ಮೈಸೂರಿನಲ್ಲಿ ಮೂಕಜೀವಿಗಳ ದಾಹ ತಣಿಸುವ ಭಗೀರಥರು!
ಮೈಸೂರು, ಏಪ್ರಿಲ್ 20: ನಗರಗಳಲ್ಲಿ ಬಿಸಿಲಿಗೆ ಜನಸಾಮಾನ್ಯರು ಮಾತ್ರವಲ್ಲದೆ, ಮೂಕ ಪ್ರಾಣಿಗಳು, ಪಕ್ಷಿಗಳು ಕೂಡ ಕುಡಿಯುವ ನೀರಿಗಾಗಿ ಪರಿತಪಿಸುತ್ತವೆ. ಬೀಡಾಡಿ ದನಗಳು, ನಾಯಿಗಳು ನೀರಿಗಾಗಿ ನಗರದಲ್ಲಿ ಅಲೆಯುವುದು ಎಲ್ಲೆಂದರಲ್ಲಿ ಕಂಡು ಬರುತ್ತದೆ.
ಬೇಸಿಗೆ ಸಮಯದಲ್ಲಿ ನೀರಿಗೆ ಸಮಸ್ಯೆ ಕಾಣಿಸುವುದರಿಂದ ನಗರದಾದ್ಯಂತ ನೀರು ಸಿಗುವುದು ಕಷ್ಟ ಸಾಧ್ಯ. ಇಂತಹ ಸಂದರ್ಭಗಳಲ್ಲಿ ನಗರದಲ್ಲಿ ಕೆಲವರು ಮೂಕ ಪ್ರಾಣಿಪಕ್ಷಿಗಳ ದಾಹ ತೀರಿಸುವ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ.

ನಗರದಲ್ಲಿದ್ದಾರೆ ಆಧುನಿಕ ಭಗೀರಥರು!
ಇತ್ತೀಚೆಗಿನ ವರ್ಷಗಳಲ್ಲಿ ಬಹಳಷ್ಟು ಸಂಘ- ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ನೀರೊದಗಿಸುವ ಕೆಲಸವನ್ನು ಮಾಡುತ್ತಿದ್ದು. ಮೈಸೂರು ನಗರಕ್ಕೊಂದು ಸುತ್ತು ಹೊಡೆದರೆ ಮೂಕ ಪ್ರಾಣಿಗಳ ದಾಹ ನೀಗಿಸಲು ಶ್ರಮಿಸುತ್ತಿರುವ ಆಧುನಿಕ ಭಗೀರಥರು ನೂರಾರು ಮಂದಿ ಕಾಣಸಿಗುತ್ತಾರೆ.
ಹಾಗೆ ನೋಡಿದರೆ ಮೈಸೂರು ನಗರದ ಹಲವೆಡೆ ದನಗಳಿಗಾಗಿಯೇ ನೀರಿನ ತೊಟ್ಟಿಗಳನ್ನು ಕಟ್ಟಲಾಗಿದೆ. ಆದರೆ ಎಲ್ಲ ಕಡೆಗಳಲ್ಲಿ ಈ ವ್ಯವಸ್ಥೆ ಇಲ್ಲ ಇದನ್ನು ಮನಗಂಡ ಕೆಲವರು ತಮ್ಮ ಮನೆ ಮುಂದೆ ಅಥವಾ ಅಂಗಡಿ ಮುಂದೆ ಪುಟ್ಟ ತೊಟ್ಟಿಗಳನ್ನು ನಿರ್ಮಿಸಿ ಅಲ್ಲಿ ನೀರು ತುಂಬಿಸಿಡುತ್ತಾರೆ. ಬಾಯಾರಿದ ದನ, ನಾಯಿ, ಮೇಕೆಗಳು ಇಲ್ಲಿ ನೀರು ಕುಡಿದು ತೆರಳುತ್ತವೆ. ಪ್ರತಿ ದಿನವೂ ಅಲ್ಲಿ ನೀರು ಸಿಗುವುದರಿಂದ ಬೀಡಾಡಿ ದನಗಳಿಗೆ ದಾಹ ತಣಿಸುವ ತಾಣವಾಗಿ ಗಮನಸೆಳೆಯುತ್ತದೆ.

ಪ್ರಾಣಿ, ಪಕ್ಷಿ ಪ್ರಿಯರ ಶ್ಲಾಘನೀಯ ಕಾರ್ಯ
ನೀರಿಗೆ ಹಣ ನೀಡಿ ಕುಡಿಯುವಂತಹ ಈ ಕಷ್ಟ ಕಾಲದಲ್ಲಿ ಪ್ರಾಣಿಗಳಿಗಾಗಿಯೇ ಪ್ರತ್ಯೇಕ ನೀರಿನ ತೊಟ್ಟಿ ಕಟ್ಟಿಸಿ ಪ್ರತಿ ದಿನ ನೀರು ಪೂರೈಸುವುದು ಸುಲಭದ ಕೆಲಸವಲ್ಲ. ಅಷ್ಟೇ ಅಲ್ಲದೆ ಒಂದು ದಿನ ಮಾಡಿ ತೆಪ್ಪಗಾಗುವ ಕೆಲಸವೂ ಅದು ಅಲ್ಲ. ಆದರೆ ಇಂತಹ ಕಾರ್ಯವನ್ನು ಹಲವಾರು ವರ್ಷಗಳಿಂದ ಮಾಡುತ್ತಾ ಬಂದಿರುವವರನ್ನು ನಾವು ಶ್ಲಾಘಿಸಲೇ ಬೇಕಾಗುತ್ತದೆ.
ಕೆಲವರು ಮುಂದುವರೆದು ಚಾಮುಂಡಿ ಬೆಟ್ಟದಲ್ಲಿರುವ ಮರಗಿಡಗಳಲ್ಲಿ ನೀರಿನ ಪುಟ್ಟದಾದ ಬಾಟಲಿ, ಪಾತ್ರೆಗಳಲ್ಲಿ ನೀರನ್ನಿಟ್ಟು ಪಕ್ಷಿಗಳ ದಾಹವನ್ನು ತೀರಿಸುತ್ತಿದ್ದರೆ, ಮತ್ತೆ ಕೆಲವರು ತಮ್ಮ ಮನೆಯ ತಾರಸಿಯಲ್ಲಿ ನೀರಿಟ್ಟು ಪಕ್ಷಿಗಳನ್ನು ಕಾಪಾಡುತ್ತಿದ್ದಾರೆ.

ಬಾಯಾರಿದ ಜೀವಗಳಿಗೆ ನೀರು ನೀಡುವವರು
ಕೊರೊನಾ ಕಾರಣದಿಂದಾಗಿ ಎರಡು ಬೇಸಿಗೆಯನ್ನು ಜನ ದುಗುಡದಿಂದಲೇ ಕಳೆದಿದ್ದರು. ಜನ ನೀಡುವ ಆಹಾರವನ್ನೇ ನಂಬಿ ಬದುಕುತ್ತಿದ್ದ ಪ್ರಾಣಿಗಳನ್ನು ದಾನಿಗಳು ಆಹಾರ ನೀಡಿ ಮಾನವೀಯತೆ ಮೆರೆದಿದ್ದರು. ಒಟ್ಟಾರೆ ನಗರದಲ್ಲಿ ತಮ್ಮ ಪಾಡಿಗೆ ತಾವು ಎಂಬಂತೆ ಬಾಯಾರಿದ ಜೀವಗಳಿಗೆ ನೀರು, ಆಹಾರ ನೀಡಿ ಹೊಟ್ಟೆ ತಣಿಸುವವರ ದೊಡ್ಡ ಪಟ್ಟಿಯೇ ಇದೆ.
ಇನ್ನು ಬೇಸಿಗೆ ಕಾಲದಲ್ಲಿ ಜನ ಸಾಮಾನ್ಯರು ಕುಡಿಯುವ ನೀರಿನತ್ತ ಹೆಚ್ಚಿನ ಗಮನಹರಿಸುತ್ತಾರೆ. ಹೆಚ್ಚಿನವರ ಮನೆಯಲ್ಲಿ ಪ್ರಿಡ್ಜ್ ಇದ್ದು ಕೆಲವರು ತಣ್ಣಗಿನ ನೀರನ್ನು ಕುಡಿದು ದಾಹ ತೀರಿಸುತ್ತಾರೆಯಾದರೂ ಐಸ್ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಜನಾಕರ್ಷಣೆಯ ಮಣ್ಣಿನ ಫಿಲ್ಟರ್‌ಗಳು
ಹಿಂದಿನ ಕಾಲದಲ್ಲಿ ಮಣ್ಣಿನ ಮಡಿಕೆಯಲ್ಲಿ ಕುದಿಸಿ ಆರಿಸಿದ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿಯುತ್ತಿದ್ದರು. ಇದರಿಂದ ನೀರಡಿಕೆ ಕಡಿಮೆಯಾಗುತ್ತಿತ್ತಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿಯಾಗಿತ್ತು. ಇತ್ತೀಚೆಗಿನ ವರ್ಷಗಳಲ್ಲಿ ಮಣ್ಣಿನ ಮಡಿಕೆ ಬಳಕೆ ಕಡಿಮೆಯಾಗಿದೆ. ಆದರೆ ಮಣ್ಣಿನ ಮಡಿಕೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಂಡು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂಬುದು ಗೊತ್ತಿರುವ ಕಾರಣ ಜನ ಮಣ್ಣಿನ ಮಡಿಕೆಗಳನ್ನು ಇಷ್ಟಪಡುತ್ತಿದ್ದಾರೆ.
ಹೀಗಾಗಿ ಜನರ ಅನುಕೂಲಕ್ಕಾಗಿ ಮಣ್ಣಿನ ಫಿಲ್ಟರ್‌ಗಳನ್ನು ತಯಾರಿಸಿ ಮಾರಾಟ ಮಾಡುವುದು ಕಂಡು ಬರುತ್ತಿದೆ. ಈಗ ನಗರದಲ್ಲಿ ಎಲ್ಲೆಂದರಲ್ಲಿ ಸುಂದರವಾಗಿ ಜೋಡಿಸಿಟ್ಟ ಮಣ್ಣಿನ ಸುಂದರ ಫಿಲ್ಟರ್‌ಗಳು ಕಂಡು ಬರುತ್ತವೆ. ಮನೆಗಳಲ್ಲಿ ಆಧುನಿಕ ತಂತ್ರಜ್ಞಾನಗಳಿಂದ ಹಲವು ಬಗೆಯ ಫಿಲ್ಟರ್‌ಗಳು ಇದ್ದರೂ ಮಣ್ಣಿನ ಫಿಲ್ಟರ್ ಸೇರಿದಂತೆ ಮಣ್ಣಿನ ಪಾತ್ರೆಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ.

ರಸ್ತೆ ಬದಿಗಳಲ್ಲಿ ಫಿಲ್ಟರ್ ಮಾರಾಟ
ಬಿಹಾರ, ರಾಜಸ್ತಾನದಿಂದ ಬಂದ ವ್ಯಾಪಾರಿಗಳು ಇಲ್ಲಿನ ಫ್ಯಾಷನ್ ಪ್ರಿಯರ ಇಷ್ಟದಂತೆಯೇ ಆಕರ್ಷಕ, ಕಲಾತ್ಮಕ ಮಣ್ಣಿನ ಫಿಲ್ಟರ್‌ಗಳನ್ನು ತಯಾರಿಸಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಿದ್ದು, ಇವು ನೋಡಲು ವಿಭಿನ್ನ ಮತ್ತು ವಿಶಿಷ್ಟವಾಗಿರುವುದರಿಂದ ಜತೆಗೆ ಮನೆಗೂ ಶೋಭೆ ತರುತ್ತಿದ್ದು, ಅವುಗಳಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಕುಡಿಯುತ್ತಿದ್ದಾರೆ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಬೇಸಿಗೆಯ ದಿನಗಳು ನಮ್ಮನ್ನು ಹಲವು ಬಗೆಯಲ್ಲಿ ಕಾಡುವ ದಿನಗಳಾಗಿದ್ದು, ಈ ವೇಳೆಯಲ್ಲಿ ನಮ್ಮನ್ನು ನಾವು ಕಾಪಾಡಿ ಕೊಳ್ಳುವುದರೊಂದಿಗೆ ನಮ್ಮ ಸುತ್ತಮುತ್ತ ಜೀವಿಸುವ ಜೀವಗಳತ್ತಲೂ ನಾವು ಕಾಳಜಿ ವಹಿಸುವ ಮೂಲಕ ಮಾನವೀಯತೆ ಮೆರೆಯುವುದು ಬಹು ಅಗತ್ಯವಾಗಿದೆ.











Click it and Unblock the Notifications