ತಲಕಾಡು: ಅಂದು ರಾಜಧಾನಿ, ಇಂದು ಹೋಬಳಿ ಕೇಂದ್ರ!
ಮೈಸೂರು, ಡಿಸೆಂಬರ್ 10: ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ತಲಕಾಡು ವೈಭವದಿಂದ ಮೆರೆದ ನಾಡಾಗಿತ್ತೆಂಬುದು ತಿಳಿದು ಬರುತ್ತದೆ. ಆದರೆ ಇವತ್ತು ಈ ತಾಣ ಅಭಿವೃದ್ಧಿಯಿಂದ ವಂಚಿತವಾಗಿರುವುದು ಎದ್ದು ಕಾಣುತ್ತದೆ. ಪಂಚಲಿಂಗದರ್ಶನದ ವೇಳೆ ಒಂದಷ್ಟು ಸದ್ದು ಮಾಡುತ್ತದೆಯಾದರೂ ಉಳಿದಂತೆ ಈ ತಾಣ ಮೌನಕ್ಕೆ ಶರಣಾಗಿ ಬಿಡುತ್ತದೆ.
ಇದನ್ನು ಸಿದ್ಧಾರಣ್ಯಕ್ಷೇತ್ರ, ಗಜಾರಣ್ಯಕ್ಷೇತ್ರ, ತಲವನಪುರ, ರಾಜಪುರ, ರಾಜರಾಜಪುರ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕ್ರಿ.ಶ.247ರ ಕಾಲದಲ್ಲೇ ಗಂಗರಸರ ಸಾಮ್ರಾಜ್ಯದ ರಾಜಧಾನಿಯಾಗಿ ಅಪಾರ ಕೀರ್ತಿಗಳಿಸಿದ್ದರೆ, ತದನಂತರ ಹೊಯ್ಸಳರ ಕಾಲದಲ್ಲಿಯೂ ಹತ್ತು ಹಲವು ವೈಶಿಷ್ಟ್ಯತೆಯನ್ನು ಹೊಂದಿ ವೈಭವದಿಂದ ಮೆರೆದಿತ್ತು. ಈ ಪ್ರದೇಶವನ್ನು ಕೇವಲ ಗಂಗರು, ಚೋಳರು ಮಾತ್ರವಲ್ಲದೆ ರಾಷ್ಟ್ರಕೂಟರು, ವಿಜಯನಗರದರಸರು, ಮೈಸೂರಿನ ಒಡೆಯರು ಸೇರಿದಂತೆ ಹಲವು ರಾಜವಂಶಸ್ಥರು ಆಳಿರುವುದು ವಿಶೇಷವಾಗಿದೆ.

ತಲಕಾಡಿನ ಗಂಗರೆಂದೇ ಹೆಸರುವಾಸಿ
ಇತಿಹಾಸದ ಪುಟಗಳಲ್ಲಿ ತಲಕಾಡಿನ ಗಂಗರು ತಮ್ಮದೇ ಆಡಳಿತದಿಂದ ಹೆಸರು ವಾಸಿಯಾಗಿದ್ದಾರೆ. ಇವರು ತಲಕಾಡನ್ನು ಬಹು ವೈಭವದಿಂದ ಮೆರೆಸಿದ್ದರೆಂಬುದು ತಿಳಿದು ಬರುತ್ತದೆ. ಕ್ರಿ.ಶ. 247-266 ರಲ್ಲಿ ಗಂಗರಸ ಹರಿವರ್ಮನು ತಲಕಾಡನ್ನು ತಲವನಪುರ ಹೆಸರಿನಲ್ಲಿ ಆಳ್ವಿಕೆ ನಡೆಸಿದ್ದು, ಮುಂದೆ ಈತನ ವಂಶಕ್ಕೆ ತಲಕಾಡು ರಾಜಧಾನಿಯಾಗಿ ಮುಂದುವರಿಯಿತು.

ಚೋಳರ ಕೈವಶದಲ್ಲಿ ರಾಜಪುರ!
8ನೇ ಶತಮಾನದಲ್ಲಿ ಗಂಗರಾಜ ಶ್ರೀಪುರುಷನು ಅತ್ಯಂತ ವೈಭವದಿಂದ ತಲಕಾಡನ್ನು ಆಳಿದ್ದನೆಂದು ಹೇಳಲಾಗಿದೆ. ಆ ನಂತರ ಗಂಗರು ರಾಷ್ಟ್ರಕೂಟರ ಸಾಮಂತರಾಗಬೇಕಾಗುತ್ತದೆ. 11 ನೇ ಶತಮಾನದ ಆರಂಭದಲ್ಲಿ ಗಂಗರ ಕೈಬಿಟ್ಟು ತಲಕಾಡು ಚೋಳರ ಕೈವಶವಾಗಿ ರಾಜಪುರ ಎಂಬ ಹೊಸ ಹೆಸರು ಪಡೆಯುತ್ತದೆ. ಆದರೆ ಹೆಚ್ಚು ಕಾಲ ಆಳ್ವಿಕೆ ನಡೆಸಲು ಚೋಳರಿಗೆ ಸಾಧ್ಯವಾಗಲಿಲ್ಲ. ಕಾರಣ ಅವರನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಯುದ್ಧ ಮಾಡಿ ಸೋಲಿಸಿ ತಮಿಳುನಾಡಿಗೆ ಅಟ್ಟಿ ತಲಕಾಡನ್ನು ತನ್ನ ಕೈವಶಪಡಿಸಿಕೊಂಡು ತಲಕಾಡು ಗೊಂಡ ಎಂಬ ಕೀರ್ತಿಯನ್ನು ಪಡೆಯುತ್ತಾನೆ.

ದೇಗುಲ ನಿರ್ಮಾತೃ ವಿಷ್ಣುವರ್ಧನ
ಈತನೇ ಇಲ್ಲಿರುವ ಕೀರ್ತಿನಾರಾಯಣ ದೇವಸ್ಥಾನವನ್ನು ನಿರ್ಮಿಸಿದ್ದು, ಈ ದೇಗುಲ ಹೊಯ್ಸಳ ಶೈಲಿಯಲ್ಲಿದ್ದು, ಆಕರ್ಷಣೀಯವಾಗಿದೆ. 14ನೇ ಶತಮಾನದ ತನಕವೂ ತಲಕಾಡು ಹೊಯ್ಸಳರ ಆಳ್ವಿಕೆಯಲ್ಲಿತ್ತಾದರೀ ಆ ಬಳಿಕ ಅಂದರೆ ಕ್ರಿ.ಶ.1634 ರಲ್ಲಿ ತಲಕಾಡನ್ನು ಮೈಸೂರು ಅರಸರು ವಶಪಡಿಸಿಕೊಳ್ಳುವ ಮೂಲಕ ಮೈಸೂರು ಸಂಸ್ಥಾನದಲ್ಲಿ ಲೀನವಾಯಿತು. ಇನ್ನು ತಲಕಾಡು ಕ್ರಿ.ಶ.1868 ರತನಕವೂ ತಲಕಾಡು ತಾಲೂಕು ಕೇಂದ್ರವಾಗಿತ್ತಾದರೂ 1882ರ ಬಳಿಕ ತಾಲೂಕು ಕೇಂದ್ರ ತಿ.ನರಸೀಪುರಕ್ಕೆ ಸೇರ್ಪಡೆಯಾಗಿ ಈಗ ಹೋಬಳಿ ಕೇಂದ್ರವಾಗಿ ಉಳಿದು ಹೋಗಿದೆ.

ಕಮಲಪುಷ್ಪ ಅರ್ಪಿಸುತ್ತಿದ್ದ ಆನೆಗಳು
ತಲಕಾಡು ಪೌರಾಣಿಕವಾಗಿಯೂ ತನ್ನದೇ ಆದ ಮಹತ್ವವನ್ನು ಹೊಂದಿರುವುದನ್ನು ನಾವು ಕಾಣ ಬಹುದಾಗಿದೆ. ಪೌರಾಣಿಕ ಯುಗದಲ್ಲಿ ವಸಿಷ್ಟ ಕುಲದ ಸೋಮದತ್ತನೆಂಬ ಋಷಿ ಮುನಿಯು ಸಶರೀರ ಮೋಕ್ಷ ಬಯಸಿ ವಾರಣಾಸಿಯಲ್ಲಿ ತಪಸ್ಸು ಮಾಡುತ್ತಿದ್ದಾಗ ಕಾಶಿವಿಶ್ವೇಶ್ವರ ಪ್ರತ್ಯಕ್ಷನಾಗಿ ಕಾವೇರಿ ನದಿ ತೀರದ ತಲವನಪುರದ ಸಿದ್ಧಾರಣ್ಯ ಕ್ಷೇತ್ರಕ್ಕೆ ಹೋಗುವಂತೆ ಹೇಳುತ್ತಾನೆ. ಆಗ ಸೋಮದತ್ತನು ತನ್ನ ಶಿಷ್ಯರೊಡಗೂಡಿ ಸಿದ್ಧಾರಣ್ಯ ಕ್ಷೇತ್ರಕ್ಕೆ ಬರುತ್ತಿದ್ದಂತೆಯೇ ಆನೆಗಳ ಹಿಂಡಿಗೆ ಸಿಲುಕಿ ಭಯ ಭೀತರಾಗಿ ಆನೆ... ಆನೆ... ಎಂದು ಕೂಗಿಕೊಂಡೇ ಗುರುಶಿಷ್ಯರೆಲ್ಲರೂ ಮರಣಹೊಂದುತ್ತಾರೆ. ಹೀಗೆ ತಮ್ಮ ಮರಣದ ಕಾಲದಲ್ಲಿ ಆನೆಯನ್ನು ಸ್ಮರಿಸಿದ ಪರಿಣಾಮ ಅವರು ಮುಂದೆ ಸಿದ್ಧಾರಣ್ಯ ಕ್ಷೇತ್ರದಲ್ಲೇ ಆನೆಗಳಾಗಿ ಜನ್ಮತಾಳುತ್ತಾರೆ. ಈ ಆನೆಗಳು ಪ್ರತಿದಿನ ಗೋಕರ್ಣ ತೀರ್ಥದಲ್ಲಿ ಮಿಂದು ಕಮಲಪುಷ್ಪಗಳನ್ನು ಸೊಂಡಿಲಿನಿಂದ ತೆಗೆದುಕೊಂಡು ಹೋಗಿ ಅಲ್ಲಿಯೇ ಸಮೀಪದಲ್ಲಿದ್ದ ಶಾಲ್ಮಲ ವೃಕ್ಷ (ಬೂರಗದಮರ)ದ ಪೊದೆಯೊಂದಕ್ಕೆ ನಿತ್ಯ ಪೂಜೆ ಮಾಡುತ್ತಿದ್ದವು.

ಋಷಿ ಮುನಿಗಳು ಮೋಕ್ಷ ಪಡೆದ ಸ್ಥಳ
ಇಂತಹ ಅಪರೂಪದ ದೃಶ್ಯವನ್ನು ನೋಡಿದ ತಲ ಮತ್ತು ಕಾಡ ಎಂಬ ಬೇಡರು ಕುತೂಹಲಗೊಳ್ಳುತ್ತಾರೆ. ಅಷ್ಟೇ ಅಲ್ಲದೆ ತಮ್ಮ ಬಳಿಯಿದ್ದ ಕೊಡಲಿಗಳಿಂದ ಬೂರಗದ ಮರದ ಪೊದೆಯನ್ನು ಕತ್ತರಿಸಿದಾಗ ಕೊಡಲಿ ತಾಗಿ ಅಲ್ಲಿದ್ದ ಲಿಂಗದಿಂದ ರಕ್ತ ಚಿಮ್ಮುತ್ತದೆ. ಇದರಿಂದ ಹೆದರಿಂದ ಅವರು ತಮಗೇನು ಮಾಡಬೇಕೆಂದು ತೋಚದೆ ನಡುಗುತ್ತಿರುತ್ತಾರೆ. ಆ ವೇಳೆಗೆ ಅಶರೀರವಾಣಿಯೊಂದು ಕೇಳಿಬರುತ್ತದೆ. ಆಶರೀರ ವಾಣಿಯು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚುವಂತೆ ಹೇಳುತ್ತದೆ. ಅದರಂತೆ ಅವರು ಬೂರಗದ ಮರದ ಎಲೆ ಮತ್ತು ಕಾಯಿಗಳನ್ನು ಜಜ್ಜಿ ಅರೆದು ಲಿಂಗಕ್ಕೆ ಹಚ್ಚುತ್ತಾರೆ. ಆಗ ರಕ್ತ ಚಿಮ್ಮುವುದು ನಿಂತು ಹಾಲು ಚಿಮ್ಮುತ್ತದೆ.

ಸ್ವಯಂ ವೈದ್ಯದಿಂದ ವೈದ್ಯೇಶ್ವರನಾದ ಶಿವ
ಇದನ್ನು ಕುಡಿದ ತಲ ಮತ್ತು ಕಾಡರು ಹಾಗೂ ಆನೆ ಜನ್ಮ ತಾಳಿದ ಸೋಮದತ್ತ ಋಷಿ ಮತ್ತು ಅವನ ಶಿಷ್ಯರು ಮೋಕ್ಷ ಪಡೆಯುತ್ತಾರೆ. ಅಂದಿನಿಂದ ತಲ-ಕಾಡರೆಂಬ ಬೇಡರಿಂದಾಗಿ ತಲವನಪುರ ತಲಕಾಡು ಎಂದು ಹೆಸರಾದರೆ. ಆನೆ ಜನ್ಮತಾಳಿ ಇಲ್ಲಿ ಮುಕ್ತಿಹೊಂದಿದ ಸೋಮದತ್ತ ಋಷಿಯಿಂದ ಸಿದ್ಧಾರಣ್ಯ ಕ್ಷೇತ್ರವು ಗಜಾರಣ್ಯ ಕ್ಷೇತ್ರವಾಗಿ ಪ್ರಸಿದ್ಧಿಯಾಗಿದೆಯಲ್ಲದೆ, ಇಲ್ಲಿರುವ ಪರಶಿವನು ತನಗೆ ತಾನೇ ವೈದ್ಯ ಮಾಡಿಕೊಂಡು ವೈದ್ಯನಾಥೇಶ್ವರನಾಗಿ ಇಲ್ಲಿ ನೆಲೆ ನಿಂತಿದ್ದಾನೆ ಎಂಬ ನಂಬಿಕೆಯೂ ಜನರಲ್ಲಿದೆ.

ತಲಕಾಡಿನಲ್ಲಿ ಮರೀಚಿಕೆಯಾದ ಅಭಿವೃದ್ಧಿ
ಒಂದು ಕಾಲದಲ್ಲಿ ವೈಭವದಿಂದ ಮೆರೆದ ತಲಕಾಡು ಪಂಚಲಿಂಗದರ್ಶನ ಸಂದರ್ಭ ಮಾತ್ರ ಹೆಚ್ಚಿನವರಿಗೆ ನೆನಪಾಗುತ್ತದೆ. ಉಳಿದಂತೆ ಹಲವು ಐಹಿತ್ಯಗಳ ಮಹತ್ವ ಹೊಂದಿರುವ ಈ ತಾಣ ಅಪರಿಚಿತವಾಗಿಯೇ ಉಳಿದು ಬಿಡುತ್ತದೆ. ಪ್ರವಾಸೋದ್ಯಮ ದೃಷ್ಟಿಯಿಂದ ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬಹುದು ಆದರೆ ಅದ್ಯಾಕೋ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರಿಂದ ಸ್ವಲ್ಪ ದೂರವಾಗಿಯೇ ಉಳಿದಿದೆ ಎಂದರೆ ತಪ್ಪಾಗಲಾರದು.

ಇಂದಿನಿಂದ ಪಂಚಲಿಂಗದರ್ಶನದ ವಿಧಿ ವಿಧಾನ ಶುರು
ಮೈಸೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ, ಪವಿತ್ರ ಕ್ಷೇತ್ರವಾಗಿ ಎಲ್ಲರನ್ನು ತನ್ನೆಡೆಗೆ ಸೆಳೆಯುತ್ತಿರುವ ತಲಕಾಡಿನಲ್ಲಿ ಏಳು ವರ್ಷಗಳ ಬಳಿಕ ಪಂಚಲಿಂಗದರ್ಶನ ನಡೆಯುತ್ತಿದೆ. ಹೀಗಾಗಿ ಎಲ್ಲರ ಚಿತ್ತ ಇತ್ತ ಹರಿದಿದೆ. ಆದರೆ ಇದುವರೆಗೆ ನಡೆದ ಪಂಚಲಿಂಗದರ್ಶನದಲ್ಲಿ ಭಕ್ತರೆಲ್ಲರೂ ಪಾಲ್ಗೊಳ್ಳಲು ಅವಕಾಶವಿತ್ತಾದರೂ ಈ ಬಾರಿ ಕೊರೋನಾದ ಹಿನ್ನಲೆಯಲ್ಲಿ ಸೀಮಿತ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ಭಕ್ತರು ವಚ್ರ್ಯುವಲ್ ಮೂಲಕ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಏಳು ವರ್ಷಗಳ ಬಳಿಕ ಪಂಚಲಿಂಗದರ್ಶನ ನಡೆಯುತ್ತಿದ್ದು ಈ ಸಂಬಂಧ ವಿವಿಧ ಧಾರ್ಮಿಕ ವಿಧಿ ವಿಧಾನನಗಳು ಗುರುವಾರ(ಡಿ.10) ದಿಂದ ಆರಂಭವಾಗಲಿದ್ದು, ಡಿ.19ರವರೆಗೆ ನಡೆಯಲಿರುವ ಈ ಮಹೋತ್ಸವದಲ್ಲಿ ಡಿ.14ರಂದು ಪಂಚಲಿಂಗ ದರ್ಶನವಾಗಿದೆ.

ಬಿಎಸ್‍ವೈ ಎರಡು ಬಾರಿ ಅವಕಾಶ
ಡಿ.10 ಅಂಕುರಾರ್ಪಣ ಪಂಚಲಿಂಗದರ್ಶನ ಪ್ರಯುಕ್ತ ನವ ಕಲಶಸ್ನಪನ ಯಾಗಶಾಲಾ ಪ್ರವೇಶ, ಡಿ.11 ಧ್ವಜಾರೋಹಣ, ರಕ್ಷಾಬಂಧನ, ಡಿ.12 ಪುಷ್ಪಮಂಟಪಾರೋಹಣ, ಡಿ.13 ವೃಷಭಾರೋಹಣ, ಡಿ.14ಮುಂಜಾನೆ 4.30ಕ್ಕೆ ಮಹಾಭಿಷೇಕ, 7.30 ಶ್ರೀಮದ್ದಿವ್ಯ ಪಂಚಲಿಂಗ ದರ್ಶನ, ರಾತ್ರಿ ಗಜಾರೋಹಣ ಉತ್ಸವ, ಡಿ.15 ಶ್ರೀಮದ್ದಿವ್ಯ ಬ್ರಹ್ಮರಥೋತ್ಸವ, ನಟೇಶೋತ್ಸವ, ಹಂಸವಾಹನೋತ್ಸವ, ಡಿ.16 ಶಯನೋತ್ಸವ, ಅಶ್ವಾರೋಹಣ, ಮೃಗಯಾತ್ರೋತ್ಸವ, ಡಿ.17 ಅವಭೃತ ತೀರ್ಥಸ್ನಾನ, ತೆಪೆÇ್ಪೀತ್ಸವ, ಡಿ.18 ಮಹಾಭಿಷೇಕ, ಪಂಚೋಪಚಾರ, ಪೂರ್ವಿಕ ಕೈಲಾಸ ವಾಹನೋತ್ಸವ ಡಿ.19 ನಂದಿ ವಾಹನೋತ್ಸವ ನಡೆಯಲಿದೆ.
1993ರಲ್ಲಿ ಎಂ.ವೀರಪ್ಪಮೊಯ್ಲಿ, 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ, 2009ರಲ್ಲಿ ಬಿ.ಎಸ್.ಯಡಿಯೂರಪ್ಪ, 2013ರಲ್ಲಿ ಸಿದ್ದರಾಮಯ್ಯ ಪಂಚಲಿಂಗ ದರ್ಶನದಲ್ಲಿ ಭಾಗವಹಿಸಿದ್ದರು. 2020ರ ಪಂಚಲಿಂಗ ದರ್ಶನಕ್ಕೆ ಮತ್ತೆ ಬಿ.ಎಸ್. ಯಡಿಯೂರಪ್ಪನವರು ಭಾಗವಹಿಸುತ್ತಿರುವುದು ವಿಶೇಷವಾಗಿದೆ.

ಭಕ್ತರಲ್ಲಿ ಜೀವನ ಪಾವನವಾಗುವ ನಂಬಿಕೆ
ಇನ್ನು ಇಲ್ಲಿ ಪರಶಿವನ ಐದು ಮುಖಗಳಿಂದ ತಾವಾಗಿಯೇ ಉದ್ಭವವಾಗಿರುವ ಪಂಚಶಿವಲಿಂಗಗಳಿದ್ದು, ಪಂಚಲಿಂಗದರ್ಶನ ಮಹೋತ್ಸವದಲ್ಲಿ ವಿಶೇಷವಾಗಿ ಪೂಜಿಸಲ್ಪಡುತ್ತವೆ. ತತ್ಪುರುಷ ಮುಖದಿಂದ ಕಾವೇರಿಯ ಉತ್ತರವಾಹಿನಿಯ ಬಳಿ ಅರ್ಕೇಶ್ವರನಾಗಿಯೂ, ಪೂರ್ವ ವಾಹಿನಿಯ ಬಳಿ ಅಘೋರ ಮುಖದಿಂದ ಪಾತಾಳೇಶ್ವರನಾಗಿಯೂ, ದಕ್ಷಿಣವಾಹಿನಿಯ ಬಳಿ ಸದ್ಯೋಜಾತ ಮುಖದಿಂದ ಮರಳೇಶ್ವರನಾಗಿಯೂ, ಪಶ್ಚಿಮವಾಹಿನಿಯ ಬಳಿ ವಾಮದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿಯೂ ಇಲ್ಲಿ ನೆಲೆನಿಂತಿದ್ದು, ಪಂಚಲಿಂಗದರ್ಶನದ ವೇಳೆ ಈ ಶಿವಲಿಂಗಗಳನ್ನು ದರ್ಶನ ಮಾಡಿ ಪೂಜಿಸುವುದರಿಂದ ಜೀವನ ಪಾವನವಾಗುತ್ತದೆ ನಂಬಿಕೆ ಭಕ್ತರಲ್ಲಿದೆ.
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral












Click it and Unblock the Notifications