ಅಮೆರಿಕಾದ ಲಕ್ಷಾಂತರ ಸಂಬಳದ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಬೆಳ್ತಂಗಡಿ ಯುವಕ
ಮಂಗಳೂರು, ಜೂ 15: ಅಮೆರಿಕಾದಲ್ಲೇ ಉನ್ನತ ವಿದ್ಯಾಭ್ಯಾಸ. ಅಮೆರಿಕಾದಲ್ಲೇ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಇಷ್ಟಿದ್ದರೆ ಸಾಕು, ಸುಖ ಜೀವನಕ್ಕೆ ಇನ್ನೇನು ಬೇಕು ಹೇಳಿ. ಊರಿನ ಜಂಜಾಟವನ್ನು ಬಿಟ್ಟು ದೂರದ ಅಮೆರಿಕದಲ್ಲಿ ಜೀವನಪೂರ್ತಿ ಸುಖದಿಂದ ಬಾಳುವಂತಹ ಯೋಚನೆ ಎಲ್ಲರಲ್ಲೂ ಬರಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ಅಮೆರಿಕದ ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟು ಊರಿಗೆ ಬಂದು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.
ಎಲೆಕ್ಟ್ರಿಕ್ ಎಂಜಿನೀಯರಿಂಗ್ ನಲ್ಲಿ ಎಂಎಸ್ ಪದವಿ ಪಡೆದು, ಅಮೆರಿಕದಲ್ಲಿ ಕೆಲಸದಲ್ಲಿದ್ದರೂ, ಭಾರತಕ್ಕೆ ಮರಳಿ ತಕ್ಕ ತರಬೇತಿ ಪಡೆದು, ಭಾರತೀಯ ಸೇನೆಗೆ ನಿಯೋಜನೆಗೊಂಡಿರೋದು ಬೆಳ್ತಂಗಡಿಯ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ ಸಾತ್ವಿಕ ಕುಳಮರ್ವ.

ಭಾರತೀಯ ಸೇನೆಗೆ ನಿಯೋಜನೆ
ಸಾಮಾನ್ಯವಾಗಿ ಇಂದಿನ ಯುವಕರು ಹಾಗೂ ಪೋಷಕರಿಗೆ ಮಕ್ಕಳು ಬಿಇ ಓದಬೇಕು, ಎಂಜಿನಿಯರ್ ಆಗಬೇಕು. ಫಾರಿನ್ ಗೆ ಕೆಲಸಕ್ಕೆ ಹೋಗಬೇಕೆಂಬ ಕನಸು ಕಾಮನ್. ಇಲ್ಲವೇ ಮಕ್ಕಳು ಡಾಕ್ಟರ್ ಆಗಲಿ ಎಂಬುದನ್ನು ಬಯಸುತ್ತಾರೆ. ಅಬ್ಬಾ ಮಕ್ಕಳು ಫಾರಿನ್ ಫ್ಲೈಟ್ ಹತ್ತಿದ ಕೂಡಲೇ ಲೈಫ್ ಸೆಟಲ್ ಆಯಿತು ಅಂತ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ, ಈ ಎಲ್ಲವಕ್ಕೂ ವಿಭಿನ್ನವೆಂಬಂತೆ ದಕ್ಷಿಣ ಕನ್ನಡದ ಯುವಕನೊಬ್ಬ ಎಲೆಕ್ಟ್ರಿಕ್ ಎಂಜಿನೀಯರಿಂಗ್ ನಲ್ಲಿ ಎಂಎಸ್ ಪದವಿ ಪಡೆದು, ಅಮೆರಿಕದಲ್ಲಿ ಕೆಲಸದಲ್ಲಿದ್ದರೂ, ಭಾರತಕ್ಕೆ ಮರಳಿ ತಕ್ಕ ತರಬೇತಿ ಪಡೆದು, ಭಾರತೀಯ ಸೇನೆಗೆ ನಿಯೋಜನೆಗೊಂಡಿದ್ದಾರೆ.
ಬೆಳ್ತಂಗಡಿಯ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ ಸಾತ್ವಿಕ ಕುಳಮರ್ವ ಸಾತ್ವಿಕ್ ಕುಳವರ್. ಭಾರತೀಯ ಸೇನಾಪಡೆಯ ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಲೆಪ್ಟಿನೆಂಟ್ ಆಗಿ ಆಯ್ಕೆ ಆಗಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಪ್ರೊ.ಗಣಪತಿ ಭಟ್ ಕುಳಮರ್ವ ಮತ್ತು ಪಿಯು ಕಾಲೇಜು ಉಪನ್ಯಾಸಕಿ ಪಿ.ವಸಂತಿ ದಂಪತಿ ಪುತ್ರರಾದ ಸಾತ್ವಕ್ ಜಮ್ಮುವಿನ ಸಾತ್ವಾರಿಯಲ್ಲಿ 26 ಐಡಿಎಸ್ಆರ್ (ಇನ್‌ಫೆಂಟ್ರಿ ಡಿವಿಶನ್ ಸಿಗ್ನಲ್ಸ್ ರೆಜಿಮೆಂಟ್) ನಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನಿಯೋಜನೆಗೊಂಡಿದ್ದಾರೆ.

ಅಮೆರಿಕದ ಅರಿಝೋನಾ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ
ಜೂನ್ 10 ರಂದು ಶುಕ್ರವಾರ ಡೆಹ್ರಾಡೂನ್‌ನಲ್ಲಿ ನಡೆದ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪಾಸಿಂಗ್ ಔಟ್ ಡೇ ಪರೇಡ್ ನಲ್ಲಿ ಪಾಲ್ಗೊಂಡ 288 ಯುವಕರಲ್ಲಿ ಸಾತ್ವಿಕ್ ಸಹ ಒಬ್ಬರು. ಎಲ್ಲಾ ಕೆಡೆಟ್ ಗಳಿಗೆ ಮೂರು ವಾರ ವಿಶ್ರಾಂತಿ ನೀಡಿದ್ದು, ಬಳಿಕ ತಾವು ನಿಯೋಜನೆಗೊಂಡ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಬೆಳ್ತಂಗಡಿಯ ಸಂತ ತೆರೆಸಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಎಸ್‌ಡಿಎಂ ಕಾಲೇಜು,ಉಜಿರೆಯಲ್ಲಿ ಪಿಯುಸಿ, ಅನಂತರ ಬೆಂಗಳೂರಿನಲ್ಲಿ ಟೆಲಿಕಮ್ಯುನಿಕೇಶನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಎಂಎಸ್ ಪದವಿಯನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪಡೆದಿದ್ದು, ಅಮೆರಿಕದ ಅರಿಝೋನಾ ಸ್ಟೇಟ್ ಯುನಿವರ್ಸಿಟಿ ಯಲ್ಲಿ ಸ್ನಾತಕೋತ್ತರ ಅಧ್ಯಯನ ಮುಗಿಸಿ, ಅಲ್ಲಿ ಸ್ವಲ್ಪ ಕಾಲ ಉದ್ಯೋಗದಲ್ಲಿ ಇದ್ದರು.
ಸಾತ್ವಿಕ್ ಅಮೇರಿಕಾದಲ್ಲಿ ಉನ್ನತ ವಿಧ್ಯಾಭ್ಯಾಸ ಕ್ಕಾಗಿ ಬ್ಯಾಂಕ್‌ನಿಂದ ಲೋನ್ ಪಡೆದಿದ್ದು,ಕೆಲಸಕ್ಕೆ ತೆರಳಿ ಲೋನ್ ಪಾವತಿಯಾದ ಬಳಿಕ ಕೆಲಸ ಬಿಟ್ಟು ಊರಿಗೆ ಬಂದು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.

ಎರಡನೇ ಪ್ರಯತ್ನದಲ್ಲಿ ತಮ್ಮ ಕನಸಿನಂತೆ ಸೇನೆಗೆ ಆಯ್ಕೆ
ಸೇನೆ ಸೇರಲು ಸಾತ್ವಿಕ್ ಎರಡು ವರ್ಷಗಳ ಕಾಲ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಅಧ್ಯಯನ ನಡೆಸಿ, ಪರೀಕ್ಷೆಗೆ ಹಾಜರಾಗಿದ್ದರು. ಎರಡನೇ ಪ್ರಯತ್ನದಲ್ಲಿ ತಮ್ಮ ಕನಸಿನಂತೆ ಸೇನೆಗೆ ಆಯ್ಕೆಯಾಗಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಡೆಹ್ರಾಡೂನ್‌ನ ಇಂಡಿಯನ್ ಮಿಟಲಿರಿ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಳ್ಳುವಂತೆ ಭಾರತೀಯ ಸೇನೆಯಿಂದ ನೇಮಕಾತಿ ಪತ್ರ ಬಂದಿತ್ತು. ಒಂದು ವರ್ಷದ ಕಠಿಣ ತರಬೇತಿ ನಂತರ ಇದೀಗ ಕರ್ತವ್ಯ ಸಲ್ಲಿಸಲು ನಿಯೋಜನೆಗೊಂಡಿದ್ದಾರೆ. ಜೂನ್ 10ರಂದು ನಡೆದ ಪಾಸಿಂಗ್ ಔಟ್ ಕಾರ್ಯಕ್ರಮದಲ್ಲಿ ಯೋಧರ ಹೆತ್ತವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಪಾಲ್ಗೊಳ್ಳಲು ಅನುಮತಿ ನೀಡಲಾಗಿತ್ತು. ಸಾತ್ವಿಕ್ ಪೋಷಕರೂ ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಾಕಿದ ಶ್ರಮ ವ್ಯರ್ಥ ಆಗಲಿಲ್ಲ: ಸಾತ್ವಿಕ್
ತನ್ನ ಸಾಧನೆಯ ಬಗ್ಗೆ ಒನ್ ಇಂಡಿಯಾದ ಜೊತೆ ಮಾತನಾಡಿದ ಸಾತ್ವಿಕ್ ಕುಳವರ್ಮ, ದೇಶ ಸೇವೆ ಮಾಡಬೇಕು ಎನ್ನೋದು ಚಿಕ್ಕಂದಿನಿಂದಲೂ ಆಸೆಯಾಗಿತ್ತು. ಉನ್ನತ ವಿಧ್ಯಾಭ್ಯಾಸ ಮಾಡಬೇಕೆಂಬ ಉದ್ದೇಶದಿಂದ ಬ್ಯಾಂಕ್ ನಲ್ಲಿ ಲೋನ್ ಮಾಡಿ ಅಮೇರಿಕಾಕ್ಕೆ ಹೋದೆ. ಅಮೇರಿಕಾದಲ್ಲಿ ಒಳ್ಳೆಯ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು.. ತೆಗೆದುಕೊಂಡ ಲೋನ್ ಪಾವತಿ ಮಾಡಿದ ಬಳಿಕ ಭಾರತೀಯ ಸೇನೆಯ ಅವಕಾಶದ ಬಗ್ಗೆ ಇಂಟರ್ನೆಟ್ ನಲ್ಲಿ ಶೋಧನೆ ಮಾಡಿದೆ. ಸೇನೆಯ ಎಸ್ ಎಸ್ ಬಿ ಪೋರ್ಟಲ್ ಅಧ್ಯಯನ ಮಾಡಿ,ಅದರಲ್ಲಿ ಸಿಕ್ಕ ಮಾಹಿತಿ,ಪುಸ್ತಕ ಓದಿ, ಯೂಟನಲ್ಲಿ ನೋಡಿ ಪರೀಕ್ಷೆ ಬರೆದೆ. ಹಾಕಿದ ಶ್ರಮ ಈಗ ವ್ಯರ್ಥ ಆಗಲಿಲ್ಲ. ನನ್ನ ಆಸೆಯಂತೇ ತಂದೆ ತಾಯಿಯ ಆಶೀರ್ವಾದದಿಂದ ಸೇನೆಯಲ್ಲಿ ಮುಂದುವರಿಯುವ ಭಾಗ್ಯ ಸಿಕ್ಕಿದೆ. ಜುಲೈ 2ರಂದು ಭಾರತೀಯ ಸೇನೆಗೆ ಜಮ್ಮುವಿನಲ್ಲಿ ಅಧೀಕೃತವಾಗಿ ಸೇರಲಿದ್ದೇನೆ ಅಂತಾ ಸಾತ್ವಿಕ್ ಕುಳವರ್ಮ ಹೇಳಿದ್ದಾರೆ.












Click it and Unblock the Notifications