Mylari Hotel: ಮೈಸೂರಿನ ಐಕಾನಿಕ್ ಮೈಲಾರಿ ಹೋಟೆಲ್‌ನ ಇತಿಹಾಸ, ದೋಸೆಯ ವಿಶೇಷತೆ
ಮೈಸೂರು ಎಂದರೆ ಅರಮನೆ, ದಸರಾ, ಸಂಸ್ಕೃತಿ ಮಾತ್ರವಲ್ಲ. ಅದರ ಆಹಾರ ಪರಂಪರೆಯೂ ಅಷ್ಟೇ ಶ್ರೀಮಂತ. ಆ ಪರಂಪರೆಯ ಜೀವಂತ ಗುರುತಾಗಿ ಇಂದು ಕೂಡ ನಿಂತಿರುವ ತಿನಿಸು ಕೇಂದ್ರವೇ ಓಲ್ಡ್ ಒರಿಜಿನಲ್ ಮೈಲಾರಿ ಹೋಟೆಲ್. 1938ರಲ್ಲಿ ಸ್ಥಾಪಿತವಾದ ಈ ಹೋಟೆಲ್, ಸುಮಾರು 85 ವರ್ಷಗಳ ಇತಿಹಾಸ ಹೊಂದಿರುವ ಐಕಾನಿಕ್ ತಿನಿಸು ಕೇಂದ್ರವಾಗಿ ಮೈಸೂರಿನ ಹೆಮ್ಮೆಯಾಗಿದೆ.
ಈ ಹೋಟೆಲ್‌ನ್ನು ಪ್ರಾರಂಭಿಸಿದ್ದು ಮೈಲಾರಸ್ವಾಮಿ ಮತ್ತು ಅವರ ಪತ್ನಿ ಸುಂದರಮ್ಮ (ಗೌರಮ್ಮ). ಮೈಲಾರಸ್ವಾಮಿಯವರ ಭಕ್ತೆಯಾಗಿದ್ದ ಗೌರಮ್ಮನವರ ಕೈ ರುಚಿಯೇ ಈ ಹೋಟೆಲ್‌ನ ಅಸಲಿ ಬಲ. ಒಂದು ಸಣ್ಣ ತಿನಿಸು ಅಂಗಡಿಯಾಗಿ ಆರಂಭವಾದ ವಿನಾಯಕ ಮೈಲಾರಿ, ಕಾಲಕ್ರಮೇಣ ಮೈಸೂರಿನ ಪಾಕಶಾಲೆಯ ಪ್ರಮುಖ ಭಾಗವಾಗಿ ಬೆಳೆದಿದೆ.

ಮೈಸೂರಿನ ನಜರಾಬಾದ್ ಮುಖ್ಯರಸ್ತೆಯಲ್ಲಿರುವ ಈ ಹೋಟೆಲ್, ಮೈಸೂರಿನ ಅತಿ ಹಳೆಯ ಹೋಟೆಲ್‌ಗಳಲ್ಲೊಂದು. ಅತಿ ಆಧುನಿಕ ಸೌಕರ್ಯಗಳಿಲ್ಲದಿದ್ದರೂ, ಸಾಂಪ್ರದಾಯಿಕ ಅಡುಗೆ ವಿಧಾನ, ಅದೇ ಹಳೆಯ ರುಚಿ ಮತ್ತು ಶಿಸ್ತುಬದ್ಧ ಸೇವೆ ಇಲ್ಲಿನ ವಿಶೇಷತೆ. ಇದುವೇ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಮತ್ತೆ ಮತ್ತೆ ಇಲ್ಲಿಗೆ ಸೆಳೆಯುತ್ತಿದೆ.
ದೋಸೆ ಸೇರಿ ಏನೆಲ್ಲ ಸಿಗುತ್ತೆ?
ವಿನಾಯಕ ಮೈಲಾರಿ ಹೋಟೆಲ್‌ನ್ನು ದೇಶದಾದ್ಯಂತ ಪ್ರಸಿದ್ಧಿಗೊಳಿಸಿದ್ದು ಮೈಲಾರಿ ದೋಸೆ. ಇಲ್ಲಿನ ದೋಸೆಗಳು ಅತಿ ಮೃದುವಾಗಿದ್ದು, ಮನೆಯಲ್ಲೇ ತಯಾರಿಸಿದ ಬೆಣ್ಣೆ ಅಥವಾ ತುಪ್ಪದಲ್ಲಿ ತಯಾರಿಸಿದ ಖಾಲಿ ದೋಸೆ ಇಲ್ಲಿನ ಸಿಗ್ನೇಚರ್. ವಿಶೇಷವೆಂದರೆ ಇಲ್ಲಿ ಸಾಂಬಾರ್ ಬದಲು ದೋಸೆಗೆ ಸಾಗು ನೀಡಲಾಗುತ್ತದೆ. ಜೊತೆಗೆ ನಾಲಿಗೆಗೆ ಚಟ ಹಿಡಿಸುವ ತೆಂಗಿನಕಾಯಿ ಚಟ್ನಿ ಈ ದೋಸೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗರಿಗರಿಯಾದ ಮಸಾಲೆ ದೋಸೆ, ಹೂವಿನಷ್ಟು ಕೋಮಲವಾದ ಬಿಸಿ ಬಿಸಿ ತುಪ್ಪದ ಖಾಲಿ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ ಮತ್ತು ಸಾಗು ಇವೆಲ್ಲ ಸೇರಿ ಮೈಲಾರಿ ಊಟ ಒಂದು ಅನುಭವವಾಗುತ್ತದೆ. ಜೊತೆಗೆ ಇಡ್ಲಿ, ಬಿಸಿಬಿಸಿ ಕಾಫಿ ಹಾಗೂ ಚಹಾ ಕೂಡ ಇಲ್ಲಿನ ಮೆನುವಿನಲ್ಲಿದೆ.

ವಿನಾಯಕ ಮೈಲಾರಿ ಮಾತ್ರವಲ್ಲದೆ ಮಹದೇಶ್ವರ ಮೈಲಾರಿ ಎಂಬ ಮತ್ತೊಂದು ಹಳೆಯ ಹೋಟೆಲ್ ಕೂಡ "ಒರಿಜಿನಲ್ ಮೈಲಾರಿ" ಎನ್ನುವ ಹೆಸರಿನಿಂದ ಪ್ರಸಿದ್ಧವಾಗಿದೆ. ಎರಡೂ ಹೋಟೆಲ್‌ಗಳು ದಶಕಗಳ ಇತಿಹಾಸ ಹೊಂದಿದ್ದು, ಮೈಲಾರಿ ದೋಸೆ ಮೈಸೂರಿನ ಪಾಕ ಪರಂಪರೆಯ ಅವಿಭಾಜ್ಯ ಅಂಗ ಎಂಬುದಕ್ಕೆ ಸಾಕ್ಷಿಯಾಗಿದೆ.
ರಾಜಕಾರಣಿಗಳು, ಸೆಲೆಬ್ರಿಟಿಗಳ ತಾಣ
ಈ ಹೋಟೆಲ್‌ಗೆ ಸಾಮಾನ್ಯ ಜನರಷ್ಟೇ ಅಲ್ಲದೆ ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ವಿದೇಶಿ ಪ್ರವಾಸಿಗರೂ ಭೇಟಿ ನೀಡಿರುವುದು ವಿಶೇಷ. ವರನಟ ಡಾ.ರಾಜಕುಮಾರ್ ಅವರು ಮೈಸೂರಿಗೆ ಶೂಟಿಂಗ್‌ಗೆ ಬಂದಾಗಲೆಲ್ಲಾ ಸೆಟ್‌ನ ಹುಡುಗರೊಂದಿಗೆ ವಿನಾಯಕ ಮೈಲಾರಿಗೆ ಬಂದು ದೋಸೆ ಸವಿಯುತ್ತಿದ್ದರೆಂಬುದು ಸ್ಥಳೀಯರಲ್ಲಿ ಇನ್ನೂ ಜೀವಂತ ನೆನಪು. ಇನ್ನೂ ಮೈಸೂರಿಗರೇ ಆದ ಸಿದ್ದರಾಮಯ್ಯ ಅವರು ಈ ಕಡೆ ಹೋದಾಗಲೆಲ್ಲ, ತಮ್ಮ ನೆಚ್ಚಿನ ದೋಸೆ ಸವಿದೇ ಬರುವುದು ವಾಡಿಕೆ. ಪ್ರವಾಸಕ್ಕೆ ಬರುವ ವಿದೇಶಿಗರೂ ಈ ಒರಿಜಿನಲ್ ಮೈಲಾರಿ ದೋಸೆ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.
ಮೈಲಾರಿ ದೋಸೆ ಕೇವಲ ಒಂದು ತಿನಿಸಲ್ಲ. ಅದು ಮೈಸೂರಿನ ಪಾಕಶಾಲೆಯ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕ. ಮೈಸೂರಿಗೆ ಭೇಟಿ ನೀಡುವವರು ಜೀವನದಲ್ಲೊಮ್ಮೆ ಆದರೂ ವಿನಾಯಕ ಮೈಲಾರಿ ದೋಸೆ ಸವಿಯಲೇಬೇಕು ಎಂಬ ಮಾತು ಅತಿಶಯೋಕ್ತಿ ಅಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನೂ ಮಾಡಿಕೊಂಡಿರುವ ವಿನಾಯಕ ಮೈಲಾರಿ, ಇತ್ತೀಚೆಗೆ ಬೆಂಗಳೂರು ಇಂದಿರಾನಗರದಲ್ಲಿಯೂ ತನ್ನ ಶಾಖೆಯನ್ನು ಆರಂಭಿಸಿದೆ. ಆದರೂ ಮೈಸೂರಿನ ನಜರಾಬಾದ್ ಶಾಖೆಯ ರುಚಿಗೆ ಅದರದೇ ಆದ ಸ್ಥಾನವಿದೆ. ಬೆಂಗಳೂರಿನ ಶಾಖೆಯನ್ನು ಸಿದ್ದರಾಮಯ್ಯ ಉದ್ಘಾಟಿಸಿದ್ದು, ಇನ್ಮುಂದೆ ಬೆಂಗಳೂರಿನಲ್ಲೇ ಮೈಸೂರಿನ ಮೈಲಾರಿ ದೋಸೆಯ ರುಚಿ ಸವಿಯಬಹುದಾಗಿದೆ.
ಮೈಲಾರಿ ಹೋಟೆಲ್ ವಿವರ
ವಿಳಾಸ: ನಂಬರ್ 79, ನಜರಾಬಾದ್, ಮೈಸೂರು-570010
ದೂರವಾಣಿ: 9448608710/7801807744
ಸಮಯ: ಬೆಳಗ್ಗೆ 7-11 ಗಂಟೆ ಹಾಗೂ ಸಂಜೆ 4-8:30ರವರೆಗೆ












Click it and Unblock the Notifications