ಗೆದ್ದು-ಸೋತ ಬಿಜೆಪಿ: ಪ್ರಧಾನಿಗೆ ತಲುಪಿದ ಉತ್ತರ ಪ್ರದೇಶದ ಅಸಲಿ ಲೆಕ್ಕಾಚಾರ!
ಲಕ್ನೋ, ಏಪ್ರಿಲ್ 22: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮುಖ್ಯ ಕಾರಣವಾಗಿದ್ದು ಏನು ಎಂಬುದರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿವರವಾದ ಮಾಹಿತಿಯನ್ನು ಕಳುಹಿಸಿ ಕೊಡಲಾಗಿದೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಗೆಲುವಿಗೆ ಬಹುಜನ ಸಮಾಜವಾದಿ ಪಕ್ಷದ ಮತಗಳ ಬದಲಾವಣೆ ಮತ್ತು ಫ್ಲೋಟಿಂಗ್ ವೋಟುಗಳೇ ಪ್ರಾಥಮಿಕ ಕಾರಣವಾಗಿದೆ. ಅದೇ ರೀತಿ ಓಬಿಸಿ ಮತಗಳು ಬಿಜೆಪಿಗೆ ವಿರುದ್ಧವಾಗಿದ್ದು, ಮಿತ್ರಪಕ್ಷಗಳ ಮತಗಳ ಪ್ರಮಾಣ ಹೆಚ್ಚಾಗಿರುವುದರಿಂದ ಬಿಜೆಪಿಯ ಮತಗಳು ಕುಸಿಯುವುದಕ್ಕೆ ಕಾರಣವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ. ಅದಾಗ್ಯೂ, ಬಿಜೆಪಿಯು ತನ್ನ ಮತ ಪ್ರಮಾಣದಲ್ಲಿ ಹಿನ್ನಡೆ ಅನುಭವಿಸಿದೆ. ಸಮಾಜವಾದಿ ಪಕ್ಷ ಹಾಗೂ ಆರ್‌ಎಲ್‌ಡಿ ಮೈತ್ರಿಕೂಟವು ಹೆಚ್ಚು ಮುನ್ನಡೆ ಸಾಧಿಸಿದೆ. ಪ್ರಧಾನಿ ಮೋದಿಯವರಿಗೆ ಬಿಜೆಪಿಯು ಸಲ್ಲಿಸಿದ ವರದಿಯಲ್ಲಿ ಏನೆಲ್ಲಾ ಅಂಶಗಳು ಉಲ್ಲೇಖವಾಗಿವೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಪ್ರಧಾನಿಗೆ 80 ಪುಟಗಳ ವರದಿ
ಪ್ರಧಾನ ಮಂತ್ರಿ ಕಚೇರಿಯ ಪ್ರಶ್ನೆಗೆ 80 ಪುಟಗಳ ವರದಿಯನ್ನು ಪ್ರತಿಕ್ರಿಯೆಯಾಗಿ ಕಳುಹಿಸಲಾಗಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷ ಅಪ್ನಾ ದಳ (ಎಸ್) ಮತ್ತು ನಿಶಾದ್ ಪಕ್ಷಗಳು ಒಟ್ಟು 273 ಸ್ಥಾನಗಳನ್ನು ಗೆಲ್ಲುವುದಕ್ಕೆ ಸಹಾಯವಾದ ಅಂಶಗಳೇನು ಎಂಬುದನ್ನು ವಿವರಿಸಲಾಗಿದೆ. ಇದರ ಜೊತೆಗೆ ಪ್ರತಿಪಕ್ಷಗಳು ಗೆದ್ದ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣವಾದ ಅಂಶಗಳೇನು ಎಂಬುದನ್ನು ಹಂತ-ಹಂತವಾಗಿ ಪರಾಮರ್ಶಿಸಲಾಗುತ್ತಿದೆ.

ಬಿಜೆಪಿಗೆ ಬೆಂಬಲ ನೀಡಲಿಲ್ಲ ಮಿತ್ರಪಕ್ಷಗಳ ಮತಗಳು
ಬಿಜೆಪಿ ಮಿತ್ರಪಕ್ಷಗಳಾದ ಅಪ್ನಾ ದಳ (ಕುರ್ಮಿಗಳು) ಮತ್ತು ನಿಶಾದ್ (ನಿಶಾದ್) ಪಕ್ಷವನ್ನು ಬೆಂಬಲಿಸುವ ಜಾತಿಯ ಮತದಾರರು ಬಿಜೆಪಿಗೆ ಬೆಂಬಲಿಸಲಿಲ್ಲ. ಆದರೆ ಬಿಜೆಪಿಯ ಮತದಾರರು ಮಿತ್ರಪಕ್ಷಗಳಿಗೆ ಬೆಂಬಲಿಸಿದವು. ಈ ಹಿನ್ನೆಲೆ 2017ರಲ್ಲಿ ಹೋಲಿಸಿದರೆ ಬಿಜೆಪಿಗಿಂತ ಬಿಜೆಪಿಯ ಮಿತ್ರಪಕ್ಷಗಳ ಮತಗಳ ಪ್ರಮಾಣ ಹೆಚ್ಚಾಯಿತು ಎಂದು ಬಿಜೆಪಿಯು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿರತ್ತು ವಿಧಾನಸಭೆ ಕ್ಷೇತ್ರದಲ್ಲಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸೋಲಿಗೆ ಈ ಜಾತಿಗಳ ಬೆಂಬಲದ ಕೊರತೆಯೇ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.

ಯಾವ ಜಾತಿಗಳು ಬಿಜೆಪಿಗೆ ಬೆಂಬಲ ನೀಡಲಿಲ್ಲ?
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಬಿಜೆಪಿಗೆ ಓಬಿಸಿಯ ಹಲವು ಜಾತಿಯ ಮತದಾರರು ಮತ ನೀಡಲಿಲ್ಲ. ಕುಶ್ವಾಹ, ಮೌರ್ಯ, ಸೈನಿ, ಕುರ್ಮಿ, ನಿಶಾದ್, ಪಾಲ್, ಶಾಕ್ಯ, ರಾಜ್‌ಭರ್‌ನಂತಹ ವಿವಿಧ ಒಬಿಸಿ ಜಾತಿಗಳು ಹೆಚ್ಚಾಗಿ ಬಿಜೆಪಿಗೆ ಮತ ಹಾಕಲಿಲ್ಲ. ಅದರ ಬದಲಿಗೆ ಎಸ್‌ಪಿ ಮೈತ್ರಿಕೂಟಕ್ಕೆ ಮತಗಳು ಹೋದವು ಎಂದು ವರದಿಯು ಸ್ಪಷ್ಟವಾಗಿ ಹೇಳುತ್ತದೆ. ಆದರೆ 2017ರಲ್ಲಿ ಈ ಜಾತಿಗಳು ಬಿಜೆಪಿಗೆ ಬೆಂಬಲ ನೀಡಿದ್ದವು.

ಸಮಾಜವಾದಿ ಪರವಾಗಿ ಮುಸ್ಲಿಂ ಸಮುದಾಯಗಳ ಮತ ಧ್ರುವೀಕರಣ
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಮುಸ್ಲಿಂ ಮತಗಳ ಧ್ರುವೀಕರಣವು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. 2022ರ ಚುನಾವಣೆಗೆ ಮುಂಚಿತವಾಗಿ ಎರಡು ತಿಂಗಳ ಅವಧಿಯ ಸದಸ್ಯತ್ವ ಅಭಿಯಾನದ ನಡೆಸಲಾಗಿತ್ತು. ಇದರ ಹೊರತಾಗಿಯೂ 2017ಕ್ಕೆ ಹೋಲಿಸಿದರೆ ಬಿಜೆಪಿ ಸ್ಥಾನಗಳು ಕಡಿಮೆಯಾಗಿವೆ. ಈ ಕಾರಣ ಪಕ್ಷದ ನಾಯಕತ್ವವು ಕಳವಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷ ಅಭಿಯಾನದಲ್ಲಿ, ಬಿಜೆಪಿಯು ರಾಜ್ಯದಲ್ಲಿ ಸುಮಾರು 80 ಲಕ್ಷ ಹೊಸ ಸದಸ್ಯರನ್ನು ಸೇರಿಸಿದೆ. ಅದರ ಒಟ್ಟು ನೋಂದಾಯಿತ ಸದಸ್ಯರ ಸಂಖ್ಯೆ 2.9 ಕೋಟಿಗೆ ತಲುಪಿದೆ. 2019ರಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ, ಹೋಲಿಸಿದರೆ, ಪಕ್ಷವು ರಾಜ್ಯದಲ್ಲಿ 30 ಲಕ್ಷ ಹೊಸ ಸದಸ್ಯರನ್ನು ಸೇರಿಸಿದೆ.

ಉತ್ತರ ಪ್ರದೇಶದಲ್ಲಿ ಬಹುಸಂಖ್ಯಾತರು ಬಿಜೆಪಿಗೆ ಬೆಂಬಲಿಸಲಿಲ್ಲ
ಸರ್ಕಾರದ ವಿವಿಧ ಯೋಜನೆಗಳ ಅಂದಾಜು 9 ಕೋಟಿ ಫಲಾನುಭವಿಗಳು ಯಾವ ಪಕ್ಷಕ್ಕೆ ಮತ ನೀಡಿದ್ದಾರೆ ಎನ್ನುವುದನ್ನೂ ಅವಲೋಕಿಸಲಾಗಿದೆ. ಎನ್‌ಡಿಎಯ ಕಲ್ಯಾಣ ಯೋಜನೆಗಳನ್ನು ಹೊಗಳಿದ್ದರೂ ಬಹುಸಂಖ್ಯಾತರು ರಾಜಕೀಯವಾಗಿ ಬಿಜೆಪಿಯನ್ನು ಬೆಂಬಲಿಸಲಿಲ್ಲ ಎಂಬುದನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸಿದೆ. ಘಾಜಿಪುರ, ಅಂಬೇಡ್ಕರ್ ನಗರ ಮತ್ತು ಅಜಂಗಢ ಜಿಲ್ಲೆಗಳಲ್ಲಿ ಬಿಜೆಪಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ಮೂರು ಜಿಲ್ಲೆಗಳ 22 ಸ್ಥಾನಗಳಲ್ಲಿ ಒಂದೇ ಒಂದು ಕ್ಷೇತ್ರಗಳನ್ನು ಗೆದ್ದುಕೊಳ್ಳುವುದಕ್ಕೆ ಆಗಿಲ್ಲ. ಅಜಂಗಢ ಮತ್ತು ಅಂಬೇಡ್ಕರ್ ನಗರದಲ್ಲಿ ಎಸ್‌ಪಿ ಎಲ್ಲಾ ಸ್ಥಾನಗಳನ್ನು ಗೆದ್ದುಕೊಂಡರೆ, ಅದು ಘಾಜಿಪುರದ ಏಳು ಕ್ಷೇತ್ರಗಳಲ್ಲಿ ಐದರಲ್ಲಿ ಗೆದ್ದುಕೊಂಡಿದೆ. ಅದರ ಮಿತ್ರ ಪಕ್ಷವಾದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವು ಉಳಿದ ಎರಡರಲ್ಲಿ ವಿಜಯ ಪತಾಕೆ ಹಾರಿಸಿದೆ.

ಅಂಚೆ ಮತ ಪಡೆಯುವಲ್ಲೂ ಸಮಾಜವಾದಿ ಪಕ್ಷವೇ ಮುಂದೆ
ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯು 311 ಕ್ಷೇತ್ರಗಳಲ್ಲಿ ಬಿಜೆಪಿಯು ಕಡಿಮೆ ಅಂಚೆ ಮತಗಳನ್ನು ಪಡೆದುಕೊಂಡಿದೆ. ಸಮಾಜವಾದಿ ಮೈತ್ರಿಕೂಟವು ತನಗಿಂತ ಹೆಚ್ಚು ಅಂಚೆ ಮತಗಳನ್ನು ಪಡೆದಿರಲು ಕಾರಣವೇನು ಎಂಬುದನ್ನು ಬಿಜೆಪಿ ಸೂಕ್ಷ್ಮವಾಗಿ ಗಮನಿಸಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟು 4.42 ಲಕ್ಷ ಅಂಚೆ ಮತಗಳ ಪೈಕಿ ಎಸ್‌ಪಿ ಮೈತ್ರಿಕೂಟ 2.25 ಲಕ್ಷ ಮತ್ತು ಬಿಜೆಪಿ ಮೈತ್ರಿಕೂಟವು 1.48 ಲಕ್ಷ ಮತಗಳನ್ನು ಪಡೆದಿದೆ. ಸರ್ಕಾರಿ ನೌಕರರ ಬೇಡಿಕೆಯಂತೆ ವೃದ್ಧಾಪ್ಯ ವೇತನ ಯೋಜನೆಯನ್ನು ಮರುಸ್ಥಾಪಿಸುವ ಭರವಸೆಯೇ ಇದಕ್ಕೆ ಕಾರಣ ಎಂದು ಎಸ್‌ಪಿ ಹೇಳಿದೆ. ಇದು ಸರಿಯಾಗಿದೆ ಎಂದು ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ಹಲವು ಜಿಲ್ಲೆಗಳಲ್ಲಿ ನಿಯೋಜಿಸಲಾದ ಅಧಿಕಾರಿಗಳು ಸಹ ಚುನಾವಣೆಯ ಆರಂಭಿಕ ಹಂತಗಳಲ್ಲಿ ಪ್ರತಿಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ ಎಂಬ ಎಲ್ಲ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 2ನೇ ಬಾರಿಗೆ ಅಧಿಕಾರ
2022ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎರಡನೇ ಬಾರಿ ಗೆಲುವಿನ ಬಾವುಟ ಹಾರಿಸಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆದರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿಗೆ ಸೆಡ್ಡು ಹೊಡೆದ ಸಮಾಜವಾದಿ ಪಕ್ಷವು 111 ಕ್ಷೇತ್ರಗಳಲ್ಲಿ ಗೆಲುವಿನ ಸೈಕಲ್ ಏರಿದೆ. ಅಪ್ನಾ ದಳ 12, ಬಹುಜನ ಸಮಾಜವಾದಿ ಪಕ್ಷ 1, ಜೆಡಿಎಲ್ 2, ನಿರ್ಬಲ್ ಇಂಡಿಯನ್ ಶೋಷಿತ ಹಮಾರಾ ಆಮ್ ದಳ 6, ರಾಷ್ಟ್ರೀಯ ಲೋಕ ದಳ 8, ಸುಹೇಲ್ದೇವ್ ಭಾರತೀಯ ಸಮಾಜ ಪಾರ್ಟಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಮಾತ್ರ ಕೇವಲ 2 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳುವಂತೆ ಆಗಿದೆ.












Click it and Unblock the Notifications