ಬುಧವಾರ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ; ಇವರೇ ಪ್ರಬಲ ಆಕಾಂಕ್ಷಿಗಳು
ಕೊಲಂಬೋ, ಜುಲೈ 18: ಆರ್ಥಿಕವಾಗಿ ಜರ್ಝರಿತವಾಗಿರುವ ಮತ್ತು ಪ್ರತಿಭಟನೆ ಹಿಂಸಾಚಾರಗಳಿಂದ ನಲುಗುತ್ತಿರುವ ಶ್ರೀಲಂಕಾಗೆ ಹೊಸ ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆಯಲಿದೆ.
ಲಂಕಾ ಸಂಸತ್ತಿನ ಎಲ್ಲಾ ಸದಸ್ಯರೂ ಸೇರಿ ನೂತನ ಅಧ್ಯಕ್ಷರನ್ನು ಚುನಾಯಿಸಲಿದ್ಧಾರೆ. ಸರ್ವ ಪಕ್ಷಗಳ ಸಂಸದರೂ ಈ ಚುನಾವಣೆಯಲ್ಲಿ ಪಾಲ್ಗೊಳ್ಳಲಿರುವುದರಿಂದ ನೂತನ ಅಧ್ಯಕ್ಷರ ಆಯ್ಕೆ ಬಹುತೇಕ ಮುಕ್ತವಾಗಿದೆ, ಕುತೂಹಲ ಕೆರಳಿಸಿದೆ.
ಶ್ರೀಲಂಕಾದಲ್ಲಿ ಕಳೆದ ಕೆಲವಾರು ತಿಂಗಳಿಂದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಅಗತ್ಯ ವಸ್ತುಗಳ ಅಭಾವ ಇದೆ. ಕೊಳ್ಳಲು ಸರಕಾರದ ಬಳಿ ಹಣ ಇಲ್ಲ, ಜನರ ಬಳಿಯೂ ಹಣ ಇಲ್ಲ. ಅಧ್ಯಕ್ಷ ಗೋಟಬಯ ರಾಜಪಕ್ಸ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಅಸಮರ್ಪಕ ಆಡಳಿತ ನಿರ್ವಹಣೆ ಸೇರಿದಂತೆ ಹಲವು ಅಂಶಗಳು ಲಂಕಾ ಆರ್ಥಿಕ ದುಸ್ಥಿತಿಗೆ ಕಾರಣವೆಂದು ಬಗೆಯಲಾಗಿದೆ.
ಜನರ ತೀವ್ರ ಪ್ರತಿಭಟನೆ ಬಳಿಕ ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ಕೊಟ್ಟು ಈಗ ತಲೆಮರೆಸಿಕೊಂಡಿದ್ಧಾರೆ. ಸಂಪುಟದ ಎಲ್ಲಾ ಸದಸ್ಯರೂ ರಾಜೀನಾಮೆ ನೀಡಿದ್ದಾರೆ. ಈಗ ಹೊಸದಾಗಿ ಸರಕಾರ ರಚಿಸಬೇಕಾಗಿದೆ. ಈ ಆರ್ಥಿಕ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಸಾಧುವೆನಿಸುವುದಿಲ್ಲವಾದ್ದರಿಂದ ಎಲ್ಲಾ ಪಕ್ಷಗಳೂ ಸೇರಿ ಸರಕಾರ ರಚಿಸುವ ನಿರ್ಧಾರಕ್ಕೆ ಬಂದಿವೆ. ಅಂತೆಯೇ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿದೆ.
ಜುಲೈ 20 ಬುಧವಾರದಂದು ಚುನಾವಣೆ ನಡೆಯಲಿದೆ. ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ಜುಲೈ 19ರಂದು ದಿನ ನಿಗದಿಯಾಗಿದೆ. ಆಯ್ಕೆಯಾಗುವ ನೂತನ ಅಧ್ಯಕ್ಷರ ಕಾರ್ಯಾವಧಿ 2 ವರ್ಷ ಇರಲಿದೆ. 2024ಕ್ಕೆ ನಡೆಯಲಿರುವ ಚುನಾವಣೆಯವರೆಗೂ ಹೊಸ ಅಧ್ಯಕ್ಷರು ಆಡಳಿತ ನಡೆಸಬಹುದು. ಹೊಸ ಅಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸಬಹುದು?

ಸಜಿತ್ ಪ್ರೇಮದಾಸ
ಇವರು ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷ ಸಾಮಗಿ ಜನ ಬಲವೇಗಯದ ನಾಯಕ. ರಾಜಪಕ್ಸೆ ಸರಕಾರದ ನೀತಿ ವಿರುದ್ಧ ಪ್ರಖರ ಹೋರಾಟ ನಡೆಸಿದವರು, ಜನಾಭಿಪ್ರಾಯ ರೂಪಿಸಿದವರು. ಇವರ ತಂದೆ ರಣಸಿಂಘೆ ಪ್ರೇಮದಾಸ ಹಿಂದೆ ಶ್ರೀಲಂಕಾ ಅಧ್ಯಕ್ಷರಾಗಿದ್ದರು. ತೊಂಬತ್ತರ ದಶಕದಲ್ಲಿ ಇವರು ಅಧ್ಯಕ್ಷ ಹುದ್ದೆಯಲ್ಲಿರುವಾಗಲೇ ತಮಿಳು ಉಗ್ರರ ಆತ್ಮಹತ್ಯಾ ದಾಳಿಯಲ್ಲಿ ಬಲಿಯಾಗಿದ್ದರು. ಆ ಘಟನೆ ಬಳಿಕ ಸಜಿತ್ ಪ್ರೇಮದಾಸ ರಾಜಕಾರಣಕ್ಕೆ ಧುಮುಕಿದ್ದರು.
ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಈಗ ಪ್ರಧಾನಿಯಾಗಿರುವ ರಾನಿಲ್ ವಿಕ್ರಮಸಿಂಘೆ ಅವರ ಜೊತೆ ಸಜಿತ್ ನಿಕಟವಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. 2020ರಲ್ಲಿ ರಾನಿಲ್ ವಿಕ್ರಮಸಿಂಘೆ ಸಖ್ಯ ತೊರೆದು ಸ್ವಂತ ಪಕ್ಷ ಕಟ್ಟಿದ್ದರು.
ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ 55 ವರ್ಷದ ಸಜಿತ್‌ರನ್ನು ಆಯ್ಕೆ ಮಾಡುವ ಪ್ರಸ್ತಾವವನ್ನು ಅಧ್ಯಕ್ಷರು ಕೊಟ್ಟಿದ್ದರು. ಆದರೆ, ಅಧ್ಯಕ್ಷ ಪದವಿಗೆ ಹೆಚ್ಚು ಅಧಿಕಾರ ಕೊಡುವುದಕ್ಕೆ ಸಜಿತ್ ವಿರೋಧಿಸಿದ್ದರಿಂದ ಅದು ಆಗಲಿಲ್ಲ. ಈಗ ಸಜಿತ್ ಅವರೇ ಅಧ್ಯಕ್ಷ ಗಾದಿಗೆ ಕೈ ಹಾಕಲಿರುವುದು ಕುತೂಹಲ ಮೂಡಿಸಿದೆ.

ರಾನಿಲ್ ವಿಕ್ರಮಸಿಂಘೆ
73 ವರ್ಷದ ರಾನಿಲ್ ವಿಕ್ರಮ ಸಿಂಘೆ ಹಾಲಿ ಪ್ರಧಾನಿ ಮತ್ತು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಹಿಂದೆ ಇವರ ಆಡಳಿತದ ಅವಧಿಯಲ್ಲಿ ಶ್ರೀಲಂಕಾ ಪರಿಸ್ಥಿತಿ ಉತ್ತಮವಾಗಿತ್ತು ಎಂದು ಹೇಳಲಾಗುತ್ತದೆ. ಸುಮಾರು ನಾಲ್ಕು ದಶಕಗಳ ಕಾಲ ಇವರು ಚುನಾವಣೆಯಲ್ಲಿ ಸೋಲಿಲ್ಲದ ಸರದಾರರೆನಿಸಿದ್ದವರು. 2020ರಲ್ಲಿ ಇವರೂ ಸೇರಿ ಇವರ ಪಕ್ಷ ನೆಲಕಚ್ಚಿತು. ಬಹುಸಂಖ್ಯೆಯಲ್ಲಿರುವ ಶ್ರೀಲಂಕಾ ಪೊದುಜನ ಪೇರಮುನ ಪಕ್ಷದ ಸಂಸದರ ಬೆಂಬಲ ಇವರಿಗೆ ಸಿಕ್ಕರೆ ವಿಕ್ರಮಸಿಂಘೆ ಅಧ್ಯಕ್ಷ ಗಾದಿ ಹತ್ತುವುದರಲ್ಲಿ ಅನುಮಾನ ಇಲ್ಲ. ಮೇಲಾಗಿ ಇವರ ಹಿಂದಿನ ಆಡಳಿತದಲ್ಲಿ ತೋರಿದ ದಕ್ಷತೆ ಇವರಿಗೆ ವರದಾನವಾಗಬಹುದು.

ಮಹಿಂದಾ ಯಪ ಅಬೇವರ್ದನಾ
76 ವರ್ಷದ ಮಹಿಂದಾ ಯಪ ಅಬೇವರ್ದನಾ ಹಾಲಿ ಸ್ಪೀಕರ್ ಆಗಿದ್ದಾರೆ. ರಾಜಪಕ್ಸೆ ಕುಟುಂಬಕ್ಕೆ ಆಪ್ತರಾಗಿರುವವರು. ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ ಸದಸ್ಯರ ಬೆಂಬಲ ಇವರಿಗೆ ಸಿಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಅವರು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ ಅಚ್ಚರಿ ಇಲ್ಲ.
ಅಬೇವರ್ದನಾ ಅನನುಭವಿ ರಾಜಕಾರಣಿ ಏನಲ್ಲ. ಮೂರು ದಶಕಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿ ಪಳಗಿದ್ದಾರೆ. ಆಡಳಿತದ ಅನುಭವವ ಇದೆ. ಶ್ರೀಂಕಾದ ದಕ್ಷಿಣ ಪ್ರಾಂತ್ಯಕ್ಕೆ ಮುಖ್ಯಮಂತ್ರಿಯಾಗಿದ್ದವರು. ಆ ಪ್ರದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಿದವರೆಂದು ಹೇಳಲಾಗುತ್ತದೆ.

ಡಳಸ್ ಅಳಗಪ್ಪೆರುಮ
ಮಹಿಂದಾ ರಾಜಪಕ್ಸೆ ಜೊತೆ ಹಿಂದೆ ಮೈತ್ರಿ ಹೊಂದಿದ್ದ 63 ವರ್ಷದ ಡಳಸ್ ಅಳಗಪ್ಪೆರುಮ ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಮೂಲತಃ ಪತ್ರಕರ್ತರಾಗಿದ್ದ ಡಳಸ್‌ಗೆ ವಿಪಕ್ಷಗಳ ಬೆಂಬಲ ಸಿಗುವ ಸಾಧ್ಯತೆ ಇದೆ. ಹಾಗೆಯೇ, ರಾಜಪಕ್ಸೆಗೆ ನಿಷ್ಠರಾಗಿದ್ದವರಲ್ಲೂ ಹಲವರು ಡಳಸ್‌ಗೆ ಬೆಂಬಲ ಕೊಡಬಹುದು. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಲ್ಲಿ ಡಳಸ್ ಕೂಡ ಒಬ್ಬರಾಗುತ್ತಾರೆ.

ಸರತ್ ಫೋನ್ಸೇಕ
ಇವರು ನಿವೃತ್ತ ಸೇನಾಧಿಕಾರಿ. ಲಂಕಾ ಸೇನೆಯ ಮಾಜಿ ಮುಖ್ಯಸ್ಥರಾದ ಇವರು ತಮಿಳು ಉಗ್ರರ ವಿರುದ್ಧದ ಹೋರಾಟದಲ್ಲಿ ಬಹಳ ಅನುಭವ ಹೊಂದಿರುವವರು. ಯುದ್ಧಾಪರಾದದ ಆರೋಪಗಳೂ ಇವರ ಬೆನ್ನುಹತ್ತಿದ್ದವು.
ರಾಜಪಕ್ಸೆ ಕುಟುಂಬಕ್ಕೆ ಒಂದು ಕಾಲದಲ್ಲಿ ನಿಕಟವಾಗಿದ್ದ 71 ವರ್ಷದ ಸರತ್ ಫೋನ್ಸೇಕಾ ೨೦೧೦ರಿಂದ ಅವರ ಎದುರಾಳಿಯಾಗಿ ಪರಿಣಮಿಸಿದರು. ಅಧ್ಯಕ್ಷರನ್ನು ಕಿತ್ತೊಗೆಯುವ ಪಿತೂರಿ ನಡೆಸಿದ ಆರೋಪದ ಮೇಲೆ ಫೋನ್ಸೇಕಾ ಅವರನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಲಂಕಾದಲ್ಲಿ ಬೃಹತ್ ಪ್ರತಿಭಟನೆಗಳೇ ನಡೆದವು. 2021ರಲ್ಲಿ ಆಗಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಫೋನ್ಸೇಕಾರನ್ನು ರಕ್ಷಿಸಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications