ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಮುಖ್ಯಮಂತ್ರಿ ಹುದ್ದೆಗೆ ಇರುವ ಅಧಿಕಾರ, ಸೌಲಭ್ಯವೇನು ಗೊತ್ತೇ?

|
Google Oneindia Kannada News

Recommended Video

ಎಲ್ಲರೂ ಉಪ-ಮುಖ್ಯಮಂತ್ರಿ ಆಗಬೇಕು ಎನ್ನುವುದು ಏಕೆ ಗೊತ್ತಾ..? | Oneindia Kannada

ಬೆಂಗಳೂರು, ಆಗಸ್ಟ್ 27: ರಾಜ್ಯದಲ್ಲಿನ ಬಿಜೆಪಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಗಿದೆ. ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಮತ್ತು ಡಾ. ಅಶ್ವತ್ಥ ನಾರಾಯಣ ನೂತನ ಉಪ ಮುಖ್ಯಮಂತ್ರಿಗಳಾಗಿರಲಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡಕ್ಕೂ ಪ್ರಾಮುಖ್ಯ ಸಿಗಬೇಕು ಎಂಬ ಕಾರಣಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿತ್ತು. ಡಾ.ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿದ್ದರು.

ಈ ಹಿಂದೆ ಬಿಜೆಪಿ ಸರ್ಕಾರ 2008ರಲ್ಲಿ ಬಂದಿದ್ದಾಗ ಕೂಡ ಎರಡು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಆಗ ಆರ್.ಅಶೋಕ್ ಮತ್ತು ಕೆ.ಎಸ್. ಈಶ್ವರಪ್ಪ ಈ ಹುದ್ದೆಗಳಲ್ಲಿ ವಿರಾಜಮಾನರಾಗಿದ್ದರು. ಈಗ ಅವರು ಸರ್ಕಾರದ ಸಂಪುಟದ ಭಾಗವಾಗಿದ್ದರೂ ಡಿಸಿಎಂ ಸ್ಥಾನ ಸಿಕ್ಕಿಲ್ಲ. ಉಪ ಮುಖ್ಯಮಂತ್ರಿ ಹುದ್ದೆಗೆ ಅನೇಕರು ಆಕಾಂಕ್ಷಿಗಳಾಗಿದ್ದರು. ಅವರಲ್ಲಿ ಒಬ್ಬರಿಗೂ ಈ ಸ್ಥಾನ ಸಿಕ್ಕಿಲ್ಲ. ಸಂಪುಟದಲ್ಲಿ ಅವಕಾಶ ಸಿಕ್ಕಿದ್ದರೂ ಉಪಮುಖ್ಯಮಂತ್ರಿ ಹುದ್ದೆ ಸಿಗದೆ ಇರುವುದಕ್ಕೆ ಈಶ್ವರಪ್ಪ, ಆರ್. ಅಶೋಕ್, ಶ್ರೀರಾಮುಲು ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಅಭಿಮಾನಿಗಳಲ್ಲಿಯೂ ಆಕ್ರೋಶ ಉಂಟಾಗಿದೆ.

ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ

ಹಾಗಾದರೆ ಉಪ ಮುಖ್ಯಮಂತ್ರಿ ಹುದ್ದೆ ಅಷ್ಟೊಂದು ಮುಖ್ಯವೇ? ಅನೇಕ ರಾಜ್ಯಗಳಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯೇ ಇಲ್ಲ. ಅದರಿಂದ ಪ್ರಯೋಜನವೇನು? ಅವರ ಅಧಿಕಾರಗಳೇನು? ಯಾಕೆ ಇಷ್ಟೊಂದು ಮಂದಿ ಆ ಹುದ್ದೆಗಾಗಿ ದುಂಬಾಲು ಬೀಳುತ್ತಿದ್ದಾರೆ? ಇತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.

ಸಾಂವಿಧಾನಿಕ ಮಾನ್ಯತೆ ಇಲ್ಲ

ಸಾಂವಿಧಾನಿಕ ಮಾನ್ಯತೆ ಇಲ್ಲ

ವಾಸ್ತವವಾಗಿ ಸಂವಿಧಾನದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯ ಉಲ್ಲೇಖವೇ ಇಲ್ಲ. ಅಂದರೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಸಂವಿಧಾನದ ಪ್ರಕಾರ ಇರುವುದು ಮುಖ್ಯಮಂತ್ರಿ ಮತ್ತು ಸಚಿವ ಹುದ್ದೆಗಳು ಮಾತ್ರ. ಈಗಿನ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಮುಖ್ಯಮಂತ್ರಿ ನಂತರದ ಸ್ಥಾನ ಎಂದೇ ಭಾವಿಸಲಾಗುತ್ತಿದೆ. ಸಚಿವ ಸ್ಥಾನ ನೀಡಿದರೂ ಸಾಲದು ಎಂಬುವವರಿಗೆ ಗೌರವಾರ್ಥವಾಗಿ ಉಪ ಮುಖ್ಯಮಂತ್ರಿ ಹುದ್ದೆ ನೀಡುವ ಸ್ಥಿತಿ ಬಂದಿದೆ. ಹಿಂದೊಮ್ಮೆ ಕರ್ನಾಟಕದಲ್ಲಿ ಇಬ್ಬರು ಡಿಸಿಎಂಗಳನ್ನು ಮಾಡಿದ್ದ ಬಿಜೆಪಿ ಸರ್ಕಾರ ಈ ಬಾರಿ ಮೂವರನ್ನು ನೇಮಿಸಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರದಲ್ಲಿ ಐವರು ಉಪ ಮುಖ್ಯಮಂತ್ರಿಗಳಿದ್ದಾರೆ.

164ನೇ ವಿಧಿಯ ಉಲ್ಲಂಘನೆ

164ನೇ ವಿಧಿಯ ಉಲ್ಲಂಘನೆ

ಸಂವಿಧಾನಿಕ ಮಾನ್ಯತೆಯೇ ಇರದ ಉಪಮುಖ್ಯಮಂತ್ರಿ ಹುದ್ದೆಗೆ ಹೇಗೆ ಪ್ರಮಾಣವಚನ ಬೋಧಿಸಲಾಗುತ್ತದೆ? ಇದುವರೆಗಿನ ಅನೇಕ ಸರ್ಕಾರಗಳಲ್ಲಿಯೂ ಸಚಿವ ಸ್ಥಾನದ ಜತೆಗೆ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗೆಯೇ ಸಂವಿಧಾನದ ಪ್ರತಿನಿಧಿಯಾಗಿ ರಾಜ್ಯಗಳಲ್ಲಿ ಇರುವ ರಾಜ್ಯಪಾಲರು ಕೂಡ ಅವರಿಗೆ ಪ್ರತಿಜ್ಞಾವಿಧಿಗಳನ್ನು ಬೋಧಿಸುತ್ತಿದ್ದಾರೆ. ಇದು ಸಂವಿಧಾನದ 164ನೇ ವಿಧಿಯ ಸ್ಪಷ್ಟ ಉಲ್ಲಂಘನೆ. ಹೀಗಿದ್ದರೂ ಇದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿದೆ.

ಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳುಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳು

ಸಚಿವನಾಗಿ ಮಾತ್ರವೇ ಪ್ರಮಾಣವಚನ

ಸಚಿವನಾಗಿ ಮಾತ್ರವೇ ಪ್ರಮಾಣವಚನ

ಸಾಮಾನ್ಯವಾಗಿ ಒಂದು ಸರ್ಕಾರ ರಚನೆಯಾದಾಗ ಅದರ ನೇತೃತ್ವ ವಹಿಸುವವರು 'ಮುಖ್ಯಮಂತ್ರಿ'ಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಅದರ ಹೊರತು ಯಾರೂ ತಮ್ಮ ಖಾತೆಗೆ ಅನುಗುಣವಾಗಿ ಪ್ರಮಾಣವಚನ ಸ್ವೀಕಾರ ಮಾಡುವುದಿಲ್ಲ. ಅಂದರೆ, ಗೃಹ ಸಚಿವ, ಹಣಕಾಸು ಸಚಿವ ಎಂಬ ಖಾತೆ ಹೆಸರು ಅಲ್ಲಿರುವುದಿಲ್ಲ. ಅವರು ಅವರು 'ಈ ರಾಜ್ಯದ ಸಚಿವನಾಗಿ' ಮಾತ್ರವೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಸಂವಿಧಾನದಲ್ಲಿ ಉಪ ಮುಖ್ಯಮಂತ್ರಿಗೆ ಮಾತ್ರವಲ್ಲ ಉಪ ಪ್ರಧಾನಿಗೂ ಯಾವುದೇ ವಿಶೇಷ ಅಧಿಕಾರ ಅಥವಾ ಕರ್ತವ್ಯಗಳಿಲ್ಲ.

ಉಪ ಪ್ರಧಾನಿ ಹುದ್ದೆಗೂ ಮಾನ್ಯತೆ ಇಲ್ಲ

ಉಪ ಪ್ರಧಾನಿ ಹುದ್ದೆಗೂ ಮಾನ್ಯತೆ ಇಲ್ಲ

ದೇಶ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಜವಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಸರ್ದಾರ್ ವಲ್ಲಬಾಯ್ ಪಟೇಲ್ ಅವರು ಉಪ ಪ್ರಧಾನಿಯಾಗಿದ್ದರು. 1987-1950ರವರೆಗೂ ಅವರು ಉಪ ಪ್ರಧಾನಿಯಾಗಿದ್ದರು. ಸಂವಿಧಾನ ಅಂಗೀಕಾರವಾದ ಬಳಿಕ ನೆಹರೂ ಅವರು ಪ್ರಧಾನಿಯಾಗಿರುವವರೆಗೂ ಉಪ ಪ್ರಧಾನಿ ಹುದ್ದೆ ಇರಲಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾದ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿ ಉಪ ಪ್ರಧಾನಿಯಾಗಿ ನೇಮಕವಾಗಿದ್ದರು. ಸರ್ದಾರ್ ಪಟೇಲ್ ಅವರನ್ನು ಒಳಗೊಂಡಂತೆ ಏಳು ಮಂದಿ ಉಪಪ್ರಧಾನಿಗಳನ್ನು ದೇಶ ಕಂಡಿದೆ. ಅವರು ಯಾರಿಗೂ ಸಾಂವಿಧಾನಿಕ ಮಾನ್ಯತೆ ಇರಲಿಲ್ಲ. ಹಾಗೆಯೇ ಲೆಕ್ಕಕ್ಕೆ ಸಿಗದಷ್ಟು ಮಂದಿ ಉಪ ಮುಖ್ಯಮಂತ್ರಿಗಳಾಗಿದ್ದಾರೆ.

ಹಿರಿಯರಿಗೆ ಸಿಗದ ಡಿಸಿಎಂ ಹುದ್ದೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?ಹಿರಿಯರಿಗೆ ಸಿಗದ ಡಿಸಿಎಂ ಹುದ್ದೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?

ಉಪ ಮುಖ್ಯಮಂತ್ರಿ ಏಕೆ?

ಉಪ ಮುಖ್ಯಮಂತ್ರಿ ಏಕೆ?

ಸಾಮಾನ್ಯವಾಗಿ ಮುಖ್ಯಮಂತ್ರಿ ಸರ್ಕಾರ ನಡೆಸುವಷ್ಟು ಶಕ್ತಿಯಿಲ್ಲದವರಾಗಿದ್ದರೆ ಅಥವಾ ಅದನ್ನು ನಿಯಂತ್ರಿಸುವುದು ಅವರೊಬ್ಬರಿಗೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದ್ದರೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿ ಕೆಲವು ಜವಾಬ್ದಾರಿಗಳನ್ನು ಅವರಿಗೆ ವಹಿಸಲಾಗುತ್ತದೆ. ಹಾಗೆಯೇ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರೆ ಎರಡೂ ಪಕ್ಷಗಳಿಗೆ ಸಮಾನ ಪ್ರಾತಿನಿಧ್ಯ ಕೊಡಲು ಗೌರವಾರ್ಥವಾಗಿ ಈ ಹುದ್ದೆ ನೀಡಲಾಗುತ್ತದೆ. ಸರ್ಕಾರದಲ್ಲಿ ಪ್ರಭಾವಿಯಾಗಿರುವ ಮತ್ತು ದೊಡ್ಡ ಹುದ್ದೆಯ ಆಕಾಂಕ್ಷಿಯಾಗಿರುವ ನಾಯಕರನ್ನು ಸಮಾಧಾನಗೊಳಿಸಲು ಈ ಹುದ್ದೆ ಸೃಷ್ಟಿಸಲಾಗುತ್ತಿದೆ.

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ!

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ!

ಈ ಮೊದಲು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದವರು ಯಾವುದಾದರೂ ಇಲಾಖೆಯ ಸಚಿವರಾಗಿ ಮಾತ್ರವೇ ಪ್ರಮಾಣ ವಚನ ಸ್ವೀಕರಿಸುತ್ತಿದ್ದರು. ಬಳಿಕ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ನೇಮಿಸಲಾಗಿದೆ ಎಂಬುದನ್ನು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಲಾಗುತ್ತಿತ್ತು. ಕಳೆದ ಬಾರಿ ಬಿಹಾರದಲ್ಲಿ ಲಾಲು ಪ್ರಸಾದ್ ಅವರ ಮಗ ತೇಜಸ್ವಿ ಪ್ರಸಾದ್ ಕೂಡ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರನ್ನು ಡಿಸಿಎಂ ಎಂದು ಘೋಷಿಸಲಾಗಿತ್ತು.

ರಾಜ್ಯದಲ್ಲಿ ಖಾತೆ ಹಂಚಿಕೆ ತಡವಾಗಿರುವುದರಿಂದ ಈಗ ಡಿಸಿಎಂ ಆಗಿ ಆಯ್ಕೆಯಾಗಿರುವ ಮೂವರ ಹೆಸರನ್ನು ಕೂಡ ಮಾಧ್ಯಮ ಪ್ರಕಟಣೆಯ ಮೂಲಕವೇ ತಿಳಿಸಲಾಗಿದೆ. ಆದರೆ, ಹೆಚ್ಚಿನವರು ಪ್ರಮಾಣವಚನದ ವೇಳೆಯೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದಾಗಿ ಹೇಳುತ್ತಾರೆ. ಆರ್. ಅಶೋಕ್ ಮತ್ತು ಕೆಎಸ್ ಈಶ್ವರಪ್ಪ 2008ರಲ್ಲಿ ಪ್ರಮಾಣವಚನದ ವೇಳೆ ಅದನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ ಇಲ್ಲವೇ ಎಂಬ ಚರ್ಚೆ ನಡೆಯುತ್ತಲೇ ಇದೆ.

ಡಿಸಿಎಂ ಮಾಡದ್ದಕ್ಕೆ ಶ್ರೀರಾಮುಲು, ಈಶ್ವರಪ್ಪ ಬೆಂಬಲಿಗರು ಹೀಗಂದ್ರು?ಡಿಸಿಎಂ ಮಾಡದ್ದಕ್ಕೆ ಶ್ರೀರಾಮುಲು, ಈಶ್ವರಪ್ಪ ಬೆಂಬಲಿಗರು ಹೀಗಂದ್ರು?

ಸ್ವಯಂ ಘೋಷಿತ ಉಪ ಪ್ರಧಾನಿ!

ಸ್ವಯಂ ಘೋಷಿತ ಉಪ ಪ್ರಧಾನಿ!

1989ರಲ್ಲಿ ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ದೇವಿಲಾಲ್ ಅವರು ಸಚಿವರಾಗಿ ಆಯ್ಕೆಯಾಗಿದ್ದರು. ಆಗಿನ ರಾಷ್ಟ್ರಪತಿ ಆರ್. ವೆಂಕಟರಮಣ ಅವರು ಪ್ರಮಾಣವಚನ ಬೋಧಿಸಿದಾಗ ದೇವಿಲಾಲ್ ಅವರು, ಸಚಿವರಾಗಿ ಎನ್ನುವ ಬದಲು 'ಉಪ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ' ಎಂದರು. ಅವರ ತಪ್ಪನ್ನು ತಿದ್ದಿದ ವೆಂಕಟರಮಣ ಅವರು 'ಮಂತ್ರಿಯಾಗಿ' ಎಂದು ಹೇಳಿದರೂ, ದೇವಿಲಾಲ್ ಎರಡನೆಯ ಬಾರಿಯೂ 'ಉಪ ಪ್ರಧಾನ ಮಂತ್ರಿಯಾಗಿ' ಎಂದೇ ಹೇಳಿದ್ದರು. ಕೊನೆಗೆ ವೆಂಕಟರಮಣ ಅವರು ಅಲ್ಲಿ ಗೊಂದಲ ಉಂಟಾಗದಂತೆ ಕಾಪಾಡಲು ಸುಮ್ಮನಾಗಿದ್ದರು.

ಈ ಪ್ರಮಾಣವಚನ ಘಟನೆ ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಕೆಎಂ ಶರ್ಮಾ ಎಂಬುವವರು ದೇವಿಲಾಲ್ ವಿರುದ್ಧ ದೂರು ಸಲ್ಲಿಸಿದರು. ದೇವಿಲಾಲ್ ಅವರನ್ನು ಉಪ ಪ್ರಧಾನಿ ಎಂದು ಕರೆದರೂ ಅವರು ಸಂಪುಟದ ಇತರೆ ಸದಸ್ಯರಂತೆ ಸಚಿವರಷ್ಟೇ. ಅವರಿಗೆ ಪ್ರಧಾನಿಯ ಯಾವುದೇ ಅಧಿಕಾರ ಇರುವುದಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಲಾಗಿತ್ತು.

ಡಿಸಿಎಂಗೂ ಝೀರೋ ಟ್ರಾಫಿಕ್ ಸೌಲಭ್ಯ

ಡಿಸಿಎಂಗೂ ಝೀರೋ ಟ್ರಾಫಿಕ್ ಸೌಲಭ್ಯ

ಸಾಮಾನ್ಯವಾಗಿ ಝೀರೋ ಟ್ರಾಫಿಕ್ ಸೇವೆಯು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ನೀಡಲಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ 2006ರಲ್ಲಿ 20-20 ಸರ್ಕಾರ ರಚಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದರು. ಆಗ ಉಪ ಮುಖ್ಯಮಂತ್ರಿಗೂ ಝೀರೋ ಟ್ರಾಫಿಕ್ ಸೌಲಭ್ಯ ನೀಡುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಝೀರೋ ಟ್ರಾಫಿಕ್ ಸೌಲಭ್ಯ ನೀಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು ಎಂದು ನಿರ್ಧಾರ ಕೈಗೊಳ್ಳಲಾಗಿತ್ತು.

ಹೆಚ್ಚಲಿದೆ ಟ್ರಾಫಿಕ್ ಸಂಕಟ

ಹೆಚ್ಚಲಿದೆ ಟ್ರಾಫಿಕ್ ಸಂಕಟ

ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಝೀರೋ ಟ್ರಾಫಿಕ್ ಸೌಲಭ್ಯವನ್ನು ಯಥೇಚ್ಛವಾಗಿ ಬಳಸಿದ್ದು ವಿವಾದ ಸೃಷ್ಟಿಸಿತ್ತು. ಈಗ ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಮೂವರು ಉಪಮುಖ್ಯಮಂತ್ರಿಗಳು- ಹೀಗೆ ಐವರು ಝೀರೋ ಟ್ರಾಫಿಕ್ ಬಳಸಿ ಓಡಾಡಿದರೆ ಬೆಂಗಳೂರಿನ ಜನರ ಗತಿಯೇನು ಎಂಬ ಪ್ರಶ್ನೆ ಎದುರಾಗಿದೆ. ಝೀರೋ ಟ್ರಾಫಿಕ್ ವ್ಯವಸ್ಥೆಯಿಂದಾಗಿ ಈಗಾಗಲೇ ಜನರು ಹೈರಾಣಾಗಿದ್ದಾರೆ. ರಾಜಕಾರಣಿಗಳು ತಮ್ಮ ಅಧಿಕಾರವನ್ನು ಅನುಭವಿಸಲು ಜನರ ಸಂಕಟ ಹೆಚ್ಚಿಸುವ ಸವಲತ್ತನ್ನು ಪಡೆದುಕೊಳ್ಳಬೇಕೇ? ಬೇರೆ ಅಧಿಕಾರವಿಲ್ಲದ ಉಪ ಮುಖ್ಯಮಂತ್ರಿ ಹುದ್ದೆಗೆ ಸಿಗುವುದು ಝೀರೋ ಟ್ರಾಫಿಕ್ ಸೌಲಭ್ಯ ಮಾತ್ರ. ಅದನ್ನು ಬಳಸಿಕೊಳ್ಳದೆ ಜನ ಪರವಾಗಿರಲು ಈ ಸಚಿವರು ವಿವೇಕ ತೋರುವರೇ? ನೋಡಬೇಕು.

English summary
The post of DCM is unconstitutional. It doesn't have any power or duty. Though the leaders fights for the post. Here is an explanatory article on DCM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X