ಭಾರತದಲ್ಲಿರುವ 'ವಿಶ್ವದ ಅತ್ಯಂತ ಸ್ವಚ್ಛವಾದ ನದಿ': ಇದರ ಬಗ್ಗೆ ನಿಮಗೆಷ್ಟು ಗೊತ್ತು?
ಶಿಲ್ಲಾಂಗ್, ನವೆಂಬರ್ 18: ಭಾರತದಲ್ಲಿ ನದಿಗಳ ಮಾಲಿನ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆ ದೆಹಲಿಯ ಯಮುನಾ ನದಿಯಲ್ಲಿ ಮಾಲಿನ್ಯದ ಭೀಕರ ಸ್ವರೂಪದ ಚಿತ್ರಗಳು ಪ್ರಪಂಚದಾದ್ಯಂತ ಆತಂಕಕ್ಕೆ ಕಾರಣವಾಗಿದ್ದವು. ಗಂಗಾ ನದಿಯ ಮಾಲಿನ್ಯದ ಮಟ್ಟವು ಎಷ್ಟರಮಟ್ಟಿಗೆ ಹೆಚ್ಚಾಯಿತು ಎಂದರೆ ಸರ್ಕಾರವು ನಮಾಮಿ ಗಂಗೆ ಯೋಜನೆಯನ್ನು ಪ್ರಾರಂಭಿಸಬೇಕಾಗಿತ್ತು. ಇದರ ಮಧ್ಯೆ ಪ್ರಪಂಚದಲ್ಲೇ ಅತ್ಯಂತ ಸ್ವಚ್ಛವಾದ ನದಿ ಭಾರತದಲ್ಲಿದೆ ಎಂದು ತಿಳಿದರೆ ಆಶ್ಚರ್ಯವಾಗುವುದರಲ್ಲಿ ಅನುಮಾನವಿಲ್ಲ. ಈ ನದಿಯ ಚಿತ್ರವನ್ನು ಕೇಂದ್ರ ಜಲ ಶಕ್ತಿ ಸಚಿವಾಲಯವು ಹಂಚಿಕೊಂಡಿದ್ದು ಇದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ನದಿಯ ತಳದವರೆಗೂ ಸ್ಪಷ್ಟ ನೋಟ
ದೇಶದ ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿರುವ ಈ ನದಿಯಲ್ಲಿ ಹರಿಯುವ ದೋಣಿಯ ಅದ್ಭುತ ಚಿತ್ರವನ್ನು ಜಲ ಶಕ್ತಿ ಸಚಿವಾಲಯ ಹಂಚಿಕೊಂಡಿದೆ. ಈ ನದಿಯ ನೀರು ಎಷ್ಟು ಸ್ಪಷ್ಟವಾಗಿದೆ ಎಂದರೆ ದೋಣಿಯ ಜೊತೆಗೆ ನದಿಯ ತಳದಲ್ಲಿ ಇರುವ ಕಲ್ಲುಗಳು ಮತ್ತು ಹಸಿರು ಸ್ಪಷ್ಟವಾಗಿ ಗೋಚರಿಸುತ್ತವೆ. ಅಷ್ಟೇ ಅಲ್ಲ, ನದಿಯ ತಳದಲ್ಲಿ ದೋಣಿಯ ನೆರಳು ಕೂಡ ಸ್ಪಷ್ಟವಾಗಿ ಗೋಚರಿಸುತ್ತದೆ. ಒಮ್ಮೆ ನೋಡಿದರೆ ಈ ದೋಣಿ ನೀರಿನಲ್ಲಿ ತೇಲಾಡುವ ಬದಲು ಗಾಳಿಯಲ್ಲಿ ಹಾರುತ್ತಿದೆಯೇನೋ ಎನಿಸುತ್ತದೆ.
ಈ ನದಿಯು ಮೇಘಾಲಯದಲ್ಲಿದೆ
ಇದು ಮೇಘಾಲಯದ ಉಮ್ಗೋಟ್ ನದಿಯ ಚಿತ್ರ ಎಂದು ಜಲ ಶಕ್ತಿ ಸಚಿವಾಲಯ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಇದರೊಂದಿಗೆ ಈ ನದಿಯನ್ನು ಸ್ವಚ್ಛವಾಗಿಟ್ಟಿದ್ದಕ್ಕಾಗಿ ರಾಜ್ಯದ ಜನತೆಗೆ ಸಚಿವಾಲಯ ಧನ್ಯವಾದವನ್ನೂ ಸಲ್ಲಿಸಿದೆ.
ಸಚಿವಾಲಯವು "ಇದು ವಿಶ್ವದ ಅತ್ಯಂತ ಸ್ವಚ್ಛವಾದ ನದಿಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿದೆ. ಮೇಘಾಲಯ ರಾಜ್ಯದ ಶಿಲ್ಲಾಂಗ್‌ನಿಂದ 100 ಕಿಮೀ ದೂರದಲ್ಲಿರುವ ಉಮ್ಗೋಟ್ ನದಿಯಾಗಿದೆ. ಇದರ ನೀರು ತುಂಬಾ ಸ್ಪಷ್ಟ ಮತ್ತು ಪಾರದರ್ಶಕವಾಗಿದೆ. ಈ ನೀರಿನ ಮೇಲೆ ದೋಣಿ ಇದೆ ಎನ್ನುವು ಅನುಮಾನ ಕೂಡ ಉದ್ಬವಿಸುತ್ತದೆ. ಈ ನದಿಯ ನೀರನ್ನು ಇಷ್ಟು ಸ್ವಚ್ಚವಾಗಿ ಕಾಪಾಡಿದಕ್ಕೆ ಮೇಘಾಲಯದ ಜನತೆಗೆ ನಮನಗಳು. ನಮ್ಮೆಲ್ಲ ನದಿಗಳು ಹೀಗೆ ಸ್ವಚ್ಛವಾಗಿರಲಿ ಎಂದು ಹಾರೈಸುತ್ತೇನೆ ಎಂದು ಬರೆದಿದೆ.
ಜನರಿಗೆ ಆಶ್ಚರ್ಯ ಉಂಟು ಮಾಡಿದ ನದಿ ಚಿತ್ರ
ಕೆಲವರು ಚಿತ್ರವನ್ನು ನೋಡಿ ದಿಗ್ಭ್ರಮೆಗೊಂಡರೆ. ಇನ್ನೂ ಕೆಲವರು ಈ ನದಿಯ ಬಗ್ಗೆ ತಿಳಿಯದ ಹೆಚ್ಚಿನ ಸಂಖ್ಯೆಯ ಜನರು ಉಮ್ಗೋಟ್ ನದಿಯ ಬಗ್ಗೆ ತಿಳಿದುಕೊಂಡು ಅದನ್ನು ಕೂಡ ಕಲುಷಿತಗೊಳಿಸಲು ಧಾವಿಸಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
ನದಿಯ ಚಿತ್ರವನ್ನು ನೋಡಿದ ಸಾಮಾಜಿಕ ಜಾಲತಾಣಗಳು ಬೆಚ್ಚಿಬಿದ್ದಿದ್ದು, ನದಿಯನ್ನು ಹೊಗಳುತ್ತಿದ್ದಾರೆ. ಇದೇ ಸಮಯದಲ್ಲಿ ಕೆಲವರು ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಜಲಶಕ್ತಿ ಸಚಿವಾಲಯದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಇದನ್ನು ತಿಳಿದ ನಂತರ ಜನರು ಅಲ್ಲಿಗೆ ಓಡುತ್ತಾರೆ ಮತ್ತು ಇತರ ನದಿಗಳಂತೆ ಇದನ್ನು ಕಲುಷಿತಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, "ನೀವು ಚಿತ್ರವನ್ನು ಏಕೆ ತೋರಿಸಿದ್ದೀರಿ ಸಹೋದರ, ಈಗ ಎಲ್ಲರೂ ನದಿಯ ಬಗ್ಗೆ ತಿಳಿದುಕೊಂಡು ಅಲ್ಲಿಗೂ ಹೋಗಿ ಅದನ್ನೂ ಕೊಳಕು ಮಾಡುತ್ತಾರೆ" ಎಂದು ಬರೆದಿದ್ದಾರೆ.

ಇನ್ನೂ ಈ ನದಿಯನ್ನು ನೋಡಿದ ಕೆಲವರು ನದಿ ನೀರು ಇಷ್ಟು ಶುದ್ಧವಾಗಿರಲು ತಮ್ಮದೇ ಆದ ಕಾರಣವನ್ನು ನೀಡಿದ್ದಾರೆ. ಇಲ್ಲಿ ಜನಸಾಂದ್ರತೆ ಕಡಿಮೆ ಇರುವುದರಿಂದ ಮತ್ತು ಜನರು ಪರ್ವತಗಳನ್ನು ತಲುಪುವುದು ಸುಲಭವಲ್ಲದ ಕಾರಣ ನೀರು ಇದು ಸ್ಪಷ್ಟವಾಗಿದೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಅರುಣಾಚಲ ಪ್ರದೇಶದ ಎಲ್ಲಾ ನದಿಗಳು ತುಂಬಾ ಸ್ವಚ್ಛವಾಗಿವೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ಇದೇ ಸಮಯದಲ್ಲಿ, ಅಂತಹ ಶುದ್ಧ ನದಿ ಇರಬಹುದೆಂದು ಮನವರಿಕೆಯಾಗದ ಕೆಲವು ಬಳಕೆದಾರರಿದ್ದಾರೆ. ಈ ಫೋಟೋವನ್ನು ಸೃಷ್ಟಿ ಮಾಡಲಾಗಿದೆ ಎಂದು ಅವರು ಭಾವಿಸಿದ್ದಾರೆ. ಒಬ್ಬರು "ಇದು ಫೋಟೋಶಾಪ್ ಮಾಡಲ್ಪಟ್ಟಿದೆ ಎಂದು ಭಾವಿಸುತ್ತೇನೆ ಒಂದು ವೇಳೆ ನನ್ನ ಹೇಳಿಕೆ ತಪ್ಪು ಎಂದು ಸಾಬೀತಾದರೆ ನಾನು ಸಂತೋಷಪಡುತ್ತೇನೆ" ಎಂದು ಬರೆದಿದ್ದಾರೆ. ಈ ವೇಳೆ ಮೇಘಾಲಯದ ನಿವಾಸಿಗಳಿಂದ ಕಲಿಯಲು ದೆಹಲಿಯ ಜನರಿಗೆ ಕೆಲವರು ಸಲಹೆ ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, "ದೆಹಲಿಯನ್ನು ಅತ್ಯಂತ ಕಲುಷಿತ ನಗರ ಮತ್ತು ಯಮುನಾವನ್ನು ಅತ್ಯಂತ ಕಲುಷಿತ ನದಿಯನ್ನಾಗಿ ಮಾಡಿದ ದೆಹಲಿ ಜನರು ಈ ನದಿಯನ್ನು ನೋಡಿ ಕಲಿಯಬೇಕು" ಎಂದು ಬರೆದಿದ್ದಾರೆ.