ಕಾಶ್ಮೀರಿಗಳು, ಕಾಶ್ಮೀರದ ಸಮಸ್ಯೆ ಏನು? ಅಂದ್ರಾ ಬೀ ಎಂಬ ಟೆರರಿಸ್ಟ್ ಬಗ್ಗೆ ರವಿ ಬೆಳಗೆರೆ

ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಪುಲ್ವಾಮಾ ಉಗ್ರ ದಾಳಿಯ ನಂತರ ಜಮ್ಮು-ಕಾಶ್ಮೀರಕ್ಕೆ ಹೋಗಿ ಬಂದರಲ್ಲಾ, ಆ ಬಗೆಗಿನ ಸಂದರ್ಶನದ ಮೂರನೇ ಕಂತು ಇದು. ಒನ್ ಇಂಡಿಯಾ ಕನ್ನಡದ ಜತೆಗಿನ ಅವರ ಮಾತುಕತೆಯಲ್ಲಿ ವಿಡಿಯೋ ಮಾಡಿದ್ದು ಕೆಲವೇ ನಿಮಿಷಗಳದು. ಆದರೆ ಬೆಳಗೆರೆ ಅವರೇ ಹೇಳುವಂತೆ ನಿರಂತರ ಎರಡು ದಿವಸಗಳ ಕಾಲ ಮಾತನಾಡಬಲ್ಲಷ್ಟು ಮಾಹಿತಿ ಅವರ ಬಳಿ ಇದೆ.
ಭಯೋತ್ಪಾದನೆ, ಪಾಕಿಸ್ತಾನದ ಬಗ್ಗೆ ಅವರಷ್ಟು ವ್ಯಾಪಕವಾಗಿ ಕನ್ನಡದಲ್ಲಿ ಬರೆದವರು ಕಡಿಮೆ. ಅಕಸ್ಮಾತ್ ಬರೆದವರು ಕೂಡ ಆಯಾ ದೇಶಗಳಿಗೆ ಭೇಟಿ ನೀಡಿರಲಾರರು ಆದ್ದರಿಂದ ಫಸ್ಟ್ ಹ್ಯಾಂಡ್ ಮಾಹಿತಿ ಅಂತನ್ನಿಸುವುದಿಲ್ಲ. ಆದರೆ ರವಿ ಬೆಳಗೆರೆ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇದ್ದು ಬಂದಿದ್ದಾರೆ.
ಆತ್ಮಾರ್ಪಣೆ ಎಂಬುದೆಲ್ಲ ಸುಳ್ಳು, ಇವೆಲ್ಲ ಬಿಜಿನೆಸ್: ಕಾಶ್ಮೀರದ ಕಥೆ ತೆರೆದಿಟ್ಟರು ರವಿ ಬೆಳಗೆರೆ
ಇದೀಗ ಮತ್ತೊಂದು ಪುಸ್ತಕ ಬರೆಯಲು ಮುಂದಾಗಿದ್ದಾರೆ. ಫ್ರಂ ಪುಲ್ವಾಮಾ- ಆ ಪುಸ್ತಕದ ಹೆಸರು. ನೀನಾ ಪಾಕಿಸ್ತಾನ, ಮೇಜರ್ ಸಂದೀಪ್ ಹತ್ಯೆ, ಮುಸ್ಲಿಂ, ಹಿಮಾಗ್ನಿ ಸೇರಿದಂತೆ ಹಲವು ಪುಸ್ತಕಗಳಲ್ಲಿ ಉಗ್ರವಾದದ ಹಲವು ಮಜಲುಗಳನ್ನು ತೆರೆದಿಟ್ಟಿದ್ದಾರೆ. ಇದೀಗ ಒನ್ ಇಂಡಿಯಾ ಕನ್ನಡಕ್ಕೆ ಅವರು ಹೇಳಿದ್ದು ಅಂದ್ರಾ ಬೀ ಬಗ್ಗೆ. ಇನ್ನೂ ಆಸಕ್ತಿಕರ ವಿಷಯಗಳು ಅವರದೇ ಮಾತುಗಳಲ್ಲಿ ನಿಮ್ಮೆದುರು ಇವೆ. ಓದಿಕೊಳ್ಳಿ.

ಆ ಕಲ್ಲುಗಳು ಬಿದ್ದರೆ ತಲೆ ಚಿಪ್ಪು ಒಡೆದುಹೋಗುತ್ತದೆ
ಪುಲ್ವಾಮಾದಲ್ಲಿ ಅತ್ಮಾಹುತಿ ಬಾಂಬರ್ ಆಗಿ ದಾಳಿ ನಡೆಸಿದ ಅದಿಲ್ ದರ್ ನ ಊರು ಕಾಕ್ ಪುರಕ್ಕೆ ಹೋಗಿದ್ದೆ. ಅವನ ಬಗ್ಗೆ ಮಾತನಾಡುವುದಕ್ಕೆ ಯಾರೂ ತಯಾರಿಲ್ಲ. ಹದಿನೈದು ದಿನ ಆಗಿದೆ, ಊರು ಕ್ಲೋಸ್. ಬಂದ್. ಒಂದು ಕಡೆ ನಾನು ಮಾತ್ರೆ ತೆಗೆದುಕೊಳ್ಳಬೇಕಿತ್ತು. ಕುಡಿಯುವುದಕ್ಕೆ ನೀರು ಸಿಗಲಿಲ್ಲ. ಕಿಲೋಮೀಟರ್ ಗಟ್ಟಲೆ ಹೋಗಿ, ಒಂದು ಸಣ್ಣ ಮನೆ, ಅಂದರೆ ಒಂದು ಸಣ್ಣ ಅಂಗಡಿ ಇತ್ತು. ಅಲ್ಲೂ ಅವರು ನೀರು ಮಾರುತ್ತಿರಲಿಲ್ಲ. ಅವನನ್ನು ರಿಕ್ವೆಸ್ಟ್ ಮಾಡಿ, ನೀರು ಇಸ್ಕೊಂಡು ಕುಡಿದು, ಬಂದೆ. ಈ ಪರಿಸ್ಥಿತಿಗಳಲ್ಲಿ ನಾವು ಕೆಲಸ ಮಾಡ್ತಿದ್ದೀವಿ. ನಮ್ಮ ದೇಶ ಸರಿ-ತಪ್ಪು ಎರಡನ್ನೂ ಗ್ರಹಿಸುತ್ತಾ ಇದೆ. ನೋಡಿ, ಪಿಂಗ್ಲಿನ್ ನಲ್ಲಿ ನಾನು ಹೋದಾಗ ಫೈರಿಂಗ್ ನಡೆಯುತ್ತಾ ಇತ್ತು. ನನಗೆ ಗುಂಡಿನ ಶಬ್ದ ಸ್ಪಷ್ಟವಾಗಿ ಕೇಳಿಸುತ್ತಾ ಇತ್ತು. ಎಷ್ಟು, ಒಂದು ನೂರು ಅಡಿ ದೂರದಲ್ಲಿ. ನಾನು ಹುಂಬ. ಬೇರೆ ಮೀಡಿಯಾದವರು ಹಿಂದೆ ಇದ್ದರು. ನಾನು ಸ್ವಲ್ಪ ಮುಂದಕ್ಕೆ ಹೋದೆ. ಕವರ್ ಮಾಡ್ತಿದ್ದೆ. ಅಲ್ಲಿ ಏನು ಮಾಡ್ತಾರೆ ಅಂದರೆ, ನಮ್ಮ ಸೈನಿಕರು ಇಡೀ ಹಳ್ಳಿಯನ್ನು ಸುತ್ತುವರೆದು ಬಿಡ್ತಾರೆ. ಹಾಗೆ ಸುತ್ತುವರೆದಾಗ ಊರಿನಲ್ಲಿದ್ದ ಯುವಕರು ಓಡಿಬಿಡುತ್ತಾರೆ. ಹಾಗೆ ಓಡಿಹೋದ ಯುವಕರು ಅರ್ಧ ಕಿಲೋಮೀಟರ್ ಅಥವಾ ಒಂದು ಕಿಲೋಮೀಟರ್ ದೂರದಲ್ಲಿ ನಿಲ್ಲುತ್ತಾರೆ. ನಮ್ಮ ಸೈನಿಕರು ಒಳಗೆ ಶೋಧ ಮಾಡುವಾಗ ಅಥವಾ ಫೈರ್ ಮಾಡುವಾಗ ಬೆನ್ನಿಗೆ ಕಲ್ಲೆಸೆಯುತ್ತಾರೆ. ಹಾಗಂತ ಕಲ್ಲೆಸೆಯುವುದು ಅಂದರೆ ಸುಮ್ಮನೆ ಅಂದುಕೊಳ್ಳಬೇಡಿ. ಪ್ರತಿ ಕಲ್ಲೂ ಬಾಂಬ್ ಇದ್ದ ಹಾಗೆ. ತಲೆಗೆ ಬಿದ್ದರೆ ಚಿಪ್ಪು ಒಡೆದುಹೋಗುತ್ತೆ. ಅಂಥ ಕಲ್ಲೆಸೆತ ಶುರು ಮಾಡುತ್ತಾರೆ.

ಕಾಶ್ಮೀರ ಸಮಸ್ಯೆಗೆ ಸದ್ಯಕ್ಕಂತೂ ಪರಿಹಾರವಿಲ್ಲ
ಯಾವಾಗ ಇವರು ಕಲ್ಲು ಎಸೀತಾರೆ, ಸಹಜವಾಗಿಯೇ ನಮ್ಮ ಸೈನಿಕರ ಗಮನ ಅವರ ಕಡೆ ತಿರುಗುತ್ತದೆ. ಆ ಕಡೆ ತಿರುಗಿ ನೋಡ್ತಾರೆ. ಅದೇ ಸಮಯಕ್ಕೆ ಉಗ್ರಗಾಮಿಗಳು ನಮ್ಮ ಸೈನಿಕರ ಕಡೆಗೆ ಗುಂಡು ಹಾರಿಸಿ ಕೊಲ್ಲುತ್ತಾರೆ. ನಾವು ಅಲ್ಲಿಗೆ ಹೋಗುವ ಹೊತ್ತಿಗೆ ನಮ್ಮ ನಾಲ್ಕು ಸೈನಿಕರನ್ನು ಹಾಗೇ ಕೊಂದು ಹಾಕಿದ್ದರು. ಅದಕ್ಕೆ ಪ್ರತೀಕಾರವಾಗಿ ನಮ್ಮ ಸೈನ್ಯ ಮನೆಮನೆಗೆ ನುಗ್ಗಿ, ಹುಡುಕ್ತಾರೆ. ಹೀಗೆ ಮಾಡಲಿಲ್ಲ ಅಂದರೆ ಉಗ್ರರನ್ನು ಹುಡುಕುವುದು ಆಗುವುದೇ ಇಲ್ಲ. ನನ್ನ ಅಂದಾಜಿನ ಪ್ರಕಾರ ಪಾಕಿಸ್ತಾನದ ಹನ್ನೆರಡು ಉಗ್ರರು ಬಂದು ಪಿಂಗ್ಲಿನ್ ನಲ್ಲಿ ಉಳಿದಿದ್ದರು. ಅವರಿಗೆ ಸ್ಥಳೀಯ ಉಗ್ರರ ಬೆಂಬಲ ಇತ್ತು. ಅಲ್ಲಿನ ಸ್ಥಳೀಯ ವ್ಯಕ್ತಿಗಳು ಊಟದ ವ್ಯವಸ್ಥೆ, ಶೆಲ್ಟರ್, ನೀರು ಕೊಡುತ್ತಿದ್ದರು. ಉಗ್ರಗಾಮಿ ಅಂದರೆ ಕೇವಲ ಬಂದೂಕು, ಬಾಂಬು ಹಿಡಿದುಕೊಂಡು ಕೆಲಸ ಮಾಡಲ್ಲ. ಮನಸು ಉಗ್ರಗಾಮಿ ಆಗುತ್ತೆ. ಕಾಶ್ಮೀರಿಗಳಲ್ಲಿ ಒಟ್ಟಾರೆಯಾಗಿ ಒಂದು ವಕ್ರ ಇದೆ. ಇಪ್ಪತ್ತು ವರ್ಷಗಳ ಹಿಂದೆ ಹೇಗಿತ್ತೋ ಇವತ್ತೂ ಹಾಗೇ ಇದೆ. ಏನೆಂದರೆ, ಅವರಿಗೆ ನೀವು ಏನು ಮಾಡಿದರೂ ಸಮಾಧಾನವಿಲ್ಲ. ಅವರು ಟ್ಯಾಕ್ಸ್ ಕಟ್ಟಲ್ಲ. ಅವರಿಂದ ನಮಗೆ ಏನೂ ಲಾಭ ಇಲ್ಲ. ನಯಾ ಪೈಸೆ ಲಾಭವಿಲ್ಲ. ಆ ಪಾಶ್ಮೀನಾ ಶಾಲು ಅಂತಾರೆ. ಅದೂ ಮೋಸ. ನಾನು ಬಹಳ ಇಷ್ಟಪಟ್ಟಿದ್ದು ಏನು ಅಂದರೆ, ಅಲ್ಲೊಂದು ಸೊಪ್ಪು ಸಿಗುತ್ತೆ: ಸಾಗ್ ಅದರ ಹೆಸರು. ಬಹಳ ರುಚಿಯಾಗಿರುತ್ತೆ. ಆ ಮೇಲೆ ಅಲ್ಲಿನ ಕುರಿ ಮಾಂಸ. ದೇವರು ನಮಗೋಸ್ಕರ ಸೃಷ್ಟಿ ಮಾಡಿದ ಕುರಿ, ಅದ್ಭುತವಾದ ಕುರಿ. ಕಾಶ್ಮೀರವನ್ನು ಇಟ್ಟುಕೊಂಡು ನಾವು ಏನೂ ಮಾಡುವುದಕ್ಕೆ ಆಗಲ್ಲ. ಹಾಗಂತ ಕೊಟ್ಟುಬಿಡೋಣ. ನೋ ಚಾನ್ಸ್, ಕೊಡುವುದಕ್ಕೆ ಆಗೋದೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಅಂತ ಇಲ್ಲ. ತಕ್ಷಣಕ್ಕಂತೂ ಇಲ್ಲ.

ಅಂದ್ರಾ ಬೀ ಎಂಬ ಭಯೋತ್ಪಾದನಾ ತಯಾರಿಕೆ ಫ್ಯಾಕ್ಟರಿ
ಪಾಕಿಸ್ತಾನ್-ಇಂಡಿಯಾ-ಕಾಶ್ಮೀರಿ ಮೂರೂ ಜನ ಕೂತು, ಮಾತನಾಡಿ ಸರಿಪಡಿಸಬಹುದು ಎಂಬ ನಂಬಿಕೆ ಮೂರೂ ಜನಕ್ಕೂ ಇಲ್ಲ. ಇಂಡಿಯಾಕ್ಕೂ ಇಲ್ಲ, ಪಾಕಿಸ್ತಾನಕ್ಕೂ ಇಲ್ಲ, ಕಾಶ್ಮೀರಿಗಳಿಗಂತೂ ಇಲ್ಲವೇ ಇಲ್ಲ. ಕಾಶ್ಮೀರಿಗೆ ಏನೆಂದರೆ ಸ್ವಾತಂತ್ರ್ಯ ಬೇಕು. ಅವನಿಗೆ ದೇವರಾಣೆಗೆ ಸ್ವಾತಂತ್ರ್ಯ ಬೇಕಾಗಿಲ್ಲ. ಅವನಿಗೆ ಬೇಕಾಗಿರುವುದು ಪಾಕಿಸ್ತಾನ. ಅವನಿಗೆ ತಾನು ಪಾಕಿಸ್ತಾನಕ್ಕೆ ಸೇರಬೇಕು. ಯಾಕೆ? ಮತ್ತದೇ ರಾಜಕೀಯ. ಅಲ್ಲಿ ಅರ್ಧ, ಈ ಮುಫ್ತಿ ಮೊಹ್ಮದ್ ಸಯೀದ್ ಮಗಳು ಏನಿದ್ದಾಳೆ ಮೆಹಬೂಬಾ ಮುಫ್ತಿ ಮತ್ತು ಇಂಥವರು ಭಾರತದ ಪರ ಇದ್ದಾರೆ. ಅವರಿಗೆ ಲಾಭ ಅಲ್ಲಿದೆ. ಇನ್ನರ್ಧ ಪಾಕಿಸ್ತಾನದ ಪರವಾಗಿದ್ದಾರೆ. ಅಂದ್ರಾ ಬೀ ಅಂತಿದ್ದಾಳೆ. ಅವಳ ಬಗ್ಗೆ ತಿಳಿದುಕೊಳ್ಳಬೇಕು. ಅವಳು ಎಂಥ ಭಯೋತ್ಪಾದಕಳು ಗೊತ್ತಾ? ಇಪ್ಪತ್ತೈದು ವರ್ಷಗಳಿಂದ ಅವಳು ಸಕ್ರಿಯಳಾಗಿದ್ದಾಳೆ. ಹೆಣ್ಣುಮಕ್ಕಳನ್ನು ನೇಮಕ ಮಾಡಿ, ಅವರನ್ನು ಉಗ್ರಗಾಮಿಗಳಾಗಿ ಮಾಡ್ತಾರೆ. ಅರೇ, ಒಂದು ಶಾಲೆ ತೆರೆದು, ಕಾಲೇಜು ತೆರೆದು ಮಕ್ಕಳಿಗೆ ಶಿಕ್ಷಣ ಕೊಟ್ಟು, ಅವರನ್ನು ಬುದ್ಧಿವಂತರನ್ನಾಗಿ ಮಾಡಿ, ಒಳ್ಳೆ ಪ್ರಜೆಗಳನ್ನಾಗಿ ಮಾಡೋಣ. ಇಂಥ ಯಾವುದೂ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಏನೆಂದರೆ, ಭಾರತದ ವಿರುದ್ಧ ಹೋರಾಟ. ಅವರು ಅದನ್ನು ಸ್ವಾತಂತ್ರ್ಯ ಹೋರಾಟ ಅಂತ ಭಾವಿಸಿದ್ದಾರೆ. ಅವರನ್ನು ಸರಿ ಮಾಡುವುದಕ್ಕೆ ಆಗಲ್ಲ. ಅವರ ಮನಸುಗಳೇ ಹಾಗೇ. ಹುಟ್ಟಿನಿಂದಲೇ ಹಾಗಿದ್ದಾರೆ. ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್ ಅಂತೀವಲ್ಲ ಹಾಗೆ.

ಬಾಂಗ್ಲಾದೇಶ ಸೃಷ್ಟಿ ಮಾಡಿದ ಸಿಟ್ಟು ಈಗಲೂ ಪಾಕಿಸ್ತಾನಕ್ಕೆ ಇದೆ
ಅವರಿಗೆ ಉತ್ತರ ಹೇಳಬೇಕು ಅಂದರೆ, ಕೋಟ್ಯಂತರ ರುಪಾಯಿ ಸುರಿದು ನಮ್ಮ ಸೇನೆಯನ್ನು ನಿರ್ವಹಣೆ ಮಾಡಬೇಕು. ಎಷ್ಟು ದುಡ್ಡು ಖರ್ಚಾಗುತ್ತದೆ ಅಂದುಕೊಂಡಿದ್ದೀರಾ? ಎಷ್ಟು ಕೋಟಿಗಳು? ನಾವು ಅದನ್ನು ಮಾಡ್ತಾ ಇದೀವಿ. ಎಷ್ಟು ಮಂದಿ ಸಾಯ್ತಾ ಇದ್ದಾರೆ? ಸಾಯುತ್ತಲೇ ಇದ್ದಾರೆ. ಇಂದಿರಾಗಾಂಧಿ ಯಾವ ನಿರ್ಣಯ ತೆಗೆದುಕೊಂಡರು? ಬಾಂಗ್ಲಾದೇಶ ಸೃಷ್ಟಿ ಆಗಿದ್ದೇ ಇಂದಿರಾಗಾಂಧಿ ಅವರಿಂದ. ಪೂರ್ವ ಪಾಕಿಸ್ತಾನವನ್ನು ಕತ್ತರಿಸಿ, ಈಚೆ ಇಟ್ಟುಬಿಟ್ಟರು. ಹಾಗೆ ಮಾಡದಿದ್ದರೆ ಬೇರೆ ದಾರಿ ಇರಲಿಲ್ಲ. ಆ ನೋವಿಗೆ ಈಗಲೂ ಪಾಕಿಸ್ತಾನ ನಮ್ಮ ಜತೆಗೆ ಹೋರಾಡುತ್ತಲೇ ಇದೆ. ಇದರ ಜತೆಗೆ ಧರ್ಮ ಸೇರಿಕೊಂಡಿದೆ. ಇಸ್ಲಾಂ ಸೆರಿಕೊಂಡಿದೆ. ಈ ಕಡೆ ಹಿಂದುತ್ವ ಸೇರಿಕೊಂಡಿದೆ. ಪುಲ್ವಾಮಾದಲ್ಲಿ ಉಗ್ರಗಾಮಿ ದಾಳಿ ಆದ ತಕ್ಷಣ ಜಮ್ಮುವಿನಲ್ಲಿ ಅದಕ್ಕೆ ಪ್ರತ್ಯುತ್ತರ ಬಂತು. ಜಮ್ಮುವಿನಲ್ಲಿದ್ದ ಹಿಂದೂಗಳು, ಕಾಶ್ಮೀರಿಗಳು ಇಲ್ಲಿರಬೇಡಿ ಅಂತ ನಾಲ್ಕೈದು ಜನರನ್ನು ಹೊಡೆದರು. ಓಡಿಸಿದರು. ಮರು ದಿವಸ ಶ್ರೀನಗರ್ ಬಂದ್. ಇದು ಪ್ರತ್ಯುತ್ತರಕ್ಕೆ ಉತ್ತರ. ಎಲ್ಲೊ ಡೆಹ್ರಾಡೂನ್ ನಲ್ಲಿ ಹಾಸ್ಟೆಲ್ ನಲ್ಲಿ ಮಲಗಿದ್ದಂಥ ಕಾಶ್ಮೀರಿಗಳನ್ನು ಎಳೆದು, ಬೀದಿಗೆ ಬಿಸಾಕಿದರು. ನಮ್ಮ ಜತೆ ಇರಬೇಡಿ ಎಂದರು. ನಮಗೆ ಉಳಿದುಕೊಳ್ಳಲು ಅವಕಾಶ ಕೊಡಿ ಅಂತ ಕಾಶ್ಮೀರಿಗಳು ಬೇಡ್ತಾರೆ. ಆದರೆ ಕೊಡಲ್ಲ. ಹಾಗೆ ದ್ವೇಷ ಬೆಳೆಯುತ್ತದೆ, ಬೆಳೆದುಕೊಂಡಿದೆ.

ಪಾಕಿಸ್ತಾನದ ಮಾತು ಕೇಳುವ ಮೂರ್ಖ
ದಕ್ಷಿಣ ಭಾರತದಲ್ಲಿ ನಮಗೇನೂ ಗೊತ್ತಾಗಲ್ಲ. ಆರಾಮವಾಗಿ ಇದ್ದೀವಿ. ನೀವು ಮದ್ರಾಸ್ ಗೆ ಹೋದರೆ ಭಯವಾಗುತ್ತಾ? ಕೇರಳಕ್ಕೆ ಹೋದರೆ ಭಯ ಆಗುತ್ತಾ? ಕೇರಳದಲ್ಲಿ ಪ್ರವಾಹ ಆದಾಗ ನಾವೇ ಹೋಗಿ ಕೋಟ್ಯಂತರ ರುಪಾಯಿ ಕೊಟ್ಟು ಬಂದಿವಿ. ಆದರೆ ಅಲ್ಲಿ ಹಾಗಾಗಲ್ಲ. ಉತ್ತರಪ್ರದೇಶದ ಮನುಷ್ಯನಿಗೆ ಕಾಶ್ಮೀರ ನಾರ್ಮಲ್ ಆಗಿ ಕಾಣಲ್ಲ. ಉತ್ತರಾಖಂಡ್ ನಲ್ಲಿರುವ ಭಾರತೀಯನಿಗೆ ಕಾಶ್ಮೀರಿ ಒಬ್ಬ ಒಳ್ಳೆಯವನು ಅಂತ ಕೂಡ ಅನಿಸಲ್ಲ. ಕಾಶ್ಮೀರದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಒಳ್ಳೆಯವನು ಅಂತನ್ನಿಸುವುದು ನಿಮ್ಮ ಟೂರ್ ಆಪರೇಟರ್, ನಿಮ್ಮ ಟ್ಯಾಕ್ಸಿ ಡ್ರೈವರ್. ನಿಮ್ಮ ಹತ್ತಿರ ತುಂಬಾ ಚೆನ್ನಾಗಿ ಇರುತ್ತಾರೆ. ಏಕೆಂದರೆ, ನೀವು ಕೊಡುವ ದುಡ್ಡಿನ ಮೇಲೆ ಅವನ ಊಟ ನಡೆಯುತ್ತೆ. ಟೂರಿಸಮ್ ಇಂಡಸ್ಟ್ರಿ ಬಿಟ್ಟರೆ ಕಾಶ್ಮೀರದಲ್ಲಿ ಏನೂ ಇಲ್ಲ. ಅಲ್ಲಿ ಪ್ರವಾಸೋದ್ಯಮ ಬೆಳೆಯಬೇಕು ಅಂದರೆ ಶಾಂತಿ ನೆಲೆಸಬೇಕು. ಅದು ಅವನಿಗೂ ಗೊತ್ತಿದೆ. ಆದರೆ ಮೂರ್ಖ ಅವನು ಪಾಕಿಸ್ತಾನದ ಮಾತು ಕೇಳ್ತಾನೆ. ಜೈಶ್ ಇ ಮೊಹ್ಮದ್ ಮಾತು ಕೇಳ್ತಾನೆ. ಲಷ್ಕರ್ ಇ ತೈಬಾ ಮಾತು ಕೇಳ್ತಾನೆ. ಹಾಗೆ ಕೇಳಿ ತನ್ನ ಅನ್ನಕ್ಕೆ ತಾನೇ ಕಲ್ಲು ಹಾಕಿಕೊಳ್ತಾನೆ. ಅ ಹತಾಶೆಯಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ಇಳಿಯುತ್ತಾನೆ. ಇವುಗಳನ್ನೆಲ್ಲ ನಾನು ನೇರವಾಗಿ ನೋಡಿದ್ದೀನಿ.
(ಮುಂದುವರಿಯುವುದು)