• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಳಿಸಿಕೊಳ್ಳಲ್ಲ, ಗೌರವ ನೀಡಲ್ಲ, ಸುತ್ತಾಟ ಇಲ್ಲ; ದಿನೇಶ್ ಬಗ್ಗೆ ಆಕ್ಷೇಪ ಎಷ್ಟೆಲ್ಲ?

By ಅನಿಲ್ ಆಚಾರ್
|

ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷರು ಯಾರು? ಈ ಪ್ರಶ್ನೆಗೆ ಥಟ್ಟನೆ ಡಾ. ಜಿ. ಪರಮೇಶ್ವರ ಎಂದು ಉತ್ತರ ಬಂದರೂ ಅಚ್ಚರಿಪಡುವಂತಿಲ್ಲ. ಏಕೆಂದರೆ ಸದ್ಯದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಹೆಸರು ನೆನಪಿಗೆ ಬಾರದೆ ಹೋಗಬಹುದು. ಅಥವಾ ಅವರೆಲ್ಲಿ ಕೆಪಿಸಿಸಿ ಅಧ್ಯಕ್ಷರಿದ್ದಂತೆ ಇದ್ದಾರೆ ಎಂಬ ಪ್ರಶ್ನೆಯೂ ಮೂಡಬಹುದು.

ಈ ತಕ್ಷಣದ ಮಾಹಿತಿಯನ್ನೇ ನಂಬುವುದಾದರೆ, ದಿನೇಶ್ ಗುಂಡೂರಾವ್ ಅವರನ್ನು ಆ ಹುದ್ದೆಯಿಂದ ಇಳಿಸಿ, ಡಿ. ಕೆ. ಶಿವಕುಮಾರ್ ಅವರಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂಬ ಸುದ್ದಿ ಇದೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಕಾಂಗ್ರೆಸ್ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು.

ಕೇಂದ್ರ ಸರ್ಕಾರಕ್ಕೆ ರಾಜ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ಯಾ?: ದಿನೇಶ್ ಗುಂಡೂರಾವ್

ಅದರಲ್ಲೂ ಲೋಕಸಭಾ ಚುನಾವಣೆಯಲ್ಲಿನ ಕಾಂಗ್ರೆಸ್ ಪಾಲಿನ ಸೋಲು ಇತಿಹಾಸದಲ್ಲೇ ಅಳಿಸಲಾರದಂಥ ಅತಿ ದೊಡ್ಡ ಗಾಯ. ಮರೆಯಲು ಸಾಧ್ಯವೇ ಇಲ್ಲದಂಥ ಮುಖಕ್ಕೆ ಮೆತ್ತಿದ ಮಸಿ. ಅಸಲಿಗೆ ದಿನೇಶ್ ಗುಂಡೂರಾವ್ ಅವರ ಸಮಸ್ಯೆ ಏನು? ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕಾಂಗ್ರೆಸ್ ಗೆ ಒಂದು ನೆಲೆ ಅಂತಿದೆ. ಕಾರ್ಯಕರ್ತರು, ಮತ ಬ್ಯಾಂಕ್ ಯಾವುದಕ್ಕೂ ಹೊಸದಾಗಿ ಏನೋ ಮಾಡಬೇಕು ಅಂತಿಲ್ಲ.

ಆದರೆ, ಕನಿಷ್ಠ ಪಕ್ಷ ಕಾರ್ಯಕರ್ತರ ಮಾತನ್ನು ಕೇಳಿಸಿಕೊಳ್ಳಬೇಕು. ಅವರದೇನೋ ಅಹವಾಲು ಇದ್ದರೆ ತಾಳ್ಮೆಯಿಂದ ಕಿವಿಯಾಗಬೇಕು.

 ಯಾರ ಮಾತನ್ನು ಕೇಳಿಸಿಕೊಳ್ಳದ ದಿನೇಶ್ ಗುಂಡೂರಾವ್

ಯಾರ ಮಾತನ್ನು ಕೇಳಿಸಿಕೊಳ್ಳದ ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್ ಅವರಿಗೆ ಕೇಳಿಸಿಕೊಳ್ಳುವುದೇ ಸಮಸ್ಯೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸುವಲ್ಲಿ ಹೀನಾಯವಾಗಿ ಸೋತಿದ್ದಾರೆ ದಿನೇಶ್. ಕಾಂಗ್ರೆಸ್ ಕಚೇರಿಗೆ ಅದ್ಯಾವ ಪುರುಷಾರ್ಥಕ್ಕೆ ಹೋಗಬೇಕು ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುವ ಮಟ್ಟಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಲೋಕಸಭೆ ಚುನಾವಣೆಯ ಹೀನಾಯ ಸೋಲನ್ನು ಏನೂ ಅಲ್ಲವೇನೋ ಎಂಬಂತೆ ಕಾಂಗ್ರೆಸ್ ಹೈ ಕಮಾಂಡ್ ದಿನೇಶ್ ಗುಂಡೂರಾವ್ ಜತೆ ನಡೆದುಕೊಂಡಿತು. ಆದರೆ ಪಕ್ಷದ ಪದಾಧಿಕಾರಿಗಳ ಮಾತನ್ನೇ ದಿನೇಶ್ ಕೇಳಿಸಿಕೊಳ್ಳುವುದಿಲ್ಲ. ಹಾಕಿದ ಜುಬ್ಬಾ ಕೊಳೆಯಾಗದಂತೆ ರಾಜಕಾರಣ ಮಾಡುವ ಅವರನ್ನು 'ವೈಟ್ ಕಾಲರ್ ರಾಜಕಾರಣಿ' ಅಂತಲೇ ಕರೆಯಲಾಗುತ್ತದೆ. ಯಾವಾಗ ಮುಂದೆ ನಿಂತು ನಡೆಸಬೇಕಾದ ನಾಯಕನೇ ಮಾತು ಕೇಳಿಸಿಕೊಳ್ಳುವುದಿಲ್ಲವೋ ಆಗ ಸಹಜವಾಗಿಯೇ ವಿಶ್ವಾಸ ಹೋಗುತ್ತದೆ. ಈಗ ದಿನೇಶ್ ಗುಂಡೂರಾವ್ ವಿಚಾರದಲ್ಲಿ ಆಗಿರುವುದು ಇದೇ. ಅಧ್ಯಕ್ಷರು ಆದೇಶ ನೀಡುವುದಕ್ಕೆ ಸೀಮಿತರಾಗಿದ್ದಾರೆಯೇ ಹೊರತು ಎದುರಿಗಿನವರ ಮಾತು ಕೇಳಲು ಸಿದ್ಧರಿಲ್ಲ.

 ಸಿದ್ದರಾಮಯ್ಯ ಅವರಿಗೂ ಪರಿಸ್ಥಿತಿ ಬಗ್ಗೆ ಗೊತ್ತಿದೆ

ಸಿದ್ದರಾಮಯ್ಯ ಅವರಿಗೂ ಪರಿಸ್ಥಿತಿ ಬಗ್ಗೆ ಗೊತ್ತಿದೆ

ಆದರೆ, ವ್ಯಕ್ತಿಗತವಾಗಿ ಯಾರಿಗೂ ಕೇಡನ್ನು ಬಯಸದ ಸಜ್ಜನ ರಾಜಕಾರಣಿ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಕಚೇರಿಯಲ್ಲಿ ಮಾತ್ರ ಒಟ್ಟು ಬೇರೆ ರೀತಿ ವರ್ತಿಸುತ್ತಾರೆ. ಕಾಂಗ್ರೆಸ್ ನ ರಾಜ್ಯಾಧ್ಯಕ್ಷರು ಪ್ರತಿಯೊಬ್ಬ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಟ್ಟಿಗೆ ಇರಬೇಕು. ಆದರೆ ದಿನೇಶ್ ಅವರ ಕಚೇರಿಯೊಳಗೆ ಶಾಸಕರಾದವರೇ ಹೋದರೂ ಸಿಗುವ ಗೌರವ ಅಷ್ಟಕ್ಕಷ್ಟೇ ಎನ್ನುತ್ತಾರೆ ಇಂಥ ಸಂಗತಿಗಳಿಂದ ನೊಂದವರು. ಪಕ್ಷಕ್ಕಾಗಿ ಶ್ರಮಿಸುತ್ತಿರುವವರನ್ನು ಕೂಡ ನಿರ್ಲಕ್ಷ್ಯ ಮಾಡಿಬಿಟ್ಟರೆ ಅದನ್ನು ಸಹಿಸುವುದಕ್ಕೆ ಸಾಧ್ಯವಾ ಎಂಬುದು ದೊಡ್ಡ ಆಕ್ಷೇಪಣೆ. ಆ ಕಾರಣಕ್ಕೆ ಸಿಟ್ಟು ಬಂದು, ನಿಷ್ಠಾವಂತ ಕಾರ್ಯಕರ್ತರು- ನಾಯಕರೇ ಕಾಂಗ್ರೆಸ್ ನ ಮುಖ್ಯ ಚಟುವಟಿಕೆಗಳಿಂದ ದೂರ ಉಳಿದುಬಿಡುತ್ತಾರೆ. ದಿನೇಶ್ ಅವಧಿಯಲ್ಲಿ ಸೃಷ್ಟಿ ಆಗುತ್ತಿರುವುದು ಅಂಥ ಸನ್ನಿವೇಶವೇ. ಇಂಥ ಬೆಳವಣಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಅಂತಲ್ಲ. ಆದರೆ, ದಿನೇಶ್ ಗುಂಡೂರಾವ್ ಗೆ ಒಂದು ದಿನಕ್ಕೂ ಇದು ಹೀಗಲ್ಲ ಹಾಗೆ ಎಂದು ಹೇಳುವ ಕೆಲಸ ಅವರು ಮಾಡಿಲ್ಲ.

ಡಿಕೆ ಶಿವಕುಮಾರ್: ಮುಳುಗುತ್ತಿರುವ ರಾಜ್ಯ ಕಾಂಗ್ರೆಸ್‌ಗೆ ಹೊಸ ಸಾರಥಿ?

 ಕಾರ್ಯಕರ್ತರ ಸಣ್ಣ- ಪುಟ್ಟ ಕೆಲಸಗಳೂ ಆಗುತ್ತಿಲ್ಲ

ಕಾರ್ಯಕರ್ತರ ಸಣ್ಣ- ಪುಟ್ಟ ಕೆಲಸಗಳೂ ಆಗುತ್ತಿಲ್ಲ

ಯಾವುದೇ ಕಾರ್ಯಕರ್ತರು ತಾನು ದುಡಿಯುವ, ಶ್ರಮಿಸುವ ಪಕ್ಷದಿಂದ ನಿರೀಕ್ಷೆ ಮಾಡುವುದು ತನ್ನ ಮನೆಯ ಬೀದಿ, ಗ್ರಾಮ, ಜಿಲ್ಲೆಯ ಕೆಲಸವನ್ನು. ಕೆಲ ಮೂಲ ಸೌಕರ್ಯ, ಉತ್ತಮ ಅಧಿಕಾರಿ, ಶಿಕ್ಷಕರನ್ನು. ಇವುಗಳ ಜತೆಜತೆಗೆ ಮೇಲ್ ಸ್ತರದ ನಾಯಕರಿಂದ ಮೆಚ್ಚುಗೆಯ ಮಾತನ್ನು ನಿರೀಕ್ಷೆ ಮಾಡುತ್ತಾರೆ. ಜತೆಗೆ ಪಕ್ಷದೊಳಗೆ ಕೆಲ ಜವಾಬ್ದಾರಿಗಳು, ಸರಕಾರ ಇದ್ದಲ್ಲಿ ಹುದ್ದೆಯನ್ನು ಎದುರು ನೋಡುತ್ತಾರೆ. ಆದರೆ ಇಂಥ ಯಾವ ಸಂಗತಿಯೂ ದಿನೇಶ್ ಗೆ ಅರ್ಥ ಆಗುತ್ತಿಲ್ಲ ಎಂಬುದೇ ಸಮಸ್ಯೆ. ಇಂಥ ರಾಜ್ಯಾಧ್ಯಕ್ಷರ ಮುಂದಾಳತ್ವದಲ್ಲಿ ಕಾರ್ಯಕರ್ತರ ಮಾನಸಿಕ ಸ್ಥೈರ್ಯ ಕುಸಿಯುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆಗೆ ಹೋಗುವುದು ನಿಕ್ಕಿಯಾದಾಗಲೂ ಕಾರ್ಯಕರ್ತರ ಜತೆಗೆ ಸಂವಹನಕ್ಕೆ ದಿನೇಶ್ ಪ್ರಯತ್ನಿಸಲೂ ಇಲ್ಲ ಎಂಬುದು ಆರೋಪ. ಆದರೆ ಈ ಮಾತನ್ನು ನಿರಾಕರಿಸುವುದಕ್ಕೆ ಸಹ ಉದಾಹರಣೆ ಸಿಗುವುದು ಕಷ್ಟ.

 ಬೂತ್ ಮಟ್ಟದ ಸಂಘಟನೆಗೆ ಪ್ರಯತ್ನಿಸಿಯೇ ಇಲ್ಲ

ಬೂತ್ ಮಟ್ಟದ ಸಂಘಟನೆಗೆ ಪ್ರಯತ್ನಿಸಿಯೇ ಇಲ್ಲ

ದಿನೇಶ್ ಗುಂಡೂರಾವ್ ಅವರಿಗೆ ರಾಜಕಾರಣದ ತಂತ್ರಗಾರಿಕೆ ಅರ್ಥವಾದಂತೆಯೇ ಕಾಣುವುದಿಲ್ಲ. ಏಕೆಂದರೆ, ಕಾಂಗ್ರೆಸ್ ನ ಈಗಿನ ಸ್ಥಿತಿಯಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಕಟ್ಟುವ ಅಗತ್ಯ ಇದೆ. ಬೂತ್ ಮಟ್ಟದ ಕಾರ್ಯಕರ್ತರ ಸಭೆ, ಸಮಾವೇಶ, ಭೇಟಿ, ಚರ್ಚೆ ಈ ಪೈಕಿ ಯಾವುದನ್ನು ಮಾಡಿಕೊಂಡು ಬಂದಿದ್ದಾರೆ ದಿನೇಶ್? ರಾಜ್ಯ ಪ್ರವಾಸ ಮಾಡಿ, ಕಾರ್ಯಕರ್ತರನ್ನು ಹುರಿದುಂಬಿಸುವ ಪ್ರಯತ್ನ ಮಾಡಬಹುದಿತ್ತು. "ಅಯ್ಯೋ ಕಾಂಗ್ರೆಸ್ ಕಚೇರಿಗೆ ಹೋದರೆ ಮುಖ ಕೊಟ್ಟು ಮಾತನಾಡುವುದು ಕಷ್ಟ. ಇನ್ನು ರಾಜ್ಯ್ ಪ್ರವಾಸ ಮಾಡಿ, ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮಾಡುತ್ತಾರಾ" ಎಂದು ಪ್ರಶ್ನಿಸುತ್ತಾರೆ ಕಾರ್ಯಕರ್ತರು. ಸರಿ, ರಾಜ್ಯದ ಪ್ರಬಲ ಸಮುದಾಯದ ಬಲ ಇದೆಯಾ ಅಂದರೆ ಅದೂ ಇಲ್ಲ. ಏಕೆಂದರೆ, ಮೇಲ್ಜಾತಿಯ ಮತಗಳು ಈಗಾಗಲೇ ಮತ್ತೊಂದು ಪಕ್ಷಕ್ಕೆ ಸಾರಾಸಗಟಾಗಿ ಬೀಳುತ್ತಿವೆ. ಅವುಗಳನ್ನು ಕಾಂಗ್ರೆಸ್ ಗೆ ಸೆಳೆಯುವ ಮಟ್ಟದ ಶಕ್ತಿಯೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಚುಕ್ಕಾಣಿಯನ್ನು ದಿನೇಶ್ ಅವರಿಗೆ ನೀಡುವುದು ಎಷ್ಟು ಸರಿ ಎಂಬುದು ಹಲವರ ಪ್ರಶ್ನೆ.

9 ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸಲಿದೆ ಕೆಪಿಸಿಸಿ

 ರಾಜ್ಯಾಧ್ಯಕ್ಷರು ಹೇಗಿರಬೇಕು ಎಂಬುದು ಪ್ರಶ್ನೆ

ರಾಜ್ಯಾಧ್ಯಕ್ಷರು ಹೇಗಿರಬೇಕು ಎಂಬುದು ಪ್ರಶ್ನೆ

ಹಾಗಿದ್ದರೆ ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಯಾರಾಗಬೇಕು? ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಬಹಳ ಮುಖ್ಯ. ನಾಯಕತ್ವದ ಗುಣಗಳಲ್ಲಿ ಅದೂ ಒಂದು. ಇಂಥ ಮಹತ್ವಾಕಾಂಕ್ಷೆ ಅವರಲ್ಲಿ ಕಾಣುವುದೇ ಇಲ್ಲ. ಆದ್ದರಿಂದ ಪಕ್ಷಕ್ಕೆ ಬೇಕಾಗಿರುವುದು ರಾಜಕೀಯ ಮಹತ್ವಾಕಾಂಕ್ಷೆ ಇರುವ, ಇಡೀ ರಾಜ್ಯ ಸುತ್ತಾಡಿ ಪಕ್ಷ ಸಂಘಟನೆ ಮಾಡಬಲ್ಲ, ಪ್ರಬಲ ಸಮುದಾಯದ ನಾಯಕ. ಇದರ ಜತೆಜತೆಗೆ ಪಕ್ಷಕ್ಕೆ ಆರ್ಥಿಕ ಚೈತನ್ಯ ತುಂಬುವ ಜರೂರತ್ತು ಈ ಹಿಂದಿಗಿಂತಲೂ ಈಗ ಹೆಚ್ಚಾಗಿದೆ. ಪಕ್ಷದ ಆರ್ಥಿಕ ಸ್ಥಿತಿಯನ್ನು ಸಹ ಸರಿಯಾಗಿ ನಿರ್ವಹಿಸುವುದಕ್ಕೆ ಆಗುತ್ತಿಲ್ಲ ಎಂಬುದು ಮತ್ತೊಂದು ಆಕ್ಷೇಪ. ಅದು ಯಾವ ಪರಿ ಆಗಿದೆ ಅಂದರೆ, ಕಾಂಗ್ರೆಸ್ ಪಾಲಿಗೆ ಅದು ದೌರ್ಬಲ್ಯವಾಗಿ ಪರಿಣಮಿಸಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರನ್ನು ಪ್ರೋತ್ಸಾಹಿಸುತ್ತಾ, ಎದುರಾಳಿ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ನೀಡುತ್ತಾ, ರಾಜಕೀಯ ತಂತ್ರಗಳನ್ನು ರೂಪಿಸಿ, ಎಲ್ಲರ ಧ್ವನಿಯನ್ನೂ ಕೇಳಿಸಿಕೊಳ್ಳುವ ನಾಯಕನ ಅಗತ್ಯ ಕಾಂಗ್ರೆಸ್ ಗೆ ಇದೆ. ಅದು ಸಾಧ್ಯವಾಗುತ್ತದಾ? ಕಾದು ನೋಡೋಣ.

English summary
Karnataka Congress in deep trouble. Meanwhile party workers not happy with KPCC president Dinesh Gundu Rao. Here is the reason behind it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X