Maha Kumbh Mela 2025: ಮಹಾ ಕುಂಭಮೇಳಕ್ಕೆ ಹೋದ್ರೆ ಈ ಸ್ಥಳಗಳನ್ನು ತಪ್ಪದೇ ನೋಡಿ ಬನ್ನಿ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ-2025ಕ್ಕೆ ಕ್ಷಣಗಣನೆ ಶುರುವಾಗಿದೆ. ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾಕುಂಭ ಮೇಳ ನಡೆಯಲಿದೆ. ಸುಮಾರು ಒಂದೂವರೆ ತಿಂಗಳ ಕಾಲ ನಡೆಯುವ ಈ ಧಾರ್ಮಿಕ ಸಮಾರಂಭಕ್ಕೆ ಕೋಟ್ಯಂತರ ಮಂದಿ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರಯಾಗ್‌ರಾಜ್‌ಗೆ ಕುಂಭಮೇಳಕ್ಕೆ ಹೋಗುವವರು ಹಾಗೇ ಒಂದು ಟ್ರಿಪ್ ಕೂಡ ಮುಗಿಸಿ ಬರಬಹುದು. ಅಲ್ಲಿಯೇ ಸಮೀಪದಲ್ಲಿರುವ ಪ್ರವಾಸಿ ಸ್ಥಳಗಳು ಈ ಮುಂದಿನಂತಿವೆ..
* ಸಂಗಮ (Sangama): ಸಂಗಮಕ್ಕೆ ಭೇಟಿ ನೀಡದೆ ಮಹಾಕುಂಭದ ಸಮಯದಲ್ಲಿ ಪ್ರಯಾಗ್‌ರಾಜ್‌ಗೆ ಯಾವುದೇ ಪ್ರವಾಸವು ಪೂರ್ಣಗೊಳ್ಳುವುದೇ ಇಲ್ಲ. ಈ ಜಾಗದಲ್ಲೇ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಒಗ್ಗೂಡುತ್ತವೆ. ಇದು ಯಾತ್ರಿಕರು ಮತ್ತು ಪ್ರವಾಸಿಗರ ನೆಚ್ಚಿನ ತಾಣ ಎಂದೇ ಪ್ರಸಿದ್ಧಿಯಾಗಿದೆ. ಪ್ರಶಾಂತವಾದ ನೀರು, ವರ್ಣರಂಜಿತ ದೋಣಿಗಳು ಮನಸ್ಸಿಗೆ ಮುದ ನೀಡುತ್ತವೆ. ಭಕ್ತರು ಇಲ್ಲಿ ಧಾರ್ಮಿಕ ಕ್ರಿಯೆಗಳನ್ನು ಮಾಡುವಾಗ ಸೂರ್ಯನ ಬೆಳಕು ನದಿಗಳಿಂದ ಪ್ರತಿಫಲಿಸುತ್ತದೆ. ದೋಣಿ ವಿಹಾರವನ್ನು ಮಿಸ್ ಮಾಡಲೇಬೇಡಿ.

* ಅಲಹಾಬಾದ್ ಕೋಟೆ: ಸಂಗಮದ ಬಳಿಯೇ ಇರುವ ಅಲಹಾಬಾದ್ ಕೋಟೆಯು 1583ರಲ್ಲಿ ಚಕ್ರವರ್ತಿ ಅಕ್ಬರ್ ನಿರ್ಮಿಸಿದ ವಾಸ್ತುಶಿಲ್ಪದ ಪ್ರತೀಕ. ಕೋಟೆಯ ಒಂದು ಭಾಗವು ಭಾರತೀಯ ಸೇನೆಯ ನಿಯಂತ್ರಣದಲ್ಲಿದೆ. ಇಲ್ಲಿ ಅಶೋಕ ಸ್ತಂಭ ಮತ್ತು ಸರಸ್ವತಿ ಕೂಪ್ ಸೇರಿದಂತೆ ಹಲವು ಪ್ರದೇಶಗಳು ವೀಕ್ಷಣೆಗೆ ಸೂಕ್ತವಾಗಿವೆ. ಮಹಾಕುಂಭದ ಸಮಯದಲ್ಲಿ ಜನ ಇಲ್ಲಿಗೂ ಹೆಚ್ಚಾಗಿ ಭೇಟಿ ನೀಡುತ್ತಾರೆ. ಕೋಟೆಯ ಬೃಹತ್ ಗೋಡೆಗಳು ಶತಮಾನಗಳ ಇತಿಹಾಸಕ್ಕೆ ಸಾಕ್ಷಿಯಾಗಿದೆ.
* ತ್ರಿವೇಣಿ ಸಂಗಮ ಘಟ್ಟಗಳು: ಸಂಗಮದ ಬಳಿಯೇ ಇರುವ ತ್ರಿವೇಣಿ ಸಂಗಮ ಘಟ್ಟಗಳು ಮಹಾಕುಂಭದ ನಿಜವಾದ ಚಮತ್ಕಾರಕ್ಕೆ ಮತ್ತೊಂದು ಸಾಕ್ಷಿ. ಇಲ್ಲಿ ಸಂಜೆ ಆರತಿ ಪ್ರಾರಂಭವಾಗುತ್ತಿದ್ದಂತೆ, ವಾತಾವರಣವು ಕಣ್ಣುಗೆ ಹಬ್ಬ ನೀಡುತ್ತವೆ. ಅಲ್ಲಿ ನೀವು ತಪಸ್ವಿಗಳು, ಪ್ರಯಾಣಿಕರು ಮತ್ತು ಛಾಯಾಗ್ರಾಹಕರನ್ನು ಭೇಟಿ ಮಾಡಬಹುದು. ಈ ವಾತಾವರಣವನ್ನು ಕಣ್ತುಂಬಿಕೊಳ್ಳುವಾಗ ಒಂದು ಕಪ್ ಬಿಸಿ ಚಹಾ ಸವಿಯುವುದನ್ನು ಮರೆಯದಿರಿ.
* ಖುಸ್ರೋ ಬಾಗ್ (Khusro Bagh): ಮಹಾಕುಂಭದ ಗದ್ದಲದಿಂದ ಶಾಂತವಾದ ವಾತಾವರಣ ಬಯಸುವವರಿಗೆ ಖುಸ್ರೋ ಬಾಗ್ ಸೂಕ್ತ ಜಾಗ. ಈ ಮೊಘಲ್ ಉದ್ಯಾನ ಸಂಕೀರ್ಣವು ಚಕ್ರವರ್ತಿ ಜಹಾಂಗೀರ್‌ನ ಹಿರಿಯ ಮಗ ಖುಸ್ರೋ ಮಿರ್ಜಾ ಮತ್ತು ಇತರ ರಾಜಮನೆತನದ ಸದಸ್ಯರ ಸಮಾಧಿಗಳನ್ನು ಹೊಂದಿದೆ. ಸಮಾಧಿಗಳ ಮೇಲೆ ಮೊಘಲ್ ಕಾಲದ ಕೆತ್ತನೆಗಳು ನಗರದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ. ಹಚ್ಚ ಹಸಿರಿನ ಈ ಜಾಗವು ಹಾಯಾಗಿ ಅಡ್ಡಾಡಲು ಸೂಕ್ತವಾದ ಸ್ಥಳ.

* ಆನಂದ ಭವನ: ಪ್ರಯಾಗರಾಜ್ ಧಾರ್ಮಿಕವಾಗಿ ಮಾತ್ರವಲ್ಲದೆ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ ನಗರ. ನೆಹರು ಕುಟುಂಬದ ಹಿಂದಿನ ನಿವಾಸವಾದ ಆನಂದ್ ಭವನವು ಈ ಯುಗದ ಒಂದು ಆಕರ್ಷಕ ಅನುಭವ ನೀಡುತ್ತದೆ. ಸದ್ಯ ಇದು ಈಗ ವಸ್ತುಸಂಗ್ರಹಾಲಯವಾಗಿದ್ದು, ಈ ಮನೆಯಲ್ಲಿ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಜೀವನ, ಕಲಾಕೃತಿಗಳು, ಛಾಯಾಚಿತ್ರಗಳು, ದಾಖಲೆಗಳನ್ನು ಪ್ರದರ್ಶಿಸುತ್ತದೆ.
* ಸಿವಿಲ್ ಲೈನ್ಸ್: ಪ್ರಯಾಗ್‌ರಾಜ್ ಕೇವಲ ಧಾರ್ಮಿಕ ಭಕ್ತಿ ಕೇಂದ್ರವಲ್ಲ, ಇಲ್ಲಿ ನಾಲಿಗೆಯನ್ನು ತಣಿಸುವ ರುಚಿ ರುಚಿಯಾದ ಬೀದಿಬದಿ ಆಹಾರ ಕೂಡ ಸಿಗುತ್ತದೆ. ಇದಕ್ಕಾಗಿ ಪ್ರಯಾಗ್‌ರಾಜ್‌ನ ವಾಣಿಜ್ಯ ಕೇಂದ್ರವಾದ ಸಿವಿಲ್ ಲೈನ್ಸ್‌ಗೆ ಹೋಗಲೇಬೇಕು. ಇಲ್ಲಿ ಮಸಾಲೆಯುಕ್ತ ಆಲೂ ಸಬ್ಜಿಯೊಂದಿಗೆ ಬಡಿಸುವ ಬಿಸಿ ಬಿಸಿ ಕಚೋರಿ, ಲಸ್ಸಿ, ಕೆನೆಯ ಕುಲ್ಫಿಗಳು ಆಹಾರ ಪ್ರಿಯರಿಗೆ ಸ್ವರ್ಗವಾಗಿದೆ.












Click it and Unblock the Notifications