Independence Day 2024: ಸ್ವಯಂ ಸ್ವಾತಂತ್ರ್ಯ ಘೋಷಿಸಿಕೊಂಡ ಗ್ರಾಮ 'ಈಸೂರು'
78ನೇ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ಹೋರಾಟಗಾರರ ತ್ಯಾಗ, ಬಲಿದಾನದ ನೆನಪು ಮಾಡಿಕೊಳ್ಳಲಾಗುತ್ತಿದೆ. 'ಏಸೂರು ಕೊಟ್ಟರು ಈಸೂರು ಕೊಡೆವು' ಎಂದು ಭಾರತದಲ್ಲಿ ಮೊಟ್ಟ ಮೊದಲು ಸ್ವಾತಂತ್ರ‍್ಯ ಘೋಷಿಸಿಕೊಂಡ ಹಳ್ಳಿ ಈಸೂರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಈಸೂರು ಸ್ವಾತಂತ್ರ್ಯ ಹೋರಾಟದ ಕುರಿತು ಹಳೆಯ ನೆನಪುಗಳು ಇಲ್ಲಿವೆ.
ಶಿಕಾರಿಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಸ್ತಂಭದ ಬಳಿ ಪ್ರತಿ ವರ್ಷ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಗಸ್ಟ್ 9ರಂದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಕರೆಸಿ ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಿ ಈಸೂರು ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಕ್ವಿಟ್ ಇಂಡಿಯಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಕುರಿತು ರಘು ಆರ್., ಅಪ್ರೆಂಟಿಸ್, ವಾರ್ತಾ ಇಲಾಖೆ, ಶಿವಮೊಗ್ಗ ವಿಶೇಷ ಲೇಖನದ ಮೂಲಕ ಹಳೆಯ ನೆನಪು ಮಾಡಿಕೊಂಡಿದ್ದಾರೆ.

ಬ್ರಿಟಿಷರಿಗೆ ಸೆಡ್ಡು ಹೊಡೆದ ಗ್ರಾಮ ಈಸೂರು: 1942ರ ಆಗಸ್ಟ್ 8ರಂದು ಮಹಾತ್ಮ ಗಾಂಧೀಜಿ ಅವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೇ ಮಡಿ ಎಂಬ ಘೋಷಣೆಯೊಂದಿಗೆ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಈ ಚಳವಳಿಯಲ್ಲಿ ಈಸೂರು ಗ್ರಾಮ ಮೇಲುಗೈ ಸಾಧಿಸಿತು ಎಂದರೆ ತಪ್ಪಾಗಲಾರದು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಈಸೂರು ಗ್ರಾಮದ ಜನರು ಬ್ರಿಟಿಷರಿಗೆ ಸೆಡ್ಡು ಹೊಡೆದು, ಅವರೊಂದಿಗೆ ಕಾದಾಡಿ ವೀರ ಮರಣ ಹೊಂದಿದರು.
ಈಸೂರಿನಲ್ಲಿ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಲಾಯಿತು. ಪ್ರತಿ ದಿನ ಗ್ರಾಮದ ದೇವರು ವೀರಭದ್ರೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ಊರ ಬೀದಿಗಳಲ್ಲಿ ವಂದೇ ಮಾತರಂ, ಭಾರತ ಮಾತಾ ಕೀ ಜೈ ಘೋಷಣೆಯೊಂದಿಗೆ ಮೆರವಣಿಗೆ ನಡೆಸುತ್ತಿದ್ದರು. ಬ್ರಿಟಿಷರು, ಕಂದಾಯ ಅಧಿಕಾರಿಗಳು ಕಂದಾಯ ಕಟ್ಟುವಂತೆ ಬಂದು ಊರಿನ ಗ್ರಾಮಸ್ಥರಿಗೆ ಕೇಳಿದಾಗ ಅವರ ಲೆಕ್ಕ ಪುಸ್ತಕವನ್ನು ಕಸಿದುಕೊಂಡು, ಗಾಂಧಿ ಟೋಪಿ ಧರಿಸುವಂತೆ ಹೇಳಿದರು. ಅವರು ಧರಿಸದೇ ವಾಪಸ್ ಹೋಗಿ ಶಿಕಾರಿಪುರದ ಅಮಲ್ದಾರ್‌ಗೆ ದೂರು ನೀಡಿದರು.
ಇದರಿಂದ ಈಸೂರಿನ ಜನತೆ ಊರ ದ್ವಾರ ಬಾಗಿಲಿಗೆ 'ಬೇಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ' ಎಂದು ನಾಮ ಫಲಕವನ್ನು ಹಾಕಿದರು. ಗ್ರಾಮದ ಮಕ್ಕಳಾದ ಸಾಹುಕಾರ್ ಜಯಣ್ಣರನ್ನು ಅಮಲ್ದಾರ್ ಆಗಿ, ಕೆ. ಜಿ. ಮಲ್ಲಯ್ಯ ಅವರನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕ ಮಾಡಿಕೊಂಡು ಸ್ಥಳೀಯ ಸರ್ಕಾರವನ್ನು ರಚಿಸಿಕೊಂಡರು.
ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾದ ಈಸೂರು: ಸಾಹುಕಾರ್ ಜಯಣ್ಣರನ್ನು ಅಮಲ್ದಾರ್ ಆಗಿ, ಕೆ. ಜಿ. ಮಲ್ಲಯ್ಯ ಅವರನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕ ಮಾಡಿಕೊಂಡ ವಿಷಯ ತಿಳಿದ ಶಿಕಾರಿಪುರದ ಅಮಲ್ದಾರ್ ಚೆನ್ನಕೃಷ್ಣಪ್ಪ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆಂಚೇಗೌಡ ಅವರು 28/09/1942 ರಂದು ಸ್ವತಂತ್ರ ಗ್ರಾಮ ಈಸೂರಿಗೆ ಬಂದು ದ್ವಾರ ಬಾಗಿಲಿಗೆ ಹಾಕಿದ ನಾಮಫಲಕ ಮತ್ತು ಹೂವಿನ ತೋರಣಗಳನ್ನು ಕಿತ್ತು ಹಾಕಿದರು.
ನಂತರ ದೇವಾಲಯದ ಹತ್ತಿರ ಬಂದು ಜನರನ್ನು ಹಿಂಸೆ ಮಾಡತೊಡಗಿದರು. ಪೊಲೀಸ್ ಅಧಿಕಾರಿ ಕೆಂಚೇಗೌಡ ಜನರ ಮೇಲೆ ಲಾಠಿ ಚಾರ್ಜ್ ಮಾಡಿದರು. ಆದರೂ ಶಾಂತವಾಗಿದ್ದ ಯುವಕರ ತಂಡ ಅದನ್ನು ಸಹಿಸಿಕೊಂಡು ಸುಮ್ಮನಿದ್ದರು. ಆದರೆ ಇಷ್ಟಕ್ಕೆ ಸುಮ್ಮನಿರದ ಪೊಲೀಸ್ ಕೆಂಚೇಗೌಡ ಜನರ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದರು.
ಗುಂಡು ಊರ ಹಿರಿಯರಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕರು ಪೊಲೀಸ್ ಕೆಂಚೇಗೌಡ ಮತ್ತು ಅಮಲ್ದಾರ್ ಚೆನ್ನಕೃಷ್ಣಪ್ಪ ಅವರನ್ನು ಹೊಡೆದು ಹಾಕಿದರು. ಆಗ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಈ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿ ಆಯಿತು. ಈಸೂರು ಎಂಬ ಗ್ರಾಮ ದೇಶಕ್ಕೆ ಪರಿಚಯವಾಯಿತು.
ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ಮಿಲಿಟರಿ ಪಡೆಯೊಂದಿಗೆ ಈಸೂರು ಗ್ರಾಮಕ್ಕೆ ಆಗಮಿಸಿತು. ಸುದ್ದಿ ತಿಳಿದು ಇಡೀ ಊರಿಗೆ ಊರೇ ತಲೆ ಮರಿಸಿಕೊಂಡಿತು. ಈಸೂರು ಗ್ರಾಮದ ಮನೆ ಮನೆಗೆ ಬೀಗ ಹಾಕಿಕೊಂಡು ಇಡೀ ಊರು ಸ್ಮಶಾನದಂತಾಗಿತ್ತು. ಪೊಲೀಸ್ ಅಧಿಕಾರಿಗಳು ಆರೋಪಿಗಳ ಪಟ್ಟಿ ಸಿದ್ಧ ಮಾಡಿ 11 ಜನರಿಗೆ ಮರಣದಂಡನೆ, 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲು ನಿರ್ಧರಿಸಿದರು.
ನ್ಯಾಯಲಯದ ಆದೇಶದ ಪ್ರಕಾರ ಕೆ. ಗುರಪ್ಪ ಬಿನ್ ಈಶ್ವರಪ್ಪ ಕುಮಾರ್ ಅವರನ್ನು 8/03/1943ರಲ್ಲಿ ಗಲ್ಲಿಗೇರಿಸಲಾಯಿತು. ಜಿನಹಳ್ಳಿ ಮಲ್ಲಪ್ಪ ಇವರನ್ನು 8/03/1943ರಲ್ಲಿ ಗಲ್ಲಿಗೇರಿಸಲಾಯಿತು. ಸೂರ್ಯನಾರಯಣಾಚಾರ್ ಬಿನ್ ಪಂಪಪ್ಪಚಾರ್ ಇವರನ್ನು 09/03/1943 ರಲ್ಲಿ ಗಲ್ಲಿಗೇರಿಸಲಾಯಿತು. ಇವರಲ್ಲಿ ಬಡಕಳ್ಳಿ ಹಾಲಪ್ಪ ಬಿನ್ ಬಸಪ್ಪ ಹಾಗೂ ಅಂಗಡಿ ಹಾಲಪ್ಪ ಎಂಬವರು ತಲೆಮರೆಸಿಕೊಂಡಿದ್ದರು.
ಅವರ ಬದಲು ಬಿ. ಹಾಲಪ್ಪ ಅವರನ್ನು 9/03/1943ರಲ್ಲಿ, ಗೌಡ್ರ ಶಂಕ್ರಪ್ಪ ಬಿನ್ ಹೊಳಿಯಪ್ಪ 10/03/43ರಲ್ಲಿ ಇವರನ್ನು ಅಪರಾಧಿಗಳು ಎಂದು ಗಲ್ಲಿಗೇರಿಸಲಾಯಿತು. ಇನ್ನೂ 23 ಜನರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಯಿತು. ಇದರಲ್ಲಿ ಮಹಿಳೆಯರು ಇದ್ದರು. ಇವರಲ್ಲಿ ಜೀವಂತವಾಗಿ ಇರುವವರು ಎಸ್. ಎಸ್. ಹುಚ್ಚರಾಯಪ್ಪನವರು ಮಾತ್ರ. ಅವರು ಇನ್ನೂ ಈಸೂರು ಗ್ರಾಮದ ತಮ್ಮ ಸ್ವಗೃಹದಲ್ಲಿ ಇದ್ದಾರೆ.
ಈಸೂರು ಹೋರಾಟದ ಇತಿಹಾಸವನ್ನು ಸಾರುವ ದೃಷ್ಟಿಯಿಂದ ಹುತಾತ್ಮರ ಸ್ಮಾರಕಕ್ಕೆ ರೂ. 5 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು ಈಸೂರನ್ನು ಐತಿಹಾಸಿಕ ಸ್ಥಳವನ್ನಾಗಿ ಮಾಡಲಾಗುತ್ತಿದೆ. ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿಯಲ್ಲಿದೆ.
ಭಾರತದಲ್ಲಿ ಎಲ್ಲಿಯೂ ನೋಡ ಸಿಗದ ವಿಶೇಷವಾದ ಆಲಂಕರಿಕ ಶೈಲಿಯಲ್ಲಿ ಸ್ಮಾರಕ ಭವನವನ್ನು ವಿನ್ಯಾಸ ಮಾಡಲಾಗುತ್ತಿದ್ದು ಸುತ್ತಲೂ ಕಲ್ಲಿನಿಂದ ಆಕರ್ಷಕ ತಡೆಗೊಡೆ ರೀತಿ ವಿನ್ಯಾಸಗೊಳಿಸಿ ಸ್ಮಾರಕದ ಒಳಗೆ ಗಲ್ಲಿಗೇರಿದ ಹೋರಾಟಗಾರರ ಹೆಸರುಗಳ ಕಲ್ಲುಗಳನ್ನು ನಿರ್ಮಿಲಾಗುತ್ತಿದೆ ಜೊತೆಗೆ ಗ್ರಂಥಾಲಯ, ಅತಿಥಿ ಗೃಹ, ಶೌಚಾಲಯ, ಗಾರ್ಡನ್ ನಿರ್ಮಿಸಲಾಗುತ್ತಿದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications