ಶಿರಡಿ ಲೋಕಸಭಾ ಕ್ಷೇತ್ರದ ಪರಿಚಯ
ಮಹಾರಾಷ್ಟ್ರ ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಶಿರಡಿಯೂ ಒಂದು. ರಾಜಧಾನಿ ಮುಂಬೈನಿಂದ ಸುಮಾರು 160 ಕಿ.ಮೀ. ದೂರದಲ್ಲಿದೆ ಈ ಕ್ಷೇತ್ರ. ಶಿರಡಿ ಅಥವ ಶಿರ್ಡಿ ಎಂದರೆ ತಕ್ಷಣ ನೆನಪಾಗುವುದು ಶ್ರೀ ಸಾಯಿಬಾಬಾ.
ಭಾರತ ಕಂಡ ಮಹಾನ್ ಸಂತರಲ್ಲಿ ಸಾಯಿಬಾಬಾ ಅವರು ಸಹ ಒಬ್ಬರು. ಯುವಕನಾಗಿದ್ದಾಗಲೇ ಶಿರಡಿಗೆ ಬಂದ ಸಾಯಿಬಾಬಾ ಅವರು ಜೀವಮಾನಪೂರ್ತಿಯನ್ನು ಅಲ್ಲೇ ಕಳೆದರು. ಶಿರಡಿ ಗ್ರಾಮದ ಹೃದಯ ಭಾಗದಲ್ಲಿರುವ ಶ್ರೀ ಸಾಯಿಬಾಬಾ ದೇವಾಲಯಕ್ಕೆ ದೇಶ-ವಿದೇಶದ ಕೋಟ್ಯಾಂತರ ಭಕ್ತರು ಇದ್ದಾರೆ.
ಸಂಕಷ್ಟದ ಸಮಯದಲ್ಲಿ ಸಾಯಿಬಾಬಾ ಅವರನ್ನು ನೆನೆದರೆ ಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆ ಈಗಲೂ ಭಕ್ತರಲ್ಲಿದೆ. ಪ್ರತಿನಿತ್ಯ ಸುಮಾರು 20 ಸಾವಿರ ಜನರು ಸಾಯಿಬಾಬಾ ದೇವಾಲಯಕ್ಕೆ ಆಗಮಿಸುತ್ತಾರೆ. ರಜೆ ದಿನಗಳಲ್ಲಿ ಈ ಸಂಖ್ಯೆ 1 ಲಕ್ಷಕ್ಕೂ ಹೆಚ್ಚಾಗುತ್ತದೆ. ದೇವಾಲಯ ಇರುವುದರಿಂದ ಪ್ರವಾಸೋದ್ಯಮ ಸಹ ಅಭಿವೃದ್ಧಿಯಾಗಿದೆ.

2008ರ ಕ್ಷೇತ್ರ ಪುನರ್ ವಿಂಗಡನೆ ಬಳಿಕ ರಚನೆಗೊಂಡಿತು ಶಿರಡಿ ಲೋಕಸಭಾ ಕ್ಷೇತ್ರ. 19 ಫೆಬ್ರವರಿ 2008ರಲ್ಲಿ ರಚನೆಗೊಂಡ ಕ್ಷೇತ್ರ 3ನೇ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧವಾಗುತ್ತಿದೆ. ಭಕ್ತಿ ಭಾವದ ಹೊರತಾಗಿ ಇಲ್ಲಿನ ರಾಜಕೀಯವೂ ಕುತೂಹಲಕ್ಕೆ ಕಾರಣವಾಗಿದೆ.

ಶಿರಡಿ ಕ್ಷೇತ್ರದ ಒಟ್ಟು ಜನಸಂಖ್ಯೆ 21,41,156. ಇವರಲ್ಲಿ ಶೇ 84.05ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ 15.95ರಷ್ಟು ಜನರು ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಶೇ 12.62ರಷ್ಟು ಎಸ್‌ಸಿ, ಶೇ 13.64ರಷ್ಟು ಎಸ್‌ಟಿ ಸಮುದಾಯದ ಜನರಿದ್ದಾರೆ.
2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಶಿರಡಿ ಕ್ಷೇತ್ರದಲ್ಲಿ ಶಿವಸೇನೆಯ ಬಾಬುಸಾಹೇಬ್ ರಾಜಾರಾಮ್ ವಾಕ್‌ಚೋರೆ ಅವರು ಜಯಗಳಿಸಿದರು. 2014ರಲ್ಲಿ ನಡೆದ 2ನೇ ಚುನಾವಣೆಯಲ್ಲಿಯೂ ಶಿವಸೇನೆ ಪಕ್ಷದ ಸದಾಶಿವ ಕಿಸಾನ್ ಲೋಖಂಡೆ ಜಯಗಳಿಸಿದ್ದಾರೆ.
ಶಿರಡಿ ಕ್ಷೇತ್ರದ ಒಟ್ಟು ಮತದಾರರು 14,59,712. ಇವರಲ್ಲಿ 7,65,921 ಪುರುಷರು, 6,93,791 ಮಹಿಳೆಯರು. 2014ರಲ್ಲಿ ಶೇ 64ರಷ್ಟು ಮತದಾನವಾಗಿತ್ತು. 9,32,645 ಜನರು ಮತದಾನ ಮಾಡಿದ್ದರು. ಇವರಲ್ಲಿ ಪುರುಷರು 5,20,229, ಮಹಿಳೆಯರು 4,12,416.

2009ರ ಚುನಾವಣೆಯಲ್ಲಿ ಶಿವಸೇನೆಯಿಂದ ಗೆದಿದ್ದ ಬಾಬುಸಾಹೇಬ್ ರಾಜಾರಾಮ್ ವಾಕ್‌ಚೋರೆ ಅವರು 2014ರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸೇರಿದರು. ಆದರೆ, ಚುನಾವಣೆಯಲ್ಲಿ ಶಿವಸೇನೆಯ ಸದಾಶಿವ ಕಿಸಾನ್ ಲೋಖಂಡೆ ಅವರು 5,32,936 ಮತಗಳನ್ನು ಪಡೆದು ಜಯಗಳಿಸಿದರು.
ಕಾಂಗ್ರೆಸ್ ಸೇರಿ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಬಾಬುಸಾಹೇಬ್ ರಾಜಾರಾಮ್ ವಾಕ್‌ಚೋರೆ ಅವರು 3,33,014 ಮತಗಳನ್ನು ಮಾತ್ರ ಪಡೆದು 1,99,922 ಮತಗಳಿಂದ ಸೋಲು ಕಂಡರು.

ಕ್ಷೇತ್ರದ ಹಾಲಿ ಸಂಸದ ಸದಾಶಿವ ಕಿಸಾನ್ ಲೋಖಂಡೆ ಸಂಸತ್ತಿನಲ್ಲಿ ಶೇ 73ರಷ್ಟು ಹಾಜರಾತಿ ಹೊಂದಿದ್ದಾರೆ. 19 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ. 520 ಪ್ರಶ್ನೆಗಳನ್ನು ಕೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಕ್ಷೇತ್ರದಲ್ಲಿ ಗೆಲ್ಲಬೇಕು ಎಂದು ತಂತ್ರ ರೂಪಿಸುತ್ತಿವೆ.












Click it and Unblock the Notifications