Nari Shakti : ಗಣರಾಜ್ಯೋತ್ಸವ 2023; ಕರ್ನಾಟಕ 'ನಾರಿ ಶಕ್ತಿ' ಸ್ತಬ್ಧಚಿತ್ರದ ವಿಶೇಷತೆಗಳು

ಕರ್ನಾಟಕದ ವಾರ್ತಾ ಇಲಾಖೆಯು ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. 2023ನೇ ಸಾಲಿನಲ್ಲಿ 'ನಾರಿ ಶಕ್ತಿ' ಸ್ತಬ್ಧಚಿತ್ರವು ದೆಹಲಿಯ ಕರ್ತವ್ಯ ಪಥದಲ್ಲಿ ಸಾಗಲಿದೆ.

ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯುವ 2023ರ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತ್ರೀ ಸಬಲೀಕರಣವನ್ನು ಪ್ರತಿಬಿಂಬಿಸುವ 'ನಾರಿ ಶಕ್ತಿ' ಸ್ತಬ್ಧಚಿತ್ರವು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಕನ್ನಡ ನಾಡಿನ ಹೆಮ್ಮೆಯ ಪ್ರತೀಕವಾಗಿರುವ ಸ್ತಬ್ಧಚಿತ್ರವು ಕರ್ತವ್ಯ ಪಥ್‌ನಲ್ಲಿ ಸಾಗುವ ಮೂಲಕ ಕರ್ನಾಟಕ ರಾಜ್ಯದ ಹಿರಿಮೆಯ ಕೀರ್ತಿ ಪತಾಕೆಯನ್ನು ಹಾರಿಸಲಿದೆ. ಈ ಮೂಲಕ ಸತತ 14 ವರ್ಷಗಳಿಂದ ಸ್ತಬ್ಧಚಿತ್ರದೊಂದಿಗೆ ಪಾಲ್ಗೊಂಡ ದೇಶದ ಏಕೈಕ ರಾಜ್ಯವೆಂಬ ಹೆಗ್ಗಳಿಕೆಯೂ ಕರ್ನಾಟಕಕ್ಕೆ ಸೇರಲಿದೆ.

ಈ ಬಾರಿಯ ಗಣರಾಜ್ಯೋತ್ಸವ ಸ್ತಬ್ಧಚಿತ್ರ ರಾಜ್ಯದ ಪಾಲಿಗೆ ಅತ್ಯಂತ ಸ್ಮರಣೀಯ. ಹಲವು ಅಡೆ ತಡೆಗಳನ್ನು ಎದುರಿಸಿ, ಕೊನೆಯ ಹಂತದಲ್ಲಿ ರಾಜ್ಯವು ಪಥ ಸಂಚಲನದಲ್ಲಿ ಭಾಗವಹಿಸಲು ಅನುಮಿತ ಪಡೆದುಕೊಂಡಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಸವಾಲು ಎದುರಾಗಿತ್ತು. ಈಗ ಸ್ತಬ್ಧಚಿತ್ರ ಸಂಪೂರ್ಣವಾಗಿ ಸಿದ್ದಗೊಂಡು ತಾಲೀಮಿನಲ್ಲಿ ಪಾಲ್ಗೊಂಡಿದೆ.

ಕರ್ನಾಟಕದ ಹಿರಿಮೆ ಮತ್ತು ಕನ್ನಡ ಅಸ್ಮಿತೆಯ ಪ್ರತೀಕದಂತಿರುವ ಸ್ತಬ್ಧಚಿತ್ರ ಕೇವಲ 10 ದಿನಗಳಲ್ಲಿ ರೂಪುಗೊಂಡಿದೆ. ಇದು ವೈಶಿಷ್ಟ ಪೂರ್ಣತೆಯಿಂದಲೇ ಗಮನ ಸೆಳೆಯುತ್ತಿದೆ. ವಾರ್ತಾ ಇಲಾಖೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಪ್ರತಿ ಬಾರಿಯೂ ಪಾಲ್ಗೊಳ್ಳುತ್ತದೆ. ಸ್ತಬ್ಧಚಿತ್ರದ ವಿಷಯದ ಆಯ್ಕೆ, ವಿನ್ಯಾಸ, ಕೇಂದ್ರದಲ್ಲಿ ಅದರ ಅನುಮೋದನೆ, ನಿರ್ಮಾಣ, ಪಾಲ್ಗೊಳ್ಳುವಿಕೆ ಹೀಗೆ ಎಲ್ಲಾ ಹಂತಗಳಲ್ಲೂ ವಾರ್ತಾ ಇಲಾಖೆ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ.

ಯಾವ-ಯಾವ ವಿಷಯಗಳ ಪ್ರಸ್ತಾವನೆ ಸಲ್ಲಿಕೆ

ಯಾವ-ಯಾವ ವಿಷಯಗಳ ಪ್ರಸ್ತಾವನೆ ಸಲ್ಲಿಕೆ

ಕರ್ನಾಟಕದ ವಾರ್ತಾ ಇಲಾಖೆ ಕಳೆದ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳುತ್ತಿದೆ. ಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಇಲಾಖೆಯ ಆಯುಕ್ತರಾದ ಡಾ. ಪಿ. ಎಸ್‌. ಹರ್ಷ ಸಂತಸ ಹಂಚಿಕೊಂಡಿದ್ದಾರೆ.

ಈ ವರ್ಷದ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು
* ಕರ್ನಾಟಕದ ಮಹಿಳೆಯರ ಶೌರ್ಯ
* ರೇಷ್ಮೆ ಕರ್ನಾಟಕದ ಹೆಮ್ಮೆ
* ಕರ್ನಾಟಕದ ಪುಷ್ಪೋದ್ಯಮ
* ಕರ್ನಾಟಕ ಸಿರಿಧಾನ್ಯದ ನಾಯಕ
* ನಾರಿ ಶಕ್ತಿ ಎಂಬ ಐದು ವಿಷಯಗಳನ್ನು ಆಯ್ಕೆ ಮಾಡಿಕಳುಹಿಸಿತ್ತು.

ಇದರಲ್ಲಿ ಸ್ತ್ರೀ ಸಬಲೀಕರಣವನ್ನು ಬಿಂಬಿಸುವ 'ನಾರಿ ಶಕ್ತಿ' ವಿಷಯವನ್ನು ವಿಷಯ ಆಯ್ಕೆಯ ಪರಿಣತರ ತಂಡವು ಅಂತಿಮಗೊಳಿಸಿತ್ತು. ಇದಕ್ಕೆ ಅನುಗುಣವಾಗಿ ಈ ಬಾರಿಯ ಸ್ತಬ್ಧಚಿತ್ರದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಮೂವರು ಮಹಿಳಾ ಸಾಧಕಿಯರ ಸಾಧನೆಯನ್ನು ಪ್ರದರ್ಶಿಸಲಾಗುತ್ತಿದೆ.

ಕರ್ನಾಟಕ ಹೆಸರು ಸೇರ್ಪಡೆಗೊಂಡಿರಲಿಲ್ಲ

ಕರ್ನಾಟಕ ಹೆಸರು ಸೇರ್ಪಡೆಗೊಂಡಿರಲಿಲ್ಲ

'ಆಜಾದಿ ಕ ಅಮೃತ ಮಹೋತ್ಸವ'ದ ಅಂಗವಾಗಿ ಸೂಲಗಿತ್ತಿ ನರಸಮ್ಮ, ವೃಕ್ಷ ಮಾತೆ ತುಳಸಿ ಗೌಡ ಹಾಲಕ್ಕಿ ಮತ್ತು ಸಾಲುಮರದ ತಿಮ್ಮಕ್ಕ ಅವರುಗಳ ಸಾಧನೆಗಳನ್ನು 'ನಾರಿ ಶಕ್ತಿ' ಹೆಸರಿನಲ್ಲಿ ರಾಜ್ಯವು 2023ರ ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ ಪ್ರಸ್ತುತ ಪಡಿಸಿದೆ. ಇವರು ಸಮಾಜಕ್ಕೆ ನೀಡಿದ ನಿಸ್ವಾರ್ಥ ಕೊಡುಗೆಗಾಗಿ ಕೇಂದ್ರ ಸರ್ಕಾರ ಪದ್ಮ ಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.

ಕರ್ನಾಟಕದ ಅತಿ ಹಿಂದುಳಿದ ಹಳ್ಳಿಗಳಲ್ಲಿ, ಸಾಮಾನ್ಯ ಕುಟುಂಬಗಳಲ್ಲಿ ಹುಟ್ಟಿ ಬೆಳೆದರೂ ಇವರುಗಳ ಸಾಧನೆಗೆ ಅವರ ಹುಟ್ಟು, ಜಾತಿ, ಅಂತಸ್ತು ಯಾವುದು ಅಡ್ಡ ಬಂದಿಲ್ಲ. ತಮ್ಮ ಸಾಧನೆಗಳ ಮೂಲಕವೇ ಜಾಗತಿಕವಾಗಿ ಗಮನ ಸೆಳೆದವರು. ಇವರ ಸಾಧನೆಗಾಗಿ ಕರ್ನಾಟಕ ಮತ್ತು ದೇಶವೇ ಹೆಮ್ಮೆಪಡುತ್ತದೆ. ಇದನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಲಾಗಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಕಲಾನಿರ್ದೇಶಕ ಶಶಿಧರ ಅಡಪ ಅವರು ವಿನ್ಯಾಸ ಮಾಡಿಕೊಟ್ಟ ಮಾದರಿಗೆ ಆಯ್ಕೆ ಸಮಿತಿ ಮೊದಲ ಹಂತದಲ್ಲೇ ಅನುಮೋದನೆ ನೀಡಿತ್ತು. ಯುವ ಸಂಗೀತ ನಿರ್ದೇಶಕ ಪ್ರವೀಣ್‍ ಡಿ. ರಾವ್‍ ಕನ್ನಡ ಸಂಗೀತವನ್ನು ಹಾಗೆಯೇ ಉಳಿಸಿಕೊಂಡಿತ್ತು.

ಕಾರವಾರದ ಪುರುಷೋತ್ತಮ ಪಾಂಡುರಂಗ ಅವರ ನೇತೃತ್ವದ ಹಾಲಕ್ಕಿಯವರ ಸುಗ್ಗಿ ಕುಣಿತದ 20 ಮಂದಿಯ ಕಲಾವಿದರ ತಂಡಕ್ಕೆ ಅನುಮತಿಯೂ ಸಿಕ್ಕಿತ್ತು. ಹೀಗಾಗಿ, ರಾಜ್ಯವು ಸ್ತಬ್ಧಚಿತ್ರದ ಕಾರ್ಯದಲ್ಲಿ ತೊಡಗಿಸಿಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎನ್ನುವಾಗಲೇ 2022ರ ಡಿಸೆಂಬರ್‌ 28ರಂದು ನಡೆದ ಕೊನೆಯ ಸುತ್ತಿನ ಸಭಾಸೂಚನಾ ಪತ್ರದಲ್ಲಿ ಕರ್ನಾಟಕ ಹೆಸರು ಸೇರ್ಪಡೆಗೊಂಡಿರಲಿಲ್ಲ.

ಅವಕಾಶ ನೀಡುವಂತೆ ಮನವಿ ಮಾಡಲಾಯಿತು

ಅವಕಾಶ ನೀಡುವಂತೆ ಮನವಿ ಮಾಡಲಾಯಿತು

ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕಳೆದ 8 ವರ್ಷಗಳಲ್ಲಿ ಭಾಗವಹಿಸುವ ಅವಕಾಶ ದೊರೆಯದ ಹಾಗೂ ಅತಿ ಕಡಿಮೆ ಬಾರಿ ಪಾಲ್ಗೊಂಡ ರಾಜ್ಯಗಳಿಗೆ ಅವಕಾಶ ನೀಡುವಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರವು ಈ ಬಾರಿ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ 2023ರ ಗಣರಾಜ್ಯೋತ್ಸದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವ ಅವಕಾಶ ದೊರೆಯಲಿಲ್ಲ.

ಆದರೂ, ಉತ್ಸಾಹ ಕಳೆದುಕೊಳ್ಳದ ಇಲಾಖೆಯು 2022ರ ಡಿಸೆಂಬರ್‌ 30 ರಂದು ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆದು ಕರ್ನಾಟಕದ ನಿರಂತರ ಸಾಧನೆಯನ್ನು ಪರಿಗಣಿಸಿ ಈ ಬಾರಿಯೂ ಮತ್ತೊಮ್ಮೆ ಅವಕಾಶ ನೀಡುವಂತೆ ಕೋರಿತ್ತು. ರಕ್ಷಣಾ ಸಚಿವಾಲಯದಿಂದ ಜನವರಿ 15ರಂದು ನಡೆದ ಸಭೆಯಲ್ಲಿ ಭಾಗವಹಿಸುವಂತೆ ಪತ್ರದಲ್ಲಿ ತಿಳಿಸಲಾಗಿತ್ತು. ರಕ್ಷಣಾ ಸಚಿವಾಲಯದ ರಾಷ್ಟ್ರೀಯ ರಂಗಶಾಲಾ ಕ್ಯಾಂಪ್‍ನಲ್ಲಿ ನಡೆದ ಕೊನೆ ಸುತ್ತಿನ ಸಭೆಯಲ್ಲಿ ಇಲಾಖೆಯು ಭಾಗವಹಿಸಿತ್ತು.

ಈ ಸಭೆಯಲ್ಲಿ ರಾಜ್ಯದ ಕೀ ಮಾಡಲ್‌ ಮತ್ತು ಸಂಗೀತಕ್ಕೆ ಅನುಮೋದನೆ ನೀಡಲಾಗಿತ್ತು. ಬಳಿಕ ಜನವರಿ 16ರಂದು ಅಧಿಕೃತವಾಗಿ ಕರ್ನಾಟಕದ ಹೆಸರು 2023ರ ಸ್ತಬ್ಧಚಿತ್ರದ ಪಟ್ಟಿಯಲ್ಲಿ ಸೇರ್ಪಡೆಗೊಂಡಿತ್ತು ಎಂದು ಪಿ. ಎಸ್‌. ಹರ್ಷ ವಿವರಣೆ ನೀಡಿದ್ದಾರೆ.

10 ದಿನದಲ್ಲಿ ಸಿದ್ಧಪಡಿಸುವ ಸವಾಲು

10 ದಿನದಲ್ಲಿ ಸಿದ್ಧಪಡಿಸುವ ಸವಾಲು

ಭಾವಹಿಸಲು ಅನುಮತಿ ಸಿಕ್ಕ ಬಳಿಕ 10 ದಿನಗಳಲ್ಲಿ ಸ್ತಬ್ಧಚಿತ್ರವನ್ನು ಸಿದ್ಧಪಡಿಸುವ ಬೃಹತ್‌ ಸವಾಲು ಎದುರಾಗಿತ್ತು. ಕರ್ನಾಟಕದ ಬಗೆಗಿನ ಅಭಿಮಾನ, ನಾಡಿನ ಹಿರಿಮೆ ಹಾಗೂ ಸಂಸ್ಕೃತಿಯ ಮಹತ್ವವನ್ನು ಎತ್ತಿಹಿಡಿಯುವ ಮಾನ್ಯ ಮುಖ್ಯಮಂತ್ರಿಗಳ ಪ್ರೋತ್ಸಾಹದ ನುಡಿಗಳೇ ಈ ಸವಾಲಿನ ಕೆಲಸಕ್ಕೆ ಮುನ್ನುಡಿ ಬರೆದಿತ್ತು. ಎಲ್ಲಾ ದೃಷ್ಟಿಕೋನಗಳಿಂದ ವಿಮರ್ಶಿಸಿ, ಪರಿಣತರು, ವಿಷಯ ತಜ್ಞರು, ಕಲಾನಿರ್ದೇಶಕರು ಮತ್ತು ಕಲಾವಿದರೊಂದಿಗೆ ಪರಾಮರ್ಶಿಸಿಕೊಂಡು ಇಲಾಖೆಯು ಕೆಲಸವನ್ನು ಕೈಗೆತ್ತಿಕೊಂಡಿತ್ತು.

ಕಾರ್ಯತಂತ್ರದ ರೂಪು ರೇಷೆಗಳಂತೆ ಈ ಸ್ತಬ್ಧಚಿತ್ರ ದಿನಗಳ ಲೆಕ್ಕದಲ್ಲಿ ಸಿದ್ಧವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸ್ತಬ್ಧಚಿತ್ರ ಮೂಡಿ ಬಂದಿದೆ. ಇದಕ್ಕಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈಜೋಡಿಸಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಆರಂಭದಲ್ಲಿ ದೆಹಲಿಯಲ್ಲಿ ಕವಿದಿದ್ದ ದಟ್ಟ ಮಂಜಿನಂತೆ ಸವಾಲುಗಳು ಕಂಡಿದ್ದವು. ಇಂದು ಅವುಗಳೆಲ್ಲವೂ ಮಂಜಿನಂತೆ ಕರಗಿವೆ. ಸಿದ್ಧಗೊಂಡಿರುವ ಸ್ತಬ್ಧಚಿತ್ರವನ್ನು ರಾಜ್ಯದ ಪರವಾಗಿ ಪ್ರದರ್ಶಿಸಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಡಾ. ಹರ್ಷ ಸಂತಸ ಹಂಚಿಕೊಂಡಿದ್ದಾರೆ.

'ನಾರಿ ಶಕ್ತಿ' ಸ್ತಬ್ಧಚಿತ್ರದಲ್ಲಿ ಏನಿರಲಿದೆ?

'ನಾರಿ ಶಕ್ತಿ' ಸ್ತಬ್ಧಚಿತ್ರದಲ್ಲಿ ಏನಿರಲಿದೆ?

ಗಿಡ-ಮರ, ಬೆಟ್ಟ-ಗುಡ್ಡ, ಪಕ್ಷಿಗಳಿಂದ ಕಂಗೊಳಿಸುತ್ತಿರುವ ಸ್ತಬ್ಧಚಿತ್ರದ ಮುಂಭಾಗದಲ್ಲಿ ತೊಟ್ಟಿಲು ತೂಗುತ್ತಾ, ಕೈನಲ್ಲಿ ಮಗು ಆಡಿಸುತ್ತಿರುವ ಸೂಲಗಿತ್ತಿ ನರಸಮ್ಮ ಅವರನ್ನು ತೋರಿಸಲಾಗಿದೆ. ನುರಿತ ವೈದ್ಯರ ಅನುಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಹೆರಿಗೆಗಳನ್ನು ಮಾಡಿಸುವಲ್ಲಿ ಅವರು ಸಿದ್ಧಹಸ್ತರು. ಏಳು ದಶಕಗಳಲ್ಲಿ ಇಂತಹ ಎರಡು ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.

ಹಚ್ಚ ಹಸುರಿನಿಂದ ಕೂಡಿರುವ ಸ್ತಬ್ಧಚಿತ್ರದ ಮಧ್ಯಭಾಗದಲ್ಲಿ ಗಿಡ ಮರಗಳನ್ನು ಪೋಷಿಸುತ್ತಿರುವ ತುಳಸಿ ಗೌಡ ಹಾಲಕ್ಕಿ ಅವರನ್ನು ತೋರಿಸಿದೆ. 'ವೃಕ್ಷ ಮಾತೆ' ಎಂದೇ ಹೆಸರಾಗಿರುವ ತುಳಸಿ ಅವರು ಅಪರೂಪದ ಪ್ರಭೇದದ ಸಸ್ಯಗಳನ್ನು ಗುರುತಿಸಿ ಬೆಳೆಸುವಲ್ಲಿ ಪರಿಣತರು. 30,000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿರುವ ಶ್ರೇಯ ಇವರದ್ದು. ಇದನ್ನು ಗಿಡಗಳ ಮಧ್ಯೆ ಕುಳಿತು ಅವುಗಳನ್ನು ಪೋಷಿಸುತ್ತಿರುವ ರೀತಿಯಲ್ಲಿ ಅವರನ್ನು ತೋರಿಸಿದೆ.

ಕಣ್ಣಿಗೆ ಮುದ ನೀಡುವ ಕಾಡಿನ ನಿಜಸ್ವರೂಪದಂತಿರುವ ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ರಾಜ್ಯ ಹೆದ್ದಾರಿಯ ಆಜುಬಾಜಿನಲ್ಲಿ 8000 ಮರಗಳನ್ನು ನೆಟ್ಟು ನೀರೆರೆದು ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರನ್ನು ತೋರಿಸಿದೆ. ಇದನ್ನು ಅವರು ಗಿಡಗಳಿಗೆ ನೀರೆರೆಯುತ್ತಿರುವಂತೆ ಬಿಂಬಿಸಿದೆ. ಇದಲ್ಲದೆ 75 ಆಲದ ಮರಗಳನ್ನು 4.5 ಕಿ. ಮೀ ಉದ್ದದ ರಾಜ್ಯ ಹೆದ್ದಾರಿಯಲ್ಲಿ ಬೆಳೆಸಿದ್ದಾರೆ. ಇದನ್ನು ಸ್ತಬ್ಧಚಿತ್ರದ ಕೊನೆಯ ಭಾಗದಲ್ಲಿ ಬೃಹತ್ ಆಲದ ಮರದ ಮೂಲಕ ಚಿತ್ರಿಸಿದೆ.

ಪರೇಡ್‌ನಲ್ಲಿ ಭಾಗವಹಿಸಲು ತೀವ್ರ ಪೈಪೋಟಿ

ಪರೇಡ್‌ನಲ್ಲಿ ಭಾಗವಹಿಸಲು ತೀವ್ರ ಪೈಪೋಟಿ

ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ. ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು. ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆ, ಪ್ರಾತಿನಿಧ್ಯತೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯ 14ಕ್ಕೆ ಇಳಿಸಿದೆ.
ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು ಸತತವಾಗಿ 14ನೇ ಬಾರಿಗೆ ಭಾಗಹಿಸಿದೆ. ಈ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ರಾಜ್ಯವು ಈ ಬಾರಿ ಭಾಗಹಿಸುತ್ತಿದೆ.

2022ರ ಸ್ತಬ್ಧಚಿತ್ರದಲ್ಲಿ ಇಲಾಖೆಯು ಪ್ರದರ್ಶಿಸಿದ್ದ ಸಾಂಪ್ರದಾಯಿಕ ಕಸೂತಿ ತೊಟ್ಟಿಲುಗೆ ದ್ವಿತೀಯ ಪ್ರಶಸ್ತಿ ದೊರೆತಿತ್ತು. 2015ರಲ್ಲಿ ರಾಜ್ಯವು ಚನ್ನಪಟ್ಟದ ಗೊಂಬೆಗಳನ್ನು ಪ್ರದರ್ಶಿಸಿತ್ತು. ಇದಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು. 2012ರ ಗಣರಾಜ್ಯೋತ್ಸವದಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಯ ಸ್ತಬ್ಧಚಿತ್ರಕ್ಕೆ ತೃತೀಯ ಪ್ರಶಸ್ತಿ ದೊರೆತಿತ್ತು. 2011ರಲ್ಲಿ ಬೀದರ್‌ನ ಪಾರಂಪರಿಕ ಕಲೆಯಾದ ಬಿದರಿ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ದೊರೆತಿತ್ತು.

2008ರಲ್ಲಿ ಹೊಯ್ಸಳ ವಾಸ್ತುಶಿಲ್ಪಕ್ಕೆ ದ್ವಿತೀಯ ಪ್ರಶಸ್ತಿ ಸಂದಿತ್ತು. 2005ರಲ್ಲಿ ಕರ್ನಾಟಕದಲ್ಲಿ ನಡೆಯಲಿದ್ದ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು. 2008ರಲ್ಲಿ ಹೊಯ್ಸಳ ಕಲೆಯ ಸ್ತಬ್ಧಚಿತ್ರವು ದ್ವಿತೀಯ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್‍ಗಾಗಿ ಪ್ರಶಸ್ತಿ ಲಭಿಸಿತ್ತು. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+