Sowmya Reddy Profile: ಜಯನಗರ ಶಾಸಕಿ ಸೌಮ್ಯ ರೆಡ್ಡಿ ವ್ಯಕ್ತಿ ಪರಿಚಯ
ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿ, ಮಾರ್ಚ್ 18, 1983ರಲ್ಲಿ ಜನಿಸಿದರು. ಸೌಮ್ಯ ರೆಡ್ಡಿ ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
ಸೌಮ್ಯ ರೆಡ್ಡಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಪ್ರಮುಖ ಮಹಿಳಾ ನಾಯಕಿಯರಲ್ಲಿ ಒಬ್ಬರು. ವಿದ್ಯಾವಂತ ರಾಜಕಾರಣಿಯಾಗಿರುವ ಇವರು ರಾಜಕೀಯ ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಸದ್ಯ ಬೆಂಗಳೂರು ನಗರ ವ್ಯಾಪ್ತಿಯ ಜಯನಗರದ ಶಾಸಕಿಯಾಗಿರುವ ಇವರು ಈಗಾಗಲೇ ತಮ್ಮ ಅಭಿವೃದ್ಧಿ ಕೆಲಸ ಹಾಗೂ ಹೋರಾಟಗಳಿಂದ ಜನ ಮನ್ನಣೆ ಗಳಿಸಿದ್ದಾರೆ.
ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಅವರ ಪುತ್ರಿಯಾಗಿರುವ ಸೌಮ್ಯ ರೆಡ್ಡಿ, ಮಾರ್ಚ್ 18, 1983ರಲ್ಲಿ ಜನಿಸಿದರು. ತಂದೆ ರಾಮಲಿಂಗ ರೆಡ್ಡಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಾರಣ ಸೌಮ್ಯ ರೆಡ್ಡಿ ಮೊದಲಿನಿಂದಲೂ ನಾಯಕತ್ವದ ಗುಣಗಳನ್ನು ಹೊಂದಿದ್ದರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.

ಬೆಂಗಳೂರಿನ ಆರ್‌ವಿ ಇಂಜಿನಿರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿದ ಬಳಿಕ ಸೌಮ್ಯ ರೆಡ್ಡಿ ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಎಸ್ ಮುಗಿಸಿದರು. ಅವರು ಮೊದಲಿನಿಂದಲೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗಿಯಾಗಿಯುತ್ತಿದ್ದರು. ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಅನೇಕ ಹೋರಾಟಗಳನ್ನು ನಡೆಸಿದ್ದಾರೆ.
2014ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಸೌಮ್ಯ ರೆಡ್ಡಿ ಅವರು, ಬಳಿಕ ರಾಜಕೀಯದತ್ತ ಒಲವು ತೋರಿದರು. ತಂದೆಯ ಮಾರ್ಗವನ್ನೇ ಹಿಡಿದ ಸೌಮ್ಯ ರೆಡ್ಡಿ ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ, ಪಕ್ಷದ ಸದಸ್ಯರಾದರು. ಬಳಿಕ 2016ರಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾದರು.

ಕಾಂಗ್ರೆಸ್‌ನಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಅವರು ವಿಧಾನಸಭೆ ಪ್ರವೇಶಿಸಲು ಜಯನಗರ ವಿಧಾಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದರು. 2018 ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಅಭ್ಯರ್ಥಿಯಾಗಿ ಕಣಕ್ಕಿಳಿದ ಸೌಮ್ಯರೆಡ್ಡಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು. ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದ ಪುತ್ರಿಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ರಾಮಲಿಂಗ ರೆಡ್ಡಿ ಸಾಥ್ ನೀಡಿದ್ದರು. ಜೊತೆಗೆ ಇತರ ಕಾಂಗ್ರೆಸ್ ನಾಯಕರು ಸಹ ಸಾಥ್ ನೀಡಿದ್ದರು.
ಮೊದಲ ಬಾರಿ ಚುನಾವಣಾ ಕಣಕ್ಕಿಳಿದಿದ್ದ ಕಾಂಗ್ರೆಸ್ ಧುರೀಣೆ ಸೌಮ್ಯ ರೆಡ್ಡಿ ಅವರು ಬಿಜೆಪಿಯ ಬಿ.ಎನ್ ಪ್ರಹ್ಲಾದ್ ಬಾಬು ಅವರನ್ನು 2,889 ಮತಗಳ ಅಂತರದಿಂದ ಸೋಲಿಸಿ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕಿಯಾದರು. ಶಾಸಕಿಯಾದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸತತ ಶ್ರಮವಹಿಸಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ಧದ ಹಲವು ಬೃಹತ್ ಹೋರಾಟಗಳಲ್ಲಿ ಸೌಮ್ಯ ರೆಡ್ಡಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಶಾಸಕಿಯ ಕರ್ತವ್ಯದ ಜೊತೆಗೆ ಇವರು ಪರಿಸರವಾದಿಯಾಗಿದ್ದು, ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ನಗರದಲ್ಲಿ ಹಸಿರನ್ನು ಹೆಚ್ಚಿಸಲು ಯುವ ಜನತೆ ಸೇರಿದಂತೆ ಬೆಂಗಳೂರಿನ ನಿವಾಸಿಗಳಿಗೆ ಗಿಡಗಳನ್ನು ಬೆಳೆಸಲು ಉತ್ತೇಜಿಸುತ್ತಿದ್ದಾರೆ. ಇನ್ನು ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಸೌಮ್ಯರೆಡ್ಡಿ ಶಾಸಕಿಯಾಗಿ ತಮ್ಮ ಕರ್ತವ್ಯವನ್ನು ಅರ್ಥಪೂರ್ಣವಾಗಿ ನಿರ್ವಹಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಕ್ಷೇತ್ರದ ಜನರಿಗೆ ಫುಡ್ ಕಿಟ್ ನೀಡುವುದರ ಜೊತೆಗೆ ವೈದ್ಯಕೀಯ ಸೌಲಭ್ಯಕ್ಕೂ ನೆರವಾಗಿದ್ದಾರೆ.
ಇನ್ನು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿರುವ ಸೌಮ್ಯ ರೆಡ್ಡಿ ಅವರು ಜಯನಗರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿರುವ ಅವರು ಈಗಾಗಲೇ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಇನ್ನು 2018ರ ಚುನಾವಣೆ ಮಾಹಿತಿ ಪ್ರಕಾರ ಸೌಮ್ಯ ರೆಡ್ಡಿ ಕೇವಲ 47 ಲಕ್ಷ ರೂ. ಚರ ಆಸ್ತಿ ಹೊಂದಿದ್ದು, ಯಾವುದೇ ಸ್ಥಿರಾಸ್ತಿ ಹೊಂದಿಲ್ಲ. 950 ಗ್ರಾಂ ಚಿನ್ನ, ಐದು ಕೆ.ಜಿ. ಬೆಳ್ಳಿ, ಒಂದು ಕಾರ್ ಹಾಗೂ 4,92,268 ಲಕ್ಷ ರೂ. ಗಳ ಫಿಕ್ಸ್ಡ್ ಡೆಪಾಸಿಟ್ ಹೊಂದಿರುವ ಸೌಮ್ಯ ರೆಡ್ಡಿ ತಮ್ಮ ಪತಿಗಿಂತ ಶ್ರೀಮಂತೆಯಾಗಿದ್ದು, ಸೌಮ್ಯ ಅವರ ಪತಿ ಖಾತೆಯಲ್ಲಿ 39,296 ರೂ.ಗಳನ್ನು ಹೊಂದಿದ್ದರು ಎನ್ನುವ ದಾಖಲೆಯನ್ನು ಈ ಹಿಂದಿನ ಚುನಾವಣೆಯಲ್ಲಿ ಸಲ್ಲಿಸಿದ್ದರು.
ಶಾಸಕಿ ಸೌಮ್ಯ ರೆಡ್ಡಿ https://www.facebook.com/sowmyareddyofficial/ ಫೇಸ್‌ಬುಕ್ ಖಾತೆ ಹಾಗೂ https://twitter.com/Sowmyareddyr ಟ್ವಿಟರ್ ಖಾತೆ ಮೂಲಕ ಪ್ರಸ್ತುತ ವಿಚಾರಗಳನ್ನು ಸದಾ ಜನರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.












Click it and Unblock the Notifications