Child birth: ಮೂರನೇ ಮಗು ಹೆಣ್ಣಾದ್ರೆ 50,000 ಕ್ಯಾಶ್, ಗಂಡಾದ್ರೆ ಹಸು ಗಿಫ್ಟ್, ಎಲ್ಲಿ?
ಜನಸಂಖ್ಯಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ನಾವಿಬ್ಬರೂ ನಮಗಿಬ್ಬರು ಎನ್ನುವ ಘೋಷವಾಕ್ಯವೂ ಬಾಯಲ್ಲಿದೆ. ಈಗಿನ ದುಬಾರಿ ದುನಿಯಾದಲ್ಲಿ ಒಂದು ಮಗುವನ್ನು ಹೆತ್ತು ಹೊತ್ತು, ಸಾಕುವಷ್ಟರಲ್ಲಿ ಬದುಕು ಸಾಕೆನಿಸುತ್ತೆ ಎನ್ನುವವರಿದ್ದಾರೆ. ಆದರೂ ಬಹುತೇಕ ಎರಡು ಮಕ್ಕಳನ್ನು ಮಾಡಿಕೊಂಡು ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದೀಗ ಸರ್ಕಾರದ ಪ್ರತಿನಿಧಿಯೇ ಮೂರನೇ ಮಗು ಮಾಡಿಕೊಳ್ಳಿ ಎಂದು ದಂಪತಿಗಳಿಗೆ ಹೇಳುತ್ತಿದ್ದು, ಇದಕ್ಕಾಗಿ ವಿಶೇಷ ಸವಲತ್ತುಗಳನ್ನು ನೀಡುವುದಾಗಿ ವಾಗ್ದಾನ ನೀಡುತ್ತಿದ್ದಾರೆ. ಇಷ್ಟಕ್ಕೂ ಈ ರೀತಿ ಹೇಳುತ್ತಿರುವುದು ಯಾವ ಸರ್ಕಾರದ ಜನಪ್ರತಿನಿಧಿ ಗೊತ್ತಾ?
ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಸಂಸದರೊಬ್ಬರು ಘೋಷಣೆ ಮಾಡಿದ್ದಾರೆ. ಹೇಳಿದ್ದಾರೆ. ದಂಪತಿಗೆ ಜನಿಸುವ ಮೂರನೇ ಮಗು ಹೆಣ್ಣಾಗಿದ್ದರೆ ಅವರ ಸಂಬಳದಿಂದ 50,000 ರೂಪಾಯಿ ಹಾಗೂ ಗಂಡು ಮಗುವಾಗಿದ್ದರೆ ಒಂದು ಹಸುವನ್ನು ಗಿಫ್ಟ್ ನೀಡುವುದಾಗಿ ಸಂಸದರೇ ಘೋಷಣೆ ಮಾಡಿರುವುದು ಸಂಚಲನ ಸೃಷ್ಟಿಸಿದೆ. ಪಕ್ಕದ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ (ಟಿಡಿಪಿ) ವಿಜಯನಗರ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಈ ಆಫರ್ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿರುವಂತೆ ತೆಲುಗು ದೇಶಂ ಪಕ್ಷದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಮೂರನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ಪ್ರೋತ್ಸಾಹಧನ ನೀಡುವುದಾಗಿ ಹೇಳಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಸದರ ಹುಟ್ಟೂರು ರಣಸ್ಥಳಂನಲ್ಲಿರುವ ಪಕ್ಷದ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಇದನ್ನು ವಾಟ್ಸಾಪ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಸಂಸದರು ಈ ಕೊಡುಗೆ ನೀಡುತ್ತಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯನಗರದ ರಾಜೀವ್ ಸ್ಪೋರ್ಟ್ಸ್ ಕಾಂಪೌಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದರು ಈ ಕೊಡುಗೆ ಬಗ್ಗೆ ಮಾತನಾಡಿದ್ದಾರೆ. ಒಬ್ಬ ಮಹಿಳೆ ಮೂರನೇ ಮಗುವಿಗೆ, ಅದರಲ್ಲೂ ಹೆಣ್ಣು ಮಗುವಿಗೆ ಜನ್ಮ ನೀಡಿದರೆ, ನನ್ನ ಸಂಬಳದಿಂದ 50,000 ರೂಪಾಯಿ ಹಣ ನೀಡುತ್ತೇನೆ. ಆ ಮಗು ಗಂಡಾಗಿದ್ದರೆ ಒಂದು ಹಸುವನ್ನು ಆ ತಾಯಿಗೆ ಹಸ್ತಾಂತರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಕ್ರಮವನ್ನು ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ ಮಹಿಳೆಯರ ಸಬಲೀಕರಣದ ಕ್ರಾಂತಿಕಾರಿ ನಿರ್ಧಾರ ಎಂದು ಶ್ಲಾಘಿಸುತ್ತಿದ್ದಾರೆ.

ಈ ಘೋಷಣೆ ಮಾಡಿರುವ ಸಂಸದ ಅಪ್ಪಲನಾಯ್ಡು ಅವರ ಬಗ್ಗೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ಬೆಳವಣಿಗೆಗೆ ಕ್ರಮ ಕೈಗೊಳ್ಳಬೇಕೆಂದು ನಾಯ್ಡು ಕೂಡ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಪ್ಪಲನಾಯ್ಡು ಅವರು ಮೂರನೇ ಮಗುವನ್ನು ಹೊಂದಲು ಉತ್ತೇಜನ ನೀಡುತ್ತಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರು ಕೂಡ ಮಾತೃತ್ವ ರಜೆಯ ಬಗ್ಗೆ ಹೊಸ ಘೋಷಣೆ ಮಾಡಿದ್ದಾರೆ. ಮಹಿಳಾ ಉದ್ಯೋಗಿಗಳಿಗೆ ಮಕ್ಕಳ ಸಂಖ್ಯೆಯನ್ನು ಲೆಕ್ಕಿಸದೆ ಎಲ್ಲ ಮಗುವಿನ ಹೆರಿಗೆಗಳಿಗೆ ಹೆರಿಗೆ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.












Click it and Unblock the Notifications