• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸಮಯದಲ್ಲಿ ಅಭ್ಯಾಸ ಹೇಗಿರಬೇಕು; ಮನೋವಿಜ್ಞಾನಿ ಶ್ರೀಧರ್ ಮಾತು...

By ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ
|
Google Oneindia Kannada News

ನಮ್ಮೆಲ್ಲರಲ್ಲೂ ಇರುವ ಬಲ ಮತ್ತು ದುರ್ಬಲಗಳಲ್ಲಿ ಅಭ್ಯಾಸದಷ್ಟು ಪ್ರಬಲವಾದುದು ಮತ್ತೊಂದು ಇರಲಾರದು. ಆದರೆ, ಈಗಿರುವ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನಗಳು ಅನೇಕ ಅಭ್ಯಾಸಗಳಿಗೂ ಕಾರಣವಾಗಬಲ್ಲದು. ಅಭ್ಯಾಸಗಳು ಒಳ್ಳೆಯದ್ದಾಗಿದ್ದರಂತೂ ಅಡ್ಡಿ ಇಲ್ಲ. ಆದರೆ ಕೆಟ್ಟ ಅಭ್ಯಾಸಗಳೂ ಗಟ್ಟಿಯಾಗುವಂತಹ ಕಾಲ ಇದಾಗಿರುವುದರಿಂದ ಅದರ ಬಗ್ಗೆ ಸ್ವಲ್ಪ ಮುನ್ನೆಚ್ಚರಿಕೆ, ಅರಿವು ಪಡೆಯುವುದು ಸೂಕ್ತ.

ಅಭ್ಯಾಸ ಎನ್ನುವುದು ಮನುಷ್ಯ ಜೀವಿಯ ಹುಟ್ಟಿನ ಜೊತೆಯಲ್ಲಿಯೇ ಹುಟ್ಟುತ್ತದೆ. ಎದೆ ಹಾಲು ಉಣಿಕೆಯಿಂದ, ಸ್ಪರ್ಶ ಸುಖ, ಅಳು-ನಗು ಕ್ರಿಯೆಗಳೆಲ್ಲವು ಕ್ರಮೇಣ ಪ್ರಯತ್ನ, ಶ್ರಮವಿರದೇ ಸರಾಗವಾಗಿ ಮುಂದುವರೆಯುತ್ತದೆ. ಈ ರೀತಿಯ ಕ್ರಿಯೆಯೂ ವ್ಯಕ್ತಿಯಲ್ಲಿ ಗಟ್ಟಿಯಾಗಿ ನೆಲೆಯೂರಿದಾಗ ಕಲಿಕೆ ಸಂಭವಿಸಿದೆ ಎನ್ನುತ್ತದೆ ಮನೋವಿಜ್ಞಾನ. ಹೀಗಾಗಿ ಅಭ್ಯಾಸಗಳೂ ಕಲಿಕೆಯ ಪ್ರಕ್ರಿಯೆಯಲ್ಲಿ ಮಹತ್ವದ ಅಂಶವಾಗಿರುವುದು.

ಒಳ್ಳೆ, ಕೆಟ್ಟ ಅಭ್ಯಾಸ ಇದ್ದೇ ಇರುತ್ತದೆ

ಒಳ್ಳೆ, ಕೆಟ್ಟ ಅಭ್ಯಾಸ ಇದ್ದೇ ಇರುತ್ತದೆ

ಮನೋವಿಜ್ಞಾನವು ಅಭ್ಯಾಸದ ಬಗ್ಗೆ ನಡೆಸಲಾಗಿರುವ ಅಧ್ಯಯನ, ಪ್ರಯೋಗಗಳು ಅಪಾರವಾಗಿರುವುದರಿಂದ ಏಕೆ ಕಲಿಯುತ್ತೇವೆ? ಹೇಗೆ ಕಲಿಯುವುದು? ಏನನ್ನು ಕಲಿಯುವುದು ಎನ್ನುವಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೂ ಉಪಯೋಗವಾಗುವ ರೀತಿಯಲ್ಲಿ ಅರಿವು ಮೂಡಿಸುತ್ತದೆ. ಮುಖ್ಯವಾಗಿ ಮನೋವಿಜ್ಞಾನದ ಕಲಿಕೆಯ ನಿರೂಪಣೆಗಳಲ್ಲದರಲ್ಲಿಯೂ ಅಭ್ಯಾಸವೇ ಕೇಂದ್ರ ಶಕ್ತಿಯಾಗಿದ್ದು ವ್ಯಕ್ತಿಯ ನಡೆನುಡಿಗಳು ಯಾವುದೇ ರೀತಿಯದಾಗಿರಲಿ, ಅಂದರೆ ಸಾಮಾಜಿಕ ಅಥವಾ ಸಾಂಸ್ಕೃತಿಕ ವರ್ತನೆಗಳೂ ಸೇರಿದಂತೆ ಕಲಿಕೆಯ ಮೂಲಕವೇ ರೂಢಿಯಾಗುವುದು. ಆದುದರಿಂದಲೇ ರೂಢಿ ಎನ್ನುವ ಪದವು ಅಭ್ಯಾಸ ಎನ್ನುವುದರ ಪರ್ಯಾಯವಾಗಿ ಕೇಳಿಬರುವುದು ಸಾಮಾನ್ಯ.

ಇನ್ನು, ನಮ್ಮೆಲ್ಲರಲ್ಲಿಯೂ ಒಳ್ಳೆಯದು, ಕೆಟ್ಟದ್ದು ಎನ್ನುವಂತಹ ಅಭ್ಯಾಸಗಳು ಇದ್ದೇ ಇರುವುದು. ಕೆಟ್ಟದ್ದು ಎಂದಾಗ ಅದು ನಮಗೆಷ್ಟು ಹಿತ ನೀಡುತ್ತದೆ ಮತ್ತು ನೀಡುವುದಿಲ್ಲ ಎನ್ನುವುದೇ ಅವುಗಳ ನಡುವಿನ ವ್ಯತ್ಯಾಸ. ಆದುದರಿಂದ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ಉಳಿಸಿಕೊಳ್ಳುವುದನ್ನಿಲ್ಲಿ ತಿಳಿಸಿಕೊಡಲಾಗಿದೆ:

ಅಭ್ಯಾಸದ ಆರಂಭದ ಮುನ್ನ ಹಿತ-ಅಹಿತದ ಹಿಡಿತ

ಅಭ್ಯಾಸದ ಆರಂಭದ ಮುನ್ನ ಹಿತ-ಅಹಿತದ ಹಿಡಿತ

ಅಭ್ಯಾಸಗಳು ಆರಂಭವಾಗುವುದಕ್ಕೆ ಕಾರಣಗಳಿರುವುದಾದರೂ, ಅವುಗಳಲ್ಲೆವೂ ನಮ್ಮ ಸಮ್ಮತಿ ಪಡೆದು ಬರುವುದು ಅಪರೂಪ. ಹೀಗಾಗಿ ಅಭ್ಯಾಸಗಳು ಆರಂಭವಾಗುವುದಕ್ಕೆ ಮುಂಚಿತವಾಗಿ ಹಿತ- ಅಹಿತಗಳ ಹಿಡಿತವಿರುವುದಂತೂ ಖಂಡಿತ. ಹಿತ ಸಿಕ್ಕ ನಂತರವೂ ಬೇಕು, ಬೇಕು, ಮಾಡಬೇಕು, ಮಾಡಲೇ ಬೇಕು ಎನ್ನುವಂತಹ ಮನೋಒತ್ತಡದ ಅನಿಸಿಕೆ ಸರಳವಾಗಿ ಆರಂಭವಾಗುತ್ತದೆ. ಈ ಭಾವವನ್ನು ಒಪ್ಪಿದರೆ ಅಭ್ಯಾಸದ ಹಾದಿ ಸುಗಮ. ಆದುದರಿಂದ ಈ ಸ್ಥಿತಿಯತ್ತ ಕೊಂಚ ಗಮನ ಹರಿಸಿದಾಗ ಅಭ್ಯಾಸ ಅಗತ್ಯವೋ ಇಲ್ಲವೋ ಎನ್ನುವ ನಿರ್ಧಾರದ ಕ್ರಮ ಸುಲಭ. ಇನ್ನು ಇಂತಹದೊಂದು ವಿವೇಚನೆಯ ಕ್ರಮವೂ ಕ್ರಮೇಣ ಒಳ್ಳೆಯ ಅಭ್ಯಾಸವಾಗಿ ನಿಲ್ಲಬಲ್ಲದು.

ಅತಿ ಉತ್ಸಾಹ, ತಕ್ಷಣದ ಫಲಿತಾಂಶ ನಿರೀಕ್ಷೆ ಬೇಡ

ಅತಿ ಉತ್ಸಾಹ, ತಕ್ಷಣದ ಫಲಿತಾಂಶ ನಿರೀಕ್ಷೆ ಬೇಡ

ನಮ್ಮ ಶರೀರಕ್ಕೆ ಸಿಗುವ ತೃಪ್ತಿಯೂ ಅಭ್ಯಾಸವನ್ನು ಬಲಪಡಿಸುವ ವಿಧಿಯೇ ಆಗಿರುವುದು. ಉದಾಹರಣೆಗೆ, ಕ್ರಮಬದ್ಧವಾಗಿ ವ್ಯಾಯಾಮ ಮಾಡುವುದರಿಂದ ಮೈಮನಸಿಗೆ ಆರಾಮ ಎನ್ನುವ ಭಾವ ಗಟ್ಟಿಯಾಗಿದ್ದಲ್ಲಿ ವ್ಯಾಯಾಮದ ಅಭ್ಯಾಸ ಬಲಗೊಳ್ಳುತ್ತದೆ. ಒಂದೆರಡು ದಿನ ಅತಿ ಹುಮ್ಮಸ್ಸು, ಶಿಸ್ತಿನಿಂದ ಮಾಡಿ ನಂತರದಲ್ಲಿ ವಿನಾಕಾರಣ ಮುಂದೂಡುವುದು ಸಾಮಾನ್ಯ. ಹೀಗಾಗುವುದಕ್ಕೆ ಸಾಮಾನ್ಯ ಕಾರಣಗಳೆಂದರೆ, ಅತಿ ಉತ್ಸಾಹ, ತಕ್ಷಣದಲ್ಲಿ ಫಲಿತಾಂಶ ಸಿಗಬೇಕೆಂಬ ನಿರೀಕ್ಷೆ, ತನ್ನ ಸಾಮರ್ಥ್ಯದ ಬಗ್ಗೆ ಸರ್ಮಪಕವಾದ ಅಂದಾಜು ಇರಿಸಿಕೊಳ್ಳದಿರುವುದು, ಅವಸರ ಮತ್ತು ಆವೇಗದ ಮನಸಿರುವುದರಿಂದಲೂ ಹಿಡಿದ ಕೆಲಸ ಅರ್ಧಕ್ಕೆ ಬಿಡುವ ಸ್ವಭಾವವು ಬಲಗೊಳ್ಳುವುದು.

ನಿಗದಿತ ವೇಳಾಪಟ್ಟಿ ಇರಲಿ

ನಿಗದಿತ ವೇಳಾಪಟ್ಟಿ ಇರಲಿ

ಅಭ್ಯಾಸದ ಬಗ್ಗೆ ಮನಸ್ಸು ಮಾಡಿದಾಗ ಅದರಿಂದ ಸಿಗುವ ಹಿತ-ಅಹಿತಗಳತ್ತೂ ಮನಸು ಅರಿಯುವುದಕ್ಕೆ ಅವಕಾಶ ನೀಡಬೇಕಾಗುತ್ತದೆ. ಈ ತಕ್ಷಣದಲ್ಲಿ ಸಿಗುವ ತೃಪ್ತಿ , ಹಗಲುಗನಸಿನ ಪ್ರಭಾವ ಮತ್ತು ಇತರರನ್ನು ಮೆಚ್ಚಿಸುವುದಕ್ಕಾಗಿ ಮಾಡುವ ಸತತ ಚಟುವಟಿಕೆಗಳು ಅನುಪಯುಕ್ತ ಅಭ್ಯಾಸಗಳಿಗೆ ಪ್ರೇರಣೆಯಾಗುತ್ತದೆ. ಅಭ್ಯಾಸಗಳು ಗಟ್ಟಿ ವರ್ತನೆಗಳಾಗಿ ನಿಲ್ಲುವಂತೆ ಮಾಡಲು ವೇಳಾಪಟ್ಟಿಯೊಂದು ಬೇಕಾಗುತ್ತದೆ. ಹೀಗಾಗಿ ಅಭ್ಯಾಸವು ಯಾವುದೇ ಆಗಿರಲಿ, ಅದಕ್ಕೊಂದು ಸಮಯ ಅಥವಾ ಸನ್ನಿವೇಶ ಇರಿಸಿಕೊಳ್ಳಬೇಕು. ಇದರಂತೆ ತಪ್ಪದೇ ಒಂದಷ್ಟು ದಿನವೋ, ವಾರಗಳೋ ಬಿಡದೇ ಮಾಡುವುದರ ಮೂಲಕ ದುರಭ್ಯಾಸಗಳನ್ನೂ ದೂರ ಮಾಡಬಹುದು.

ನೆನಪಿನ ಶಕ್ತಿ ಬಲಪಡಿಸುವ ಅಭ್ಯಾಸ

ನೆನಪಿನ ಶಕ್ತಿ ಬಲಪಡಿಸುವ ಅಭ್ಯಾಸ

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೂ ಅಭ್ಯಾಸದ ಕ್ರಮಗಳು ಬೇಕಾಗುತ್ತವೆ. ಮರೆವು ಬಲಗೊಳ್ಳುವುದಕ್ಕೆ ಕಲಿತಿದ್ದು ಸರಿಯಾಗಿ ಮೆದುಳಿನಲ್ಲಿ ಉಳಿಯದಿದ್ದಾಗ ನೆನಪು ಇಲ್ಲದಂತಾಗುವುದು. ನೆನಪು ಹೆಚ್ಚಿಸಕೊಳ್ಳಬೇಕು ಎನ್ನುವುದಕ್ಕಿಂತಲೂ ಈಗ ಕಲಿತಿದ್ದನ್ನು ಮರೆಯದಂತೆ ಎಚ್ಚರ ವಹಿಸಬೇಕು. ಕಲಿಕೆಯ ರೀತಿ ಮತ್ತು ಉದ್ದೇಶಗಳನ್ನೂ ನೆನಪಿನ ಉಳಿಯುವಿಕೆ ಅಥವಾ ಬೇಕಾದಾಗ ಮರುಕಳಿಸಿ ತರುವ ಬಲಪಡಿಸಿಕೊಳ್ಳುವುದಕ್ಕೂ ಅಭ್ಯಾಸವೊಂದೇ ಮಾರ್ಗ. ಮರುಚ್ಚಾರಣೆ, ಆಗಾಗ್ಗೆ ಉದ್ದೇಶಿತ ಸಂಗತಿ, ಪ್ರಸಂಗಗಳ ಬಗ್ಗೆ ಮೆಲುಕು ಹಾಕುವ ಅಭ್ಯಾಸವು ನೆನಪಿನ ಹೆಚ್ಚಳಕ್ಕೆ ಅನುವಾಗುತ್ತದೆ.

ದುರಭ್ಯಾಸವೂ ಸತತ ಅಭ್ಯಾಸದ ಫಲ

ದುರಭ್ಯಾಸವೂ ಸತತ ಅಭ್ಯಾಸದ ಫಲ

ದುರಭ್ಯಾಸವೆನ್ನುವುದೂ ಸತತ ಅಭ್ಯಾಸ ಮೂಲಕವೇ ಬಂದಿರುತ್ತದೆ. ಮೊದಲು ಧೂಮಪಾನ ಮಾಡಿ ಅದು ಹಿಂಸೆ ಕೊಡುತ್ತದೆ ಎನ್ನುವುದನ್ನು ಒಪ್ಪಿಕೊಳ್ಳುವುದು ಮತ್ತು ಪದೇಪದೇ ಈ ಭಾವವನ್ನು ಮರುಕಳಿಸುವುದರಿಂದ ದುರಭ್ಯಾಸದ ಒತ್ತಡ ಕಡಿಮೆಯಾಗಬಲ್ಲದು. ಹಾಗೆಯೇ ಅಭ್ಯಾಸವೊಂದನ್ನು ಬದಲಿಸಲು ಇನ್ನೊಂದು ಅಭ್ಯಾಸದ ನೆರವನ್ನು ಪಡೆಯಬಹುದು. ಉದಾಹರಣೆಗೆ ಅತಿ ಸುಳ್ಳು ಹೇಳುವುದು ಕೂಡ ಒಂದು ವಿಧದ ಅಭ್ಯಾಸವೇ. ಇದನ್ನು ಸರಿಪಡಿಸಿಕೊಳ್ಳುವ ಸುಲಭ ಮಾರ್ಗದಲ್ಲಿ ಸುಳ್ಳು ಹೇಳುತ್ತಿದ್ದೇನೆ ಎನ್ನುವುದರ ಅರಿವು ಬರಬೇಕಾಗುತ್ತದೆ. ನಂತರದಲ್ಲಿ ಪಾಪಪ್ರಜ್ಞೆ, ಪಶ್ಚಾತಾಪದಂತಹ ವಿಚಾರಗಳ ಮೂಲಕ ಸುಳ್ಳು ಹೇಳಬೇಕೆಂಬ ತೀವ್ರ ಬಯಕೆ ಇಳಿಯಬಹುದು.

ಅಭ್ಯಾಸಗಳೇ ವರ್ತನೆಗಳಾಗುವುದು

ಅಭ್ಯಾಸಗಳೇ ವರ್ತನೆಗಳಾಗುವುದು

ಅಭ್ಯಾಸಗಳು ಕ್ರಮೇಣ ಗಟ್ಟಿಯಾಗಿ ನಿಲ್ಲುವಂತಹ ವರ್ತನೆಗಳಾಗಿರುವುದರಿಂದ ಅವುಗಳು ಮನೋಧರ್ಮವಾಗಿಯೂ ನಿಲ್ಲಬಲ್ಲದು. ಉತ್ತಮ ಸ್ವಭಾವದಲ್ಲಿ ತನ್ನ ಬಗ್ಗೆ ಆತ್ಮವಿಶ್ವಾಸ, ಇತರರ ಬಗ್ಗೆ ಸಹಾನುಭೂತಿ, ಸಹನೆ ಮತ್ತು ಸಹಕಾರದ ಗುಣಗಳ ಬಲವಿರುತ್ತದೆ. ಈ ಗುಣಗಳನ್ನು ಬೆಳೆಸಿಕೊಳ್ಳುವುದು ಮತ್ತು ಕಾಪಾಡುವುದರ ಕಡೆಯೂ ಗಮನವನ್ನು ಹೆಚ್ಚಾಗಿಯೇ ಇರಿಸಿಕೊಳ್ಳಬೇಕು.

ಸಂಕೇತ, ಆಚರಣೆ, ಪ್ರತಿಜ್ಞೆಗಳೂ ಅಭ್ಯಾಸದ ಸ್ವಭಾವಗಳನ್ನು ಬಲಪಡಿಸುವುದಕ್ಕೆ ನೆರವಾಗುವುದೆಂಬುದನ್ನು ಮರೆಯಬಾರದು. ಅಭ್ಯಾಸಗಳು ಹುಟ್ಟಿಕೊಳ್ಳುವಂತೆ ಪ್ರೇರಣೆ ನೀಡುವ ಕ್ರಿಯೆಗಳಲ್ಲಿ ಸೋಲು, ಹತಾಶೆ, ದುರಾಸೆ, ಬೇಸರ, ದುಃಖದ ಮನದ ಸ್ಥಿತಿಗಳೂ ಸೇರಿರುತ್ತವೆ. ಹಾಗೆಯೇ ಉತ್ತಮ ಅಭ್ಯಾಸಗಳು ಗಟ್ಟಿಯಾಗಲು ಆತ್ಮವಿಶ್ವಾಸ, ನಂಬಿಕೆ, ನೇರ ನಡೆನುಡಿಗಳು, ಅಲ್ಪತೃಪ್ತಿ, ಸಹನೆ, ಸಾಧಿಸುವ ಛಲ ಮತ್ತು ಬಲಗಳೂ ಸೇರಿರುತ್ತವೆ.

English summary
The strength and weakness in all of us cannot be as strong as our habits. Here is the writing of psychologist Acharya Sridhar regarding our habits in the time of covid 19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X