• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾತಿ ಚರಾಮಿ ಸಿನ್ಮಾದಲ್ಲಿ ಮಾಧ್ವ ಬ್ರಾಹ್ಮಣರನ್ನು ಗೇಲಿ ಮಾಡುವ ಅಗತ್ಯವಾದರೂ ಏನಿತ್ತು?

|

ಸಿನಿಮಾವನ್ನು ಪ್ರಬಲ ಮಾಧ್ಯಮ ಎನ್ನುತ್ತಾರೆ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ಅಲ್ಲಿ ಪಾತ್ರಗಳನ್ನು ರೂಪಿಸುವಾಗ, ಅವು ಏನನ್ನು- ಯಾವ ನಂಬಿಕೆಯನ್ನು ಪ್ರತಿನಿಧಿಸುತ್ತವೆ ಹಾಗೂ ಆ ಮೂಲಕ ಏನನ್ನು ಹೇಳುತ್ತಿದ್ದೇವೆ ಎಂಬುದರ ಬಗ್ಗೆ ಒಂದಿಷ್ಟು ಆಲೋಚನೆ ಬೇಕಲ್ಲವೆ?

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಪ್ರದರ್ಶನವಾದ ನಾತಿ ಚರಾಮಿ ಸಿನಿಮಾದ ಬಗ್ಗೆ ಕೆಲವು ಪ್ರಶ್ನೆಗಳು ಇಲ್ಲಿವೆ. ಬ್ರಾಹ್ಮಣರ ಉಪ ಪಂಗಡಕ್ಕೆ ಸೇರಿದ ಮಾಧ್ವರನ್ನು ಗೇಲಿ ಮಾಡುವಂಥ ದೃಶ್ಯವನ್ನು ಸಿನಿಮಾದಲ್ಲಿ ಅಗತ್ಯ ಇಲ್ಲದಿದ್ದರೂ ತೋರಿಸಲಾಗಿದೆ. ಅರ್ಥಾತ್ ತುರುಕಲಾಗಿದೆ. ಆ ಮೂಲಕ ನಿರ್ದೇಶಕರಾದ ಮಂಸೋರೆ ಏನು ಹೇಳುವ ಪ್ರಯತ್ನ ಪಟ್ಟಿದ್ದಾರೆ?

ಚಿತ್ರ ವಿಮರ್ಶೆ: ನಾತಿಚರಾಮಿ-ಸ್ವಾಭಿಮಾನಿ ಮಹಿಳೆಯ ಪ್ರಶ್ನೆಗಳು, ತುಮುಲಗಳು

ಸಂಬಂಧಪಟ್ಟವರು ಉತ್ತರ ನೀಡಲಿ ಎಂಬುದು ನಮ್ಮ ಉದ್ದೇಶ. ಆದರೆ ನಿರ್ದೇಶಕ ಮಂಸೋರೆ ಅವರ ಮೊಬೈಲ್ ಗೆ ಕರೆ ಮಾಡಿ, ಮಾತನಾಡಲು ಯತ್ನಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ಮೊದಲಿಗೆ ಸಂಭಾಷಣೆ ಬರೆದಂಥ ಸಂಧ್ಯಾರಾಣಿ ಅವರನ್ನು ಈ ಬಗ್ಗೆ ಕೇಳಿದಾಗ, ಇದು ನಿರ್ದೇಶಕರೇ ಉತ್ತರಿಸಬೇಕಾದ ಪ್ರಶ್ನೆ ಎಂದರು. ಹೀಗೆ ಉತ್ತರಿಸಲು ಸಿಗದವರಿಗಾಗಿ ಇಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ.

ಜಾತಿ ಸೂಚಕವಾದ ಚಿಹ್ನೆಯನ್ನು ದೇಹದ ಮೇಲೆ ಕಾಣಿಸುವಂತೆ ಹಾಕಿ, ಆ ಪಾತ್ರದ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ಗೇಲಿ ಮಾಡುವುದನ್ನು ಸಿನಿಮಾ ಮಂದಿ ಹಾಸ್ಯ ಎಂದುಕೊಂಡಂತೆ ಇದೆ. ಈಗ ನಾತಿ ಚರಾಮಿ ಸಿನಿಮಾದಲ್ಲೂ ಅದೇ ಆಗಿದೆ. ಅಲ್ಲ ಸ್ವಾಮಿ, ರಾತ್ರಿ ಬಾರ್ ನಲ್ಲಿ ಹೋಗಿ ಕೂರುವ- ಆ ಸಮಯದಲ್ಲೂ ಅಳಿಸದೇ ಉಳಿದಂತೆ, ಮಾಂಸ- ಮದ್ಯ ಸೇವನೆ ಮಾಡುವ ವ್ಯಕ್ತಿಯ ಹಣೆಯಲ್ಲಿ ಅದೆಷ್ಟು ಸ್ಫುಟವಾದ ಗೋಪಿಚಂದನ, ಅಂಗಾರ-ಅಕ್ಷತೆ ಚಿಹ್ನೆಗಳು?

ಆ ಪಾತ್ರದ ಬಾಯಿಂದ ಆಡಿಸುವ ಮಾತುಗಳಲ್ಲೂ ಮತ್ತದೇ ಗೇಲಿ. ಅಷ್ಟು ಪಾಪ ಪ್ರಜ್ಞೆ ಇರುವ ವ್ಯಕ್ತಿಯೊಬ್ಬ ಬಾರ್ ಗೆ ಹೋದ ನಂತರ ಅವೆಲ್ಲವನ್ನೂ ಒರೆಸಿಕೊಳ್ಳುವುದು ಏನು ಬಂತು? ಮನೆಯಿಂದ ಮುಖ ತೊಳೆದುಕೊಂಡು ಹೋಗುತ್ತಿರಲಿಲ್ಲವೆ? ಇಲ್ಲಿ ಯಾವುದೋ ಒಂದು ಸಮುದಾಯ ಅಂತಲ್ಲ, ಅದು ಯಾವುದೇ ಧರ್ಮ- ಜಾತಿ ವ್ಯಕ್ತಿಗೆ ಸೇರಿದ ಭಾವನೆಗಳಿಗೆ ಧಕ್ಕೆ ಮಾಡುವಂತಿದ್ದರೂ ಅದು ತಪ್ಪೇ ಅಲ್ಲವೆ?

ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ 'ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ' ಎಂಬ ಹಾಡಿದೆ. ಅದರಲ್ಲಿ ಶೈವರಿಗೆ ಶಿವ ದೊಡ್ಡೋನು, ವೈಷ್ಣವರಿಗೆ ಹರಿ ಸರ್ವೋತ್ತಮನು ಎಂಬೆಲ್ಲ ಸಾಲುಗಳಿವೆ. ಸತ್ಯಹರಿಶ್ಚಂದ್ರ ಸಿನಿಮಾದ ಆ ಹಾಡಿನಲ್ಲಿರುವ ಪ್ರಖರ ಸಾಲುಗಳು ಮತ್ತು ದೃಶ್ಯಗಳು ಚಿತ್ರದ ಸನ್ನಿವೇಶದೊಂದಿಗೆ ಮಿಳಿತಗೊಂಡಿವೆ. ಈ ಕಾರಣಕ್ಕೆ ಅದನ್ನು ನೋಡಿದವರಿಗೆ ಜಾತಿ ನಿಂದನೆಯ ಭಾವ ಮೂಡುವುದಿಲ್ಲ. ನಿಮ್ಮ ಚಿತ್ರದ ಬಾರ್ ದೃಶ್ಯ ಹೀಗೆ ಒಟ್ಟಾರೆ ಚಿತ್ರದ ಓಟದೊಡನೆ ಮಿಳಿತಗೊಳ್ಳುವುದಿಲ್ಲ.

ಇನ್ನು ಶ್ರೀಪುರಂದರದಾಸರು, ಭಕ್ತಕನಕದಾಸ ಚಿತ್ರಗಳಲ್ಲಿ ಮಾಧ್ವರ ಚಿಹ್ನೆಗಳನ್ನು ಸರಿಯಾಗಿ ತೋರಿಸಿದ್ದಾರೆ. ಕನ್ನಡ ಚಿತ್ರ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಈ ಮೂರೂ ಸಿನಿಮಾಗಳನ್ನು ಇನ್ನೊಮ್ಮೆ ಹೊಸ ಕಣ್ಣಿನಿಂದ ನೋಡಿ.

ಯಾವುದೇ ಸಿನಿಮಾ ಮಾಡುವಾಗ ಆಯಾ ಪಾತ್ರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಅಧ್ಯಯನ ಮಾಡಬೇಕಲ್ಲವೇ? ನಿಮ್ಮಂಥ ಪ್ರಜ್ಞಾವಂತ ನಿರ್ದೇಶಕರು ಮತ್ತೊಬ್ಬ ವ್ಯಕ್ತಿಯ ಭಾವನೆಗಳನ್ನು ಹಾಗೂ ನಿಮ್ಮಿಂದ ನಿರೀಕ್ಷಿಸುವ ಕನಿಷ್ಠ ಪ್ರಯತ್ನವನ್ನು ಗುರುತಿಸದೆ ಹೋದರೆ ಹೇಗೆ? ಇತ್ತೀಚೆಗೆ ಬಂದ ಸಿನಿಮಾವೊಂದರಲ್ಲಿ ಕೂಡ ಗೋಪಿಚಂದನ ಎಂಬಂತೆ ಪಾತ್ರವೊಂದಕ್ಕೆ ಅರಿಶಿನ ಬಣ್ಣದ ಪೇಂಟ್ ಬಳಿದಿಟ್ಟಿದ್ದಾರೆ.

ಸಿನಿಮಾಗಳಲ್ಲಿ ಅದ್ಯಾವುದೇ ಜಾತಿ-ಧರ್ಮದ ಬಗ್ಗೆ ಪಾತ್ರ ಸೃಷ್ಟಿಸುವಾಗ ಅವರ ಮೂಲ ನಂಬಿಕೆ, ಸಂಪ್ರದಾಯ ಮೊದಲಿಗೆ ತಿಳಿದುಕೊಳ್ಳಿ. ಗೇಲಿ ಮಾಡುವುದೇ ನಿಮ್ಮ ಉದ್ದೇಶ ಆಗಿ, ಅದನ್ನು ದಕ್ಕಿಸಿಕೊಳ್ಳುತ್ತೀವಿ ಅನ್ನುವುದಾದರೂ ತೆರೆಯ ಮೇಲೆ ಕಾಣಿಸುವ ದೃಶ್ಯಗಳು ವಾಸ್ತವವಾಗಿರಲಿ.

ಸೃಜನಶೀಲತೆಯನ್ನು ಗೌರವಿಸುವುದನ್ನು ಕಲಿಯಬೇಕು. ಅದು ಕ್ರಿಯಾಶೀಲತೆ ಎಂದೆಲ್ಲ ಮತ್ತದೇ ಪಾಠ ಹೇಳುವುದನ್ನು ಕೇಳುವುದಕ್ಕೆ ಇದು ಕಾಲವಲ್ಲ ಸ್ವಾಮೀ. ನಾತಿ ಚರಾಮಿ ಸಿನಿಮಾದಲ್ಲಿ ಇರುವ ಆ ಬಾರ್ ದೃಶ್ಯ, ಅದರಲ್ಲಿ ಕಾಣಿಸಿಕೊಳ್ಳುವ ಮುದ್ರೆ-ಗೋಪಿಚಂದನ, ಅಂಗಾರ-ಅಕ್ಷತೆ ಹಾಕಿಕೊಂಡ ಪಾತ್ರದಲ್ಲಿ ಅದೆಂಥ ಕ್ರಿಯಾಶೀಲತೆ ಹಾಗೂ ಕಥೆಗೆ ಅದೆಷ್ಟು ಪೂರಕವಾಗಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕೊನೆಗೊಂದು ಮಾತು: ನಿಮ್ಮ ಸಿನಿಮಾದ ಮೂಲಕ ಮಾಡಿರುವುದು ಜಾತಿ ನಿಂದನೆ ಅಲ್ಲವೆ? ನಿಮ್ಮ ಉತ್ತರದ ನಿರೀಕ್ಷೆಯಲ್ಲಿ.

English summary
Nathi Charami recently screened in Bengaluru International Movie Festival. There is an objection about the particular scene and the way particular character portrayed in the movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X