• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಚ್ಚಲೂ ಆಗದೆ, ದೂಷಿಸಲೂ ಆಗದೆ ಇತಿಹಾಸದ ಪುಟ ಸೇರಿದ 'ದುರಂತ ನಾಯಕ' ಕರ್ಣ

By ಮದನ್ ಕುಮಾರ್ ಕೆ
|
Google Oneindia Kannada News

ಹೆತ್ತ ತಾಯಿಗೆ ಹೆಗ್ಗಣವೂ ಮುದ್ದಂತೆ. ಆದರೆ ಅಂದೇಕೋ ಹಾಗಾಗಲಿಲ್ಲ. ದೂರ್ವಾಸ ಮುನಿಗಳ ವರ ಪಡೆದ ಪೃಥ, "ಕವಚ - ಕುಂಡಲಿ" ಯನ್ನು ಧರಿಸಿ ಜನಿಸಿದ ಸೂರ್ಯ ಪುತ್ರನನ್ನು ಬುಟ್ಟಿಯೊಳಗಿಟ್ಟು ಹರಿವ ನದಿಯಲ್ಲಿ ತೇಲಿ ಬಿಟ್ಟಳು.

ಕೂಸು ಹೆತ್ತ ತಾಯಿಯ ಒಡಲಿನಲ್ಲಿ ಮಮತೆ ಅಂದು ಜಿನುಗಲೇ ಇಲ್ಲ. ಕುಂತಿಯ ಕಣ್ಣೀರು ಬತ್ತಲು, ಶಿಶು ಹೊತ್ತ ಬುಟ್ಟಿ ರಾಧೆಯನ್ನು ಸೇರಿತು. ಹೆಸರಿಲ್ಲದ ಅನಾಥ ಶಿಶುವು ವಸುಸೇನನಾಗಿ, ರಾಧಾ - ಅಧಿರಥ ನಂದನರ ಪ್ರೀತಿಯುಂಡು ಬೆಳೆಯಿತು.

ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!

ಗುರು ಸೂರ್ಯನಿದ್ದಂತೆ. ಹೇಗೆ ಸೂರ್ಯ ತನ್ನೊಳಗಿರುವ ಬೆಳಕನ್ನು ಏಕರೂಪವಾಗಿ, ನಿಷ್ಪಕ್ಷಪಾತದಿಂದ ಎಲ್ಲರಿಗೂ ಹಂಚುತ್ತಾನೋ, ಅದೇ ರೀತಿ ಗುರು ಒಬ್ಬ ತನ್ನ ವಿದ್ಯೆಯನ್ನು ತನ್ನೆಲ್ಲಾ ಶಿಷ್ಯರಲ್ಲಿ ಸಮನಾಗಿ ಹಂಚತಕ್ಕದ್ದು. ಆದರೆ ಹಸ್ತಿನಾಪುರದಲ್ಲಿ ನೆಲೆಯೂರಿ ಗುರುಕುಲ ಬೆಳೆಸಿದ ದ್ರೋಣಾಚಾರ್ಯರಲ್ಲಿ ಒಬ್ಬ ಗುರುವಿಗೆ ಅತ್ಯಾವಶ್ಯಕವಾಗಿರಬೇಕಿದ್ದ ನಿಷ್ಪಕ್ಷಪಾತ, ಸಮಾನತೆಯ ಗುಣ ಕಾಣೆಯಾಗಿತ್ತು.

ಅರ್ಜುನನಲ್ಲಿ ಗುರು ದ್ರೋಣರು ತೋರಿದ ಒಲವು, ಅವನನ್ನು ಶ್ರೇಷ್ಠ ಧನುರ್ಧಾರಿಯನ್ನಾಗಿ ರೂಪಿಸುವ ಅವರ ಪ್ರಮಾಣ, ಗುರು ಸ್ಥಾನಕ್ಕೆ ಪ್ರಶ್ನಾರ್ಹ. ವಸುಸೇನ ಗುರು ದ್ರೋಣರಲ್ಲಿ ಧನುರ್ವಿದ್ಯೆ ಕಲಿಯಲು ತೋರಿದ ಹಂಬಲ, ಅವನ ನೈಪುಣ್ಯತೆ, ಸಾಮರ್ಥ್ಯ ಅರ್ಜುನನಿಗೆ ಸವಾಲು ಎಸೆಯುವಂತದ್ದೆಂದೂ, ಮುಂದೊಂದು ದಿನ ಅರ್ಜುನನನ್ನು ಮೀರಿಸುವಂತದ್ದು ಎಂದು ಅರಿತ ದ್ರೋಣಾಚಾರ್ಯ, ಅವನನ್ನು ಸೂತ ಪುತ್ರನೆಂದು ಅಪಹಾಸ್ಯಕ್ಕೆ ಒಳಪಡಿಸಿ, ಚುಚ್ಚಿ ಶೋಷಿಸಿದರು. (ಲೇಖನಕ್ಕೆ ಕಾಲ್ಪನಿಕ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ)

ಕಥೆ ಹೇಳುವ ಸೊಗಸಾದ ಕಲೆ ಸಿದ್ಧಿಸಿಕೊಂಡಿರುವ ರಾಜಾರಾಂ ಮುಂಡಿಗೇಸರಕಥೆ ಹೇಳುವ ಸೊಗಸಾದ ಕಲೆ ಸಿದ್ಧಿಸಿಕೊಂಡಿರುವ ರಾಜಾರಾಂ ಮುಂಡಿಗೇಸರ

ಹಸ್ತಿನಾಪುರಕ್ಕೆ ಹಿಂದಿರುಗಿದ ಸಂದರ್ಭ

ಹಸ್ತಿನಾಪುರಕ್ಕೆ ಹಿಂದಿರುಗಿದ ಸಂದರ್ಭ

ಗುರು ದ್ರೋಣಾಚಾರ್ಯರಲ್ಲಿ ಪಾಂಡವ ಮತ್ತು ಕೌರವರು ವಿದ್ಯಾಭ್ಯಾಸ ಮುಗಿಸಿ ಹಸ್ತಿನಾಪುರಕ್ಕೆ ಹಿಂದಿರುಗಿದ ಸಂದರ್ಭದಲ್ಲಿ, ಕಲಿತ ವಿದ್ಯೆಯ ಪ್ರದರ್ಶನಕ್ಕೆ ರಂಗಸ್ಥಳ ಸಜ್ಜುಗೊಳಿಸಲಾಯಿತು. ಅರ್ಜುನನ ಪ್ರದರ್ಶನ ನೋಡಿ ಮೂಖವಿಸ್ಮಿತವಾದ ಸಭೆಯಲ್ಲಿ ಕರ್ಣನು ಅರ್ಜುನನಿಗೆ ಸವಾಲೊಡ್ಡಿದಾಗ, ಅವನನ್ನು ಅವಮಾನದ ಕೂಪಕ್ಕೆ ತಳ್ಳಿದ್ದು ಅವನ "ಸೂತ ಪುತ್ರ" ನೆಂಬ ಹಣೆ ಪಟ್ಟಿ. ಕರ್ಣನಿಗೆ ಅಂದಾದ ಅವಮಾನದ ನಡುವೆಯೂ ಭರವಸೆ ತೋರಿ ಅವನನ್ನು ಅಂಗಧ ದೇಶದ ರಾಜನನ್ನಾಗಿ ಮಾಡಿದ್ದು ದುರ್ಯೋದನ. ದುರ್ಯೋದನನಲ್ಲಿ ಅಂದು ಸ್ನೇಹದ ಸಾಗರವನ್ನು ಕಂಡನು.

ವಿದ್ಯೆ ಕಲಿಯುವ ಮಹತ್ವಾಕಾಂಕ್ಷೆಯಿಂದ ಪರಶುರಾಮರನ್ನು ಸೇರುತ್ತಾನೆ

ವಿದ್ಯೆ ಕಲಿಯುವ ಮಹತ್ವಾಕಾಂಕ್ಷೆಯಿಂದ ಪರಶುರಾಮರನ್ನು ಸೇರುತ್ತಾನೆ

ವಸುಸೇನನು ವಿದ್ಯೆ ಕಲಿಯುವ ಮಹತ್ವಾಕಾಂಕ್ಷೆಯಿಂದ ಪರಶುರಾಮರನ್ನು ಸೇರುತ್ತಾನೆ. ದ್ರೋಣಾಚಾರ್ಯರು ತೋರಿದ ಬೇಧವನ್ನು ತಿಳಿದು, ಪರಶುರಾಮರು ಕ್ಷತ್ರಿಯ ದ್ವೇಷಿ ಎಂದು ಅರಿತ ವಸುಸೇನ, ಅಂದು ತಾನೊಬ್ಬ ಬ್ರಾಹ್ಮಣನೆಂದು ಒಂದೇ ಒಂದು ಸುಳ್ಳು ನುಡಿಯುತ್ತಾನೆ. ಮುಂದೊಂದು ದಿನ ಆಕಸ್ಮಿಕವೋ ಅಥವಾ ವಿಧಿಯಾಟವೋ ಎಂಬಂತೆ ಗುರುಗಳು ತನ್ನ ಸುಳ್ಳಿನ ಪರದೆಯನ್ನು ಸರಿಸಿದಾಗ, ಅವರಿಗೆ ನಿಷ್ಠ, ಶೋಷಿತ, ನಮ್ರ, ತನ್ನ ನಿದ್ದೆಗೆ ಭಂಗ ಬಾರದಿರಲೆಂದು ನೋವು ತಿಂದು ರಕ್ತ ಹರಿಸಿದ ಧೀರ ಶಿಷ್ಯ ಕಾಣಲೇ ಇಲ್ಲ. ಭಗವಾನ್ ಪರಶುರಾಮರು ಸತ್ಯ ಬಚ್ಚಿಟ್ಟು ವಿದ್ಯೆ ಕಲಿತ ಶಿಷ್ಯನ್ನು ಕಂಡರೇ ಹೊರತು, ಶಿಷ್ಯನು ತನ್ನೊಳಗೆ ಮುಚ್ಚಿಟ್ಟಿದ್ದ ಕಷ್ಟ, ಅವಮಾನಗಳನ್ನು ಕಾಣಲೇ ಇಲ್ಲ.

ಮತ್ಸ್ಯ ಯಂತ್ರವನ್ನು ಭೇದಿಸುವುದು

ಮತ್ಸ್ಯ ಯಂತ್ರವನ್ನು ಭೇದಿಸುವುದು

ಪಾಂಚಾಲ ಪುತ್ರಿ ಪಾಂಚಾಲಿಯ ಸ್ವಯಂವರ ಸಮಾರಂಭಕ್ಕೆಂದೇ ನಿರ್ಮಿಸಲಾಗಿದ್ದ ಮತ್ಸ್ಯ ಯಂತ್ರವನ್ನು ಭೇದಿಸುವಲ್ಲಿ ಸಾಲು ಸಾಲು ಕ್ಷತ್ರಿಯ ರಾಜ ಕುಮಾರರು ವಿಫಲರಾದರು. ಅಲ್ಲಿ ಜರುಗಿದ್ದ ಸಭೆಯಲ್ಲಿ ಬಿಲ್ಲು ಬಿಗಿದು, ಹೆದೆ ಏರಿಸಿ, ತಿರುಗುತ್ತಿದ್ದ ಮತ್ಸ್ಯದ ಕಣ್ಣನ್ನು ಪ್ರತಿಬಿಂಬದಲ್ಲಿ ನೋಡಿ ಭೇದಿಸುವ ಸಾಮರ್ಥ್ಯವಿದ್ದುದು ಕೇವಲ ಇಬ್ಬರಿಗೆ ಮಾತ್ರ. ಕರ್ಣನಿಗೆ ಅವಕಾಶ ಸಿಕ್ಕಾಗ ಸೂತ ಪುತ್ರನೆಂದು ಅವಮಾನಿಸಲಾಯಿತು. ಸಾಮರ್ಥ್ಯಕ್ಕೆ ಬೆಲೆಗೊಡದೆ, ಅಲ್ಲಿ ನೆರೆದಿದ್ದ ತುಂಬು ಸಭೆಯಲ್ಲಿ ಅಪಹಾಸ್ಯಕ್ಕೆ ಒಳಗಾದ ಕರ್ಣನ ದುಗುಡ ವರ್ಣಿಸಲಾಗದು.

ದಾನಕ್ಕೆ ಶ್ರೇಷ್ಠನಾದ ಕರ್ಣ

ದಾನಕ್ಕೆ ಶ್ರೇಷ್ಠನಾದ ಕರ್ಣ

ದಾನಕ್ಕೆ ಶ್ರೇಷ್ಠನಾದ ಕರ್ಣ ತನ್ನ ಹುಟ್ಟುಡುಗೊರೆಯಾದ 'ಕವಚ - ಕುಂಡಲಿ' ಗಳನ್ನೂ ವೇಷ ಮರೆಸಿ ಬ್ರಾಹ್ಮಣನಂತೆ ಬಂದ ಇಂದ್ರನಿಗೆ ಅರ್ಪಿಸುವಲ್ಲಿ ಕಿಂಚಿತ್ತೂ ಯೋಚಿಸಲಿಲ್ಲ. ತನ್ನ ಕವಚವಿಲ್ಲದೆ ತಾನು ಅರ್ಜುನನನ್ನು ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಸೋಲಿಸಲಸಾಧ್ಯವೆಂದು ತಿಳಿದಿದ್ದರೂ, ಸಂಚಿನ ಅರಿವಿದ್ದರೂ ತನ್ನೊಳಗಿನ ದಾನಿಯನ್ನು ತಡೆಯಲಿಲ್ಲ. ಕರ್ಣ, ಯುಧಿಷ್ಠಿರರ ನಡುವೆ ಶ್ರೇಷ್ಠ ಯಾರೆಂಬ ಚರ್ಚೆಯ ನಡುವೆ ಕೃಷ್ಣಾರ್ಜುನರು ಒಂದು ಮಳೆಗಾಲದ ದಿನ ವೇಷ ಮರೆಸಿ ಬ್ರಾಹ್ಮಣ ವೇಷ ಧರಿಸುತ್ತಾರೆ. ಯಾಗಕ್ಕಾಗಿ ಒಣ ಚಂದನದ ಕಟ್ಟಿಗೆಯನ್ನು ಯುಧಿಷ್ಠಿರನಿಗೆ ಪೂರೈಸಲಾಗಲಿಲ್ಲ. ಮಳೆಯ ಕಾರಣ ಕೊಟ್ಟು, ಕಾಡಿನಲ್ಲೆಲ್ಲೂ ಒಣ ಕಟ್ಟಿಗೆ ಇರದೆಂದು ಯುಧಿಷ್ಠಿರ ವೇಷ ಮರೆಸಿಕೊಂಡ ಕೃಷ್ಣಾರ್ಜುನರಲ್ಲಿ ಕ್ಷಮೆಯಾಚಿಸುತ್ತಾನೆ. ಆದರೆ ಕರ್ಣ ತನ್ನ ಭವನದಲ್ಲಿರುವ ಚಂದನದ ಕಂಬ, ಬಾಗಿಲುಗಳನ್ನು ತುಂಡರಿಸಿ ತಾನೇಕೆ ಶ್ರೇಷ್ಠನೆಂದು ಸಾಬೀತುಪಡಿಸುತ್ತಾನೆ.

ಅರ್ಜುನನನ್ನು ಹೊರತಾಗಿ ತನ್ನ ಬೇರೆ ಅನುಜರನ್ನು ಕೊಲ್ಲಲಾರೆ

ಅರ್ಜುನನನ್ನು ಹೊರತಾಗಿ ತನ್ನ ಬೇರೆ ಅನುಜರನ್ನು ಕೊಲ್ಲಲಾರೆ

ಜನ್ಮ ಕೊಟ್ಟಾಕೆಗೆ ತನ್ನ ಜೇಷ್ಠ ಪುತ್ರನ ನೆನಪಾದದ್ದು, ಅವಳ ಇತರ ಪುತ್ರರ ಪ್ರಾಣಕ್ಕೆ ಆಪತ್ತು ಬಂದಾಗಲಷ್ಟೇ. ಹಕ್ಕಿಯೊಂದು ಹಣ್ಣು ತಿಂದು, ಕೆಳ ಚೆಲ್ಲಿದ ಬೀಜವು ಮುಂದೊಂದುದಿನ ಮರವಾಗಿ ಬೆಳದೀತು. ಮರವು ತನ್ನನ್ನು ಬೇರೂರಲು ಬಿಟ್ಟು, ಹಿಡಿದಿಟ್ಟು ಬೆಳೆಸಿದ ಮಣ್ಣಿಗೆ ಚಿರ ಋಣಿಯಾಗಿರುವುದೇ ಹೊರತು, ಪಕ್ಷಿಗಲ್ಲ. ಮುಂದೊಂದು ದಿನ ರಾಧೇಯನಿಗೆ ತನ್ನ ಹುಟ್ಟಿನ ಗುಟ್ಟು ತಿಳಿದಾಗ, 'ತಾನು ತಿರಸ್ಕೃತ ' ನೆಂಬ ಭಾವದ ನಡುವೆಯೂ ಅವನು ನೆನೆದದ್ದು ತನ್ನ ಸಾಕು ತಾಯಿ ರಾಧಾಳನ್ನು, ತನ್ನನ್ನು ತ್ಯಜಿಸಿದ ಕುಂತಿಯನ್ನಲ್ಲ. ಆ ಕ್ಷಣದಲ್ಲೂ ಕರ್ಣ, ಯುದ್ಧ ಭೂಮಿಯಲ್ಲಿ ಅರ್ಜುನನನ್ನು ಹೊರತಾಗಿ ತನ್ನ ಬೇರೆ ಅನುಜರನ್ನು ಕೊಲ್ಲಲಾರೆ ಎಂಬ ಅಭಯವನ್ನು ಕುಂತಿಗೆ ನೀಡುತ್ತಾನೆ.

ಕುರುಕ್ಷೇತ್ರದ ರಣರಂಗ

ಕುರುಕ್ಷೇತ್ರದ ರಣರಂಗ

ಕುರುಕ್ಷೇತ್ರದ ರಣರಂಗದಲ್ಲಿ ಕರ್ಣ - ಅರ್ಜುನರ ನಡುವಿನ ಕಾಳಗ, ಶಕ್ತಿ, ಯುದ್ಧ ಕುಶಲತೆಗೆ ಯೋಧರು, ದೇವತೆಗಳೆಲ್ಲರೂ ಮೂಖವಿಸ್ಮಿತರಾಗಿ, ಆಶ್ಚರ್ಯಚಕಿತರಾಗಿ, ನಿಬ್ಬೆರಗಾಗಿ, ಭಯಭೀತರಾಗಿ ಬರಿಯ ಪ್ರೇಕ್ಷಕರಾದರು. ಮಣ್ಣಿನೊಳಗೆ ಹೂತು ಹೋಗಿದ್ದ ತನ್ನ ರಥದ ಚಕ್ರವನ್ನು ಮೇಲೆತ್ತುವ ಕ್ಷಣದಲ್ಲಿ; ಯುದ್ಧ ನೀತಿ ರೀತಿ ನಿಯಮಗಳಿಗೆ ತದ್ವಿರುದ್ಧವಾಗಿ ನಿಶ್ಶಸ್ತ್ರನಾದ ಕರ್ಣನನ್ನು, ಬೆನ್ನಿನ ಹಿಂದಿನಿಂದ ಅರ್ಜುನ ಹೊಡೆದುರುಳಿಸುತ್ತಾನೆ. ಹದಿನೆಂಟು ದಿನಗಳ ಕಾಲ ನಡೆದ ಮಹಾಭಾರತದ ಧರ್ಮ ಯುದ್ಧದಲ್ಲಿ, ಹದಿನೇಳನೇ ದಿನ ನಡೆದದ್ದು ಬರೀ "ಅಧರ್ಮ ".

ಇತಿಹಾಸದ ಪುಟ ಸೇರಿದ

ಇತಿಹಾಸದ ಪುಟ ಸೇರಿದ "ದುರಂತ ನಾಯಕ" ಕರ್ಣ

ಕಾಲಕ್ಕೆ ತಕ್ಕಂತೆ, ಗಳಿಗೆಗೆ ಅನುಗುಣವಾಗಿ, ನಾನಾ ಜನರಿಗೆ ಹೊಂದುವಂತೆ ವಿವಿಧ ಮುಖವಾಡಗಳನ್ನು ಕರ್ಣ ಎಂದೂ ಧರಿಸಲೇ ಇಲ್ಲ (Man of "One Identity"). ಹಸಿದ ಹೊಟ್ಟೆಗೆ ತುತ್ತು ಕೊಟ್ಟವನೇ ಭಗವಂತ. ಬಿದ್ದು ನೊಂದವನಿಗೆ ಕೈ ಚಾಚಿ ಎತ್ತಿದವನೇ ಭಗವಂತ. "ಸ್ವಾರ್ಥವೋ - ನಿಸ್ವಾರ್ಥವೋ" ಅದೇನೇ ಇರಲಿ, ದುರ್ಯೋದನ ತನ್ನಲ್ಲಿ ತೋರಿದ ಪ್ರೀತಿ, ಗೌರವ, ನಂಬಿಕೆಯೇ ತನ್ನ ಜೀವನ, ತನ್ನ ಧರ್ಮವನ್ನಾಗಿಸಿದ. ಮೆಚ್ಚಲೂ ಆಗದೆ, ದೂಷಿಸಲೂ ಆಗದೆ ಇತಿಹಾಸದ ಪುಟ ಸೇರಿದ "ದುರಂತ ನಾಯಕ" ಕರ್ಣ.

English summary
Not Lauded Not Blamed, Karna The Tragic Hero Of Mahabharat,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X