ರಾಜ್ಯದಲ್ಲಿ ತಾಲೂಕುವಾರು 'ಸ್ಪೆಷಲ್ ಎಜುಕೇಷನ್ ಜೋನ್' ರಚನೆ: ಮದನ್ ಗೋಪಾಲ್
ಬೆಂಗಳೂರು, ಅ. 05: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿರುವ ತಾಲೂಕು ವಾರು 'ಸ್ಪೆಷಲ್ ಎಜುಕೇಷನ್ ಜೋನ್' ರಚನೆ ಮಾಡಲು ಗಂಭೀರ ಚಿಂತನೆ ನಡೆಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ್ ಅಧ್ಯಕ್ಷತೆಯ ಕಾರ್ಯಪಡೆ ಸೋಮವಾರ ಸೇರಿದ ಸಭೆಯಲ್ಲಿ ಸ್ಪೆಷಲ್ ಎಜುಕೇಷನ್ ಜೋನ್' ರಚನೆ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿದಿರುವ ತಾಲೂಕು ವಾರು ವಿಶೇಷ ಶೈಕ್ಷಣಿಕ ವಲಯ ರಚನೆ ಮಾಡುವುದು. ತಾಲೂಕು ಮಟ್ಟದ ಸ್ಪೆಷಲ್ ಜೋನ್‌ನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಬಂಧ ಮೂಲ ಸೌಕರ್ಯ ಒದಗಿಸಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ತಾಲೂಕುಗಳು ಸಮಾನತೆ ಸಾಧಿಸಲು ಚಿಂತನೆ ನಡೆಸಲಾಗಿದೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡ ಹೆಚ್ಚು ಇರುವ ತಾಲೂಕುಗಳಿಗೆ ಹೆಚ್ಚು ಆದ್ಯತೆ ನೀಡಲು ಕಾರ್ಯಪಡೆ ಚಿಂತನೆ ಮಾಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರುವ ಸಂಬಂಧ ಉಪ ಸಮಿತಿ ರಚನೆ ಮಾಡಲಾಗಿದೆ.
ಸೋಮವಾರ ಎನ್‌ಇಪಿ ಕಾರ್ಯಪಡೆ ಸಭೆಯಲ್ಲಿ ಕೈಗೊಂಡ ತೀರ್ಮಾನ ಚರ್ಚೆ ಕುರಿತು ಕಾರ್ಯಪಡೆ ಮುಖ್ಯಸ್ಥರಾದ ಎಂ. ಮದನ್ ಗೋಪಾಲ್ ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡರು. ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶವನ್ನು ಗುರುತಿಸಿ ವಿಶೇಷ ಶಿಕ್ಷಣ ವಲಯ ಎಂದು ಗುರುತಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕಾರ್ಯಪಡೆಯ ಮೊದಲ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ್ದು, ರಾಜ್ಯದಲ್ಲಿ ತಾಲೂಕು ವಾರು ವಿಶೇಷ ಶೈಕ್ಷಣಿಕ ವಲಯ ರಚನೆ ಸಂಬಂಧ ತಾಲೂಕು ಗುರುತು ಮಾಡಲು ಉಪ ಸಮಿತಿ ರಚನೆ ಮಾಡಲಾಗಿದೆ.

ಶಿಕ್ಷಣ, ದಾಖಲಾತಿ, ಅಪೌಷ್ಠಿಕತೆ, ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಶೈಕ್ಷಣಿಕ ಪ್ರಗತಿ, ಆರೋಗ್ಯ ಕ್ಷೇತ್ರದ ಮಾನದಂಡಗಳನ್ನು ಮುಂದಿಟ್ಟುಕೊಂಡು ವಿಶೇಷ ಶಿಕ್ಷಣ ವಲಯ ರಚನೆ ಮಾಡಲಾಗುತ್ತದೆ. ಹೀಗೆ ಗುರುತು ಮಾಡಿದ ವಿಶೇಷ ಶೈಕ್ಷಣಿಕ ವಲಯದಲ್ಲಿ ಮೂಲ ಸೌಕರ್ಯ, ಗುಣಮಟ್ಟದ ಶಿಕ್ಷಣಕ್ಕೆ ಬೇಕಾದ ಸೌಲಭ್ಯ, ಆರೋಗ್ಯ ಮತ್ತು ನೈರ್ಮಲ್ಯ ಕಲ್ಪಿಸುವ ಸಂಬಂಧ ಸಮಿತಿ ನೀಡುವ ವರದಿ ಆಧಾರದ ಮೇಲೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಎನ್ಇಪಿ ಜಾರಿ ಮಾಡುವ ಉದ್ದೇಶದಿಂದ ಕಾಲಮಿತಿಯಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ಮದನ ಗೋಪಾಲ್ ತಿಳಿಸಿದರು.
ಶಿಕ್ಷಣದಿಂದ ವಂಚಿತ ತಾಲೂಕುಗಳಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿ ಮಾಡುವ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಕೊಡಬೇಕಿದೆ. ಈ ನಿಟ್ಟಿನಲ್ಲಿ ಉಪ ಸಮಿತಿಗೆ ಕ್ರೈಟೀರಿಯಾ ಮಾಡಿಕೊಡುವಂತೆ ಕಾಲಮಿತಿ ನಿಗದಿ ಮಾಡಲಾಗಿದೆ. ವರದಿ ಬಳಿಕ ನಿಯಮಗಳಲ್ಲಿನ ಬದಲಾವಣೆ ಮಾಡಿ ಶೈಕ್ಷಣಿಕ ಸಮಾನ ಪ್ರಗತಿಗೆ ಯೋಜನೆ ರೂಪಿಸಲು ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ನ್ಯಾಕ್ ಮಾದರಿ ಗುಣಮಟ್ಟ ಪರಿಶೀಲನ ಅಥಾರಿಟಿ ರಚನೆ: ದೇಶದಲ್ಲಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ತಪಾಸಣೆ ಮಾಡಿ ಗ್ರೇಡಿಂಗ್ ನೀಡಲು ನ್ಯಾಕ್ ಇದೆ. ಅದೇ ರೀತಿ ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳಿಂದ ಹಿಡಿದು ಪ್ರೌಢ ಶಾಲೆಗಳ ಹಂತದ ವರೆಗೂ ಶಾಲೆಗಳ ಗುಣಮಟ್ಟ ತಪಾಸಣೆ ನಡೆಸಿ ಗ್ರೇಡಿಂಗ್ ನೀಡುವ ಬಗ್ಗೆಯೂ ಎನ್ಇಪಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಅದರಂತೆ ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಗಳ ವೆರೆಗೂ ಶಾಲೆಗಳ ಗುಣಮಟ್ಟ, ಮಕ್ಕಳ ಆರೋಗ್ಯ ರಕ್ಷಣೆ, ಅಪೌಷ್ಠಿಕತೆ ನಿವಾರಣೆ ಕುರಿತ ಶಾಲೆಗಳಿಗೆ ಗ್ರೇಡಿಂಗ್ ನೀಡಲು ಕರ್ನಾಟಕ ಕ್ವಾಲಿಟಿ ಅಸಸ್ಮೆಂಟ್ ಅಥಾರಿಟಿ ರಚನೆ ಮಾಡುವ ಬಗ್ಗೆಯೂ ಎನ್ಇಪಿ ಕಾರ್ಯಪಡೆ ಮೊದಲ ಸಭೆಯಲ್ಲಿ ಚರ್ಚಿಸಲಾಗಿದೆ.
ಈ ಸಂಬಂಧ ಕೂಡ ತಜ್ಞ ವೈದ್ಯರನ್ನು ಒಳಗೊಂಡ ಉಪ ಸಮಿತಿ ರಚನೆ ಮಾಡಲಾಗಿದೆ. ಕರ್ನಾಟಕ ಗುಣಮಟ್ಟ ಪರಿಶೀಲನಾ ಅಥಾರಿಟಿ ರಚನೆ ಸಂಬಂಧ ಲೀಗಲ್ ಫ್ರೇಮ್ ವರ್ಕ್ ಮಾಡಬೇಕಾಗುತ್ತದೆ. ಆನಂತರ ಬಿಲ್ ತಯಾರಿಸಬೇಕಾಗುತ್ತದೆ. ಕಾಲಮಿತಿಯಲ್ಲಿ ಎನ್‌ಇಪಿ ಜಾರಿ ಮಾಡುವ ಉದ್ದೇಶದಿಂದ ತ್ವರಿತವಾಗಿ ವರದಿ ನೀಡಲು ಸೂಚಿಸಲಾಗಿದೆ. ರಾಜ್ಯದಲ್ಲಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು, ನಿಯಮ ರೂಪಿಸುವುದು, ಅದನ್ನು ಅನುಷ್ಠಾನ ಮಾಡುವುದು, ಕಾಲ ಕಾಲಕ್ಕೆ ತಪಾಸಣೆ ಮಾಡುವುದು, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಅಥಾರಿಟಿ ಸ್ವತಂತ್ರ್ಯ ಸಂಸ್ಥೆಯಾಗಿ ಕೆಲಸ ನಿರ್ವಹಿಸಲಿದೆ.

ಮುಂದಿನ ಸಭೆ ಅಕ್ಟೋಬರ್ 21 ಕ್ಕೆ:
ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ನೇತೃತ್ವದ ಕಾರ್ಯಪಡೆಯ ಎರಡನೇ ಸಭೆ ಅಕ್ಟೋಬರ್ 21 ಕ್ಕೆ ನಿಗದಿಯಾಗಿದ್ದು, ಮುಂದಿನ ಸಭೆಯಲ್ಲಿ ಈ ಎರಡು ಉಪ ಸಮಿತಿಗಳ ಕಾರ್ಯ ಪ್ರಗತಿ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ, ಪೂರ್ವ ಪ್ರಾಥಮಿಕ ಶಿಕ್ಷಣ, ಪಠ್ಯಕ್ರಮ, ಅವುಗಳ ನಿರ್ವಹಣೆ, ಪ್ರಾಥಮಿಕ ಶಾಲೆಗಳಲ್ಲಿ ಯಾವ ಹಂತದಲ್ಲಿ ಎನ್ಇಪಿ ಎಂಟ್ರಿ ಮತ್ತಿತರ ವಿಷಯಗಳು ಚರ್ಚೆಯಾಗಲಿದ್ದು, ಮತ್ತಷ್ಟು ಉಪ ಸಮಿತಿಗಳು ರಚನೆಯಾಗಲಿವೆ. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥವಾಗಿ ಜಾರಿ ಮಾಡುವ ನಿಟ್ಟಿನಲ್ಲಿ ರಚನೆಯಾಗಿರುವ ಕಾರ್ಪಪಡೆ ಕಾಲಮಿತಿಯಲ್ಲಿ ವರದಿ ಸಲ್ಲಿಸಲು ಕಾರ್ಯೋನ್ಮುಖವಾಗಿದೆ.












Click it and Unblock the Notifications