ಸಿ.ಎಂ.ಇಬ್ರಾಹಿಂ ಹಚ್ಚಿದ ಬೆಂಕಿಗೆ ನಲುಗುತ್ತಿರುವ ಕಾಂಗ್ರೆಸ್, ಸಿದ್ದರಾಮಯ್ಯ
ಸಿ.ಎಂ.ಇಬ್ರಾಹಿಂ ಒಬ್ಬ ಉತ್ತಮ ವಾಗ್ಮಿ, ಹಿರಿಯ ಮುಖಂಡ, ಅವರು ರಾಜೀನಾಮೆ ನೀಡಿ ಏನು ಮಾಡ್ಯಾರು ಎನ್ನುವ ಕಾಂಗ್ರೆಸ್ಸಿಗರ ಲೆಕ್ಕಾಚಾರ ದಿನದಿಂದ ದಿನಕ್ಕೆ ಉಲ್ಟಾ ಹೊಡೆಯುತ್ತಿದೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ತಪ್ಪಿದ ನಂತರ ಇಬ್ರಾಹಿಂ ಅವರು ಇಡುತ್ತಿರುವ ರಾಜಕೀಯ ಹೆಜ್ಜೆಗೆ ಕೈ ನಲುಗಲು ಆರಂಭಿಸಿದೆ.
ಪ್ರೇಮಿಗಳ ದಿನವಾದ ಫೆಬ್ರವರಿ ಹದಿನಾಲ್ಕರಂದು ತಮ್ಮ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡುವುದಾಗಿ ಹೇಳಿರುವ ಇಬ್ರಾಹಿಂ, ತಾವು ಪಕ್ಷಕ್ಕೆ ಸೇರುತ್ತಾರೆ ಎನ್ನುವುದರ ಬಗ್ಗೆ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆಯನ್ನು ನೀಡುತ್ತಿದ್ದಾರೆ.
ಮೊದಮೊದಲು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಬಹುದು ಎನ್ನುವ ಲೆಕ್ಕಾಚಾರವಿತ್ತು. ಅವರು ರಾಜೀನಾಮೆ ಘೋಷಿಸುವುದಾಗಿ ಪ್ರಕಟಿಸಿದ ದಿನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅವರನ್ನು ಭೇಟಿಯಾಗಿದ್ದರು. ಆದರೆ, ಇಬ್ರಾಹಿಂ ತಮ್ಮ ಮುಂದೆ ಮೂರು ಪಕ್ಷಗಳ ಪೈಕಿ ಯಾವುದಾದರೂ ಒಂದು ಪಕ್ಷ ಸೇರುವ ಆಯ್ಕೆಯಿದೆ ಎಂದು ಹೇಳಿದ್ದರು.
ಆದರೆ, ಕೆಲವು ದಿನಗಳಿಂದ ಇಬ್ರಾಹಿಂ ಇಡುತ್ತಿರುವ ರಾಜಕೀಯ ಹೆಜ್ಜೆಗಳು, ರಾಜ್ಯ ಪ್ರವಾಸ, ಭೇಟಿಯಾಗುತ್ತಿರುವ ರಾಜಕೀಯ ಮತ್ತು ಧಾರ್ಮಿಕ ಮುಖಂಡರ ಭೇಟಿಯನ್ನು ಅವಲೋಕಿಸಿದರೆ, ಕಾಂಗ್ರೆಸ್ಸಿಗೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಆಘಾತವನ್ನು ನೀಡುವ ಸಾಧ್ಯತೆಯಿಲ್ಲದಿಲ್ಲ. ಅದು ಹೇಗೆ?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ಇಬ್ರಾಹಿಂ ಗುಡುಗು
ಮಾಧ್ಯಮದವರ ಮುಂದೆ ಭಾವನಾತ್ಮಕವಾಗಿ ಸಿ.ಎಂ.ಇಬ್ರಾಹಿಂ ಮಾತಾನಾಡಿ ಕಣ್ಣೀರು ಹಾಕಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟು ಮಾಡುವ ಸಾಧ್ಯತೆಯಿದೆ. ಅಲ್ಪಸಂಖ್ಯಾತ ಸಮುದಾಯದವರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿ ನೋಡುತ್ತಿದೆ ಎಂದು ಹಿಂದೆ ಕೂಡಾ ಇಬ್ರಾಹಿಂ ಹೇಳಿದ್ದರು. ಈಗ, ರಾಜ್ಯ ಪ್ರವಾಸದ ವೇಳೆ ಮತ್ತೆ ಆ ವಿಚಾರವನ್ನು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ ಇಬ್ರಾಹಿಂ ಗುಡುಗುತ್ತಿದ್ದಾರೆ. ಇದು, ಅಧಿಕಾರಕ್ಕೆ ಬರಲು ಶತಪ್ರಯತ್ನವನ್ನು ಮಾಡುತ್ತಿರುವ ಕಾಂಗ್ರೆಸ್ಸಿಗೆ ಮುಂದಿನ ದಿನಗಳಲ್ಲಿ ಮುಸ್ಲಿಂ ವಿರೋಧಿ ಎನ್ನುವ ಟ್ಯಾಗ್ ಬರುತ್ತೋ ಎನ್ನುವ ಭೀತಿಯಲ್ಲಿದ್ದಾರೆ ಕೈನಾಯಕರು.

ಎಸ್.ಆರ್.ಪಾಟೀಲ್ ಜೊತೆಗೂ ಇಬ್ರಾಹಿಂ ಭೇಟಿ
ಜಾತ್ಯಾತೀತ ಜನತಾದಳ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಈ ಮೂರು ಪಕ್ಷಗಳಲ್ಲಿ ಒಂದನ್ನು ಆಯ್ಕೆ ಮಾಡುವ ಬಗ್ಗೆ ಇಬ್ರಾಹಿಂ ಮಾತನಾಡಿದ್ದರು. ಆದರೆ, ಇವರ ಇತ್ತೀಚಿನ ದಿನಗಳ ರಾಜಕೀಯವನ್ನು ಅವಲೋಕಿಸಿದರೆ, ಕಾಂಗ್ರೆಸ್ಸಿಗೆ ಪರ್ಯಾಯವಾಗಿ ವೇದಿಕೆಯನ್ನು ಹುಟ್ಟುಹಾಕುವ ಯೋಚನೆಯಲ್ಲಿ ಇಬ್ರಾಹಿಂ ಇದ್ದಾರಾ ಎನ್ನುವ ಪ್ರಶ್ನೆ ಎದುರಾಗುವಂತಾಗಿದೆ. ಈಗಾಗಲೇ, ಕಾಂಗ್ರೆಸ್ಸಿನ ಕೆಲವು ನಾಯಕರ ಜೊತೆ ಮುನಿಸಿಕೊಂಡಿರುವ ಎಸ್.ಆರ್.ಪಾಟೀಲ್ ಜೊತೆಗೂ ಇಬ್ರಾಹಿಂ ಅವರ ಭೇಟಿಯಾಗಿದೆ. ಹಲವು ಪೀಠಾಧಿಪತಿಗಳನ್ನೂ ಇಬ್ರಾಹಿಂ ಭೇಟಿಯಾಗುವವರಿದ್ದಾರೆ.

ಯು.ಟಿ.ಖಾದರ್ ಅವರಿಗೆ ಕರ್ನಾಟಕ ಅಸೆಂಬ್ಲಿಯಲ್ಲಿ ಉಪನಾಯಕನ ಸ್ಥಾನ
"ಸಿ.ಎಂ.ಇಬ್ರಾಹಿಂ, ಸಲೀಂ ಅಹ್ಮದ್, ನಸೀರ್ ಅಹ್ಮದ್, ಈ ಮೂವರಲ್ಲಿ ಯಾರಿಗೊಬ್ಬರಿಗಾದರೂ ಸ್ಥಾನ ನೀಡಬೇಕಾಗಿತ್ತು, ಆದರೆ ಹಾಗಾಗಿಲ್ಲ. ಈ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ"ಎಂದು ಮೈಸೂರು ನರಸಿಂಹರಾಜ ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಕೂಡಾ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಪಕ್ಷದಿಂದ ಹಿಮ್ಮುಖವಾಗಬಹುದು ಎನ್ನುವ ಭೀತಿಯಿಂದ ಹಿರಿಯ ಶಾಸಕ ಯು.ಟಿ.ಖಾದರ್ ಅವರಿಗೆ ಕರ್ನಾಟಕ ಅಸೆಂಬ್ಲಿಯಲ್ಲಿ ಉಪನಾಯಕನ ಸ್ಥಾನವನ್ನು ನೀಡಿದೆ.

ಹಲವು ಪ್ರಶ್ನೆಗಳಿಗೆ ಇನ್ನೊಂದು ಹತ್ತು ದಿನಗಳಲ್ಲಿ ಉತ್ತರ ಸಿಗಬಹುದು
"ಕಾಂಗ್ರೆಸ್ಸಿನಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಹಲವರಿಗೆ ಬೇಸರವಾಗಿದೆ, ಕೆಲವರು ಪಕ್ಷ ಬಿಟ್ಟು ಬರಲಿದ್ದಾರೆ"ಎಂದು ಇಬ್ರಾಹಿಂ ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಹಲವು ನಾಯಕರು ಪಕ್ಷದಿಂದ ಹೊರಬಂದು ಹೊಸ ವೇದಿಕೆ ನಿರ್ಮಾಣವಾಗುತ್ತಾ? ಈ ವೇದಿಕೆಗೆ ಇಬ್ರಾಹಿಂ ಸಾರಥ್ಯವನ್ನು ವಹಿಸಿಕೊಳ್ಳುತ್ತಾರಾ? ಇಬ್ರಾಹಿಂ ಅವರು ರೋಷನ್ ಬೇಗ್ ಜೊತೆಗೆ ಏನು ಮಾತುಕತೆ ನಡೆಸಿದರು? ಸುತ್ತೂರು ಶ್ರೀಗಳು, ಮೌಲ್ವಿಗಳ ಜೊತೆ ಏನು ಚರ್ಚೆ ನಡೆಯಿತು? ಎನ್ನುವ ಹಲವು ಪ್ರಶ್ನೆಗಳಿಗೆ ಇನ್ನೊಂದು ಹತ್ತು ದಿನಗಳಲ್ಲಿ ಉತ್ತರ ಸಿಗಬಹುದು.












Click it and Unblock the Notifications