ಗಣರಾಜ್ಯೋತ್ಸವ 2026: ಹುಡುಗರಿಗೆ ಇಲ್ಲಿದೆ ಆಕರ್ಷಕ ರಿಪಬ್ಲಿಕ್ ಡೇ ಫ್ಯಾನ್ಸಿ ಡ್ರೆಸ್ ಪಟ್ಟಿ
ಗಣರಾಜ್ಯೋತ್ಸವ ಅಂದರೆ ಕೇವಲ ಧ್ವಜಾರೋಹಣ ಮತ್ತು ಪರೇಡ್ ಅಷ್ಟೇ ಅಲ್ಲ, ಅದು ಭಾರತದ ಮಹಾನ್ ಗ್ರಂಥವಾದ 'ಸಂವಿಧಾನ' ಜಾರಿಗೆ ಬಂದ ಐತಿಹಾಸಿಕ ದಿನ. ಪ್ರತಿ ವರ್ಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳಲ್ಲಿ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಅಥವಾ ಸೈನಿಕರ ವೇಷ ನೋಡಿ ನೋಡಿ ಕಣ್ಣಿಗೆ ಅಭ್ಯಾಸವಾಗಿಬಿಟ್ಟಿದೆ ಅಲ್ಲವೇ? ಹಾಗಾದರೆ ಈ ವರ್ಷ ಸ್ವಲ್ಪ ವಿಭಿನ್ನವಾಗಿ ಯೋಚಿಸಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ಆ ದೇಶವನ್ನು ಮುನ್ನಡೆಸಲು ಬೇಕಾದ ಕಾನೂನು ಮತ್ತು ನೀತಿಗಳನ್ನು ರೂಪಿಸಿದ 'ಭಾರತದ ಬುದ್ಧಿವಂತ ಮೆದುಳುಗಳ' ವೇಷವನ್ನು ನಿಮ್ಮ ಮಕ್ಕಳಿಗೆ ಏಕೆ ಹಾಕಿಸಬಾರದು?
ಹುಡುಗರಿಗಾಗಿ ಇಲ್ಲಿವೆ ಸಂವಿಧಾನದ ಪ್ರಮುಖ ರೂವಾರಿಗಳ ವೇಷ ಮತ್ತು ಅವರ ಬಗ್ಗೆ ತಿಳಿಯಲೇಬೇಕಾದ ಮಾಹಿತಿ:
ಡಾ. ಬಿ.ಆರ್. ಅಂಬೇಡ್ಕರ್: ಭಾರತದ ಸಂವಿಧಾನದ ಪಿತಾಮಹ. ಕರಡು ಸಮಿತಿಯ ಅಧ್ಯಕ್ಷರಾಗಿ 2 ವರ್ಷ, 11 ತಿಂಗಳು, 18 ದಿನಗಳ ಕಾಲ ಶ್ರಮಿಸಿ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ನಮಗೆ ನೀಡಿದರು. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರು ಹಾಕಿಕೊಟ್ಟ ಮಾರ್ಗ ಇಂದಿಗೂ ದಾರಿದೀಪ.
ವೇಷ: ನೀಲಿ ಬಣ್ಣದ ಕೋಟ್, ಕೆಂಪು ಟೈ ಮತ್ತು ದಪ್ಪನೆಯ ಕನ್ನಡಕ. ಕೈಯಲ್ಲಿ 'Constitution of India' ಪುಸ್ತಕ ಕಡ್ಡಾಯವಾಗಿರಲಿ.

ಡಾ. ರಾಜೇಂದ್ರ ಪ್ರಸಾದ್ : ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಇಡೀ ಪ್ರಕ್ರಿಯೆಯನ್ನು ತಾಳ್ಮೆಯಿಂದ ಮುನ್ನಡೆಸಿದ ನಾಯಕ. ಮುಂದೆ ಇವರೇ ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯಾದರು. ಇವರ ಸಹಿಯು ಸಂವಿಧಾನದ ಪ್ರತಿಯಲ್ಲಿ ಮೊದಲನೆಯದಾಗಿದೆ.
ವೇಷ: ಬಿಳಿ ಧೋತಿ, ಉದ್ದನೆಯ ಕುರ್ತಾ ಮತ್ತು ಗಾಂಧಿ ಟೋಪಿ. ಕೈ ಜೋಡಿಸಿ ನಮಸ್ಕರಿಸುವ ಭಂಗಿ ಇವರಿಗೆ ಒಪ್ಪುತ್ತದೆ.
ಸರ್ದಾರ್ ವಲ್ಲಭಭಾಯಿ ಪಟೇಲ್: ಕೇವಲ ದೇಶವನ್ನು ಒಂದುಗೂಡಿಸಿದ್ದು ಮಾತ್ರವಲ್ಲ, ಸಂವಿಧಾನದಲ್ಲಿ 'ಮೂಲಭೂತ ಹಕ್ಕುಗಳ' ಸಮಿತಿಯ ಅಧ್ಯಕ್ಷರಾಗಿ ಪ್ರಜೆಗಳ ಹಕ್ಕನ್ನು ರಕ್ಷಿಸಿದ 'ಉಕ್ಕಿನ ಮನುಷ್ಯ'. ಅಲ್ಪಸಂಖ್ಯಾತರ ರಕ್ಷಣೆಗೆ ಇವರು ಬಲವಾಗಿ ಪ್ರತಿಪಾದಿಸಿದವರು.
ವೇಷ: ಖಾದಿ ಜ್ಯಾಕೆಟ್, ಧೋತಿ ಮತ್ತು ಭುಜದ ಮೇಲೆ ಒಂದು ಶಾಲು. ಗಂಭೀರವಾದ ಮುಖಭಾವ ಇರಲಿ.
ಜವಾಹರಲಾಲ್ ನೆಹರು: ಸಂವಿಧಾನದ ಆತ್ಮ ಎಂದು ಕರೆಯಲ್ಪಡುವ 'ಪೀಠಿಕೆ'ಗೆ ಆಧಾರವಾದ 'ಧ್ಯೇಯಗಳ ನಿರ್ಣಯ'ವನ್ನು ಮಂಡಿಸಿದವರು ನೆಹರು. ಆಧುನಿಕ ಭಾರತದ ಪರಿಕಲ್ಪನೆಯನ್ನು ಸಂವಿಧಾನದಲ್ಲಿ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ವೇಷ: ಉದ್ದನೆಯ ನೆಹರು ಕೋಟ್, ಅದರ ಜೇಬಿನಲ್ಲಿ ಕೆಂಪು ಗುಲಾಬಿ ಮತ್ತು ಬಿಳಿ ಟೋಪಿ.
ಬಿ.ಎನ್. ರಾವ್ ( ಬೆನಗಲ್ ನರಸಿಂಗ ರಾವ್): ಇವರು ಕನ್ನಡಿಗರು ಎಂಬುದು ನಮಗೆ ಹೆಮ್ಮೆ. ಸಂವಿಧಾನದ 'ಸಲಹೆಗಾರರಾಗಿ' ನೇಮಕಗೊಂಡ ಇವರು, ಪ್ರಪಂಚದ ನಾನಾ ಸಂವಿಧಾನಗಳನ್ನು ಅಧ್ಯಯನ ಮಾಡಿ, ಸಂವಿಧಾನದ ಮೊದಲ ಕರಡು ಪ್ರತಿಯನ್ನು ಸಿದ್ಧಪಡಿಸಿಕೊಟ್ಟ ಅಪ್ರತಿಮ ಮೇಧಾವಿ.
ವೇಷ: ಫಾರ್ಮಲ್ ಸೂಟ್, ಕಣ್ಣಿಗೆ ಕನ್ನಡಕ ಮತ್ತು ಕೈಯಲ್ಲಿ ಫೈಲ್ ಹಿಡಿದು ಒಬ್ಬ ದಕ್ಷ ಅಧಿಕಾರಿಯಂತೆ ಕಾಣಬೇಕು.
ಕೆ.ಎಂ. ಮುನ್ಶಿ: ಕರಡು ಸಮಿತಿಯ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರು. ಗುಜರಾತಿ ಸಾಹಿತ್ಯದ ದಿಗ್ಗಜರೂ ಆಗಿದ್ದ ಇವರು, ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಸಂವಿಧಾನದಲ್ಲಿ ಪ್ರಬಲ ವಾದ ಮಂಡಿಸಿದರು. ಭಾರತೀಯ ವಿದ್ಯಾ ಭವನದ ಸ್ಥಾಪಕರು ಇವರೇ.
ವೇಷ: ಸಾಂಪ್ರದಾಯಿಕ ಧೋತಿ, ಕೋಟ್ ಮತ್ತು ತಲೆಗೊಂದು ಪೇಟ.
ಮೌಲಾನಾ ಅಬ್ದುಲ್ ಕಲಾಂ ಆಜಾದ್: ಸಂವಿಧಾನ ಸಭೆಯಲ್ಲಿ ಶಿಕ್ಷಣ, ರಾಷ್ಟ್ರೀಯ ಭಾಷೆ ಮತ್ತು ಕೋಮು ಸಾಮರಸ್ಯದ ಬಗ್ಗೆ ಮಹತ್ವದ ಚರ್ಚೆಗಳನ್ನು ನಡೆಸಿದ ವಿದ್ವಾಂಸ. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ ಇವರು ನೀಡಿದ ಕೊಡುಗೆ ಅಪಾರ.
ವೇಷ: ಉದ್ದನೆಯ ಶೇರ್ವಾನಿ ಮತ್ತು ಅವರ ವಿಶಿಷ್ಟ ಶೈಲಿಯ ಟೋಪಿ ಧರಿಸಿದರೆ ಮಗು ಎಲ್ಲರ ಗಮನ ಸೆಳೆಯುತ್ತದೆ.
ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ : ಕರಡು ಸಮಿತಿಯಲ್ಲಿದ್ದ ಪ್ರಖ್ಯಾತ ವಕೀಲರು. ಸಂವಿಧಾನದ ಪೌರತ್ವ ಮತ್ತು ತುರ್ತು ಪರಿಸ್ಥಿತಿಯ ನಿಯಮಗಳನ್ನು ರೂಪಿಸುವಲ್ಲಿ ಇವರ ಪಾತ್ರ ದೊಡ್ಡದು. ಸ್ವತಃ ಅಂಬೇಡ್ಕರ್ ಅವರೇ ಇವರ ಕಾನೂನು ಪಾಂಡಿತ್ಯವನ್ನು ಕೊಂಡಾಡಿದ್ದರು.
ವೇಷ: ವಕೀಲರ ಕೋಟ್ ಅಥವಾ ಸಾಂಪ್ರದಾಯಿಕ ಪಂಚೆ-ಶರ್ಟ್ ಮತ್ತು ಕನ್ನಡಕ.
ಸಿ. ರಾಜಗೋಪಾಲಾಚಾರಿ: ರಾಜಾಜಿ ಎಂದೇ ಕರೆಯಲ್ಪಡುವ ಇವರು ಅದ್ಭುತ ಬುದ್ಧಿವಂತಿಕೆಗೆ ಹೆಸರಾದವರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಗಳ ಹಂಚಿಕೆಯ ಬಗ್ಗೆ ಇವರು ನೀಡಿದ ಸಲಹೆಗಳು ಸಂವಿಧಾನ ರಚನೆಯಲ್ಲಿ ಪ್ರಮುಖವಾಗಿದ್ದವು.
ವೇಷ: ಕಪ್ಪು ಕನ್ನಡಕ, ಬಿಳಿ ಧೋತಿ ಮತ್ತು ಕೈಯಲ್ಲಿ ಊರುಗೋಲು.
ಕೆ.ಸಿ. ರೆಡ್ಡಿ: ನಮ್ಮ ಕರ್ನಾಟಕದ (ಅಂದಿನ ಮೈಸೂರು ಸಂಸ್ಥಾನದ) ಪ್ರತಿನಿಧಿಯಾಗಿ ಸಂವಿಧಾನ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಮುಖ ನಾಯಕ. ಮುಂದೆ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಕನ್ನಡಿಗರ ದನಿಯಾಗಿ ಸಂವಿಧಾನ ಸಭೆಯಲ್ಲಿ ಇವರು ಇದ್ದರು ಎಂಬುದು ವಿಶೇಷ.
ವೇಷ: ಮೈಸೂರು ಪೇಟ, ರೇಷ್ಮೆ ಶಲ್ಯ ಮತ್ತು ಪಂಚೆ ಧರಿಸಿ ಅಚ್ಚ ಕನ್ನಡಿಗನಂತೆ ಮಿಂಚಬಹುದು.
ಈ ಗಣರಾಜ್ಯೋತ್ಸವದಂದು ನಿಮ್ಮ ಮಗುವಿಗೆ ಈ ಮಹಾನ್ ಚೇತನಗಳ ವೇಷ ಹಾಕಿಸಿ, ಸಂವಿಧಾನದ ಮಹತ್ವವನ್ನು ಎಳೆಯ ವಯಸ್ಸಿನಲ್ಲೇ ಮನವರಿಕೆ ಮಾಡಿಕೊಡಿ.












Click it and Unblock the Notifications