಲೀ, ಶಸ್ತ್ರ ಚಿಕಿತ್ಸೆಯಾಗಲೀ, ಘನ ಆಹಾರವಾಗಲೀ, ದ್ರವ ಆಹಾರವಾಗಲೀ, ಟ್ಯೂಬ್‌ನಿಂದ ನೀಡುವ ಆಹಾರವಾಗಲೀ ಈ ಎಲ್ಲ ಆಹಾರಗಳು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಜತೆಗೆ ಈ ನಿಶ್ಚಿತ ಆಹಾರಗಳು ರೋಗಿಗಳ ಆರೋಗ್ಯದ ಭಾಗವೇ ಆಗಿರುವುದರಿಂದ ಅವುಗಳನ್ನೇ ಸೇವಿಸುವುದು ಅಗತ್ಯವಾಗಿರುತ್ತದೆ.
ವೈದ್ಯರ ಸಲಹೆಯಂತೆ ಆಹಾರ ಸೇವಿಸಬೇಕು
ಹೆಚ್ಚಿನ ಸಂದರ್ಭಗಳಲ್ಲಿ ಯಾವುದೋ ಕಾಯಿಲೆ ಅಥವಾ ಶಸ್ತ್ರ ಚಿಕಿತ್ಸೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗೆ ವೈದ್ಯರು ನೀಡುವ ಸಲಹೆ ಮೇರೆಗೆ ಅವರು ಶಿಫಾರಸ್ಸು ಮಾಡಿರುವ ಆಹಾರವನ್ನೇ ನೀಡಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯನ್ನು ನೋಡಲು ಬರುವ ಸಂಬಂಧಿಗಳು ತಮ್ಮ ಮನೆಯಿಂದಲೇ ಆಹಾರಗಳನ್ನು ತರುತ್ತಾರೆ. ಈ ಆಹಾರಗಳನ್ನು ನೀಡುವ ಮುನ್ನ ವೈದ್ಯರ ಸಲಹೆ ಪಡೆದು ಅವರು ಅನುಮತಿ ನೀಡಿದರೆ ಮಾತ್ರ ಆಹಾರಗಳನ್ನು ನೀಡಬೇಕು.
ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಗಳಿಗೆ ಎಂತಹ ಆಹಾರಗಳನ್ನು ನೀಡಬೇಕು ಎಂಬುದು ವೈದ್ಯರಿಗೆ ಮಾತ್ರ ಗೊತ್ತಿರುತ್ತದೆ ಮತ್ತು ಅದಕ್ಕೆ ತಕ್ಕಂತೆ ಆಹಾರವನ್ನು ಆಸ್ಪತ್ರೆಯಲ್ಲಿ ತಯಾರು ಮಾಡಿರುತ್ತಾರೆ. ಹೀಗಿರುವಾಗ ನಾವು ಮನೆಯಿಂದ ತಂದ ಆಹಾರಗಳನ್ನು ರೋಗಿಗೆ ನೀಡುವುದರಿಂದ ತೊಂದರೆಯಾಗಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ.
ಮೂಗು ಮುರಿಯದೆ ಆಹಾರ ಸೇವಿಸಿ
ಸರಿಯಾದ ಪೋಷಕಾಂಶಗಳನ್ನು ಹೊಂದಿರುವ ಆಸ್ಪತ್ರೆಯ ಒಳರೋಗಿಗಳ ಆಹಾರವನ್ನು ಸೇವಿಸುವುದರಿಂದ ರೋಗಿಯ ಮಾನಸಿಕ ಮತ್ತು ಶಾರೀರಿಕ ಸ್ಥಿತಿ ಉತ್ತಮಗೊಳ್ಳುವುದಲ್ಲದೆ, ರೋಗವು ಶೀಘ್ರವಾಗಿ ಗುಣಮುಖವಾಗಲು ಅನುಕೂಲವಾಗುತ್ತದೆ. ಆದುದರಿಂದ ಪ್ರತಿಯೊಬ್ಬರೂ ಇದನ್ನು ಮನಗಂಡು ಆಸ್ಪತ್ರೆಯಲ್ಲಿ ನೀಡುವ ಆಹಾರದ ಬಗ್ಗೆ ಮೂಗು ಮುರಿಯದೆ ಅದನ್ನು ಸೇವಿಸುವ ಮೂಲಕ ಆರೋಗ್ಯ ಬಹುಬೇಗ ಚೇತರಿಸಿಕೊಳ್ಳಲು ಅನುವು ಮಾಡಿಕೊಳ್ಳಬೇಕು.
ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಯಾವ ಆಹಾರವನ್ನು ನೀಡಬೇಕು ಎಂಬುದನ್ನು ವೈದ್ಯರ ಸಲಹೆಯಂತೆ ನೀಡುವುದು ಒಳ್ಳೆಯದು. ರೋಗಿಗಳು ಕೂಡ ಆರೋಗ್ಯ ಸುಧಾರಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ತನಕ ಆಸ್ಪತ್ರೆಯಿಂದ ನೀಡುವ ಆಹಾರವನ್ನು ಸೇವಿಸುವುದು ಒಳಿತು. ಅದನ್ನು ಗಮನದಲ್ಲಿಟ್ಟುಕೊಳ್ಳಬೇಕಷ್ಟೆ.












Click it and Unblock the Notifications