ರಾಷ್ಟ್ರೀಯ ಮತದಾರರ ದಿನ: ಇತಿಹಾಸ, ಮಹತ್ವ, ಪ್ರಾಮುಖ್ಯತೆ ತಿಳಿಯಿರಿ
ರಾಷ್ಟ್ರೀಯ ಮತದಾರರ ದಿನ 2022: 1950 ರಲ್ಲಿ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹೊಸ ಮತದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಯಾವುದೇ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವದ ಕೇಂದ್ರ ಸ್ತಂಭವೇ ಮತದಾನವಾಗಿದೆ. ಭಾರತವು 1951 ರಲ್ಲಿ ತನ್ನ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಮತದಾನಕ್ಕೆ ನಿಗದಿತ ವಯೋಮಾನದ ತತ್ವವನ್ನು ಅಳವಡಿಕೆ ಮಾಡಿಕೊಂಡಿದೆ.
ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಶಾಸಕಾಂಗ ಸಂಸ್ಥೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಾಗರಿಕರು ಪ್ರತಿ ಐದು ವರ್ಷಗಳಿಗೊಮ್ಮೆ ಮತ ಚಲಾಯಿಸುತ್ತಾರೆ. ಜನರ ಒಂದು ಮತಕ್ಕೂ ಕೂಡಾ ಅದರದ್ದೇ ಆದ ಪ್ರಾಮುಖ್ಯತೆ ಇದೆ ಹಾಗೂ ಪ್ರತಿಯೊಂದು ಮತವು ಮಹತ್ವವನ್ನು ಹೊಂದಿದೆ. ಜನರು ತಮ್ಮ ಭವಿಷ್ಯದಲ್ಲಿ ತಮ್ಮನ್ನು ಆಳುವ ಆಡಳಿತವನ್ನು ಈ ಮತದ ಮೂಲಕ ಆಯ್ಕೆ ಮಾಡುತ್ತಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ 900 ಮಿಲಿಯನ್ ನೋಂದಾಯಿತ ಮತದಾರರಲ್ಲಿ ಶೇಕಡ 67.11ರಷ್ಟು ದಾಖಲೆಯ ಮತದಾನವಾಗಿದೆ. ಹಾಗಾದರೆ ಈ ಮತದಾನ ದಿನದ ಇತಿಹಾಸವೇನು?, ಇದನ್ನು ಯಾಕೆ ಆಚರಣೆ ಮಾಡಲಾಗುತ್ತದೆ, ಇದರ ಮಹತ್ವವೇನು ಎಂದು ತಿಳಿಯಲು ಮುಂದೆ ಓದಿ...

ರಾಷ್ಟ್ರೀಯ ಮತದಾರರ ದಿನದ ಇತಿಹಾಸ
ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು 2011ರಲ್ಲಿ ಆಚರಿಸಲು ಆರಂಭ ಮಾಡಲಾಗಿದೆ. 2011 ರಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ಈ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲು ಪ್ರಾರಂಭ ಮಾಡಿದರು. ಭಾರತದ ಚುನಾವಣಾ ಆಯೋಗ, ಅಥವಾ ಇಸಿಐ ಅನ್ನು ಜನವರಿ 25, 1950ರಂದು ಸ್ಥಾಪನೆ ಮಾಡಲಾಗಿದೆ.

ರಾಷ್ಟ್ರೀಯ ಮತದಾರರ ದಿನದ ಮಹತ್ವ
ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು 2011 ರಿಂದ ಪ್ರತಿ ವರ್ಷ ಜನವರಿ 25 ರಂದು ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಭಾರತದ ಚುನಾವಣಾ ಆಯೋಗದ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಶಾಸಕಾಂಗದ ಎಲ್ಲಾ ಹಂತಗಳಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಹೊಸ ಮತದಾರರನ್ನು ಸೆಳೆಯುವ, ಉತ್ತೇಜಿಸುವುದು ಹಾಗೂ ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ಚುನಾವಣಾ ಸಂಸ್ಥೆ ಹೇಳುತ್ತದೆ. "ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಚುನಾವಣಾ ಪ್ರಕ್ರಿಯೆಯ ತಿಳುವಳಿಕೆ ನೀಡಲು ಆಚರಣೆ ಮಾಡಲಾಗುತ್ತದೆ," ಎಂದು ಸಂಸ್ಥೆಯು ಹೇಳುತ್ತದೆ. ಈ ದಿನದ ಕಾರ್ಯಕ್ರಮದಲ್ಲಿ ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ಹಸ್ತಾಂತರ ಮಾಡಲಾಗುತ್ತದೆ.

ಮತದಾನದ ಪ್ರಾಮುಖ್ಯತೆ ಏನು?
ಮತದಾರರ ದಿನವನ್ನು ಆಚರಿಸುವ ಕಾರ್ಯಸೂಚಿಯು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ವಿಶೇಷವಾಗಿ ದೇಶದ ಹೊಸದಾಗಿ ಅರ್ಹ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವುದು ಆಗಿದೆ. ಮತದಾನವು ಒಂದು ದೇಶದ ಸರ್ಕಾರವನ್ನು ರಚಿಸಲು ಸಹಾಯ ಮಾಡುವ ಮೂಲಭೂತ ಪ್ರಕ್ರಿಯೆಯಾಗಿದೆ. ಜನರು ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತದಾನದ ಹಕ್ಕುಗಳು ಜನರಿಗೆ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿಗೆ ಇನ್ನಷ್ಟು ಬಲತುಂಬುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ಮತದಾನವು ಪ್ರಮುಖವಾಗಿದೆ.

ರಾಷ್ಟ್ರೀಯ ಮತದಾರರ ದಿನದ ಘೋಷಣೆ, ಸ್ಪೂರ್ತಿದಾಯಕ ಉಲ್ಲೇಖಗಳು
ಹೊಸದಾಗಿ ಅರ್ಹತೆ ಪಡೆದ ಯುವ ಮತದಾರರಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಈ ವರ್ಷದ ರಾಷ್ಟ್ರೀಯ ಮತದಾರರ ದಿನದ ಘೋಷಣೆಯು 'ಬಲವಾದ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಸಾಕ್ಷರತೆ' ಎಂಬುವುದು ಆಗಿದೆ.
2019: "ಯಾವುದೇ ಮತದಾರ ಹಿಂದೆ ಉಳಿಯಲಾರರು"
2018: "ಮೌಲ್ಯಮಾಪನ ಮಾಡಬಹುದಾದ ಚುನಾವಣೆಗಳು"
2017: "ಯುವ ಮತ್ತು ಭವಿಷ್ಯದ ಮತದಾರರ ಸಬಲೀಕರಣ"
"ಬುಲೆಟ್‌ಗಿಂತ ಮತಪತ್ರ ಬಲಿಷ್ಠವಾಗಿದೆ," ಎಂದು ಅಬ್ರಹಾಂ ಲಿಂಕನ್ ಹೇಳುತ್ತಾರೆ. "ಬದಲಾವಣೆಯನ್ನು ಬಯಸುವುದು ಮಾತ್ರವಲ್ಲ, ನೀವು ಹೋಗಿ ಮತ ಚಲಾಯಿಸುವ ಮೂಲಕ ಬದಲಾವಣೆಯನ್ನು ಮಾಡಬೇಕು," ಎಂದು ಟೇಲರ್ ಸ್ವಿಫ್ಟ್ ಹೇಳಿದ್ದಾರೆ. "ನಿಮ್ಮ ಮತದಾನದ ಹಕ್ಕಿಗಾಗಿ ಯಾರೋ ಹೋರಾಟ ನಡೆಸಿದ್ದಾರೆ. ಅದನ್ನು ಬಳಸಿ," ಎಂದು ಸುಸಾನ್ ಬಿ. ಆಂಥೋನಿ ತಿಳಿಸಿದ್ದಾರೆ. "ಮುಖ್ಯವಲ್ಲದ ಮತ ಎಂಬುದೇ ಇಲ್ಲ. ಎಲ್ಲಾ ಮತವು ಪ್ರಮುಖವೇ ಆಗಿದೆ," ಎಂದು ಬರಾಕ್ ಒಬಾಮಾ ಹೇಳಿದ್ದಾರೆ.

ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ
"ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ ಮತ್ತು ಧರ್ಮದ ಪರಿಗಣನೆಗೆ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ" (ಒನ್‌ಇಂಡಿಯಾ ಸುದ್ದಿ)












Click it and Unblock the Notifications