ಸ್ವೇಚ್ಛಾಚಾರದ ಮುಸುಕಿನಲ್ಲಿ ಸ್ವಾತಂತ್ರ್ಯದ ಅವನತಿ!

Posted By: ತೇಜಶಂಕರ ಸೋಮಯಾಜಿ, ಶೃಂಗೇರಿ
Subscribe to Oneindia Kannada

ನಮ್ಮ ಭಾರತೀಯ ಸಂಸ್ಕೃತಿ ನನಗೆ ಒಂದು ಹೆಮ್ಮೆಯ ವಿಷಯವೇ. ಇದರಲ್ಲಿ ಹೆಣ್ಣನ್ನು ಶೋಷಿಸಲಾಗಿದೆ ಎನ್ನುವುದು ನಾನು ಒಪ್ಪಲಾರೆ. ಸಂಸ್ಕೃತಿಯ ಹೆಸರಲ್ಲಿ ಮೋಸವಾಗಿರಬಹುದು, ಆದರೆ ಸಂಸ್ಕೃತಿ ಗೌರವವನ್ನೇ ನೀಡುತ್ತದೆ. ಮೊನ್ನೆ ಹೀಗೆ ಒಂದು ಸಂದರ್ಭದಲ್ಲಿ ಹೆಣ್ಣು ಆಭರಣಗಳನ್ನು ತೊಡುವುದರಿಂದ ಅವರ ಆರೋಗ್ಯಕ್ಕೂ ಲಾಭವಿದೆ ಎಂಬ ಸಂದೇಶ ಮತ್ತು ಅದಕ್ಕುತ್ತರವಾಗಿ ಅನೇಕ ಸಂದೇಶಗಳು ಬಂದವು.

ಮೊದಲು ಅದರಲ್ಲಿ ಬಂದ ಪ್ರತ್ಯುತ್ತರದ ಸಾರಾಂಶ ಕೇವಲ ಹೆಣ್ಣಿಗೆ ಮಾತ್ರವೇ ಈ ಸೌಲಭ್ಯವೇ? ಪುರುಷನಿಗೇಕೆ ಆಭರಣಗಳನ್ನು ಧರಿಸುವಿಕೆ ಇತ್ಯಾದಿ ನಿಯಮಗಳಿಲ್ಲ? ಹೆಣ್ಣಿಗೆ ಮಾತ್ರ ಕಟ್ಟುಪಾಡುಗಳೇ? ಎಂಬುದಾಗಿತ್ತು.

ಸಹಜವಾಗಿ ಇದು ಮೂಡುವ ಪ್ರಶ್ನೆಯೇ. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಸೌಭಾಗ್ಯದ ದೃಷ್ಟಿಯಿಂದಲೂ ಹೆಣ್ಣು ಆಭರಣ ತೊಡುತ್ತಲಿದ್ದದ್ದರಿಂದ ಇನ್ನೂ ಆಭರಣಗಳು ಹೆಣ್ಣಿನಲ್ಲಿ‌ ಮಿನುಗುತ್ತಿದೆ. ಗಂಡಿಗೂ ಉಡದಾರ, ಜನಿವಾರ, ಕಿವಿಯ ಒಂಟಿ, ಭಸ್ಮ ಅಥವಾ ಗೋಪಿಯ ಧಾರಣೆ ಇತ್ಯಾದಿಗಳು ನಿಯಮವಾಗಿತ್ತು. ತೆಲುಗು ತಮಿಳರಲ್ಲಿ ಇನ್ನೂ ಇದು ಹಾಸುಹೊಕ್ಕಾಗಿದೆ. ಆದರೆ ಇದು ಕಾಲಕ್ರಮೇಣ ನಮ್ಮಲ್ಲಿ ಕಮ್ಮಿಯಾಗಿದೆ. ಇದು ಪುರುಷನ ಅಪರಾಧವೇ? ಆತನೂ ಸಂಸ್ಕಾರಗಳಿಗೆ ಅಧೀನನೇ?

The religion which gives respect women is superior

ಸರಿ ಹಾಗಾದರೆ ಇದನ್ನೆಲ್ಲ ಒಪ್ಪಿಕೊಂಡರೂ ವಿಧವಾ ಸ್ತ್ರೀ ತಾಳಿ ಸಿಂಧೂರ ಮೊದಲಾದವುಗಳ ಪರಿತ್ಯಾಗದಿಂದ ಆರೋಗ್ಯ ಹಾಳು ಮಾಡಿಕೊಳ್ಳಬೇಕೆ? ಎನ್ನುವುದು ತಾರ್ಕಿಕ ಪ್ರಶ್ನೆ. ಆದರೆ ಅಲ್ಲಿಯೂ ವೈರಾಗ್ಯ ಪೂರ್ಣವಾದ ಪುರುಷವಿಧ ಅಲಂಕಾರಗಳಿಂದ ಆಕೆ ಭೂಷಿತಳೇ. ಪುನಃ ಸೌಭಾಗ್ಯಾದಿ ಅಲಂಕಾರಗಳಿಂದ ಅಕೆ ಶೋಭಿತಳಾದರೆ, ಆಕೆಯ ಮನ ವೈರಾಗ್ಯದ ಕಡೆ ಹರಿಯದಿದ್ದರೆ, ಅವಳು ಶೋಭಾಯಮಾನವಾಗಿ ಕಂಡರೆ ಆಕೆಗೂ ತಾಪತ್ರಯಗಳು ಇದ್ದಿದ್ದೇ. ಮೃದು ಮನದ ಆಕೆಗೆ ತನ್ನ ಹಿಂದಿನ ಎಲ್ಲಾ ಜೀವಿತ ನೆನಪಾಗಿ ದುಃಖಿಸುವುದಿಲ್ಲವೇ?

ಇದೇ ತಾನೆ ನಾವು ಇಂದಿಗೂ ಆಚರಿಸುವುದು. ಮಕ್ಕಳಿರದ ಮನೆಯಲ್ಲಿ ನಮ್ಮ ಮಕ್ಕಳ ತುಂಟಾಟ ಹೇಳಿ ನಗುತ್ತೇವೆಯೇನು? ಇಲ್ಲವಲ್ಲ.. ಫೇಲಾದ ಹುಡುಗನೊಬ್ಬನಿಗೆ ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಹುಡುಗನ ಮನೆಗೆ ಬಾ ಎಂದರೂ ಆತ ಬರಲಾರ ಅಲ್ಲವೇ? ಹಾಗೆ ಅಲ್ಲವೇ ಇಲ್ಲಿ. ಅಲ್ಲದೆ ರೂಪವತಿಯಾದ ಆಕೆಯನ್ನು ಆಭರಣಗಳನ್ನು ಅಲಂಕರಿಸಿದರೆ ಆಕೆಯನ್ನು ಭೋಗ್ಯ ಎನ್ನುವಂತೆ ನೋಡುವ ಕ್ರೂರಿಗಳಿಂದ ರಕ್ಷಿಸಿಕೊಳ್ಳುವುದೆಂತು? ಒಂದು ಹಣ್ಣಿನ ರಕ್ಷಣೆಗೆ ಗಿಡಕ್ಕೆ ಬೇಲಿ ಹಾಕುತ್ತೇವೆಯೇ ಹೊರತು ಮಂಗಗಳಿಗಲ್ಲ. ಹಾಗೆಯೇ ವಜ್ರವನ್ನು ಬಂಧಿಸಿ ಅಡಗಿಸಿ ಇಡುತ್ತೇವೆಯೇ ಹೊರತು ಕಲ್ಲನಲ್ಲ ಅಲ್ಲವೇ? ಇದು ಅನಿವಾರ್ಯ ಪರಿಸ್ಥಿತಿ.

ವಿಧುರನಿಗೆ ಮತ್ತೊಂದು ಮದುವೆ ಮಾಡುವಂತೆ ಆಕೆಗೂ ಮತ್ತೊಂದು ಮದುವೆಯ ಹಕ್ಕು ನೀಡಿದರೆ ಇದರ ಅಗತ್ಯವಿರುತ್ತಿರಲಿಲ್ಲವಲ್ಲವೇ? ಹೌದು ಅಲ್ಲಿಯೂ ಹೆಣ್ಣು ಪೂರ್ಣವಾಗಿ ಸುಖಿಯಾಗಲಾರಳು. ಸಖಿಯಂತೆಯೇ ಗಂಡ ನೋಡುವನೆನ್ನುವ ನಂಬಿಕೆ ಹೇಗಿರಲು ಸಾಧ್ಯ? ಸ್ತ್ರೀ ತನ್ನ ಮನದಲ್ಲಿರಿಸಿಕೊಂಡ ಭಾವಗಳನ್ನು ಗಂಡಿನಷ್ಟು ಸುಲಭವಾಗಿ ಬದಲಿಸಿಕೊಳ್ಳಬಲ್ಲಳೇ?

The religion which gives respect women is superior

ಮಕ್ಕಳನ್ನು ಪೋಷಿಸುವಲ್ಲಿ ತಾಯಿಯಂತೆ ಬೇರೆಯಾರೂ ಇರಲಾರರು. ಮೊದಲ ಪತಿಯ ಮಗುವನ್ನು ಆಕೆಯೇ ಪೋಷಿಸುವಾಗ ಮಗುವಿಗೆ ಸರಿಯಾದ ವಾತಾವರಣಗಳು ಸಿಗುವುದು ಕಷ್ಟವೇ. ಹೀಗೆ ನಾನಾ ನಾನಾಕಾರಣಗಳಿಂದ ಪುನರ್ವಿವಾಹ ಪದ್ಧತಿ ಇರಲಿಲ್ಲವೇನೋ? ಇದರಲ್ಲೂ ನ್ಯೂನತೆ ಇರಬಹುದು ಇಲ್ಲವೆಂದಲ್ಲ. ಆದರೆ ಮೊಸರಲ್ಲಿ ಕಲ್ಲನ್ನೇ ಹುಡುಕುವುದು ದಡ್ಡತನವಲ್ಲವೇ? ಮುತ್ತು ಹವಳಗಳ ಗಂಟಿನಲ್ಲಿ ಎರಡು ಕಲ್ಲಿದ್ದರೆ ಅದರ ಮಹತ್ವ ಶೂನ್ಯವಾದೀತೇ?

ನನ್ನ ಪ್ರಕಾರ, ಬದಲಾವಣೆ ಜಗದ ನಿಯಮ. ಯಾವುದೂ ಬದಲಾಗದೇ ಮೊದಲಿನಂತೆ ಇದ್ದಿದ್ದರೆ ಸಂಪ್ರದಾಯ ಬದಲಾಗಬೇಕಾಗಿರಲಿಲ್ಲ. ಈಕೆಯೂ ಈಗ ಮೊದಲಿನಂತಿಲ್ಲ. ತಾನೂ ಸಬಲೆ ಎನ್ನುತ್ತಿರುವಾಗ ಆಕೆಗೆ ಮೊದಲಿನಂತೆ ಕಟ್ಟುಪಾಡುಗಳಿಲ್ಲ. ಆಕೆ ಕಲಿಯುತ್ತಿದ್ದಾಳೆ ಕಲಿಸುತ್ತಿದ್ದಾಳೆ. ತಿಳಿದವಳಾಗಿದ್ದಾಳೆ, ತಿಳಿಹೇಳುವವಳು ಕೂಡ ಆಗಿದ್ದಾಳೆ ಎಂಬಂತಿರುವಾಗ ಬದಲಾವಣೆ ಸರಿಯಾದದ್ದೇ. ಬದಲಾವಣೆ ಆಗಿದೆ ಕೂಡ. ಪುನರ್ವಿವಾಹಗಳು ವಿದ್ಯೆ ಕೆಲಸಗಳಲ್ಲೆಲ್ಲ ಈಗ ಮೊದಲ ಪರಿಸ್ಥಿತಿಯಿಲ್ಲ. ಸಂತೋಷ ಪಡಬಹುದಾದ್ದದ್ದೇ ಇದು.

ಆದರೆ ಒಂದಂತೂ ಖೇದಕರ. ಸಂಪ್ರದಾಯ ಸಂಸ್ಕೃತಿಗಳಲ್ಲಿ ಬದಲಾವಣೆಗೆ ಎಲ್ಲಿ ಅವಕಾಶ ನೀಡಲಾಗಿದೆಯೋ ಅದರ ದುರುಪಯೋಗವೇ ತೋರುತ್ತಿರುವುದು. ಯಾವ ನಮ್ಮ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯ ಹೇರಳವಾಗಿ ದೊರಕಿದೆಯೋ ಅದರ ಅವನತಿಗೆ ಸ್ವಾತಂತ್ರ್ಯದ ಮುಸುಕಿನಲ್ಲಿರುವ ಸ್ವೇಚ್ಛಾಚಾರ ಕಾರಣವಾಗಿರುವುದು. ಬದಲಾದ ಸಮಾಜದಲ್ಲಿ ಮನೆಯಿಂದ ಹೊರಹೊರಟ ಹೆಣ್ಣು ಮನೆಗೆ ಬರುವಳೋ ಇಲ್ಲವೋ ಎಂದು ಪೋಷಕರು ಹೆದರುತ್ತಾ ಬದುಕುವಂತಾಗಿರುವುದು.

The religion which gives respect women is superior

ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗ ಮಗನಲ್ಲ ಎನ್ನುತ್ತಿದ್ದ, ಕೂಡು ಕುಟುಂಬ ಪದ್ಧತಿಯನ್ನು, ವಂಶ ಪಾರಂಪರ್ಯ ವೃತ್ತಿಯನ್ನು ಸಮಾಜದ ಉನ್ನತಿಗಾಗಿ ಬಿಟ್ಟ ಮನೆಯಲ್ಲಿ ಇಂದು ಮಗನಿಗೆ ಕೆಲಸದ ಹೆಸರಿನಲ್ಲಿ ಬೆಂಗಳೂರು ನಿಜಭೂಮಿಯಾಗಿ, ತಂದೆ ತಾಯಿ ಅನಾಥರಾಗಿ, ಮಾಗಿದ ಅಡಿಕೆ ಮರವನ್ನು ನೋಡುವಂತಾಗಿರುವುದು. ಹಬ್ಬಕ್ಕೂ ಹರಿದಿನಕ್ಕೂ ಪಂಚಾಂಗದ ಬದಲು ಕ್ಯಾಲೆಂಡರ್ ಹಿಡಿಯುವಂತಾಗಿರುವುದು.

ಮೊಮ್ಮಕ್ಕಳು ಪಾಡ್ಯ ಬಿದಿಗೆ ಎಂದು ಅಜ್ಜನ ಬಳಿ ಬಾಯಿಪಾಠ ಹೇಳುವ ಬದಲು, ಮಾತು ಕೂಡ ಆಡದೆ ಕಾರ್ಟೂನ್ ನೋಡುತ್ತಾ ಅಜ್ಜನನ್ನು ಅನ್ಎಜುಕೇಟೆಡ್ ಅನ್ನುವುದು‌ ಸಾಮಾನ್ಯವಾದಂತಿದೆ. ಪ್ರತಿಕ್ಷಣ ಸ್ವಾವಲಂಬನೆ ಸ್ವಾಭಿಮಾನ ಎನ್ನುವ ಯುವಕರು ಪ್ರತಿದಿನವು ತಮ್ಮತನವನ್ನು ಬಿಟ್ಟು ನಮ್ಮ ಸಂಸ್ಕೃತಿಗಾಗಿ "ಎಥ್ನಿಕ್ ಡೇ" ಎಂದು ಒಂದು ದಿನ ಮೀಸಲಿಡುವುದು ಕಾಣುತ್ತಿದೆ.

ಕ್ರಿಸ್ಮಸ್ ಗೆ ಮನೆಗೆ ಬರುವ ಮಗ ಸಂಕ್ರಾಂತಿಗೆ, ಯುಗಾದಿಗೆ ಫೋನ್ ಮಾಡುವಂತಾಗಿರುವುದು. ಸೀರೆ ಉಡಲು ಕಲಿಯಲು ಆಸಕ್ತಿಯಿಲ್ಲದ ಹೆಣ್ಣು ಮಗಳೊಬ್ಬಳು ಬುರ್ಕಾ ಹೇಗೆ ಹಾಕುತ್ತಾರೆಂದು ಕಲಿಯುವುದು ನೋಡಲು ಸಿಗುತ್ತಿದೆ. ಇವೆಲ್ಲ ಕಹಿ ಸತ್ಯವೇ. ನಮ್ಮ ಸಂಸ್ಕೃತಿಯ ಉದಾರತೆಯಿಂದ ಬದಲಾದ ಅತಿಶಯೋಕ್ತಿ ಇಲ್ಲದ ನಮ್ಮ ವರ್ತಮಾನದ ಸ್ಥಿತಿಯೇ.

ಬದಲಾಗುವ ಅವಕಾಶ ಕೊಟ್ಟಿದ್ದು ಸರ್ಕಾರವಲ್ಲ, ಯಾರೋ ಸನ್ಯಾಸಿಗಳಲ್ಲ, ಬದಲಾಗಿ ಸಮಾಜವೇ. ನಮ್ಮ ಸಂಸ್ಕೃತಿಯ ಉದಾರತೆಯೇ. ಬದಲಾದ ನಾವೇ ಇಂದು ಅವೈಜ್ಞಾನಿಕವೆನ್ನುತ್ತಾ ಅದೇ ನಮ್ಮ ಧರ್ಮಕ್ಕೆ ಬೆಲೆ ಕೊಡದಿರುವಾಗ ಭಾವನಾತ್ಮಕತೆಯ ಜೊತೆ ಮನುಷ್ಯನಿಗೆ ಅಸಾಮಾನ್ಯ ಜ್ಞಾನನೀಡಿದ ನನ್ನ ಸಂಸ್ಕೃತಿ ಬದಲಾಗಲಿ, ಬದಲಾಗುತ್ತಾ ನಮ್ಮ ಸ್ವೇಚ್ಛಾಚಾರಕ್ಕೆ ಬಲಿಯಾಗಲಿ ಎಂದು ನಾನು ಹೇಗೆ ತಾನೇ ಬಯಸಲಿ?

ಇಷ್ಟೆಲ್ಲ ಬದಲಾದ ಇಂದಿನ ಮಂದಿ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಯುವ ವಿಚಾರ ಬಹಳವಿರುವಾಗ, ಯಾರೋ ಸ್ವಾರ್ಥಿಗಳು ಎಲ್ಲೋ ತಮ್ಮ ಹಿತಕ್ಕೆ ಧರ್ಮದ ಹೆಸರು ಬಳಸಿಕೊಂಡರೆ ಅದನ್ನು ಸತ್ಯವೋ ಅಲ್ಲವೋ ಎಂದು ಕೂಡ ತಿಳಿದುಕೊಳ್ಳಲಾಗದೆ, ಮೂಢರಾಗಿ ಆಚರಿಸುತ್ತಾ ಇರುವಾಗ, ಆ ಮೂಲವಾದ ಸನಾತನ ಸಂಸ್ಕೃತಿ ಏನು ಹೇಳಿದೆ ಎಂದರಿಯದೆ, ಸ್ತ್ರೀಯನ್ನು ಶೋಷಿಸಿದೆ ಎಂದು ಬಾಯಲ್ಲಿ ಬೊಬ್ಬಿರಿದರೆ ಯಾರೇನು ಮಾಡಲಾದೀತು?

ಪುರುಷನ ಪ್ರತಿ ಧರ್ಮ ಕಾರ್ಯದಲ್ಲೂ ಸ್ತ್ರೀ ತನ್ನದೇ ಪಾತ್ರವಹಿಸುತ್ತಾಳೆ. ಮದುಮಗ ಧರ್ಮೇಣ ಅರ್ಥೇಣ ಕಾಮೇಣ ನಾತಿಚರಾಮಿ ಎಂದು ಭಾಷೆ ಕೊಟ್ಟು ಸ್ತ್ರೀಯನ್ನು ತನ್ನ ಬಾಳಲ್ಲಿ ಸ್ವಾಗತಿಸುವ ಸಂಸ್ಕೃತಿ ನನ್ನದು. ಮಾತೃ ದೇವೋ ಭವ ಎಂದು ಪ್ರತಿ ಮಗುವಿಗೂ ಉಪದೇಶವನ್ನು ನೀಡುವುದು ನನ್ನ ಸನಾತನ ಧರ್ಮವೇ. ಸ್ತ್ರೀ ಶ್ರೇಷ್ಠ ಎಂದು ಈ ನನ್ನ ಧರ್ಮ ಸಾರದಿದ್ದಿದ್ದರೆ ಸ್ವಾಮಿ ವಿವೇಕಾನಂದರ ಮಾತು ಸಹೋದರ - ಸಹೋದರಿಯರೇ ಎಂದು ಪ್ರಾರಂಭವಾಗುತ್ತಿತ್ತೇ? ಯಾರೇನೆ ಹೇಳಲಿ...

ಸರ್ವಭೂತೇಷ
ಮಾತೃವತ್ ಪರದಾರೇಷು
ಸರ್ವಭೂತೇಷು ಚಾತ್ಮವತ್ |
ಕಾಷ್ಠವತ್ ಪರದ್ರವ್ಯೇಷು
ಯಃ ಪಶ್ಯತಿ ಸ ಪಂಡಿತಃ ||

ಎಂದು ಪರಸ್ತ್ರೀಯರನ್ನು ತಾಯಿಯಂತೆ ಎಲ್ಲ ಜಂತುವನ್ನು ತನ್ನಂತೆ ಬೇರೆಯವರ ವಸ್ತುವನ್ನು ಕಲ್ಲಂತೆ ನೋಡು ಎನ್ನುವ ನನ್ನ ಧರ್ಮವೇ ನನಗೆ ಶ್ರೇಷ್ಠ. ನಿಜವಾದ ಸನಾತನಿಯು ಇದನ್ನು ಅಲ್ಲಗಳಿಯಲಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The religion which gives respect women is superior. We treat women as our mother, sister, friend. It is inherent in our rich culture, tradition of Hinduism. An article by Tejashankar Somayaji, Sringeri.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ