ಸ್ವಾಗತ 'ಸಿಂಗಂ' ವಿಂಗ್ ಕಮಾಂಡರ್ ಅಭಿನಂದನ್, ನೀವೇ ನಿಜವಾದ ಹೀರೋ!
ಒಬ್ಬ ಉತ್ತಮ ಯುದ್ಧ ವಿಮಾನದ ಪೈಲಟ್ ಆಗಬೇಕಾದರೆ ಯಾವ ಗುಣಗಳಿರಬೇಕು? 'ಬ್ಯಾಡ್ ಅಟಿಟ್ಯೂಟ್'... ಇದು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಇತ್ತೀಚೆಗೆ ದೂರದರ್ಶನದ ಸಾಕ್ಷ್ಯಚಿತ್ರವೊಂದಕ್ಕೆ ನೀಡಿದ ದಿಟ್ಟ ಉತ್ತರ.
ಅವರ ಈ ದಿಟ್ಟ ಮನೋಭಾವ ಮತ್ತು ಭಾರತದ ಬಗ್ಗೆ ತಮಗಿರುವ ಅಪಾರ ಪ್ರೀತಿಯಿಂದಾಗಿ ಅಭಿನಂದನ್ ಅವರು, ಪಾಕಿಸ್ತಾನದಿಂದ ಭಾರತದ ಸೇನೆ ಗುರಿಯಾಗದಂತೆ ತಡೆದರು. ಭಾರತದ ಸೇನಾ ಆಸ್ತಿಗೆ ಹಾನಿಯಾಗದಂತೆ ಅವರು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಹೋದದ್ದು ಒಂದು ರೋಚಕ ಕಥೆ.
Breaking:ಪಾಕ್ ವಶದಲ್ಲಿರುವ ಪೈಲೆಟ್ ಅಭಿನಂದನ್ ಶುಕ್ರವಾರ ಬಿಡುಗಡೆ
ಅಂದು, ದೇಶದ ಗಡಿಯಲ್ಲಿ ಬುಧವಾರ 9.45ರ ಸುಮಾರಿಗೆ ಭಾರೀ ಕಟ್ಟೆಚ್ಚರ ವಹಿಸಲಾಗಿತ್ತು, ಪಾಕ್ ಸೇನೆಯ ದಾಳಿಯ ಬಗ್ಗೆ ರಾಡಾರ್ ಗಳು ಸೂಚನೆ ನೀಡಲು ಆರಂಭಿಸಿದ್ದವು. 10 ಗಂಟೆಯ ಹೊತ್ತಿಗೆ ಪಾಕಿಸ್ತಾನದ ವಾಯು ಸೇನೆಯ ಮೂರು ಎಫ್-16 ಯುದ್ಧ ವಿಮಾನಗಳು ಭಾರತದ ವಾಯು ಸೀಮೆಯನ್ನು ಉಲ್ಲಂಘಿಸಿ, ನೌಶೇರಾದ ಸೆಕ್ಟರ್ ನಲ್ಲಿ ಬಾಂಬ್ ಹಾಕಿದವು. ಕೂಡಲೆ ಕಾರ್ಯಾಚರಣೆಗಿಳಿದ ಭಾರತೀಯ ವಾಯು ಸೇನೆ (ಐಎಎಫ್) ತನ್ನ ಮಿಗ್ 21 ತಂಡವನ್ನು ಸನ್ನದ್ಧಗೊಳಿಸಿತು.
"ಸರ್, ನಾವೆಲ್ಲ ಸಿದ್ಧರಾಗಿದ್ದೇವೆ" ಎಂದ ವಿಂಗ್ ಕಮಾಂಡರ್ ಅಭಿನಂದನ್ ಅವರು, ಮಿಗ್ 21 ಬೈಸನ್ ಏರಿ ಯುದ್ಧೋತ್ಸಾಹದಿಂದ ಹೊರಟೇಬಿಟ್ಟರು. ಅತ್ಯಾಧುನಿಕ ಎಫ್-16ಗಳಿಗೆ ಹೋಲಿಸಿದರೆ ಪುರಾತನ ಮಿಗ್ ಬೈಸನ್ ಯುದ್ಧ ವಿಮಾನ ಹಾರಿಸುವುದು ಭಾರೀ ಚಾಲೆಂಜಿಂಗ್ ಆಗಿತ್ತು ಮತ್ತು ವೈರಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಸುಲಭದ್ದಾಗಿರಲಿಲ್ಲ.
ಭಾರತದ ಬ್ರಿಗೇಡ್ ಹೆಡ್ ಕ್ವಾರ್ಟರ್ ಮತ್ತು ಭೂಸೇನೆಯ ನೆಲೆಗಳ ಮೇಲೆ ದಾಳಿ ಮಾಡುವುದು ಪಾಕಿಸ್ತಾನದ ಉದ್ದೇಶವಾಗಿತ್ತು. ವಾಯುವೇಗದಿಂದ ನುಗ್ಗಿ ಬರುತ್ತಿದ್ದ ವೈರಿಗಳ ವಿಮಾನಗಳನ್ನು ತಡೆಗಟ್ಟುವ ಕೈಂಕರ್ಯದಲ್ಲಿ ಭಾರತೀಯ ವಾಯು ಸೇನೆ ನಿರತವಾಗಿತ್ತು. ಶ್ರೀನಗರದಿಂದ ಎರಡು ಮಿಗ್ 21ಗಳು ಮತ್ತು ಒಂದು ಸುಖೋಯ್ 30 ಎಂಕೆಐ ಆಗಸಕ್ಕೆ ನೆಗೆದವು. ಒಂದು ಎಫ್-16ಡಿ ವಿಮಾನವನ್ನು ತಡೆಗಟ್ಟಲು ಅಭಿನಂದನ್ ಅವರು ಮಿಗ್ 21 ವಿಮಾನವನ್ನು ಸರಿಯಾದ ಸಮಯಕ್ಕೆ ಉಡಾಯಿಸಿಕೊಂಡು ಹೋದರು.
ಅಭಿನಂದನ್ ಸ್ವಾಗತಕ್ಕೆ ಸೇನೆ ಸಿದ್ಧ, ಪ್ರತಿದಾಳಿಗೂ ಸನ್ನದ್ಧ
ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದ ಎಫ್-16 ಜೆಟ್ ಮೇಲೆ ಆರ್-73 ಏರ್ ಮಿಸೈಲ್ ಪ್ರಯೋಗಿಸುವ ಮೂಲಕ ದಾಳಿ ನಡೆಸಿದ್ದು ಅವರ ಧೈರ್ಯಕ್ಕೆ ಹಿಡಿದ ಕನ್ನಡಿ. ಪಾಕಿಸ್ತಾನಿ ಏರ್ ಫೋರ್ಸ್ ದಾಳಿಯಲ್ಲಿ ಕೇವಲ ಎಫ್-16 ಮಾತ್ರ ಇರಲಿಲ್ಲ. ಅವುಗಳಿಗೆ ಬೆಂಬಲವಾಗಿ ನಾಲ್ಕು ಮಿರಾಜ್-3 ಯುದ್ಧ ವಿಮಾನ ಮತ್ತು ನಾಲ್ಕು ಚೀನಾ ನಿರ್ಮಾಣದ ಜೆಎಫ್-17 ಥಂಡರ್ ಫೈಟರ್ ಗಳಿದ್ದವು. ಇಷ್ಟಿದ್ದೂ ಏಕಾಂಗಿಯಾಗಿ ದಾಳಿ ನಡೆಸಿದ್ದಕ್ಕೆ ಅಭಿನಂದನ್ ಅವರನ್ನು ಅಭಿನಂದಿಸಲೇಬೇಕು.
ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....
ಅತ್ಯಾದುನಿಕ ಎಫ್-16ಗೆ ಅಷ್ಟೊಂದು ಬೆಂಬಲವಿದ್ದರೂ ಪಾಕಿಸ್ತಾನಿ ಜೆಟ್ ಅನ್ನು ಹಿಮ್ಮೆಟ್ಟಿಸಲು ಅಭಿನಂದನ್ ಭಾರೀ ರಿಸ್ಕ್ ತೆಗೆದುಕೊಂಡಿದ್ದರು. ಪಾಕಿಸ್ತಾನಿ ಫೈಟರ್ ಜೆಟ್ ಗಳ ಬಗ್ಗೆ ಫಾರ್ಮೇಷನ್ ನಲ್ಲಿದ್ದ ಇತರ ಪೈಲಟ್ ಗಳು ಅಭಿನಂದನ್ ಅವರನ್ನು ಎಚ್ಚರಿಸಿದರು. ಗಟ್ಟಿಗುಂಡಿಗೆಯ ಅಭಿನಂದನ್ ಇಟ್ಟ ಗುರಿಯಿಂದ ಅತ್ತಿತ್ತ ಸರಿಯದೆ ಸಿಂಹದಂತೆ ನುಗ್ಗಿದರು. ಎಫ್-16 ಅನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾದ ಅಭಿನಂದನ್, ಆರ್-73 ಏರ್ ಮಿಸೈಲ್ ಅನ್ನು ಶೂಟ್ ಮಾಡಿದರು. ಇದರಿಂದ ಎಫ್-16 ಧರೆಗುರುಳಿದರೂ ಅವರ ಮಿಗ್ ಪಾಕ್ ಮಿಸೈಲ್ ಗೆ ಗುರಿಯಾಗಬೇಕಾಯಿತು. ಅನ್ಯ ಮಾರ್ಗವಿಲ್ಲದೆ ಅವರು ವಿಮಾನದಿಂದ ನೆಗೆದು ಪಾಕಿಸ್ತಾನದ ಬಳಿಯಿರುವ ಗಡಿ ನಿಯಂತ್ರಣಾ ರೇಖೆಯಾಚೆ ಇಳಿದರು ಮತ್ತು ಬಂಧಿತರಾದರು.
ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ
ಭಾರತದ ಸೇನಾ ನೆಲೆಯನ್ನು ಧ್ವಂಸ ಮಾಡುವುದು ಪಾಕಿಸ್ತಾನದ ಹೆಗ್ಗುರಿಯಾಗಿದ್ದರೂ, ವಿಂಗ್ ಕಮಾಂಡರ್ 'ಹೀರೋ' ಅಭಿನಂದನ್ ಅವರ ಪ್ರತಿದಾಳಿಯಿಂದ ಮತ್ತು ಭಾರತೀಯ ವಾಯು ಸೇನೆಯ ಬಲದಿಂದಾಗಿ ಪಾಕಿಸ್ತಾನ ಎಲ್ಲ ಗುರಿಗಳನ್ನು ತಲುಪದೆ ವಿಫಲವಾಯಿತು. ಸೆರೆಯಾಗುವ ಮುನ್ನ ಧೀರ ಸೈನಿಕ ಅಭಿನಂದನ್ ಅವರು ಅಪಾರ ಧೈರ್ಯವನ್ನು ಪ್ರದರ್ಶಿಸಿದರು ಮತ್ತು ಸುಲಭವಾಗಿ ವೈರಿಗಳಿಗೆ ಒಪ್ಪಿಸಿಕೊಳ್ಳಲಿಲ್ಲ. ತಮ್ಮನ್ನು ಹಿಡಿದವರ ವಿರುದ್ಧ ಹೋರಾಡಿದರು, ಗಾಳಿಯಲ್ಲಿ ಗುಂಡು ಹಾರಿಸಿದರು, ಪ್ರಮುಖ ದಾಖಲೆಗಳು ಪಾಕ್ ಸೈನಿಕರಿಗೆ ಸಿಗದಂತೆ ನುಂಗಿದರು.
ದಾಳಿಯಿಂದ ಅವರು ಜರ್ಝರಿತರಾಗಿದ್ದರೂ ಇದೆಲ್ಲವನ್ನೂ ಯಶಸ್ವಿಯಾಗಿ ಮಾಡಿದರು. ಸ್ಥಳೀಯರು ಅವರನ್ನು ಸುತ್ತುವರೆದು ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಪ್ರಯೋಜನವಾಗಲಿಲ್ಲ. ಅಲ್ಲೇ ಇದ್ದ ನೀರಿನ ಗುಂಡಿಯಲ್ಲಿ ಇಳಿದ ಅವರು ತಮ್ಮ ಬಳಿಯಿದ್ದ ದಾಖಲೆ ಮತ್ತು ನಕ್ಷೆಯನ್ನು ತೆಗೆದರು. ಒಂದಿಷ್ಟನ್ನು ಅವರು ನುಂಗಿದರೆ ಉಳಿದಿದ್ದನ್ನು ನೀರಿನಲ್ಲಿ ನೆನೆಸಿ, ವೈರಿಗಳಿಗೆ ಅದರ ಯಾವುದೇ ಪ್ರಮುಖ ವಿವರಗಳು ಅಭಿನಂದನ್ ಸಿಗದಂತೆ ಮಾಡಿದ್ದು ಪ್ರಶಂಸನೀಯ.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ಸುಮಾರು 16 ವರ್ಷಗಳ ಅನುಭವವಿರುವ ಅಭಿನಂದನ್ ಅವರು ಚೆನ್ನೈಯವರು. ಅವರು ಮಾಜಿ ಫೈಟರ್ ಪೈಲಟ್, ಏರ್ ಮಾರ್ಷಲ್ ಸಿಂಹಕುಟ್ಟಿ ವರ್ಧಮಾನ್ ಅವರ ಹೆಮ್ಮೆಯ ಮಗ. ಅವರು 2000ರಲ್ಲಿ ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, 2004ರಲ್ಲಿ ಫೈಟರ್ ಪೈಲಟ್ ಆಗಿ ದೇಶ ಸೇವೆಯಲ್ಲಿ ನಿರತರಾದರು. ಅಭಿನಂದನ್ ಕೊಯಮತ್ತೂರಿನ ಅಮತವಾಟಿನಗರದ ಸೈನಿಕ್ ವೆಲ್ಫೇರ್ ಶಾಲೆಯ ವಿದ್ಯಾರ್ಥಿಯಾಗಿದ್ದರು. ಅವರು ಮಿಗ್ 21ಗಳ ಪೈಲಟ್ ಆಗುವ ಮುನ್ನ ಸುಖೋಯ್ 30 ಎಂಕೆಐ ಪೈಲಟ್ ಕೂಡ ಆಗಿದ್ದರು.
ಅಭಿನಂದನ್ ಅವರು, 1973ರಲ್ಲಿಯೇ ಫೈಟರ್ ಪೈಲಟ್ ಆಗಿದ್ದ ತಮ್ಮ ತಂದೆಯಿಂದ ಪ್ರೇರಿತರಾಗಿದ್ದರು. ಅವರು ಸುಮಾರು 4,000 ಗಂಟೆ ವಿಮಾನ ಹಾರಿಸಿದ ಅನುಭವ ಮತ್ತು ಶ್ರೇಯವನ್ನು ಪಡೆದಿದ್ದಾರೆ. ಸಂಸತ್ತಿನ ಮೇಲೆ ದಾಳಿ ನಡೆದ ನಂತರ, 2001ರ ಪರಾಕ್ರಮ ಆಪರೇಷನ್ ಸಮಯದಲ್ಲಿ ಅಭಿನಂದನ್ ತಂದೆ ಪಶ್ಚಿಮ ಸೆಕ್ಟರ್ ಮುಖ್ಯಸ್ಥರಾಗಿದ್ದರು. ತಮ್ಮ ತಂದೆಯಿಂದಲೇ ಧೈರ್ಯ ಮತ್ತು ಶೌರ್ಯವನ್ನು ಬಳುವಳಿಯಾಗಿ ಪಡೆದಿದ್ದಾರೆ.
ಅಭಿನಂದನ್ ಅವರ ತಾಯಿಯವರು ವೈದ್ಯೆಯಾಗಿದ್ದು, ವಿಶ್ವದಾದ್ಯಂತ ಸಂಚರಿಸಿ, ಸಂಘರ್ಷವಿರುವ ಪ್ರದೇಶಗಳಿಗೆ ಭೇಟಿ ನೀಡಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅಭಿನಂದನ್ ಅವರ ಪತ್ನಿ ತನ್ವಿ ಮಾರ್ವಾ ಅವರು ಕೂಡ ಭಾರತೀಯ ವಾಯು ಸೇನೆಯಲ್ಲಿ ಸ್ಕ್ವ್ಯಾಡ್ರನ್ ಲೀಡರ್ ಆಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಹಲವಾರು ಶೌರ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಸೇವೆಗೆ ಸಮರ್ಪಿಸಿಕೊಂಡಿರುವ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
2011ರಲ್ಲಿ ದೂರದರ್ಶನದ ಸಾಕ್ಷ್ಯಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಅಭಿನಂದನ್ ಅವರು, ಯಶಸ್ವಿ ಸುಖೋಯ್ 30 ಪೈಲಟ್ ಆಗಬೇಕಾದರೆ ಯಾವ ಗುಣಗಳಿರಬೇಕು ಎಂಬ ಪ್ರಶ್ನೆ ಕೇಳಿದಾಗ, ಮುಗುಳ್ನಗುತ್ತಲೇ, 'ಬ್ಯಾಡ್ ಅಟಿಟ್ಯೂಡ್. ನಾವು ಪಡೆಯುವ ಅತ್ಯಂತ ಕಠಿಣ ತರಬೇತಿಯಿಂದಲೇ ಯಶಸ್ವಿಯಾಗಲು ಸಾಧ್ಯ' ಎಂದು ಹೇಳಿದ್ದರು.
ಅವರ ಈ ಅಟಿಡ್ಯೂಡ್ ನಿಂದಾಗಿಯೇ ಅವರನ್ನು ಅವರ ಸಹೋದ್ಯೋಗಿಗಳು ಸಿಂಗಂ (ಸಿಂಹ) ಎಂದು ಕರೆಯುತ್ತಾರೆ, ಹೊಗಳುತ್ತಾರೆ. ಭಾರತಕ್ಕೆ ಸ್ವಾಗತ ಸುಸ್ವಾಗತ ವಿಂಗ್ ಕಮಾಂಡರ್ ಅಭಿನಂದನ್, ನೀವು ಭಾರತದ ನಿಜವಾದ ಹೀರೋ.