2021ರ ಹಿನ್ನೋಟ; ಅಪ್ಪು ಸಾವಿಗೆ ಕಂಬನಿ ಮಿಡಿದ ಕರುನಾಡು
ಕರ್ನಾಟಕಲ್ಲಿ 2021ರಲ್ಲಿ ಅನೇಕ ಘಟನೆಗಳು ನಡೆದಿವೆ. ಆದರೆ ಇಡೀ ರಾಜ್ಯ ಕಂಬನಿ ಮಿಡಿಯುವಂತೆ ಮಾಡಿದ್ದು ಅದೊಂದು ಘಟನೆ. ಅಕ್ಟೋಬರ್‌ನಲ್ಲಿ ನಡೆದ ಆ ಘಟನೆಯನ್ನು ಇಂದಿಗೂ ಜನರು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ.
ಅದು ಅಕ್ಟೋಬರ್ 29ರ ಶುಕ್ರವಾರ. ಶುಭ ಶುಕ್ರವಾರ ಬರಸಿಡಿಲಿನಂತಹ ಸುದ್ದಿಯೊಂದು ಕರುನಾಡನ್ನು ಕಂಗೆಡಿಸಿತು. ಲಕ್ಷಾಂತರ ಜನರು ಕಣ್ಣೀರಿಡುವಂತೆ ಮಾಡಿತು. ಇಂದಿಗೂ ಈ ಘಟನೆ ನೆನದು ನೂರಾರು ಜನರು ಬೇಸರಪಟ್ಟುಕೊಳ್ಳುತ್ತಾರೆ.
ಕನ್ನಡ ಚಿತ್ರ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್, ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ದಂಪತಿಯ ಕಿರಿಯ ಪುತ್ರ ಪುನೀತ್ ರಾಜ್‌ಕುಮಾರ್ (46) ಅಕ್ಟೋಬರ್ 29ರ ಶುಕ್ರವಾರ ವಿಧಿವಶರಾದರು. ಅಕ್ಟೋಬರ್ 31ರ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಡೆಯಿತು.

ಶುಕ್ರವಾರ ಪುನೀತ್ ರಾಜ್‌ಕುಮಾರ್ ಎಂದಿನಂತೆ ಜಿಮ್ ಮಾಡಿದ್ದರು. ಬಳಿಕ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತೆರಳಿದ ಅವರು ಮೊದಲು ಖಾಸಗಿ ಕ್ಲಿನಿಕ್‌ನಲ್ಲಿ ಇಸಿಜಿ ಮಾಡಿಸಿದರು. ಬಳಿಕ ವೈದ್ಯರ ಸಲಹೆಯಂತೆ ವಿಕಂ ಆಸ್ಪತ್ರೆಗೆ ದಾಖಲು ಮಾಡಲಾಯಿತು. 11.30ರ ಸುಮಾರಿಗೆ ಪುನೀತ್ ರಾಜ್‌ಕುಮಾರ್‌ಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹೊರಬಂತು.
ಕರುನಾಡ ಯುವಕರ ಪಾಲಿನ ಫಿಟ್ನೆಸ್ ಐಕಾನ್ ಆಗಿದ್ದ ಪುನೀತ್ ರಾಜ್‌ಕುಮಾರ್‌ಗೆ ಹೃದಯಾಘಾತವಾಗಿದೆ ಎಂಬ ಸುದ್ದಿಯನ್ನು ಕ್ಷಣಕಾಲ ಯಾರೂ ಸಹ ನಂಬಲಿಲ್ಲ. ಆದರೆ ಕೆಲವೇ ನಿಮಿಷಗಳಲ್ಲಿ ಈ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆಯಿತು. ಅಂದು ನಟ ಶಿವರಾಜ್‌ಕುಮಾರ್ ಅಭಿಯನದ 'ಭಜರಂಗಿ-2' ಚಿತ್ರ ಬಿಡುಗಡೆಯಾಗಿತ್ತು. ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿದ್ದ ಶಿವಣ್ಣ ಆಸ್ಪತ್ರೆಗೆ ಓಡೋಡಿ ಬಂದರು.

ನೂರಾರು ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿ ಬಂದರು. ನೆಚ್ಚಿನ ನಟ ಬೇಗ ಗುಣಮುಖವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದರು. ಸುಮಾರು 2 ಗಂಟೆಗಳ ಕಾಲ ಪುನೀತ್ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿದವು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪುನೀತ್ ರಾಜ್‌ಕುಮಾರ್ ವಿಧಿವಶ ಎಂಬ ಸುದ್ದಿ ಅಧಿಕೃತವಾಗಿ ಘೋಷಣೆಯಾಯಿತು.
ಇದೊಂದು ಸುದ್ದಿ ಕರುನಾಡನ್ನೇ ಬೆಚ್ಚಿ ಬೀಳಿಸಿತು. ಸದಾಶಿವ ನಗರದಲ್ಲಿರುವ ಪುನೀತ್ ರಾಜ್‌ಕುಮಾರ್ ನಿವಾಸ, ವಿಕ್ರಂ ಆಸ್ಪತ್ರೆ ಬಳಿಕ ಸಾವಿರಾರು ಜನರು ಜಮಾವಣೆಗೊಂಡರು. ಬೆಂಗಳೂರು ನಗರದ ಹಲವು ಕಡೆ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಯಿತು. ಬೆಂಗಳೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ನಗರದಲ್ಲಿ ಭದ್ರತೆ ಹೆಚ್ಚಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕೈಗೊಂಡರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿವಿಧ ಸಚಿವರು, ಹಿರಿಯ ಪೊಲೀಸ್ ಅಧಿಕಾರಿಗಳು ಪುನೀತ್ ರಾಜ್‌ಕುಮಾರ್ ಆಸ್ಪತ್ರೆ ಸೇರಿದ ವಿಚಾರ ತಿಳಿದು ಆಗಮಿಸಿದ್ದರು. ಚಿತ್ರರಂಗದ ಅನೇಕ ಗಣ್ಯರು, ನಟ, ನಟಿಯರು ಆಸ್ಪತ್ರೆಗೆ ಬಂದರು. ಆಸ್ಪತ್ರೆ ಮುಂದೆ ಜನರ ಜಮಾವಣೆ ಹೆಚ್ಚುತ್ತಲೇ ಹೋಯಿತು. ಕುಟುಂಬದವರ ಜೊತೆ ಚರ್ಚಿಸಿದ ಮುಖ್ಯಮಂತ್ರಿಗಳು ಮುಂದಿನ ಕ್ರಮದ ಬಗ್ಗೆ ಸಮಾಲೋಚನೆ ನಡೆಸಿದರು. ಪುನೀತ್ ರಾಜ್‌ಕುಮಾರ್ ಇಚ್ಛೆಯಂತೆ ಕಣ್ಣುಗಳನ್ನು ದಾನ ಮಾಡಲಾಯಿತು.
ವಿಕ್ರಂ ಆಸ್ಪತ್ರೆಯಿಂದ ಪೊಲೀಸ್ ಭದ್ರತೆಯಲ್ಲಿ 4 ಗಂಟೆ ಸುಮಾರಿಗೆ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ಸದಾಶಿವ ನಗರದ ನಿವಾಸಕಕ್ಕೆ ಸ್ಥಳಾಂತರ ಮಾಡಲಾಯಿತು. ಆಸ್ಪತ್ರೆ ಮುಂದೆ ಸೇರಿದ್ದ ಜನಸಾಗರದ ನಡುವೆ ಪಾರ್ಥಿವ ಶರೀರ ರವಾನೆ ಮಾಡುವುದು ಪೊಲೀಸರಿಗೆ ಸವಾಲಾಯಿತು. ಅಭಿಮಾನಿಗಳು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಪಟ್ಟು ಹಿಡಿದರು.
ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತು. ಕೆಲವೇ ಗಂಟೆಗಳಲ್ಲಿ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಯಿತು. ಸದಾಶಿವ ನಗರ ನಿವಾಸದಲ್ಲಿ ಕುಟುಂಬದವರು ಅಂತಿಮ ದರ್ಶನ ಪಡೆದ ಬಳಿಕ, ಸಂಜೆ 7 ಗಂಟೆ ಸುಮಾರಿಗೆ ಪಾರ್ಥಿವ ಶರೀರವನ್ನು ಸ್ಟೇಡಿಯಂಗೆ ತರಲಾಯಿತು. ಶುಕ್ರವಾರ ಸಂಜೆಯಿಂದ ಭಾನುವಾರ ಮುಂಜಾನೆ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು.
ಪುತ್ರಿ ಆಗಮಿಸಲು ವ್ಯವಸ್ಥೆ; ಪುನೀತ್ ರಾಜ್‌ಕುಮಾರ್ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪುತ್ರಿ ಧೃತಿ ಬೆಂಗಳೂರಿಗೆ ಆಗಮಿಸಲು ವ್ಯವಸ್ಥೆ ಮಾಡಲಾಯಿತು. ವ್ಯಾಸಂಗಕ್ಕಾಗಿ ಕೆಲವು ದಿನಗಳ ಹಿಂದೆ ವಿದೇಶಕ್ಕೆ ತೆರಳಿದ್ದ ದೃತಿ ತಂದೆಯ ಅಂತಿಮ ದರ್ಶನಕ್ಕೆ ಆಗಮಿಸಲು ಕರ್ನಾಟಕ ಸರ್ಕಾರ ಅಗತ್ಯ ವ್ಯವಸ್ಥೆ ಮಾಡಿತು. ಕಂಠೀರವ ಸ್ಟೇಡಿಯಂಗೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರ ವಹಿಸಿದರು.
ಶುಕ್ರವಾರ ಸಂಜೆಯಿಂದ ಭಾನುವಾರ ಮುಂಜಾನೆ ತನಕ ಸುಮಾರು 20 ಲಕ್ಷ ಜನರು ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು. ಕನ್ನಡ ಚಿತ್ರರಂಗ, ಕಿರುತೆರೆ ಕಲಾವಿದರು ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟರು. ತಮಿಳುನಾಡು, ಕೇರಳದಿಂದ ವಿವಿಧ ಕಲಾವಿದರು ಆಗಮಿಸಿದ ಅಂತಿಮ ನಮವನ್ನು ಸಲ್ಲಿಸಿದರು. ಶನಿವಾರ ಸಂಜೆ ಅಂತ್ಯಕ್ರಿಯೆ ನಡೆಸಲು ಮೊದಲು ತೀರ್ಮಾನಿಸಲಾಗಿತ್ತು. ಬಳಿಕ ಭಾನುವಾರ ಮುಂಜಾನೆ ಅಂತ್ಯ ಸಂಸ್ಕಾರ ನಡೆಸುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿತು.
ಅಕ್ಟೋಬರ್ 31ರ ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿ ಕಂಠೀರವ ಸ್ಟೇಡಿಯಂನಿಂದ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಂಠೀರವ ಸ್ಟುಡಿಯೋಕ್ಕೆ ತರಲಾಯಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿತು. ಪೊಲೀಸರು ಹಗಲಿರುಳು ಶಾಂತಿ ಕಾಪಾಡಲು ಶ್ರಮಿಸಿದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಗೌರವಯುತವಾಗಿ ಅಪ್ಪು ಕಳುಹಿಸಿಕೊಡೋಣ ಕಾನೂನು ಸುವ್ಯವಸ್ಥೆ ಕಾಪಾಡಲು ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಾಡಿನ ಮೂಲೆ ಮೂಲೆಯಿಂದ ಪವರ್ ಸ್ಟಾರ್ ಅಭಿಮಾನಿಗಳು ಕಂಠೀರವ ಸ್ಟೇಡಿಯಂಗೆ ಆಗಮಿಸಿದರು. ಅಪ್ಪು ಅಭಿಮಾನಿಗಳು ಕಣ್ಣೀರಿಟ್ಟರು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೆಚ್ಚಿನ ನಟನ ಗೌರವ ಹಾಳಾಗದಂತೆ ಎಚ್ಚರ ವಹಿಸಿದರು. ನೆಚ್ಚಿನ ನಟನ ನೆನಪಿನಲ್ಲಿ ಸಾವಿರಾರು ಜನರು ಕಣ್ಣುಗಳನ್ನು ದಾನ ಮಾಡುವ ಪ್ರತಿಜ್ಞೆ ಮಾಡಿದರು. ಈ ವರ್ಷದಲ್ಲಿ ಸಂಭವಿಸಿದ ಇದೊಂದು ಸಾವು ಕಡುನಾಡೇ ಕಂಬನಿ ಮಿಡಿಯುವಂತೆ ಮಾಡಿತು.
ರಾಜ್ಯೋತ್ಸವ ಪ್ರಶಸ್ತಿ ನೀಡಿ; ಪುನೀತ್ ರಾಜ್‌ಕುಮಾರ್ ಮರಣ ಹೊಂದಿದ್ದು ಅಕ್ಟೋಬರ್ 29ರಂದು. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ. ಕನ್ನಡ ನಾಡು ನುಡಿಗಾಗಿ ಸಾಧನೆ ಮಾಡಿದವರಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್‌ಗೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿತು. ಆದರೆ ಮರಣೋತ್ತರವಾಗಿ ಪಶಸ್ತಿ ನೀಡಲು ಇದ್ದ ತಾಂತ್ರಿಕ ತೊಡಕಿನ ಕಾರಣ ಪ್ರಶಸ್ತಿ ನೀಡಲು ಸಾಧ್ಯವಾಗಲಿಲ್ಲ.
ನವೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 'ಪುನೀತ ನಮನ' ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿದರು. ಕರ್ನಾಟಕ ಸರ್ಕಾರ ಮೊದಲ ಬಾರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ಘೋಷಣೆ ಮಾಡಿತು.
1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಯಿತು. ಇದುವರೆಗೂ ಸರ್ಕಾರ 9 ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದೆ. ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್‌ಗೆ ನೀಡುವುದಾಗಿ ಘೋಷಣೆ ಮಾಡಲಾಗಿದೆ. 1992ರಲ್ಲಿ ಡಾ. ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಪಡೆದಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications