Ramesh Jarkiholi Profile: ಸಂಘರ್ಷದ ಸುಳಿಯಲ್ಲಿ ಮುಳುಗಿ ಹೋಗಿರುವ ವಿವಾದಿತ ನಾಯಕನ ವ್ಯಕ್ತಿ ಪರಿಚಯ
ಬೆಂಗಳೂರು, ಫೆಬ್ರವರಿ 28: ರಾಜ್ಯ ರಾಜಕಾರಣದ ಪ್ರಭಾವಿ ಕುಟುಂಬಗಳಲ್ಲಿ ಜಾರಕಿಹೊಳಿ ಕುಟುಂಬವೂ ಒಂದು. ಅದರಲ್ಲೂ ಜಾರಕಿಹೊಳಿ ಸಹೋದರರಲ್ಲಿ ಹಿರಿಯರಾದ ರಮೇಶ್ ಜಾರಕಿಹೊಳಿ ಕಳೆದ ಮೂರು ವರ್ಷಗಳಿಂದ ಹೆಚ್ಚು ಸದ್ದು ಮಾಡಿದ್ದಾರೆ. ಮುಂಬರುವ ಕರ್ನಾಟಕ ಚುನಾವಣೆಯಲ್ಲೂ ರಮೇಶ್ ಜಾರಕಿಹೊಳಿ ಹೆಚ್ಚು ಪ್ರಚಾರಕ್ಕೆ ಬರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ. ಅವರ ಕುತೂಹಲಕರ ಜೀವನಗಾಥೆ ಇಲ್ಲಿದೆ.

ವಾಲ್ಮೀಕಿ ಪರಿವಾರದಲ್ಲಿ ಜನಿಸಿದ ರಮೇಶ್
ರಮೇಶ ಜಾರಕಿಹೊಳಿ ಅವರು 1960 ರಲ್ಲಿ ಬೆಳಗಾವಿಯ ಗೋಕಾಕದಲ್ಲಿ ಜನಸಿದರು. ಅವರ ತಂದೆ ಲಕ್ಷ್ಮಣರಾವ್ ಜಾರಕಿಹೊಳಿ. ಅವರು ಕಬ್ಬು ಬೆಳೆಗಾರ ಹಾಗೂ ಉದ್ಯಮಿ ಆಗಿದ್ದರು. ರಮೇಶ್ ಜಾರಕಿಹೊಳಿ ಅವರು ಪರಿಶಿಷ್ಟ ಪಂಗಡವಾದ ವಾಲ್ಮೀಕಿ ( ನಾಯಕ ) ಸಮುದಾಯಕ್ಕೆ ಸೇರಿದವರು. ಅವರಿಗೆ ನಾಲ್ಕು ಸಹೋದರರಿದ್ದಾರೆ. ಅವರಲ್ಲಿ ಮೂವರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ( ಕಾಂಗ್ರೆಸ್ ಶಾಸಕ ), ಬಾಲಚಂದ್ರ ಜಾರಕಿಹೊಳಿ ( ಬಿಜೆಪಿ ಶಾಸಕ ) ಹಾಗೂ ಲಖನ್ ಜಾರಕಿಹೊಳಿ ( ಎಂಎಲ್‌ಸಿ) ಆಗಿದ್ದಾರೆ.

ಕಾಂಗ್ರೆಸ್‌ನಿಂದ ರಾಜಕೀಯ ಪ್ರವೇಶ
ರಮೇಶ್ ಜಾರಕಿಹೊಳಿ ಅವರು 1999 ರಲ್ಲಿ ಜನತಾ ದಳದ (ಯುನೈಟೆಡ್) ಚಂದ್ರಶೇಖರ ಸದಾಶಿವ ನಾಯಕ್ ಅವರನ್ನು 55,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಕರ್ನಾಟಕ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಅವರು ಭಾರತೀಯ ಜನತಾ ಪಕ್ಷದ ಮಲ್ಲಪ್ಪ ಲಕ್ಷ್ಮಣ್ ಮುತ್ತೇನ್ನವರ್ ವಿರುದ್ಧ 15,000 ಮತಗಳಿಂದ ಗೆದ್ದರು. 2008ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರು ಜನತಾ ದಳದ ಅಭ್ಯರ್ಥಿ ಅಶೋಕ್ ನಿಂಗಯ್ಯ ಪೂಜಾರಿ ಅವರನ್ನು 7,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆ
2013 ಹಾಗೂ 2018ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. 2013 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಐದು ಬಾರಿ ಶಾಸಕರಾಗಿ ರಮೇಶ್ ಜಾರಕಿಹೊಳಿ ನೇಮಕಗೊಂಡರು. 2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಆ ವರ್ಷ ನಡೆದ ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ರಮೇಶ್ ಅವರು ಮತ್ತೆ ಆಯ್ಕೆಯಾದರು.

ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್
ರಮೇಶ್ ಜಾರಕಿಹೊಳಿ ಅವರು 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸರ್ಕಾರವನ್ನು ಕೆಳಗಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರು ತಮ್ಮ 16 ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು. ಈ ಹಿಂದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ರಚನೆಯಾದ ಯಡಿಯೂರಪ್ಪ ಸರ್ಕಾರಲ್ಲಿ ಜಲಸಂಪನ್ಮೂಲ ಸಚಿವರಾಗಿ ನೇಮಕವಾದರು. ಅವರು ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿಯೂ ಜನಸಂಪನ್ಮೂಲ ಸಚಿವರಾಗಿ ಮುಂದುವರಿದರು.

ಸೆಕ್ಸ್ ಸಿಡಿ ಪ್ರಕರಣದಲ್ಲಿ ರಮೇಶ್
ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಕ್ಕಿ ಬಿದ್ದರು. 2 ಮಾರ್ಚ್ 2021 ರಂದು ಈ ಸಿಡಿ ಜಗಜ್ಜಾಹೀರಾಯಿತು. ಸರ್ಕಾರಿ ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಗೆ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಆರೋಪ ಜಾರಕಿಹೊಳಿ ವಿರುದ್ಧ ಕೇಳಿಬಂದಿತು. ಜಾರಕಿಹೊಳಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೊ ತುಣುಕುಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡವು. ವಿರೋಧ ಪಕ್ಷಗಳು ಜಾರಕಿಹೊಳಿ ರಾಜೀನಾಮೆಗೆ ಒತ್ತಡ ಹೇರಿದವು. ಕೊನೆಗೆ ಬಜೆಟ್ ಅಧಿವೇಶನಕ್ಕೆ ಮುಂಚೆಯೇ ಜಾರಕಿಹೊಳಿ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಬಂದೊದಗಿತು.

ಡಿಕೆಶಿ, ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸಂಘರ್ಷ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ರಮೇಶ್ ಜಾರಕಿಹೊಳಿ ಸಂಘರ್ಷಕ್ಕೆ ಇಳಿದಿದ್ದಾರೆ. ತಮ್ಮ ಲೈಂಗಿಕ ಹಗರಣದ ಹಿಂದೆ ಅವರದ್ದೇ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ವಿಷಕನ್ಯೆ ಎಂದು ಕರೆಯುವ ಮೂಲಕ ಮಹಾ ಸಂಘರ್ಷಕ್ಕೆ ಅಣಿಯಾಗಿದ್ದಾರೆ.












Click it and Unblock the Notifications