Pitru Paksha: ಪಿತೃ ಪಕ್ಷದಲ್ಲಿ ಪಿಂಡ ಪ್ರದಾನ ಮಾಡಬಹುದಾದ ಕರ್ನಾಟಕದ ಕ್ಷೇತ್ರಗಳು
ಭಾದ್ರಪದ ಮಾಸದ ಹುಣ್ಣಿಮೆಯ ದಿನದಿಂದ ಆರಂಭವಾಗುವ ಹದಿನಾರು ದಿನಗಳ ಅವಧಿಯನ್ನು ಪಿತೃ ಪಕ್ಷ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಈ ಅವಧಿಯಲ್ಲಿ, ಪೂರ್ವಜರು ಭೂಮಿಯಲ್ಲಿರುವ ತಮ್ಮ ಸಂಬಂಧಿಕರು ನೀಡುವ ಆಹಾರ ಮತ್ತು ನೀರನ್ನು ಸ್ವೀಕರಿಸಲು ಬರುತ್ತಾರೆ ಎಂದು ನಂಬಲಾಗುತ್ತದೆ.
ಕುಟುಂಬಸ್ಥರು ಮೃತರಾದ ಮನೆಯ ಹಿರಿಯರನ್ನು ಸ್ಮರಿಸುವ ವರ್ಷದ ಅತ್ಯಂತ ಮಂಗಳಕರ ಸಮಯ ಇದು. ಪಿತೃ ಪಕ್ಷವನ್ನು ಸಾಮಾನ್ಯವಾಗಿ ಹದಿನೈದು ದಿನಗಳ ಕಾಲ ಆಚರಿಸಲಾಗುತ್ತದೆ. ಪಿಂಡ ದಾನ, ಶ್ರಾದ್ಧ ಮತ್ತು ಪಿತೃ ತರ್ಪಣ ಮುಂತಾದ ಮಂಗಳಕರ ಆಚರಣೆಗಳನ್ನು ಮಾಡಲಾಗುತ್ತದೆ. ಈ ಬಾರಿ ಪಿತೃ ಪಕ್ಷ ಸೆಪ್ಟೆಂಬರ್ 29 ರಿಂದ ಆರಂಭವಾಗಲಿದ್ದು ಅಕ್ಟೋಬರ್ 14 ರವರೆಗೆ ಇರಲಿದೆ.

ಪಿತೃಪಕ್ಷದ ಸಮಯದಲ್ಲಿ ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರ ಕೃಪೆಯು ದೊರೆಯುತ್ತದೆ ಹಾಗೂ ಅವರ ಆತ್ಮಗಳಿಗೆ ಶಾಂತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಕೆಲವರು ಮನೆಯಲ್ಲಿ ಈ ಆಚರಣೆ ಮಾಡಿದರೆ ಇನ್ನೂ ಕೆಲವರು ದೇವಸ್ಥಾನಗಳಲ್ಲಿ ನದಿಗಳ ತಟದಲ್ಲಿ ತರ್ಪಣ ಬಿಡುವುದು ಅಥವಾ ಪಿಂಡ ಪ್ರದಾನ ಮಾಡುತ್ತಾರೆ. ಹೀಗಾಗಿ ಕರ್ನಾಟಕದಲ್ಲಿ ಪಿತೃ ಪಕ್ಷದಲ್ಲಿ ಪಿಂಡ ಪ್ರದಾನ ಮಾಡುವ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗೋಕರ್ಣ ಕೋಟಿ ತೀರ್ಥದಲ್ಲಿ ಪಿಂಡ ಪ್ರದಾನ
ಇತಿಹಾಸ ಪ್ರಸಿದ್ಧ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕೋಟಿ ತೀರ್ಥದಲ್ಲಿ ಪಿಂಡ ಪ್ರದಾನ ನಡೆಸಿದಲ್ಲಿ ಅಗಲಿದವರಿಗೆ ಹಾಗೂ ಪಿತೃಗಳಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಈ ಕಾರಣದಿಂದ ದೇಶದ ವಿವಿಧೆಡೆಯಿಂದ ಇಲ್ಲಿಗೆ ಆಗಮಿಸಿ ಪಿಂಡ ಪ್ರದಾನ ಮಾಡುತ್ತಾರೆ.

ಬೇರೆ ದಿನಗಳನ್ನು ಹೊರತುಪಡಿಸಿ ಪಿತೃ ಪಕ್ಷದ ಸಮಯದಲ್ಲಿ ಇಲ್ಲಿಗೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ನೂರಾರು ಭಕ್ತರು ಅರ್ಚಕರ ಮುಖೇನ ಪಿಂಡಪ್ರದಾನ ಮಾಡುತ್ತಾರೆ. ಮಹಾಲಯ ಅಮವಾಸ್ಯೆಯಂದು ಪಿತೃಗಳಿಗೆ ಇಷ್ಟವಾದ ಆಹಾರ, ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಬಾಳೆ ಎಲೆಯಲ್ಲಿ ಬಡಿಸಿ,ಕೋಟಿ ತೀರ್ಥದಲ್ಲಿ ಸ್ನಾನ ಮಾಡಿ ಪಿತೃಗಳಿಗೆ ಸಂತೃಪ್ತಿಯಾಗಿ ಮೋಕ್ಷ ಪ್ರದಾನವಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಶ್ರೀರಂಗಪಟ್ಟಣದ ಸಂಗಮದಲ್ಲಿ ಪಿಂಡ ಪ್ರದಾನ
ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರಿಗೆ ಪಿಂಡ ಪ್ರದಾನ ಮಾಡಲು ಹಳೇ ಮೈಸೂರು ಭಾಗದವರು ಶ್ರೀರಂಗಪಟ್ಟಣಕ್ಕೆ ಬರುತ್ತಾರೆ. ಮಹಾಲಯ ಅಮವಾಸೆಯ ದಿನ ಇಲ್ಲಿ ನಾರಾಯಣ ಬಲಿ ಪೂಜೆ ಮಾಡಿ ನಂತರ ಪಿಂಡದಾನ ಮಾಡಲಾಗುತ್ತದೆ. ಪಿತೃ ದೋಷ ನಿವರಣೆಗೆ, ಪೂರ್ವಿಕರ ಶಾಪದಿಂದ ವಿಮೋಚನೆಯಾಗಲು, ಪೂರ್ವಿಕರ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು, ದುಷ್ಟ ಆತ್ಮಗಳ ನಿವಾರಣೆ ಮಾಡಲು ಶ್ರೀರಂಗಪಟ್ಟಣದಲ್ಲಿ ಪಿಂಡದಾನ ಮತ್ತು ನಾರಾಯಣ ಬಲಿ ಮುಖ್ಯ ಕ್ರಿಯೆಯಾಗಿದೆ. ಶ್ರೀರಂಗಪಟ್ಟಣದ ಕಾವೇರಿ ನದಿ ತೀರದ ಸಂಗಮ, ಪಶ್ಚಿಮ ವಾಹಿನಿ, ಸ್ನಾನಘಟ್ಟ ಹಾಗೂ ಗೋಸಾಯಿ ಘಾಟ್ ಸೇರಿದಂತೆ ವಿವಿಧ ಕಡೆ ಪಿಂಡ ಪ್ರದಾನ ಕಾರ್ಯ ಮಾಡಲಾಗುತ್ತದೆ.

ಲಕ್ಷ್ಮಣಬಾಣದಲ್ಲಿ ಪಿಂಡ ಪ್ರದಾನ
ಬಳ್ಳಾರಿ ಜಿಲ್ಲೆಯ ಹಂಪಿಯ ಲಕ್ಷ್ಮಣಬಾಣದಲ್ಲಿ ಕೂಡ ಪಿತೃಪಕ್ಷದ ಸಮಯದಲ್ಲಿ ಪಿಂಡ ಪ್ರದಾನ ನಡೆಯುತ್ತದೆ. ಬಳ್ಳಾರಿ, ವಿಜಯನಗರ ಸೇರಿದಂತೆ ಸುತ್ತಲಿನ ಜಿಲ್ಲೆಯ ಜನರು ಹಾಗೂ ಈ ಕ್ಷೇತ್ರದ ಬಗ್ಗೆ ನಂಬಿಕೆ ಇರುವ ಜನರು ಇಲ್ಲಿಗೆ ಬಂದು ಪಿಂಡ ಪ್ರದಾನ ಮಾಡುತ್ತಾರೆ. ತೇತ್ರಾಯುಗದಲ್ಲಿ ರಾಮ ಬಳ್ಳಾರಿಯ ಹಂಪಿಗೆ ಬಂದಿದ್ದ ಎಂಬ ಉಲ್ಲೇಖವಿದೆ. ಲಕ್ಷ್ಮಣಬಾಣ ಸ್ಥಳದಲ್ಲಿ ರಾಮನು ತನ್ನ ತಂದೆ ದಶರಥನ ಶ್ರಾದ್ಧಾ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಹೀಗಾಗಿ ಇಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮ ಶಾಂತಿ ಹಾಗೂ ಮರಣ ಬಂಧನದಿಂದ ಮುಕ್ತಿಯನ್ನು ಪಡೆಯುತ್ತದೆ ಎನ್ನುವುದು ಜನರ ನಂಬಿಕೆಯಾಗಿದೆ.
ಉಡುಪಿಯ ಈ ಕ್ಷೇತ್ರಗಳಲ್ಲಿ ಪಿಂಡ ಪ್ರದಾನ
ಉಡುಪಿ ಜಿಲ್ಲೆಯ ಬಾರ್ಕೂರಿನ ಕೂಡ್ಲು ಜನಾರ್ಧನ ದೇವಸ್ಥಾನದಲ್ಲಿಯೂ ಪಿತೃಪಕ್ಷದ ಸಮಯದಲ್ಲಿ ಪಿಂಡ ಪ್ರದಾನ ನಡೆಯುತ್ತದೆ. ಇಲ್ಲಿನ ಸ್ಥಳೀಯರು ಇಲ್ಲಿ ಮಹಾಲಯದ ದಿನ ಪಿಂಡ ಪ್ರದಾನ ಮಾಡಿ, ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುವಂತೆ ಹಾಗೂ ಅವರ ಆಶೀರ್ವಾದ ತಮಗೆ ಸಿಗುವಂತೆ ಬೇಡಿಕೊಳ್ಳುತ್ತಾರೆ. ಇನ್ನು ಬಾರ್ಕೂರು ಕೂಡ್ಲಿ ಜನಾರ್ದನ ದೇವಸ್ಥಾನದಲ್ಲಿ ಪಿಂಡ ಪ್ರದಾನ ಮಾತ್ರವಲ್ಲದೇ ಪ್ರತಿ ಅಮಾವಾಸ್ಯೆಯಂದು ಪ್ರೇತಗಳ ಮದುವೆ ಸಹ ನಡೆಯುತ್ತದೆ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಸಾಲಿಗ್ರಾಮ ಸಮೀಪದ ಕಾರ್ಕಡ ತೀರ್ಥ ಬೈಲ್ ತೀರ್ಥದಲ್ಲಿಯೂ ಮಹಾಲಯ ಅಮಾವಾಸೆಯ ದಿನ ಪಿಂಡ ಪ್ರದಾನ ಮಾಡಲಾಗುತ್ತದೆ.












Click it and Unblock the Notifications