Unforgettable 2020: 20 ಲಕ್ಷ ಕೋಟಿ ರೂ. ಬೃಹತ್ ಆರ್ಥಿಕ ಪ್ಯಾಕೇಜ್
ನವದೆಹಲಿ,
ಡಿಸೆಂಬರ್ 12: ಕೊರೊನಾವೈರಸ್ ಸಾಂಕ್ರಾಮಿಕವು ಭಾರತವನ್ನು ಆಕ್ರಮಿಸಿದ್ದೇ ತಡ ಇಡೀ ಸಮಾಜವನ್ನೇ ಹಿಂಡಿ ಹಿಪ್ಪೆಮಾಡಿತು. ಲಾಕ್‌ಡೌನ್ ಘೋಷಿಸಿದ ಮೇಲಂತೂ ಆರ್ಥಿಕ ಚಟುವಟಿಕೆಗಳು ನಿಂತಲ್ಲೇ ನಿಂತವು. ಕೋಟ್ಯಾಂತರ ಉದ್ಯೋಗ ನಷ್ಟವಾದವು. ಲಕ್ಷಾಂತರ ಜನರ ಬದುಕು ಬೀದಿಗೆ ಬಂದಿತು. id="toptextpromo"> id='are-slot-1' class='oiad oi-axt oiadv'>ಈ
ವೇಳೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಪ್ಯಾಕೇಜ್ ಎಂಬ ಖ್ಯಾತಿಗೆ ಪಾತ್ರವಾಗಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಿಸಿತು. ಇದು ಬರೋಬ್ಬರಿ 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್. ಈ ಪ್ಯಾಕೇಜ್‌ನ ಒಟ್ಟು ಮೊತ್ತವು ನಮ್ಮ ದೇಶದ ಜಿಡಿಪಿಯ ಶೇಕಡಾ 10ರಷ್ಟಿತ್ತು ಎಂಬುದು ವಿಶೇಷ. id='are-slot-2' class='oiad oi-axt oiadv'>
20,97,053 ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಪ್ಯಾಕೇಜ್
ಒಟ್ಟು ಐದು ಹಂತಗಳಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಕೇಂದ್ರ ಸರ್ಕಾರದ ಒಟ್ಟಾರೆ ಲೆಕ್ಕಾಚಾರಕ್ಕಿಂತ ವಿಶೇಷ ಆರ್ಥಿಕ ಪ್ಯಾಕೇಜ್ ಮೊತ್ತ ಬರೋಬ್ಬರಿ 20,97,053 ಕೋಟಿ ರೂ.ಗೆ ತಲುಪಿತು. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಜೊತೆಗೆ ಹಣಕಾಸು ಇಲಾಖೆಯ ಇತರೆ ಅಧಿಕಾರಿಗಳು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ಐದು ಹಂತಗಳಲ್ಲಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ವಿವರಣೆಯು ಮುಂದಿದೆ.

ಮೊದಲ ಹಂತದಲ್ಲಿ MSMEs ಗಳಿಗೆ ಆದ್ಯತೆ
ಕೇಂದ್ರ ಸರ್ಕಾರವು ಘೋಷಿಸಿದ 20 ಲಕ್ಷ ಆರ್ಥಿಕ ಪ್ಯಾಕೇಜ್‌ನಲ್ಲಿ ಮೊದಲ ಹಂತದಲ್ಲಿ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ಪ್ರಕಟಿಸಿದರು.
ಪ್ರಮುಖವಾಗಿ ಎಂಎಸ್‌ಎಂಇಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರೋಬ್ಬರಿ 3 ಲಕ್ಷ ಕೋಟಿ ರೂ. ಸಾಲದ ಯೋಜನೆ ಪ್ರಕಟಿಸಿದರು. ಒಟ್ಟು 4 ವರ್ಷಗಳ ಅವಧಿಯ ಈ ಸಾಲಕ್ಕೆ 12 ತಿಂಗಳು ಇಎಂಐ ಕಟ್ಟುವ ಅವಶ್ಯಕತೆ ಇಲ್ಲ ಎಂದು ಘೋಷಿಸಿದರು. ಅಲ್ಲದೇ 2020ರ ಅಕ್ಟೋಬರ್ 31ರವೆರೆಗೂ ಸಾಲ ನೀಡುವ ಪ್ರಕ್ರಿಯೆ ಇತ್ತು.
ಇತ್ತೀಚೆಗಷ್ಟೇ ಎಂಎಸ್‌ಎಂಇ ವಲಯಕ್ಕೆ ತುರ್ತು ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್(ಇಸಿಎಲ್‌ಜಿಎಸ್) ಅಡಿಯಲ್ಲಿ ಸುಮಾರು 81 ಲಕ್ಷ ಖಾತೆಗಳಿಗೆ 2,05,563 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಕಳೆದ ಶುಕ್ರವಾರ ತಿಳಿಸಿದೆ.
ಎಂಎಸ್‌ಎಂಇ ವಲಯಕ್ಕೆ 3 ಲಕ್ಷ ಕೋಟಿ ತುರ್ತು ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಮ್ ಅಡಿಯಲ್ಲಿ ಈ ಹಣವನ್ನು ಸಾಲವಾಗಿ ನೀಡಲಾಗಿದೆ. ಆದರೆ ಡಿಸೆಂಬರ್ 4 ರವರೆಗೆ 40 ಲಕ್ಷ ಎಂಎಸ್‌ಎಂಇ ಖಾತೆಗಳಿಗೆ 1,58,626 ಕೋಟಿ ರೂ. ಬಂದಿದೆ ಎಂದು ಹಣಕಾಸು ಸಚಿವಾಲಯ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ.
ಇದರ ಜೊತೆಗೆ ಉದ್ಯೋಗಿ ಮತ್ತು ಉದ್ಯೋಗದಾರಿಗೆ ಇಬ್ಬರಿಗೂ ಅನುಕೂಲವಾಗುವಂತೆ ಇಪಿಎಫ್ ಪಾವತಿ ಅವಧಿಯನ್ನು ಹಿಂದಿನ ಮೂರು ತಿಂಗಳ ಜೊತೆಗೆ ಮತ್ತೆ ಮೂರು ತಿಂಗಳುಗಳ ಕಾಲ ವಿಸ್ತರಿಸುವ ಘೋಷಣೆ ಮಾಡಲಾಯಿತು.

ಎರಡನೇ ಹಂತದಲ್ಲಿ ವಲಸೆ ಕಾರ್ಮಿಕರ ಹಿತರಕ್ಷಣೆ
ಎರಡನೇ ಹಂತದ ಘೋಷಣೆಯಲ್ಲಿ, ಲಾಕ್‌ಡೌನ್ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಿದರು.
ಪ್ರಮುಖವಾಗಿ ಸುಮಾರು 8 ಕೋಟಿ ವಲಸೆ ಕಾರ್ಮಿಕರಿಗೆ ಉಚಿತ ರೇಷನ್ ನೀಡಲು 3,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ನಿರ್ಮಲಾ ಮಾಹಿತಿ ನೀಡಿದರು. ವಲಸೆ ಕಾರ್ಮಿಕರು ದೇಶದ ಯಾವುದೇ ರಾಜ್ಯದಲ್ಲಿ ತಮ್ಮ ರೇಷನ್ ಕಾರ್ಡ್ ತೋರಿಸಿ ಆಹಾರ ಸಾಮಾಗ್ರಿಗಳನ್ನು ಪಡೆಯಬಹದುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಇದೇ ವೇಳೆ ದೇಶದ ರೈತ ಸಮುದಾಯಕ್ಕೂ ಹಲವು ಯೋಜನೆಗಳನ್ನು ಪ್ರಕಟಿಸಿದ ನಿರ್ಮಲಾ ಸೀತಾರಾಮನ್, 25 ಲಕ್ಷ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಿ ಇವುಗಳ ಮೂಲಕ ರೈತರಿಗೆ 25,000 ಕೋಟಿ ರೂ. ಸಾಲ ನೀಡಿರುವುದಾಗಿ ಘೋಷಿಸಿದರು. 3 ಕೋಟಿ ರೈತರ 4.22 ಲಕ್ಷ ಕೋಟಿ ರೂ. ಮೊತ್ತದ ಸಾಲಗಳಿಗೆ ಮೂರು ತಿಂಗಳ ಕಂತು ಮುಂದೂಡಿಕೆಯ ಅವಕಾಶ ಕೂಡ ನೀಡಲಾಯಿತು.

ಮೂರನೇ ಹಂತದಲ್ಲಿ ಕೃಷಿಕರ ಕೈ ಹಿಡಿದ ಕೇಂದ್ರ ಸರ್ಕಾರ
ಬೃಹತ್ ಆರ್ಥಿಕ ಪ್ಯಾಕೇಜ್ ಮೂರನೇ ಹಂತದಲ್ಲಿ ಅನ್ನದಾತರ ಕೈ ಹಿಡಿಯಲು ಒಂದು ಲಕ್ಷ ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿತು. ಇದರಲ್ಲಿ ಪ್ರಮುಖವಾಗಿ ಡೈರಿ ಉತ್ಪನ್ನಗಳ ಗುಣಮಟ್ಟ ಹೆಚ್ಚಳಕ್ಕೆ 15 ಸಾವಿರ ಕೋಟಿ ರೂ. ಮೀಸಲಿಡಲಾಯಿತು.
ಪಶು ಸಂಗೋಪನೆ ಅಷ್ಟೇ ಅಲ್ಲದೆ ಜೇನು ಸಾಕಣೆಗೆ 500 ಕೋಟಿ ರೂ., ಮೀನುಗಾರರ ಉಪಕರಣಗಳ ಖರೀದಿಗೆ 20 ಸಾವಿರ ಕೋಟಿ ರೂ., ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ರೂ. ಅನುದಾನ ಹಾಗೂ ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂ. ಘೋಷಣೆ ಮಾಡಲಾಯಿತು.

ನಾಲ್ಕನೇ ಹಂತದಲ್ಲಿ ಬೃಹತ್ ಕೈಗಾರಿಕೆಗಳ ಆರ್ಥಿಕ ಚೇತರಿಕೆಗೆ ಉತ್ತೇಜನ
ಬೃಹತ್ ಕೈಗಾರಿಕೆಗಳ ಉತ್ತೇಜನಕ್ಕೆ ನಾಲ್ಕನೇ ಹಂತದಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಲಾಯಿತು. ಪ್ರಮುಖವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿನ ಸರಕಾರ ಏಕಸ್ವಾಮ್ಯ ಹಿಂತೆಗೆತ ಹಾಗೂ ವಾಣಿಜ್ಯ ಉದ್ದೇಶದ ಕಲ್ಲಿದ್ದಲು ಗಣಿಗಾರಿಕೆ ಜಾರಿಗೆ ತರಲು ನಿರ್ಧಾರ ಮಾಡಿರುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಅಲ್ಲದೇ ಕಲ್ಲಿದ್ದಲು ಕ್ಷೇತ್ರದಲ್ಲಿ ಸಾಗಣೆಯ ಮೂಲಸೌಕರ್ಯಕ್ಕೆ 50,000 ಕೋಟಿ ರೂ. ಹೂಡಿಕೆ ಮಾಡುವುದಾಗಿಯೂ ನಿರ್ಮಲಾ ಸ್ಪಷ್ಟಪಡಿಸಿದರು.
ಇದರ ಜೊತೆಗೆ ವಿದ್ಯುತ್ ಕಂಪನಿಗಳ ಖಾಸಗೀಕರಣ ಮಾಡುವ ಕುರಿತೂ ತೀರ್ಮಾನಿಸಲಾಯಿತು.

ಕೊನೆಯ ಹಂತದಲ್ಲಿ ನರೇಗಾ ಯೋಜನೆಗೆ ಬೃಹತ್ ಪ್ಯಾಕೇಜ್ ಘೋಷಣೆ
ಐದು ಮತ್ತು ಅಂತಿಮ ಹಂತದ ಪ್ಯಾಕೇಜ್‌ನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ನರೇಗಾ ಯೋಜನೆಗೆ ಹೆಚ್ಚುವರಿ 40,000 ಕೋಟಿ ರೂ. ಘೋಷಿಸಲಾಯಿತು.
ಅಲ್ಲದೇ ಸಾರ್ವಜನಿಕ ವಲಯದ ಉದ್ಯಮ ನೀತಿಯಲ್ಲಿ ಮಹತ್ತರ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ, ಬಹುತೇಕ ಸಾರ್ವಜನಿಕ ವಲಯಗಳಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸಿರುವುದಾಗಿ ಘೋಷಿಸಿದೆ.












Click it and Unblock the Notifications