ತಪ್ಪಲೆ ನೀರಿನಲ್ಲಿ ಕುಳಿತು ವರುಣ ಜಪ; ಬ್ರಾಹ್ಮಣ್ಯಕ್ಕೆ ಮಾಡಿದ ಅವಮಾನ: ಅಮ್ಮಣ್ಣಾಯ
ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಬೆಂಗಳೂರಿನ ಹಲಸೂರು ಸೋಮೇಶ್ವರ ದೇವಾಲಯದಲ್ಲಿ ಗುರುವಾರದಂದು ವರುಣ ಜಪ, ಯಜ್ಞ ಮಾಡಿರುವುದು ಸುದ್ದಿಯಾಗಿದೆ. ಯಜ್ಞ ಮಾಡುತ್ತಿರುವ ಫೋಟೋ ಜತೆಗೆ ದೊಡ್ಡದಾದ ಎರಡು ಪ್ರತ್ಯೇಕವಾದ ದೊಡ್ಡ ತಪ್ಪಲೆಯಲ್ಲಿ ನೀರು ತುಂಬಿ, ಅದರೊಳಗೆ ಇಬ್ಬರು ಕುಳಿತು, ಮೊಬೈಲ್ ಫೋನ್ ನೋಡಿಕೊಂಡು ಏನನ್ನೋ 'ಓದುತ್ತಿರುವುದು' ಕಂಡುಬರುತ್ತದೆ.
ಈ ಬಗ್ಗೆ ಭಾರೀ ಗೇಲಿ ಹಾಗೂ ವ್ಯಂಗ್ಯ ವ್ಯಕ್ತವಾಗಿದೆ. ಮೊದಲನೆಯದಾಗಿ ವರುಣ ಜಪ ಮಾಡುವ ಕ್ರಮ ಇದಲ್ಲ. ಹೀಗೆ ಮೊಬೈಲ್ ಫೋನ್ ನೋಡಿಕೊಂಡು, ಓದುವುದು ಹಾಗೂ ತಪ್ಪಲೆಯಲ್ಲಿ ನೀರು ತುಂಬಿಸಿ, ಅದರೊಳಗೆ ಕುಳಿತುಕೊಳ್ಳುವುದು ಹಾಸ್ಯಾಸ್ಪದ ಎನ್ನಲಾಗುತ್ತಿದೆ.

ಈ ಬಗ್ಗೆ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಿದಾಗ, ಇಂಥದ್ದನ್ನೆಲ್ಲ ನೋಡಿದಾಗ ನಗು ಬರುತ್ತದೆ ಅಷ್ಟೇ. ಮೊಬೈಲ್ ಫೋನ್ ನಲ್ಲಿ ನೋಡಿಕೊಂಡು ಓದುವುದೇ ಅಸಹನೀಯ. ಇನ್ನು ಅಂಥ ದೊಡ್ಡ ತಪ್ಪಲೆಯಲ್ಲಿ ನೀರು ತುಂಬಿ, ಅದರೊಳಗೆ ಕುಳಿತು ಮಂತ್ರ ಪಠಣ ಮಾಡುವುದು ಬ್ರಾಹ್ಮಣ್ಯಕ್ಕೆ ಮಾಡುವ ಅವಮಾನ ಎಂದರು.
ಹರಿಯುವ ನೀರಿನಲ್ಲಿ ಎದೆಯ ಮಟ್ಟದವರೆಗೆ ನೀರು ಇರುವಂತೆ ನಿಂತುಕೊಂಡು, ಜಪ- ತಪ ಅನುಷ್ಠಾನ ಮಾಡುವುದನ್ನು ನಾನು ಕೇಳಿದ್ದೇನೆ ಹಾಗೂ ನೋಡಿದ್ದೇನೆ. ಇದಕ್ಕೆ ಶಾಸ್ತ್ರ ಪ್ರಮಾಣವನ್ನೂ ನೀಡಬಹುದು. ಅದರೆ ಹೀಗೆಲ್ಲ ಬೇರೆಯವರು ಗೇಲಿ ಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಹರಿಯುವ ನೀರಿನಲ್ಲಿ ಅಯಸ್ಕಾಂತೀಯ ಶಕ್ತಿ ಇರುತ್ತದೆ. ಹಾಗೂ ನೀರಿನಲ್ಲಿ ಅಲ್ಪ್ ಕಾಲವಾದರೂ ಆ ರೀತಿ ಇದ್ದಲ್ಲಿ ಒಂದು ಬಿಂದುವಷ್ಟಾದರೂ ಮೂತ್ರ ವಿಸರ್ಜನೆ ಆಗುತ್ತದೆ. ಆ ರೀತಿಯ ದೋಷವನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ? ಕೆಲವರು ತೋರಿಕೆಗಾಗಿ ವರುಣ ಜಪ ಮಾಡುತ್ತೇನೆ, ಮಳೆ ತರಿಸುತ್ತೇನೆ ಎನ್ನುವವರಿದ್ದಾರೆ. ಇಂಥವರಿಂದ ಕೆಲವು ಸಜ್ಜನರಿಗೂ ಕೆಟ್ಟ ಹೆಸರು ಬರುತ್ತದೆ. ಜನರು ಸಹ ಯಾವುದು ಸರಿ ಹಾಗೂ ತಪ್ಪು ಎಂಬ ಬಗ್ಗೆ ಜ್ಞಾನ ಬೆಳೆಸಿಕೊಳ್ಳಬೇಕು.
ಕೆಲವು ಅಜ್ಞಾನಿಗಳನ್ನು ನೋಡಿ, ಬ್ರಾಹ್ಮಣರೆಲ್ಲ ಹೀಗೇ ಎಂದು ನಿರ್ಧರಿಸುವ ಪರಿಪಾಠವೂ ನಿಲ್ಲಬೇಕು ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದರು.












Click it and Unblock the Notifications