ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ: ತಮಿಳುನಾಡಿನಲ್ಲಿ ಪಾರುಪತ್ಯ ಸಾಧಿಸಲಿದೆ ಡಿಎಂಕೆ
ಚೆನ್ನೈ, ಮಾರ್ಚ್ 24: ತಮಿಳುನಾಡು ರಾಜ್ಯವು ಏಪ್ರಿಲ್ 6 ರಿಂದ ಪ್ರಾರಂಭವಾಗುವ ಏಕ ಹಂತದ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ.
1967 ರಿಂದ 234 ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನ ರಾಜಕೀಯದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಆಡಳಿತಾರೂಢ ದಿವಂಗತ ಜೆ.ಜಯಲಲಿತಾ ಸೇರಿದ್ದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಅಧಿಪತ್ಯ ಸಾಧಿಸಿವೆ.
ಟೈಮ್ಸ್ ನೌ ಸಮೀಕ್ಷೆ: ಪಿಣರಾಯಿ ಸರ್ಕಾರದ ಪರ, ಮೋದಿ ವಿರುದ್ಧ ಮತ
ಆದಾಗ್ಯೂ, ಕಳೆದ ಕೆಲವು ದಶಕಗಳಲ್ಲಿ ಹಲವಾರು ಸಣ್ಣಪುಟ್ಟ ಪಕ್ಷಗಳು ಹೊರಹೊಮ್ಮಿದ್ದು, ಮುಖ್ಯವಾಗಿ ಶಶಿಕಲಾ ಅವರ ಸೋದರಳಿಯ ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆ ಸದ್ದು ಮಾಡಿತು.
ಕಾಂಗ್ರೆಸ್, ಎಡ ಪಕ್ಷಗಳು ಮತ್ತು ಇತರ ಪ್ರಾದೇಶಿಕ ಆಟಗಾರರೊಂದಿಗೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ 2016ರಲ್ಲಿ ಕೇವಲ 89 ಸ್ಥಾನಗಳನ್ನು ಗೆದ್ದಿದ್ದು, ಈಗ ಅದನ್ನು ಸುಧಾರಿಸುವ ವಿಶ್ವಾಸ ಹೊಂದಿದೆ. ಏತನ್ಮಧ್ಯೆ, ರಾಜ್ಯದಲ್ಲಿ ಹೆಜ್ಜೆ ಇಡಲು ಹೆಣಗಾಡುತ್ತಿರುವ ಬಿಜೆಪಿ, ಆಡಳಿತಾರೂಢ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ.
ಸದ್ಯ ನಡೆಯುತ್ತಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಅಂಗವಾಗಿ ಮಾರ್ಚ್ 17ರಿಂದ ಮಾರ್ಚ್ 22ರ ನಡುವೆ ಟೈಮ್ಸ್ ನೌ ಸಿ-ವೋಟರ್ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ 8,709 ಜನರು ಭಾಗವಹಿಸಿದ್ದರು.
ಮತಗಳಿಕೆ ಲೆಕ್ಕಾಚಾರ
UPA (DMK+Congress+Others) 2016ರಲ್ಲಿ ಶೇ.39.4 ಮತಗಳನ್ನು ಪಡೆದಿದ್ದರೆ, 2021ರಲ್ಲಿ ಶೇ.46ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಇನ್ನು NDA (AIADMK+BJP+Others) 2016ರಲ್ಲಿ ಶೇ.43.7 ರಷ್ಟು ಮತ ಪಡೆದಿದ್ದರೆ, 2021ರಲ್ಲಿ ಶೇ.34.6 ರಷ್ಟು ಮತ ಪಡೆಯಲಿದ್ದಾರೆ.
ಸ್ಥಾನಗಳ ಲೆಕ್ಕಾಚಾರ
UPA (DMK+Congress+Others) 2016ರಲ್ಲಿ 98 ಸ್ಥಾನಗಳನ್ನು ಪಡೆದಿದ್ದರೆ, 2021ರಲ್ಲಿ 177 ಸ್ಥಾನಗಳನ್ನು ಬಾಚಿಕೊಳ್ಳಲಿದೆ ಎಂದು ಅಭಿಪ್ರಾಯ ಸಂಗ್ರಹದಲ್ಲಿ ಗೊತ್ತಾಗಿದೆ.
ಇನ್ನು, NDA (AIADMK+BJP+Others) 2016ರಲ್ಲಿ 134 ಸ್ಥಾನಗಳನ್ನು ಪಡೆದಿದ್ದರೆ, 2021ರಲ್ಲಿ ಕೇವಲ 49 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ತಿಳಿದುಬಂದಿದೆ. ಉಳಿದಂತೆ ಇತರೆ ಪಕ್ಷಗಳು ಒಂದಂಕಿ ಸಂಖ್ಯೆಯ ಸ್ಥಾನಗಳನ್ನು ಪಡೆಯಲಿವೆ.
ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ UPA (DMK+Congress+Others) ಮೈತ್ರಿಕೂಟವು 173 ರಿಂದ 181 ಸ್ಥಾನಗಳನ್ನು ಪಡೆಯಲಿದ್ದರೆ, NDA (AIADMK+BJP+Others) ಮೈತ್ರಿಕೂಟವು 45 ರಿಂದ 53 ಸ್ಥಾನಗಳನ್ನು ಗಳಿಸಲಿದೆ ಎಂದು ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ ತಿಳಿಸಿದೆ.