ಲಾಂಗ್ ಕೋವಿಡ್ ಎಂದರೇನು? ಇದನ್ನ ಗುರುತಿಸುವುದು ಹೇಗೆ?
ಕೊರೋನಾ ವೈರಸ್ ಅಡಿ ಇಟ್ಟು ಆರ್ಭಟಿಸಲು ಶುರುವಿಕ್ಕಿ ಎರಡು ವರ್ಷವಾದರೂ ಈಗಲೂ ಹಲವು ಪ್ರಶ್ನಾರ್ಥಕ ಚಿಹ್ನೆಗಳು ಉಳಿದಿವೆ. ಮೊದಲೆರಡು ಕೋವಿಡ್ ಅಲೆಗಳು ಬಹುತೇಕ ಜಗತ್ತಿನ ಬುಡವನ್ನೇ ಅಲುಗಾಡಿಸಿಬಿಟ್ಟಿವೆ. ಮೊದಲ ಅಲೆ ಅನೇಕ ಆರ್ಥಿಕತೆಗಳನ್ನ ಬುಡಮೇಲು ಮಾಡಿದರೆ, ಎರಡನೇ ಅಲೆಗೆ ಜೀವಿಗಳ ರಾಶಿಯೇ ಇಹಲೋಕ ತ್ಯಜಿಸಿವೆ. ಲಸಿಕೆಯ ಅಸ್ತ್ರ ಬಿಟ್ಟರೆ ಈಗಲೂ ಕೋವಿಡ್ ಎದುರಿಸಲು ಮನುಕುಲ ಬಹುತೇಕ ಅದೃಷ್ಟ ಮತ್ತು ವ್ಯಕ್ತಿಗತ ರೋಗನಿರೋಧಕ ಶಕ್ತಿಗಳನ್ನ ಅವಲಂಬಿಸಿರುವುದು ವಾಸ್ತವ. ಇದರ ಜೊತೆಗೆ ಕೊರೋನಾ ವೈರಸ್‌ನ ವರ್ತನೆಯೂ ಸಂಪೂರ್ಣವಾಗಿ ಅರಿವಿಗೆ ನಿಲುಕಿಲ್ಲ ಎಂಬುದೂ ನಿಜ.
ಒಂದೇ ರೀತಿಯ ಆರೋಗ್ಯ ಇದ್ದವರಲ್ಲಿ ಕೋವಿಡ್ ಬೇರೆ ಬೇರೆ ರೀತಿಯ ಪರಿಣಾಮ ಬೀರಿದ್ದು ಉಂಟು. ಕೋವಿಡ್ ಬಂದರೆ ಎಷ್ಟು ದಿನದವರೆಗೆ ಸೋಂಕು ಉಳಿಯುತ್ತದೆ ಎಂಬುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕೆಲವರಲ್ಲಿ ಸುದೀರ್ಘ ಕಾಲ ಇರುತ್ತದೆ. ಕೆಲವರಲ್ಲಿ ಬಹಳ ಬೇಗ ಮರೆಯಾಗುತ್ತದೆ. ಅಚ್ಚರಿ ಎಂದರೆ ಅದರ ಪರಿಣಾಮ ಯಾವಾಗ ಬೇಕಾದರೂ ಮರಳಬಹುದು. ಭೂಕಂಪದ ಬಳಿಕ ಸೃಷ್ಟಿಯಾಗುವ ಪಶ್ಚಾತ್ ಕಂಪನಗಳ ರೀತಿ ಕೋವಿಡ್ ಎಫೆಕ್ಟ್ ಮರುಕುಳಿಸುತ್ತೇ ಇರಬಹುದು. ಇದನ್ನು ಲಾಂಗ್ ಕೋವಿಡ್ (Long Covid) ಎಂದಾದರೂ ಹೇಳಬಹುದು, ಅಥವಾ ಪೋಸ್ಟ್ ಕೋವಿಡ್ ಸಿಂಪ್ಟಮ್ಸ್ (Post Covid Symptoms) ಎಂದಾದರೂ ಹೇಳಬಹುದು.

ಏನಿದು ದೀರ್ಘಾವಧಿ ಕೋವಿಡ್?
ಕೋವಿಡ್ ಸೋಂಕು ಬಂದು ಮೂರ್ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ಬಾಧೆ ಕೊಟ್ಟಲ್ಲಿ ಅದನ್ನು ಲಾಂಗ್ ಕೋವಿಡ್ ಅಥವಾ ದೀರ್ಘಕಾಲೀನ ಕೋವಿಡ್ ಎಂದು ಕರೆಯಬಹುದು. ಇದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಟ್ಟರೆ ಹೆಚ್ಚು ಆತಂಕಪಡುವಂತಿಲ್ಲ ಎಂಬುದು ವೈದ್ಯರ ಸಲಹೆ.

ಯಾರಿಗೆ ಬರುತ್ತೆ ಲಾಂಗ್ ಕೋವಿಡ್?
ದೀರ್ಘಕಾಲೀನ ಕೋವಿಡ್ ಸೋಂಕು ಯಾರಿಗಾದರೂ ಬರಬಹುದು. ರೋಗದ ತೀವ್ರತೆ ಇಲ್ಲದ, ಮೈಲ್ಡ್ ಸಿಂಪ್ಟಮ್ ಇರುವ ರೋಗಿಗಳಿಗೆ ಇದು ದೀರ್ಘ ಕಾಲ ಕಾಡುವುದಿಲ್ಲ ಎನ್ನುವಂತಿಲ್ಲ. ಮಾಮೂಲಿಯ ರೋಗಲಕ್ಷಣಗಳಿಲ್ಲದೆಯೂ ಸೋಂಕು ದೀರ್ಘ ಕಾಲ ಇರಬಹುದು.

ಎಷ್ಟು ಅವಧಿ ಇರುತ್ತದೆ ಲಾಂಗ್ ಕೋವಿಡ್
ಕೆಲವರಿಗೆ ಇದು ಒಂದು ತಿಂಗಳವರೆಗೆ ಇರಬಹುದು. ಇನ್ನೂ ಕೆಲವರಿಗೆ ಇದು ಹಲವು ತಿಂಗಳವರೆಗೆ ಬಾಧಿಸಬಹುದು. 2020ರಲ್ಲಿ ಸೋಂಕಿಗೆ ಒಳಗಾದವರು ಈಗಲೂ ಅದರ ಪೋಸ್ಟ್ ಕೋವಿಡ್ ಪರಿಣಾಮವನ್ನು ಎದುರಿಸುತ್ತಿರುವ ಉದಾಹರಣೆ ಹಲವುಂಟು.

ಲಾಂಗ್ ಕೋವಿಡ್ ರೋಗಲಕ್ಷಣಗಳೇನು?
ಸುದೀರ್ಘ ಅವಧಿ ಕೋವಿಡ್ ರೋಗವನ್ನು ಗುರುತಿಸಲು ಹಲವು ಲಕ್ಷಣಗಳನ್ನ ನಾವು ಗಮನಿಸಬಹುದು.
ಸುಸ್ತು
ಉಸಿರಾಟದ ತೊಂದರೆ
ಸ್ಮರಣೆ, ಏಕಾಗ್ರತೆ ಅಥವಾ ನಿದ್ರೆಗೆ ಸಂಚಕಾರ
ಎದೆ ನೋವು
ದೀರ್ಘ ಕೆಮ್ಮು
ಮಾತನಾಡಲು ತೊಡರುವುದು
ಸ್ನಾಯು ನೋವು
ವಾಸನೆ ಅಥವಾ ರುಚಿಯ ಶಕ್ತಿ ಕುಂದುವುದು
ಖಿನ್ನತೆ ಅಥವಾ ಆತಂಕಕ್ಕೆ ಒಳಗಾಗುವುದು
ಜ್ವರ
ತಲೆಸುತ್ತು

ಸುಸ್ತೋ ಸುಸ್ತು:
ಲಾಂಗ್ ಕೋವಿಡ್ ಬಂದವರು ಬಹಳ ಬೇಗ ಆಯಾಸ ಹೊಂದುವುದು ಸಮೀಕ್ಷೆಗಳಿಂದ ಗೊತ್ತಾಗಿದೆ. ಕೋವಿಡ್ ಬಂದು ಹೋಗಿ ಕೆಲ ತಿಂಗಳಾದರೂ ಇವರಿಗೆ ಹೆಚ್ಚು ಕೆಲಸ ಮಾಡಲು ಆಗುವುದಿಲ್ಲ. ಬಹಳ ಬೇಗ ಸುಸ್ತಾಗಿಬಿಡುತ್ತಾರೆ. ಹೆಚ್ಚು ನಡೆಯಲು ಆಗುವುದಿಲ್ಲ. ಸ್ವಲ್ಪ ಜಿಗಿದರೂ ಬಳಲಿ ಹೋಗುತ್ತಾರೆ. ಇವೆಲ್ಲವೂ ಲಾಂಗ್ ಕೋವಿಡ್ ಪರಿಣಾಮ ಎನ್ನಲಡ್ಡಿ ಇಲ್ಲ.

ಲಾಂಗ್ ಕೋವಿಡ್‌ಗೆ ಏನು ಕಾರಣ?
ಮಾಮೂಲಿಗಿಂತ ದೀರ್ಘಾವಧಿಯ ಕೋವಿಡ್ ಸೋಂಕಿಗೆ ಏನು ಕಾರಣ ಎಂಬುದು ಖಚಿತವಾಗಿ ವಿಜ್ಞಾನಿಗಳಿಗೆ ತಿಳಿದಿಲ್ಲ. ಆದರೆ, ಲಾಂಗ್ ಕೋವಿಡ್‌ಗೆ ಕಾರಣ ಪತ್ತೆ ಹಚ್ಚುವ ಸಲುವಾಗಿ ಸಂಶೋಧಕರು ರೋಗಿಯ ರಕ್ತ ಹೆಪ್ಪುಗಟ್ಟುವಿಕೆ, ದುರ್ಬಲ ರೋಗ ನಿರೋಧಕ ವ್ಯವಸ್ಥೆ, ದುರ್ಬಲ ಪಚನಕ್ರಿಯೆ ಇತ್ಯಾದಿಯನ್ನ ಅಧ್ಯಯನ ನಡೆಸುತ್ತಿದ್ದಾರೆ. ಇದರಿಂದ ನಿಖರವಾಗಿ ಕಾರಣ ಗೊತ್ತಾದರೆ ರೋಗಿಯಲ್ಲಿ ಲಾಂಗ್ ಕೋವಿಡ್ ರೋಗಲಕ್ಷಣವನ್ನು ಬೇಗನೇ ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗಬಹುದು.
(ಒನ್ಇಂಡಿಯಾ ಸುದ್ದಿ)












Click it and Unblock the Notifications