• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಠ್ಠಲಮೂರ್ತಿ ಕಾಲಂ: ವಂಶ ಪಾರಂಪರ್ಯ ರಾಜಕಾರಣದ ಇತಿಹಾಸ

By ಆರ್ ಟಿ ವಿಠ್ಠಲಮೂರ್ತಿ
|

ನಾಡು ಕಂಡ ಅಪ್ರತಿಮ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯ ಅವರ ಬದುಕಿನಲ್ಲಿ ನಡೆದ ಘಟನೆ ಇದು.ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಹತ್ತಿರದವರೊಬ್ಬರು ಒಂದು ವಿಷಯವನ್ನು ಹೇಳುತ್ತಾರೆ. ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ತಮ್ಮ ಮಗಳು ಇಂದಿರಾ ಗಾಂಧಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಬೆಳೆಸುತ್ತಿದ್ದಾರೆ ಎಂಬುದು ಈ ವಿಷಯ.

ಅರೇ, ಹಾಗೆಲ್ಲ ಮಾಡಬಾರದು. ಮಗಳನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಬೆಳೆಸುವುದು ಎಂದರೆ ಸ್ವಜನ ಪಕ್ಷಪಾತದ ಲಕ್ಷಣ. ಜನ ಸೇವೆ ಮಾಡುವವರಿಗೆ ಸ್ವಜನ ಪಕ್ಷಪಾತ ಸಲ್ಲದು. ಸ್ವಜನ ಪಕ್ಷಪಾತ ಇರುವವರು ಜನಸೇವೆಗೆ ತಮ್ಮನ್ನು ಮುಡಿಪಾಗಿಟ್ಟುಕೊಳ್ಳುವುದು ಆಗದು ಎಂದು ಕೆಂಗಲ್ ಹನುಮಂತಯ್ಯ ಪ್ರತಿಕ್ರಿಯಿಸುತ್ತಾರೆ.

ವಿಧಾನಸೌಧ ನಿರ್ಮಾತೃ ಹನುಮಂತಯ್ಯಗೆ ಜೈ ಹೋ!

ಅಷ್ಟೇ ಅಲ್ಲ, ಕೆಲವೇ ದಿನಗಳ ನಂತರ ನೆಹರೂ ಅವರು ಭೇಟಿಯಾದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಹೀಗೆ ನೀವು ಮಗಳನ್ನೇ ಉತ್ತರಾಧಿಕಾರಿಯನ್ನಾಗಿ ಬೆಳೆಸುವುದು ಒಳ್ಳೆಯದಲ್ಲ ಎಂದು ನೇರವಾಗಿ ಹೇಳುತ್ತಾರೆ. ಕೆಂಗಲ್ ಹನುಮಂತಯ್ಯ ಅವರ ಮಾತಿಗೆ ಪ್ರತಿಯಾಗಿ ನೆಹರೂ ಅವರು ತೀಕ್ಷ್ಮವಾಗಿ ಪ್ರತಿಕ್ರಿಯಿಸದಿದ್ದರೂ ಕರ್ನಾಟಕದಲ್ಲಿ ಕೆಂಗಲ್ ಹನುಮಂತಯ್ಯ ಅವರ ವಿರುದ್ಧ ಬಂಡಾಯ ಭುಗಿಲೇಳುವಂತೆ ಮಾಡುತ್ತಾರೆ.

ಮುಂದಿನದು ಇತಿಹಾಸ. ವಿಧಾನಸೌಧ ಕಟ್ಟಲು ಶ್ರಮಿಸಿದ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿ ಆ ಕಟ್ಟಡ ಪ್ರವೇಶಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೂ ವಂಶಪಾರಂಪರ್ಯ ರಾಜಕಾರಣ ಎಂಬುದು ಮುಂದೆ ದೇಶದ ರಾಜಕೀಯದಲ್ಲಿ ಬಹುಮುಖ್ಯ ವಿಷಯವಾಗುತ್ತದೆ. ಇದರ ವಿರುದ್ಧ ಹಲವರು ಸಿಡಿದು ಬೀಳುತ್ತಾರೆ. ಮುಂದೆ ಶಾಸ್ತ್ರಿಯವರ ನಂತರ ಇಂದಿರಾ ಗಾಂಧಿ ಪ್ರಧಾನಿಯಾದ ಕಾಲದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸ್ಪಷ್ಟವಾಗಿ ಇಬ್ಭಾಗವಾಗುತ್ತದೆ. ಇಂದಿರಾ ಗಾಂಧಿ ವಿರೋಧಿ ಬಣದಲ್ಲಿ ಮೊರಾರ್ಜಿ ದೇಸಾಯಿ, ನಿಜಲಿಂಗಪ್ಪ ಸೇರಿದಂತೆ ಹಲ ಪ್ರಮುಖರು ನಿಲ್ಲುತ್ತಾರೆ. 1969ರಲ್ಲಿ ಕಾಂಗ್ರೆಸ್ ಒಡೆದು ಹೋಳಾಗುತ್ತದೆ.

ಮುಂದೆ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ವಿರೋಧಿಗಳೆಲ್ಲ ಒಗ್ಗೂಡುತ್ತಾರೆ. ಜಯಪ್ರಕಾಶ್ ನಾರಾಯಣ್ ಅವರ ಸರ್ವೋದಯ ಚಳವಳಿಯ ಜತೆ ಕೈ ಜೋಡಿಸುತ್ತಾರೆ. ತುರ್ತು ಸ್ಥಿತಿ ಹೇರಿಕೆಯ ವಿರುದ್ಧ ಹೋರಾಡುವವರಿಗೆ, ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುವುದು ಮುಖ್ಯ ಅಜೆಂಡಾ ಆಗಿ ಪರಿಣಮಿಸುತ್ತದೆ. ಈ ಹೋರಾಟದ ಫಲವಾಗಿ 1977ರಲ್ಲಿ ಕೇಂದ್ರದ ಅಧಿಕಾರ ಸೂತ್ರ ಹಿಡಿದಿದ್ದೇ ಜನತಾ ಪಕ್ಷ.

ಸಂಭ್ರಮದ ಮಧ್ಯೆ ಅನಾಥವಾದ ವಿಧಾನಸೌಧ ನಿರ್ಮಾತೃ ಕೆಂಗಲ್ ಸಮಾಧಿ

ಹೀಗೆ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಡುವುದೇ ಒಂದು ಮೌಲ್ಯವಾಗಿದ್ದ ಕಾಲಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಯಾರು ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಹೋರಾಡಿದ್ದರೋ? ಈಗ ಅವರೇ ವಂಶಪಾರಂಪರ್ಯ ರಾಜಕಾರಣ ಅನಿವಾರ್ಯ ಎನ್ನುವ ಮಟ್ಟಕ್ಕೆ ಹೋಗಿದ್ದಾರೆ. ಇವತ್ತು ಕಾಂಗ್ರೆಸ್ ನಲ್ಲಿ ಮಾತ್ರವಲ್ಲ, ಜನತಾ ಪರಿವಾರದ ಅಂಗಪಕ್ಷಗಳೇನಿವೆಯೋ ಅಲ್ಲೂ ವಂಶಪಾರಂಪರ್ಯ ರಾಜಕಾರಣ ವಿಜೃಂಭಿಸುತ್ತಿದೆ. ಬಿಜೆಪಿಯಲ್ಲಿ ಅದರ ಛಾಯೆ ಕಾಣಿಸಿಕೊಂಡು ಹಲವು ಕಾಲ ಕಳೆದು ಹೋಗಿದೆ.

ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಯಾವ ಪಕ್ಷ ಈಗ ಅಪ್ಪ-ಮಕ್ಕಳು ಪಕ್ಷವಲ್ಲ? ಯಾವ ಪಕ್ಷದಲ್ಲಿ ಸಹೋದರರಿಲ್ಲ? ಯಾವ ಪಕ್ಷದಲ್ಲಿ ಕುಟುಂಬಸ್ಥರು ಕಾಣುವುದಿಲ್ಲ? ಹೀಗಾಗಿ ಇವತ್ತು ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಹಾಗೂ ಜನತಾ ಪರಿವಾರದಲ್ಲೂ ಬಹುತೇಕ ವಂಶಪಾರಂಪರ್ಯ ರಾಜಕಾರಣ ಬಲಿಷ್ಠವಾಗುತ್ತಿದೆ. ಮುಂಚೆಯೆಲ್ಲ ವಂಶಪಾರಂಪರ್ಯ ರಾಜಕಾರಣ ತಪ್ಪು ಎನ್ನುತ್ತಿದ್ದವರೇ, ತಮ್ಮ ಮಕ್ಕಳೋ, ಸಹೋದರರೋ, ಕುಟುಂಬದ ಇನ್ಯಾರೋ ಸಕ್ರಿಯ ರಾಜಕಾರಣಕ್ಕೆ ಬಂದರೆ ತಪ್ಪೇನು? ಅವರೂ ದೇಶದ ಪ್ರಜೆಗಳಲ್ಲವೇ? ಅವರಿಗೂ ತಮ್ಮ ಇಚ್ಛೆಯ ಕ್ಷೇತ್ರದಲ್ಲಿ ಮುಂದುವರಿಯುವ ಅಧಿಕಾರ ಇಲ್ಲವೇ? ಎಂದು ಮರು ಪ್ರಶ್ನಿಸುತ್ತಿದ್ದಾರೆ.

ಆದರೆ ವಂಶಪಾರಂಪರ್ಯ ರಾಜಕಾರಣದ ಆಳದಲ್ಲಿರುವ ಒಂದು ಅಪಾಯವನ್ನು ನಾವು ಬಹು ಎಚ್ಚರದಿಂದ ಗಮನಿಸಬೇಕು. ಬ್ರಿಟಿಷರು ಭಾರತವನ್ನು ಆಕ್ರಮಿಸುವ ಮುನ್ನ ಭಾರತದಲ್ಲಿ ಆರು ನೂರಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳಲ್ಲಿ ವಂಶಪಾರಂಪರ್ಯವಾಗಿ ರಾಜನ ಅಧಿಕಾರ ಹಸ್ತಾಂತರವಾಗುತ್ತಿತ್ತು.

ಮುಘಲರು ಬರುವ ಮುನ್ನವೂ, ಬಂದ ನಂತರವೂ ವಂಶಪಾರಂಪರ್ಯ ರಾಜಕಾರಣವೇ ಅಸ್ತಿತ್ವದಲ್ಲಿದ್ದುದು. ಆದರೆ ಬ್ರಿಟಿಷರು ಬಂದ ನಂತರ ವಂಶಪಾರಂಪರ್ಯ ರಾಜಕಾರಣದ ಶಕ್ತಿ ಕುಸಿಯುತ್ತಾ ಬಂತು. ವ್ಯಾಪಾರದ ಸಲುವಾಗಿ ಇಂಗ್ಲೆಂಡಿನಲ್ಲಿ ಆರಂಭವಾದ ಈಸ್ಟ್ ಇಂಡಿಯಾ ಕಂಪನಿ ಮುಂದೆ ಭಾರತಕ್ಕೆ ತಲುಪಿದ್ದು, ಕ್ರಮೇಣ ತನ್ನ ಬಾಹುಗಳನ್ನು ಎಲ್ಲೆಡೆ ವಿಸ್ತರಿಸಿದ್ದು, ತದ ನಂತರ ಇಂಗ್ಲೆಂಡ್ ಅಧಿಕೃತವಾಗಿ ಭಾರತವನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ಬ್ರಿಟಿಷರು ಭಾರತವನ್ನು ಕ್ರಮೇಣ ತಮ್ಮ ತೆಕ್ಕೆಗೆ ತೆಗೆದುಕೊಂಡರು.

ಭಾರತದಂತಹ ವಿಶಾಲವಾದ ದೇಶವನ್ನು ಆಳಲು ಅನುಕೂಲವಾಗಲಿ ಎಂದು ಬಹುತೇಕ ಸಂಸ್ಥಾನಗಳ ಜತೆ ಸಹಾಯಕ ಸೈನ್ಯ ಪದ್ಧತಿ ಒಪ್ಪಂದವನ್ನು ಮಾಡಿಕೊಂಡರು. ಸಣ್ಣ ಪುಟ್ಟ ಸಂಸ್ಥಾನಗಳನ್ನು ನುಂಗಿ ಹಾಕಿದರು.

ಹೀಗಾಗಿ ವಂಶಪಾರಂಪರ್ಯ ರಾಜಕಾರಣ ಭಾರತದಲ್ಲಿ ಮುಂದುವರಿದರೂ, ಆಳದಲ್ಲಿ ಅವರು ಬ್ರಿಟಿಷರ ಕೈಗೊಂಬೆಗಳಾಗಿದ್ದರು. ಈಗಲೂ ಅಂತಹದೇ ವ್ಯವಸ್ಥೆ ಅಸ್ತಿತ್ವಕ್ಕೆ ಬರುವ ಕುರುಹುಗಳು ದಟ್ಟವಾಗಿ ಕಾಣುತ್ತಿವೆ. ವ್ಯತ್ಯಾಸವೆಂದರೆ ಮುಂಚೆ ವಿದೇಶಿಯರು ಸಂಸ್ಥಾನಗಳ ಮೇಲೆ ಹಿಡಿತ ಸಾಧಿಸಿದ್ದರು. ಈಗ ಸ್ವದೇಶಿಯರು ರಾಷ್ಟ್ರೀಯ ಪಕ್ಷಗಳ ಹೆಸರಿನಲ್ಲಿ ಹಿಡಿತ ಸಾಧಿಸತೊಡಗಿದ್ದಾರೆ. ಇದರ ಮಧ್ಯೆ ವಂಶಪಾರಂಪರ್ಯ ರಾಜಕಾರಣ ಪ್ರಮುಖ ರಾಜ್ಯಗಳಲ್ಲಿ ನೆಲೆಯೂರಿದೆ.

ವಂಶಪಾರಂಪರ್ಯ ರಾಜಕಾರಣಕ್ಕೆ ಬಹುತೇಕ ಯಾವ ಪಕ್ಷಗಳೂ ಹೊರತಲ್ಲವಾದ್ದರಿಂದ ಒಟ್ಟಾರೆಯಾಗಿ ಈ ವ್ಯವಸ್ಥೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿರುವುದು ರಾಷ್ಟ್ರೀಯ ಪಕ್ಷಗಳ ಪಾಲಿಗೆ ಅನುಕೂಲಕರವೇ ಆಗಿದೆ.

ಯಾಕೆಂದರೆ ವಂಶಪಾರಂಪರ್ಯ ರಾಜಕಾರಣ ಎಂಬುದು ಆಯಾ ರಾಜ್ಯಗಳಲ್ಲಿ ನೆಲೆ ಊರುತ್ತಿರುವುದರಿಂದ ರಾಷ್ಟ್ರೀಯ ಪಕ್ಷಗಳು ಅವರ ಜತೆ ಸ್ನೇಹದಿಂದಿದ್ದರೆ ಸಾಕು, ಒಂದೆಡೆಯಿಂದ ವಂಶಪಾರಂಪರ್ಯ ರಾಜಕಾರಣದ ವ್ಯವಸ್ಥೆ ಬೆಳೆದಂತೆಯೂ ಆಯಿತು. ಮತ್ತೊಂದು ಕಡೆಯಿಂದ ರಾಷ್ಟ್ರೀಯ ಪಕ್ಷಗಳ ಆಡಳಿತದ ಹೊಣೆಗಾರಿಕೆಯೂ ಸುಲಭವಾಯಿತು.

ಅಂದ ಹಾಗೆ ಯಾವ ರಾಷ್ಟ್ರೀಯ ಪಕ್ಷ ಕೊಟ್ಟು, ತೆಗೆದುಕೊಳ್ಳುವ ವಿಷಯದಲ್ಲಿ ಹೆಚ್ಚು ಉದಾರಿಯಾಗಿರುತ್ತದೋ ಆ ಪಕ್ಷದ ಜತೆ ವಂಶಪಾರಂಪರ್ಯ ರಾಜಕಾರಣ ಮಾಡುತ್ತಿರುವವರು ಗುರುತಿಸಿಕೊಳ್ಳುತ್ತಾರೆ. ಬ್ರಿಟಿಷರ ಕಾಲದಲ್ಲಿ ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅನ್ನುವ ವಿಷಯ ಬಂದಾಗ ಭಾರತೀಯ ಸಂಸ್ಥಾನಗಳಿಗೆ ಎರಡನೇ ಆದ್ಯತೆ ಇರಲಿಲ್ಲ. ಶುರುವಿನಲ್ಲಿ ಪೋರ್ಚುಗೀಸರು, ಡಚ್ಚರು ಅಂತೆಲ್ಲ ಇದ್ದರೂ ಅವರು ಬಹುಕಾಲ ಬ್ರಿಟಿಷರ ಮುಂದೆ ನೆಲೆಯೂರಲಾಗಲಿಲ್ಲ. ಆದರೆ ಈಗ ಹಲವು ಆದ್ಯತೆಗಳಿವೆ. ಹೀಗಾಗಿ ಒಂದು ಕಾಲದಲ್ಲಿ ಭಾರತದ ಉದ್ದಗಲ ಕಾಣುತ್ತಿದ್ದ ವಂಶಪಾರಂಪರ್ಯ ರಾಜಕಾರಣ ಅಥವಾ ಅರಸೊತ್ತಿಗೆಯ ಪರಂಪರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಢಾಳಾಗಿ ಎದ್ದು ಕಾಣುವುದು ಸ್ಪಷ್ಟವಾಗುತ್ತಿದೆ.

ಇಂತಹ ವ್ಯವಸ್ಥೆ ರೂಪುಗೊಂಡಾಗ ಜಾಗತೀಕರಣ ವ್ಯವಸ್ಥೆಯ ಹಿಡಿತ ಬಲವಾಗುತ್ತಾ ಹೋಗುತ್ತದೆ. ಯಾಕೆಂದರೆ ಅವರು ಯಾರನ್ನು ಬಯಸುತ್ತಾರೋ? ಅವರು ರಾಜಕೀಯ ಅಧಿಕಾರ ಹಿಡಿಯುತ್ತಾರೆ. ಬಂಡವಾಳಷಾಹಿ ವ್ಯವಸ್ಥೆಗೆ ಅನುಕೂಲಕರವಾದ ಕಾನೂನುಗಳನ್ನು ರೂಪಿಸುತ್ತಾರೆ. ವಿಪರ್ಯಾಸವೆಂದರೆ, ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಜನ ಕಂಡೂ ಕಾಣದಂತೆ ಮೌನವಾಗಿದ್ದಾರೆ. ಜಾಗತೀಕರಣ ಎಂಬುದು ನಿರಾತಂಕವಾಗಿ ತಳವೂರಲು ಇದಕ್ಕಿಂತ ಬೇರೇನು ಬೇಕು? ಇದನ್ನೆಲ್ಲ ಗಮನಿಸಿದ ಮೇಲೆ ಕೆಂಗಲ್ ಹನುಮಂತಯ್ಯ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಮೌಲ್ಯಗಳು ಹೇಗೆ ಬದಲಾಗುತ್ತವೆ ಎಂಬುದು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dynastic politics is not new thing in India politics. It started with Jawaharlal Nehru after Independence of India. Nehru's intensions to make Indira his hair was questioned by Kengal Hanumanthaiah. Kengal had pay prize for it. The same is continuing now also. Political analysis by R T Vittal Murthy.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more