ಸೊರಬ ಚುನಾವಣಾ ಚಿತ್ರಣ; ಮಧು ಬಂಗಾರಪ್ಪ ಪರಿಚಯ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ದಿನಾಂಕ ಘೋಷಣೆಯಾಗಿದೆ. ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದೆ. ಮೇ 13ರ ಶನಿವಾರ ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಸಹ ಒಂದು. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಕುಮಾರ್ ಬಂಗಾರಪ್ಪ.
ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಕಾಂಗ್ರೆಸ್ ಪಕ್ಷ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ಪಕ್ಷ ಬಿಟ್ಟು 2021ರ ಜುಲೈನಲ್ಲಿ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಮಧು ಬಂಗಾರಪ್ಪ ಸೊರಬ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ. ಸೊರಬದ ಚುನಾವಣೆ ಎಂದರೆ ಸಹೋದರರ ಸವಾಲ್. ಈ ಬಾರಿಯೂ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಎದುರಾಳಿಗಳಾಗುವ ನಿರೀಕ್ಷೆ ಇದೆ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಎರಡನೇ ಪುತ್ರ ಮಧು ಬಂಗಾರಪ್ಪ. ಕರ್ನಾಟಕ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ (ಒಬಿಸಿ) ಕಾರ್ಯಾಧ್ಯಕ್ಷರು. 2013ರ ಚುನಾವಣೆಯಲ್ಲಿ ಸೊರಬದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿದ್ದ ಅವರು 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡಿದ್ದರು. ಬಳಿಕ 2019ರ ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕಿಳಿದು 506,512 ಮತಗಳನ್ನು ಪಡೆದು ಬಿಜೆಪಿಯ ಬಿ. ವೈ. ರಾಘವೇಂದ್ರ ವಿರುದ್ಧ ಸೋಲು ಕಂಡರು.
ಲೋಕಸಭೆ ಚುನಾವಣೆ ಸೋಲಿನ ಬಳಿಕ ಮಧು ಬಂಗಾರಪ್ಪ ಜೆಡಿಎಸ್ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದರು. ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿ ಕಾಂಗ್ರೆಸ್ ಸೇರುವ ಕುರಿತು ಚರ್ಚಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಸೇರಿದ್ದರು. ನಿರೀಕ್ಷೆಯಂತೆ ಈ ಬಾರಿಯ ಚುನಾವಣೆಗೆ ಟಿಕೆಟ್ ಪಡೆದಿದ್ದಾರೆ. ಮೊದಲು ಬಿಜೆಪಿ, ಬಳಿಕ ಸಮಾಜವಾದಿ ಪಕ್ಷದಲ್ಲಿದ್ದ ಮಧು ಬಂಗಾರಪ್ಪ ಬಳಿಕ ಜೆಡಿಎಸ್ ಸೇರಿದ್ದರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಬಂಗಾರಪ್ಪ ರಾಜಕೀಯಕ್ಕೆ ಕರೆತಂದರು; 2004ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದ ರಾಜಕೀಯ ವಿಚಿತ್ರ ತಿರುವು ಪಡೆಯಿತು. ಎಸ್. ಬಂಗಾರಪ್ಪ ಬಿಜೆಪಿ ಸೇರಿದರು, ಕುಮಾರ್ ಬಂಗಾರಪ್ಪ ತಂದೆಯನ್ನು ಹಿಂಬಾಲಿಸಿದರು. ಆದರೆ ಅವರು ಪಕ್ಷ ಸೇರದಂತೆ ಬಂಗಾರಪ್ಪ ತಡೆದರು. ಇದಕ್ಕೆ ಬಂಗಾರಪ್ಪ ಕುಟುಂಬದ ಜಟಾಪಟಿಯೂ ಕಾರಣವಾಗಿತ್ತು. ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ನಲ್ಲೇ ಉಳಿದು ಪಕ್ಷದ ಅಭ್ಯರ್ಥಿಯಾದರು. ಆಗ ಬಂಗಾರಪ್ಪ ತಮ್ಮ ಎರಡನೇ ಪುತ್ರ ಮಧು ಬಂಗಾರಪ್ಪಗೆ ಬಿಜೆಪಿ ಟಿಕೆಟ್ ಕೊಡಿಸಿ, ಕಣಕ್ಕಿಳಿಸಿದರು. ಆಗ ಸೊರಬದಲ್ಲಿ ಸಹೋದರರ ಸವಾಲ್ ಅಧ್ಯಾಯ ಆರಂಭವಾಯಿತು.
ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ 44,677 ಮತಗಳನ್ನು ಪಡೆದು ಗೆದ್ದರು. ಎದುರಾಳಿ ಬಿಜೆಪಿಯ ಮಧು ಬಂಗಾರಪ್ಪ 32,748 ಮತಗಳನ್ನು ಪಡೆದು ಸೋಲು ಕಂಡರು. ಈ ಸೋಲು ಬಂಗಾರಪ್ಪ ಅವರನ್ನು ಬಹುವಾಗಿ ಕಾಡಿತು. ಬಂಗಾರಪ್ಪ ಕುಟುಂಬದಲ್ಲಿದ್ದ ಜಟಾಪಟಿ ಇನ್ನಟ್ಟು ಹೆಚ್ಚಾಗಲು ಸಹ ಕಾರಣವಾಯಿತು. ಬಿಜೆಪಿಯಲ್ಲಿದ್ದ ಬಂಗಾರಪ್ಪ ಸಮಾಜವಾದಿ ಪಕ್ಷಕ್ಕೆ ಬಂದರು. ಮಧು ಬಂಗಾರಪ್ಪ ಅವರನ್ನು ಹಿಂಬಾಲಿಸಿದರು.
2008ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಸೊರಬದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾದರು, ಚುನಾವಣೆಯಲ್ಲಿ 31,135 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಕಾಂಗ್ರೆಸ್‌ನ ಕುಮಾರ್ ಬಂಗಾರಪ್ಪ 32,499 ಮತ ಪಡೆದು ಎರಡನೇ ಸ್ಥಾನ ಪಡೆದರು. ಬಿ. ಎಸ್. ಯಡಿಯೂರಪ್ಪ ಆಪ್ತ ಹರತಾಳು ಹಾಲಪ್ಪ 53,552 ಮತಗಳನ್ನು ಪಡೆದು ಬಂಗಾರಪ್ಪ ಇಬ್ಬರು ಪುತ್ರರಿಗೂ ಸೋಲಿನ ರುಚಿ ತೋರಿಸಿದರು.
2013ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಸೊರಬದ ಶಾಸಕ ಹರತಾಳು ಹಾಲಪ್ಪ ಅವರನ್ನು ಹಿಂಬಾಲಿಸಿದರು. ಸೊರಬದಲ್ಲಿ ಕೆಜೆಪಿ ಅಭ್ಯರ್ಥಿಯಾದರು. ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿದರು. ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾದರು. 58,541 ಮತಗಳನ್ನು ಪಡೆದ ಮಧು ಬಂಗಾರಪ್ಪ ಹರತಾಳು ಹಾಲಪ್ಪ (37,316) ಸೋಲಿಸಿ ಹಿಂದಿನ ಚುನಾವಣೆ ಸೇಡು ತೀರಿಸಿಕೊಂಡರು. ಅಲ್ಲದೇ ಸಹೋದರ ಕುಮಾರ್ ಬಂಗಾರಪ್ಪ (33,176) ಸಹ ಸೋಲಿಸಿದರು.
2018ರ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿಗೆ ಬಂದು ಟಿಕೆಟ್ ಪಡೆದರು. 72,091 ಮತಗಳನ್ನು ಪಡೆದು ಹಾಲಿ ಶಾಸಕ ಮಧು ಬಂಗಾರಪ್ಪ (58,805) ಸೋಲಿಸಿದರು. ಈ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಸೊರಬ ಬಿಟ್ಟು ಸಾಗರಕ್ಕೆ ಹೋದರು. ಅಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆದ್ದರು. ಈಗ ಮತ್ತೆ ಮಧು ಬಂಗಾರಪ್ಪ (ಕಾಂಗ್ರೆಸ್), ಕುಮಾರ್ ಬಂಗಾರಪ್ಪ ನಡುವಿನ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ.












Click it and Unblock the Notifications