• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್

|

ಕೊಡಗಿನಲ್ಲಿ ಆಯಾಯ ಕಾಲಕ್ಕೆ ತಕ್ಕಂತೆ ಸುತ್ತಮುತ್ತ ದೊರೆಯುವ ಸಸ್ಯಗಳನ್ನು ಬಳಸಿಕೊಂಡು ಖಾದ್ಯ ತಯಾರಿಸಿ ಸೇವಿಸುತ್ತಾ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಿಂದಿನಿಂದಲೂ ನಡೆದುಬಂದಿದೆ. ಇತ್ತೀಚೆಗಿನ ವರ್ಷಗಳಲ್ಲಿ ಆಧುನಿಕ ಭರಾಟೆಯಲ್ಲಿ ಬಹಳಷ್ಟು ಸಸ್ಯಗಳು ಅಳಿದುಹೋಗಿವೆ. ಆದರೂ ಕೆಲವೊಂದು ಸಸ್ಯಗಳನ್ನು ಅವುಗಳ ಉಪಯೋಗವನ್ನರಿತು ಹಿರಿಯರು ಉಳಿಸಿಕೊಂಡು ಬಂದಿದ್ದಾರೆ.

   Indian Spy Satellite EMISAT Passes Over Tibet To Observe Chinese Army | Oneindia Kannada

   ಮಳೆಗಾಲ ಎಂದರೆ ಕೊಡಗಿನ ಮಟ್ಟಿಗೆ ವಿಭಿನ್ನ ಅನುಭವ. ಧಾರಾಕಾರವಾಗಿ ಸುರಿಯುವ ಮಳೆಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತು ಇಡೀ ವಾತಾವರಣವೇ ತೇವಾಂಶದಿಂದ ಕೂಡಿರುವ ಕಾರಣ ದೇಹವನ್ನು ಬೆಚ್ಚಗಿಟ್ಟು ಶೀತಬಾಧೆಯಿಂದ ತಪ್ಪಿಸಿಕೊಳ್ಳಲು ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದು, ತಮ್ಮ ಸುತ್ತಮುತ್ತ ಹಾಗೂ ಕಾಡುಗಳಲ್ಲಿ ದೊರೆಯುವ ಅಣಬೆ, ಬಿದಿರಿನಿಂದ ದೊರೆಯುವ ಕಣಿಲೆ, ನದಿ, ಹೊಳೆಯಲ್ಲಿ ದೊರೆಯುವ ಏಡಿ, ಕೆಸ ಸೇರಿದಂತೆ ಕೆಲವು ಸೊಪ್ಪುಗಳನ್ನು ಆಹಾರವಾಗಿ ಬಳಸುವ ಮೂಲಕ ದೇಹಕ್ಕೆ ಬೇಕಾದ ಶಕ್ತಿಗಳನ್ನು ಪಡೆದುಕೊಳ್ಳುವುದಲ್ಲದೆ, ತರಕಾರಿಯ ಸಮಸ್ಯೆಯನ್ನು ನೀಗಿಸಿಕೊಳ್ಳುತ್ತಿದ್ದಾರೆ.

    ಸುತ್ತಮುತ್ತಲಿನ ಸಸ್ಯಗಳೇ ತರಕಾರಿಗಳು

   ಸುತ್ತಮುತ್ತಲಿನ ಸಸ್ಯಗಳೇ ತರಕಾರಿಗಳು

   ಹಿಂದಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಏಲಕ್ಕಿ ತೋಟಗಳು ಹೆಚ್ಚಿನ ಪ್ರಮಾಣದಲ್ಲಿತ್ತು. ಕಾಫಿ ತೋಟಗಳು ಕಡಿಮೆ ಪ್ರಮಾಣದಲ್ಲಿದ್ದವು. ಗದ್ದೆಯ ಬಯಲುಗಳು ಹೆಚ್ಚಿದ್ದರಿಂದ ದನಗಳನ್ನು ಸಾಕಲು ಮತ್ತು ಅವುಗಳ ಮೇವಿಗಾಗಿ ಹೆಚ್ಚಿನ ಜಾಗಗಳನ್ನು ಬಿಡುತ್ತಿದ್ದರು. ಅಲ್ಲಿ ಬಿದಿರು ಮೆಳೆಗಳು, ಕಾಡುಗಳಿದ್ದವು. ಈ ಕಾಡುಗಳಲ್ಲಿ ವಿವಿಧ ಜಾತಿಯ ಕಾಡುಹಣ್ಣುಗಳು, ಔಷಧಿ ಸಸ್ಯಗಳು ಬೆಳೆಯುತ್ತಿದ್ದವು.

   ಮಳೆಗಾಲದ ಸ್ಪೆಷಲ್ ಕಣಿಲೆ, ಏಡಿಗೆ ಮನ ಸೋತ ಮಡಿಕೇರಿ; ಕೇಜಿ ಏಡಿಗೆ 300 ರು.

   ಮಳೆಗಾಲದಲ್ಲಿ ಇದೇ ಕಾಡುಗಳಿಂದ ಅಡುಗೆಗೆ ತರಕಾರಿ, ಸೊಪ್ಪುಗಳನ್ನು ಬಳಸುತ್ತಿದ್ದರಲ್ಲದೆ, ಜ್ವರ, ಶೀತವಾದರೆ ಇಲ್ಲಿ ಸಿಗುವ ಸಸ್ಯಗಳಿಂದಲೇ ಕಷಾಯ ತಯಾರಿಸಿ ಕುಡಿದು ಕಾಯಿಲೆ ವಾಸಿ ಮಾಡಿಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಬಿದಿರಿನಿಂದ ಬರುವ ಮೊಳಕೆ (ಕಣಿಲೆ) ಮುಖ್ಯ ತರಕಾರಿಯಾಗಿತ್ತು. ಅವತ್ತಿನ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ, ನದಿ ದಡದಲ್ಲಿ, ಕಾಡಿನ ನಡುವೆ, ಗದ್ದೆ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳಿಂದ ಕಣಿಲೆ ಕಡಿದು ತಂದು ತರಕಾರಿಯಾಗಿ ಬಳಸುತ್ತಿದ್ದರು.

    ಬಿದಿರಿಗೆ ಹೆಚ್ಚಿನ ಪ್ರಾಮುಖ್ಯ

   ಬಿದಿರಿಗೆ ಹೆಚ್ಚಿನ ಪ್ರಾಮುಖ್ಯ

   ಅವತ್ತಿನ ದಿನಗಳಲ್ಲಿ ಜನ ಬಿದಿರಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದರು. ಇದರಿಂದ ಎಲ್ಲೆಡೆ ಯಥೇಚ್ಛವಾಗಿ ಬಿದಿರು ಮೆಳೆಗಳು ಬೆಳೆಯುತ್ತಿದ್ದವು. ಈ ಬಿದಿರುಗಳು ಮನೆಗೆ ಕಚ್ಚಾವಸ್ತುವಾಗಿಯೂ, ದನಗಳಿಗೆ ಮೇವಾಗಿಯೂ ಮಳೆಗಾಲದಲ್ಲಿ ರುಚಿಕರ ಸ್ವಾದಿಷ್ಟ ತರಕಾರಿಯಾಗಿಯೂ ಬಳಕೆಯಾಗುತ್ತಿತ್ತು. ಮಳೆ ಬೀಳುತ್ತಿದ್ದಂತೆಯೇ ಬಿದಿರು ಮೆಳೆಗಳಿಂದ ಹೊರಬರುತ್ತಿದ್ದ ಕಣಿಲೆಯನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ಅದನ್ನು ನೀರಿನಲ್ಲಿ ನೆನೆಯಲು ಹಾಕಲಾಗುತ್ತಿತ್ತು. ಮೂರು ದಿನಗಳು ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಅದನ್ನು ಸಾರು, ಪಲ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಬೆಳಗ್ಗಿನ ಉಪಾಹಾರಕ್ಕೆ ಅಕ್ಕಿ ರೊಟ್ಟಿಯೊಂದಿಗೆ ಕಣಿಲೆ ಪಲ್ಯವನ್ನು ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತಿತ್ತು. ಇನ್ನು ಕಣಿಲೆಯಿಂದ ಉಪ್ಪಿನಕಾಯಿ, ಪತ್ರೋಡೆ, ಉಂಡೆಕಾಳು ಸೇರಿದಂತೆ ಹಲವಾರು ಖಾದ್ಯವನ್ನು ತಯಾರಿಸಲಾಗುತ್ತಿತ್ತು.

    ಈಗಲೂ ಕಣಿಲೆಗೆ ಬೇಡಿಕೆ ಕಡಿಮೆಯಾಗಿಲ್ಲ

   ಈಗಲೂ ಕಣಿಲೆಗೆ ಬೇಡಿಕೆ ಕಡಿಮೆಯಾಗಿಲ್ಲ

   ಕೊಡಗಿನಲ್ಲಿ ಮಳೆಗಾಲದಲ್ಲಿ ಕಣಿಲೆ ಪ್ರಮುಖ ತರಕಾರಿಯಾಗಿ ಬಳಕೆಯಾಗಲು ಕಾರಣವೂ ಇತ್ತು. ಮಳೆ ಪ್ರಾರಂಭವಾಗಿ ಇಡೀ ವಾತಾವರಣವೇ ಶೀತಮಯ ಆಗಿರುತ್ತಿದ್ದುದರಿಂದ ದೇಹವನ್ನು ಬಿಸಿಯಾಗಿಡಲು ಉಷ್ಣವಾಗಿರುವಂತಹ ಆಹಾರವೇ ಬೇಕಾಗುತ್ತಿತ್ತು. ಹಾಗಾಗಿ ಕಣಿಲೆ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರಿಂದ ಅದರಲ್ಲಿ ಉಷ್ಣದ ಗುಣಾಂಶ ಹೆಚ್ಚಾಗಿರುತ್ತಿದ್ದರಿಂದ ಜನಪ್ರಿಯವಾಗಿದ್ದು, ಈಗ ಬಿದಿರು ಮೆಳೆಗಳು ಮೊದಲಿನಷ್ಟು ಇಲ್ಲವಾದುದರಿಂದ ಇದ್ದಲ್ಲಿಂದ ತಂದು ಸೇವಿಸುತ್ತಾರೆ.

   ಮಳೆಗಾಲ ಸ್ಪೆಷಲ್: ಬಾಯಲ್ಲಿ ನೀರೂರಿಸುವ ದ.ಕನ್ನಡದ ಏಡಿ ಊಟ!

   ಕೆಲವರು ಕಾಡುಗಳಿಂದ ಕಣಿಲೆ ತಂದು ಮಾರಾಟ ಮಾಡುತ್ತಿದ್ದು, ಜನ ಅಲ್ಲಿಂದ ಖರೀದಿಸಿ ಮನೆಯಲ್ಲಿ ಸಾರು, ಪಲ್ಯ ಮಾಡುತ್ತಾರೆ. ಇನ್ನು ಕಾಡು, ತೋಟಗಳಲ್ಲಿ ಮರಗಳ ಬುಡದಲ್ಲಿ ಮತ್ತು ಕೊಂಬೆಗಳಲ್ಲಿ, ನೆಲದಲ್ಲಿ ಅಲ್ಲಲ್ಲಿ ಬೆಳೆಯುವ ಮರ ಕೆಸವನ್ನು ಬಳಸಿ ಪತ್ರೊಡೆ ಮಾಡಿ ತಿನ್ನುತ್ತಾರೆ. ಇನ್ನು ಹೊಳೆ, ನದಿ, ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಬೆಳೆಯುವ ಕೆಸದ ದಂಟು, ಬೇರು, ಚಿಗುರನ್ನು ಸಾರು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಉಷ್ಣಾಂಶವಿರುವ ಕಾರಣದಿಂದ ನಮ್ಮ ದೇಹದಲ್ಲಿರುವ ಶೀತಾಂಶವನ್ನು ದೂರ ಮಾಡಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

    ಎಲ್ಲೆಂದರಲ್ಲಿ ಹುಟ್ಟುವ ಅಣಬೆಗಳು

   ಎಲ್ಲೆಂದರಲ್ಲಿ ಹುಟ್ಟುವ ಅಣಬೆಗಳು

   ಗದ್ದೆ ಬಯಲು, ತೋಟಗಳಲ್ಲಿ ಹಲವು ಬಗೆಯ ಅಣಬೆಗಳು ಮಳೆಗಾಲದಲ್ಲಿ ಹುಟ್ಟುತ್ತವೆ. ಇವುಗಳು ಆಕಾರ, ರುಚಿಯಲ್ಲಿಯೂ ವಿಭಿನ್ನವಾಗಿರುತ್ತವೆ. ನೂರಾರು ಬಗೆಯ ಅಣಬೆಗಳು ಅಲ್ಲಲ್ಲಿ ಕಂಡು ಬಂದರೂ ಅವುಗಳಲ್ಲಿ ಕೆಲವೊಂದನ್ನು ಮಾತ್ರ ಸೇವನೆಗೆ ಬಳಸಲಾಗುತ್ತದೆ. ಯಾವ ಜಾತಿಯ ಅಣಬೆಯನ್ನು ಸೇವಿಸಬಹುದು ಎಂಬುದು ಇಲ್ಲಿನವರಿಗೆ ಗೊತ್ತಿರುತ್ತವೆ. ಅಂತಹುಗಳನ್ನು ಮಾತ್ರ ಬಳಸುತ್ತಾರೆ.

   ಹಿಂದಿನ ಕಾಲದಲ್ಲಿ ಮಳೆಗಾಲ ಆರಂಭವಾದರೆ ಹೊರಗೆ ಓಡಾಡುವುದು ಕಷ್ಟವಾಗಿತ್ತು. ಇಂತಹ ಸಂದರ್ಭಗಳಲ್ಲಿ ಪೇಟೆ ಪಟ್ಟಣಗಳಿಂದ ದೂರವಿದ್ದ ಜನರು ತಮ್ಮ ಸುತ್ತಮುತ್ತ ಸಿಗುವುದನ್ನೇ ಆಹಾರಕ್ಕೆ ಬಳಸಿಕೊಳ್ಳುತ್ತಿದ್ದರು. ಅದರಲ್ಲಿ ಹಲವು ರೀತಿಯ ಔಷಧೀಯ ಗುಣಗಳಿರುತ್ತಿದ್ದರಿಂದ ಆರೋಗ್ಯವನ್ನು ಕಾಪಾಡುತ್ತಿತ್ತು.

   ಯಾವ ಸಸ್ಯಗಳು ಆರೋಗ್ಯಕ್ಕೆ ಹಿತಕಾರಿಯಾಗಿದ್ದವೋ ಅವುಗಳನ್ನು ಎಲ್ಲರೂ ಸೇವಿಸಲು ಅನುಕೂಲವಾಗುವಂತೆ ಸಂಪ್ರದಾಯ ಮಾಡಿದರು. ಅಷ್ಟೇ ಅಲ್ಲದೆ ಅದನ್ನು ಪಾಲಿಸುತ್ತಾ ಬಂದರು. ಅದರಂತೆ ಕೊಡಗಿನಲ್ಲಿ ಮಳೆಗಾಲದಲ್ಲಿ ಇಂತಹದ್ದೇ ಆಹಾರವನ್ನು ಸೇವಿಸಬೇಕೆನ್ನುವ ಸಂಪ್ರದಾಯಗಳು ಇವತ್ತಿಗೂ ಜನರ ಆರೋಗ್ಯ ಕಾಪಾಡುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

   English summary
   There has been a long history of using the plants available in nature in rainy season in kodagu
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more